ಚಲನಚಿತ್ರಗಳ ಕಾಮುಕ ಪ್ರೇಮಿಗಳ ಮಾದರಿಗಳು

3 years ago

ಪ್ರೇಮ ಮಧುರಾಕ್ಷರ – ಪ್ರೇಮ ಅಜರಾಮರ, ಪಂಚಮವೇದ ಪ್ರೇಮದ ನಾದ, ಪ್ರೇಮ ಪ್ರೀತಿ ನನ್ನುಸಿರು, ಪ್ರೀತಿ ಮಾಡಬಾರದು – ಮಾಡಿದರೆ ಜಗಕೆ ಹೆದರಬಾರದು, ಪ್ರೀತ್ಸೇ ಪ್ರೀತ್ಸೇ ಅಂತ ಪ್ರೇಮದ ಬಗ್ಗೆ ಹಾಡುತ್ತಾ, ಕಥೆಗಳನ್ನು ಹೆಣೆಯುತ್ತಾ, ಬ್ಯಾಕ್‌ಗ್ರೌಂಡ್ ಸ್ಕೋರ್‌ನಲ್ಲಿ ತಮ್ಮ ಪ್ರೇಮಾಲಾಪವನ್ನು ಮಾಡುತ್ತಾ ನಾಯಕ ನಾಯಕಿಯರು ಪ್ರೇಮಸಂದೇಶವನ್ನು ಸಾರುವ ಚಲನಚಿತ್ರಗಳು ಕಾಲದಿಂದ ಕಾಲಕ್ಕೆ ತಂತಮ್ಮ ಕಾಲದ ಹದಿಹರೆಯದ ಹುಡುಗ ಹುಡುಗಿಯರ ತಲೆಗೆ ಹುಳ ಬಿಡುತ್ತಾ, ಕಚುಗುಳಿಯಿಡುತ್ತಾ, ಮೈ ಬಿಸಿಯೇರಿಸುತ್ತಾ ದಾರಿ ತಪ್ಪಿಸುತ್ತಲೇ ಬಂದಿವೆ.

ಪ್ರೇಮವೆಂಬುದನ್ನು ಅತ್ಯಂತ ಹೋಪ್ಲೆಸ್ ಕರ್ಮ ಅಂತ ಸಾಬೀತು ಮಾಡಿ ತೋರಿಸಿರುವ ಹೆಗ್ಗಳಿಕೆ ಚಿತ್ರರಂಗಕ್ಕಿದೆ. ಇಡೀ ಜಗತ್ತಿನಲ್ಲಿ ಕೆಲವೇ ಕೆಲವು ಪ್ರೇಮದ ಬಗ್ಗೆ ಸಂವೇದನಾಶೀಲವಾದಂತಹ ಸಿನಿಮಾಗಳು ಇರುವುದೇನೋ ಎಂದು ‘ವರ್ಲ್ಡ್ ಸಿನಿಮಾ’ಗಳನ್ನು ನೋಡುವಾಗ ಅನ್ನಿಸುತ್ತದೆ. ಕಾಮಕ್ಕೂ ಪ್ರೇಮಕ್ಕೂ ವ್ಯತ್ಯಾಸವೇ ತಿಳಿಯದ ಸಿನಿಮಾಗಳು ಹದಿಹರೆಯದ ಹುಡುಗರ ಮತ್ತು ಹುಡುಗಿಯರ ಎಂದಿಗೂ ಸರಿಮಾಡಿಕೊಳ್ಳಲಾಗದಷ್ಟು ತಪ್ಪುದಾರಿಗೆಳೆದುಬಿಡುತ್ತವೆ.

ಕೆಲವೇ ಕೆಲವು ಜವಾಬ್ದಾರಿಯುತ ಕಲಾವಿದರು ವ್ಯಕ್ತಿಗತವಾಗಿ ಪ್ರೇಮವನ್ನು ಕಂಡುಕೊಂಡು, ಒಲವಿನ ಬದುಕನ್ನು ನಡೆಸುತ್ತಿರುತ್ತಾರೆ. ಆದರೆ ಅಂತಹ ನಿಜಮನಸ್ಕರ ಹೊರತಾಗಿ ಬಹುಪಾಲು ಚಲನಚಿತ್ರ ಕಲಾವಿದರಿಗಿರುವ ಜನಪ್ರಿಯತೆಯ ಗುಂಗು, ತೀಟೆ ತೀರಿಸಿಕೊಳ್ಳಲು ಇರುವ ಸಾಕಷ್ಟು ಸಂಪನ್ಮೂಲಗಳು, ಸದಾ ಸಾರ್ವಜನಿಕವಾಗಿ ಕಲಿತು ಪಳಗಿರುವ ಸವಕಲು ಮೌಲ್ಯದ ಡೈಲಾಗ್‌ಗಳನ್ನು ಉದುರಿಸಿ ಉದುರಿಸಿ, ತಮ್ಮ ವೈಯಕ್ತಿಕ ಬದುಕಿನಲ್ಲೇ ನಿಜವಾದ ಪ್ರೇಮದ ಪರಿಯ ಅರಿಯದ ಕಮಂಗಿಗಳಾಗಿರುತ್ತಾರೆ. ಮನೆಯಲ್ಲಿಯ ಪ್ರೇಮದ ಸತಿಯನ್ನು ಬಿಟ್ಟು ಯರ‍್ಯಾರೋ ಜತೆಗೆ ಅಫೈರ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಅದು ಅವರ ಹೈ ಫೈ ಜೀವನದ ಅವಿಭಾಜ್ಯ ಅಂಗವಾಗಿರುತ್ತದೆ. ಮಲಗೆದ್ದು ಬಿಟ್ಟರೆ ಕಳೆದುಹೋಗುವುದೇನಿಲ್ಲ ಎಂಬಂತಹ ಅತಿಪ್ರಗತಿಪರ ಜೀವಿಗಳಿಗೆ ಕಾಮವೂ, ಪ್ರೇಮವೂ ಒಂದು ಗೇಮ್ ಆಗಿರುತ್ತದೆಯೇ ಹೊರತು ಗಂಭೀರವಾದ ಬದ್ಧತೆಯೇನಾಗಿರುವುದಿಲ್ಲ. ಸಂಸಾರಕ್ಕೆ ಬದ್ಧವಾದ ಹೆಂಡತಿಯಿದ್ದರೂ ಮತ್ತೊಂದು ಸಹನಟಿಯೊಡನೆ ಅದೆಂತೋ ಹೊಂದಿದ ಸಂಪರ್ಕದಿಂದಾಗಿ ಮತ್ತೊಂದು ಮದುವೆಯೇ ಆಗಿಬಿಡುವಂತಿದ್ದು, ವಿಷಯ ತಿಳಿದ ಹೆಂಡತಿ ಓಡೋಡಿ ಬಂದು ಅವರನ್ನು ಬೇರ್ಪಡಿಸುವ ಕಥೆಯಾಗಲಿ, ಜೊತೆಜೊತೆಯಲ್ಲಿ ಅಭಿನಯಿಸುತ್ತಾ ಸಹನಟಿಗೆ ಸಂತಾನ ಭಾಗ್ಯ ಕರುಣಿಸುವ ಕಥೆಯಾಗಲಿ, ಮಹಾಸತಿಯಾಗಿ ತಾಳಿ ಕುಂಕುಮಗಳ ಪ್ರತಿಮೆಯಾಗಿದ್ದು ತನ್ನ ಗಂಡನನ್ನು ದೂರೀಕರಿಸಿ ಇನ್ನಾರೋ ವಿವಾಹಿತನಿಗೆ ನೇತು ಬಿದ್ದು, ಅಲ್ಲೂ ಭಂಗಪಟ್ಟು ಒದ್ದಾಡುವ, ಬಿಟ್ಟೋಡುವ ನಟೀಮಣಿಯರ ಕಥೆಯಾಗಲಿ ನಮ್ಮ ಹುಡುಗರಿಗೆ ಬೇಡದ್ದು. ಅದು ಅವರ ಪರ್ಸನಲ್ ಲೈಫ್. ಅವರು ಹೇಗಾದರೂ ಬದುಕಿಕೊಳ್ಳಲಿ ಎನ್ನುವುದಾದರೆ, ಅವರು ತೆರೆಯ ಮೇಲೆ ನೀಡುವ ಪ್ರೇಮದ ಸಂದೇಶ, ಜೀವನ ಪಾಠಗಳೇನು? ಜೀವನ ಮೌಲ್ಯವನ್ನು, ಪ್ರೇಮದ ಮಾದರಿಯನ್ನು ಕೊಡುವ ಅವರನ್ನು ಅನುಸರಿಸುತ್ತಾ ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ ಎಂದು ತಮ್ಮ ಪ್ರೇಮಸಂಗಿಯನ್ನೋ, ಅರ್ಧಾಂಗಿಯನ್ನೋ ಎಂದಿಗೂ ಸಿಗದ ಮೌಲ್ಯ ಮಾಪನದಲ್ಲಿ ನೋಡುವ ಪ್ರಯತ್ನ ಮಾಡುತ್ತಾ ವಿಫಲ ಪ್ರೇಮಿಗಳಾಗುತ್ತಾರೆ.

ಚಲನಚಿತ್ರದ ಪ್ರೇಮಗಳು ಅನುಕರಣೆಗೆ ಯೋಗ್ಯವಲ್ಲ ಎಂದು ತಿಳಿಯುವುದೇ ಇಲ್ಲ. ಏಕೆಂದರೆ, ಹದಿಹರೆಯದ ಹುಡುಗರಿಗೆ ಅಲ್ಲಿ ಪ್ರೇಮದ ಮೌಲ್ಯದ ಪರಿಚಯವೇ ಆಗದಿರುವಷ್ಟು ಪಂಚಿಂಗ್ ಡೈಲಾಗ್, ಸಖತ್ ಸಾಂಗ್ ಮತ್ತು ಫೈಟ್‌ಗಳಿಂದ ಡೈವರ್ಟ್ ಆಗಿಬಿಟ್ಟಿರುತ್ತಾರೆ. ಪ್ರೇಮದ ಹೆಸರಿನಲ್ಲಿ ಏನೇನೆಲ್ಲಾ ತೋರಿಸಿದ್ದು, ಪ್ರೇಮ ಒಂದರ ಹೊರತಾಗಿ ಇನ್ನೆಲ್ಲವೂ ಹರೆಯದ ಹರವಿನಲ್ಲಿ ದಾಖಲಾಗಿಬಿಟ್ಟಿರುತ್ತದೆ. ಪಾಪದ ಹರೆಯದ ಫಜೀತಿಯೇ ಅಷ್ಟು. ಅದೊಂದು ಸೆಳೆತದಲ್ಲಿ ಕೊಚ್ಚಿ ಹೋಗಿದ್ದು ಪ್ರೇಮದ ಸಾರವನ್ನೇ ತಿಳಿಯದಷ್ಟು ಭ್ರಮಾಧೀನರಾಗಿಬಿಟ್ಟಿರುತ್ತಾರೆ.

ಸೆಳೆತಕ್ಕೂ ಆಕರ್ಷಣೆಗೂ, ಮೋಹಕ್ಕೂ ಒಲವಿಗೂ, ಕಾಮಕ್ಕೂ ಪ್ರೇಮಕ್ಕೂ ವ್ಯತ್ಯಾಸವಿದೆ. ಇದನ್ನು ಚಲನಚಿತ್ರಗಳಲ್ಲಿ ತೋರಿಸುವ ಮಂದಿ ಕೆಲವೇ ಮಂದಿ. ಅವರನ್ನು ಕಾಮನ್ ಮಾಸ್ ಕೂಡ ಕೇವಲವಾಗಿ ನೋಡುತ್ತಾರೆ. ಪಾಪ ಅವರೇನು ಮಾಡುತ್ತಾರೆ. ಪ್ರೇಮದ ಹೆಸರಿನಲ್ಲಿ ನಾಯಕ ನಾಯಕಿಯ ಮೈ ಮೇಲೆಲ್ಲಾ ಬಿದ್ದು ಒದ್ದಾಡುತ್ತಾ, ಹೊಕ್ಕಳಿಗೆ ದ್ರಾಕ್ಷಿ ಹಾಕಿ ಹೊರಳಿಸುತ್ತಾ, ಚಳಿಯಲ್ಲಿ ಮಳೆಯಲ್ಲಿ ಮೈಯೆಲ್ಲಾ ಒದ್ದೆಯಾಗಿಸಿಕೊಂಡು ಮೈ ಬಿಸಿಯೇರಿಸಿಕೊಳ್ಳುತ್ತಾ ನೋಡುವ ಹದಿಹರೆಯದವರಲ್ಲಿ ಅವರು ಹುಟ್ಟಿಸುವುದು ಪ್ರೇಮವನ್ನೋ ಕಾಮವನ್ನೋ?

ಪ್ರೇಮದ ಹೆಸರಿನಲ್ಲಿ ಕಾಮವನ್ನು ಮೈಗೂಡಿಸಿಕೊಂಡು ಬರುವ ಬಹುಪಾಲು ಹದಿಹರೆಯದವರು ಪ್ರೇಮಿಸುತ್ತಾ ನಿರೀಕ್ಷಿಸುವುದು ಕಾಮವನ್ನೇ!! ಹಾಗಾಗಿಯೇ ಬಹಳಷ್ಟು ಪ್ರೇಮಿಗಳು ಪೊಸೆಸ್ಸಿವ್ ಆಗಿರುತ್ತಾರೆ. ಒಬ್ಬ ಹುಡುಗ ತನ್ನ ಹುಡುಗಿಯು ಇನ್ನೊಬ್ಬನ ಜೊತೆಗೆ ಸ್ನೇಹದಿಂದ, ಸಲುಗೆಯಿಂದ ವರ್ತಿಸುವುದನ್ನಾಗಲಿ ಸಹಿಸದೇ ಹೋಗುವನು. ಅನುಮಾನ ಪಡುವನು. ಪ್ರಾರಂಭದಲ್ಲಿ ಸುಲಲಿತವಾಗಿ ಸುಲಿದ ಬಾಳೆಹಣ್ಣಿನಂತೆ ಇರುವ ಪ್ರೇಮವು ನಂತರ ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತೆ ಆಗುವುದು. ಅವಳಿಗೂ ಅವನಿಂದ ಹಿಂಸೆ, ಅವನಿಗೂ ಅವಳಿಂದ ಹಿಂಸೆ. ಯಾರೋ ಒಬ್ಬರು ಯಾರೋ ಒಬ್ಬರಿಗೆ ಮೋಸ ಮಾಡಿದ ರೀತಿಯಲ್ಲಿ ಬಿಂಬಿತವಾಗಿ ಬಿಟ್ಟು ಮರೆಯುವ ಸುಖಾಂತವೋ, ಕುಯ್ದೋ ಕುಯ್ದುಕೊಂಡೋ ಸತ್ತೋ ಸಾಯಿಸುವ ದುರಂತವನ್ನೋ ಕಂಡು, ಕಡೆಗೂ ಪ್ರೇಮವಂತೂ ಮೂಲೆಗುಂಪು.

ಕಾಮದ ಹಸಿಬಿಸಿಯನ್ನೇ ಪ್ರೇಮದ ಸೆಳೆತವೆಂದು ಹೊಯ್ದಾಡುವಂತಹ ಪ್ರಭಾವಗಳ ಬಗ್ಗೆ ನನ್ನ ಆಕ್ಷೇಪ. ಇಲ್ಲಿ ಕಾಮವನ್ನು ಕಡೆಗಣಿಸುವುದೋ ಅಥವಾ ಪ್ರೇಮದ ಪಾವಿತ್ರ್ಯತೆ ಹಾಗೂ ಪ್ರೇಮಿಯ ಶೀಲದ ಬಗ್ಗೆ ಮಾತಾಡುತ್ತಿರುವ ನಾನ್‌ಸೆನ್ಸ್ ಅಲ್ಲ.

ಪ್ರೇಮದ ಮುಸುಕಿನ ಕಾಮದ ದಾಹವು ಕಾಮದ ಸ್ಪಷ್ಟತೆಯನ್ನಾಗಲಿ, ಪ್ರೇಮದ ಸ್ವರೂಪವನ್ನಾಗಲಿ ಮನಗಾಣಿಸದೇ ಕನ್‌ಫ್ಯೂಸ್ ಮಾಡಿಕೊಂಡು ಬದುಕನ್ನು ನರಕ ಸದೃಶವನ್ನಾಗಿ ಮಾಡಿಕೊಳ್ಳುತ್ತಿರುವ ಪ್ರೇಮಿಗಳೆಂದು ಕರೆದುಕೊಳ್ಳುತ್ತಿರುವ ಕಾಮಿಗಳ ಬಗ್ಗೆ ಕಾಳಜಿಯಿಂದ ಈ ಮಾತುಗಳು.

ಎರಿಕ್ ಫ್ರಾಂನ ‘ದ ಆರ್ಟ್ ಆಫ್ ಲವಿಂಗ್’ ನನ್ನ ಹದಿಹರೆಯದ ಪ್ರೇಮಿಗಳಿಗಳಿಗೆ ನೀಡಬೇಕೆಂದು ನನ್ನಾಸೆ. ಖಲೀಲ್ ಗಿಬ್ರಾನನ ಪ್ರವಾದಿ ಪುಸ್ತಕದಲ್ಲಿ ಪ್ರೇಮದ ಬಗ್ಗೆ ಆತ ನುಡಿಯಾಡಿರುವ ಈ ಮಾತುಗಳು ಕೂಡ ನನ್ನ ನೆಚ್ಚಿನ ಹರೆಯದ ಪ್ರೇಮಿಗಳಿಗೆ.

ತನ್ನೇ ತಾನು ನೀಡುವುದು ನಿಜದಿ ಪ್ರೇಮ, ನೀಡುವುದರ ಭಾವದಲ್ಲಿ ಬರಿದೇ ನಿಷ್ಕಾಮ
ತನಗೆ ಎಂದು ಏನನ್ನು ಬೇಡದು ಪ್ರೇಮ, ತನ್ನ ಗಂಧದಲ್ಲೇ ನಲಿವ ಅರಳಿದಂತ ನವಸುಮ
ಗೆಲುವ ಹಟದಿ ಸೆಳೆವ ಒಲವ ತೋರದು ಪ್ರೇಮ, ವಶದಲಿಟ್ಟು ಆಳಲು ಆತುರಿಸದು ಪ್ರೇಮ
ಯಾರಧೀನದಲ್ಲೂ ಇಲ್ಲ-ಅಧೀನಗೊಳಿಸಲಾಸೆಯಿಲ್ಲ, ಪ್ರೇಮಕ್ಕೆ ಪ್ರೇಮವೇ ಸಾಕಲ್ಲ
ಪ್ರೇಮಿಯಾಗಿ ಹೇಳದಿರು ದೇವನಿರುವ ಎನ್ನೆದೆಯಲ್ಲಿ, ಓ ಪ್ರೇಮಿ ನೀನು ವಾಸಿಸುವೆ ನಿತ್ಯ ದೇವರೆದೆಯಲ್ಲಿ ಪ್ರೇಮವನ್ನು ನಡೆಸುವಂತ ಚಿಂತೆಯು ಬೇಡ, ಪ್ರೇಮಕ್ಕರ್ಹನಾದೆಡೆ ನಿನ್ನ ಅದೇ ನಡೆಸುವುದು ನೋಡ…

  • ಯೋಗೇಶ್ ಮಾಸ್ಟರ್, ರಂಗಕರ್ಮಿ

Leave a Reply