ನ್ಯಾಯದೇವತೆ ಕಣ್ಣ ಬಟ್ಟೆ ಕಳಚುವ ದಿಟ್ಟತನ ಎಲ್ಲವೂ ಚಕ ಚಕಾಂತ ಕಣ್ಕುಕ್ಕುತ್ತವೆ

3 years ago

#audacity #goddess #justice #blind #dilawarramadurga #belururaghunandana #drama

“Hell hath no fury like women scorned” ಎನ್ನುವ ಶೇಕ್ಸ್ಪಿಯರ್ ನ ಒಂದು ಮಾತಿದೆ. ಹೆಣ್ಣಿನ ಅಂತರಂಗದೊಳಗಣ ಅಸಮಾಧಾನದ ಲಾವಾರಸ ಉಕ್ಕಿ ಹರಿದರೆ her anger will be limitless ಅಂತ ಇದನ್ನು ಪರಿಭಾವಿಸಬಹುದು.

Crown ಅಂತ ಒಂದು ವೆಬ್ ಸೀರೀಸ್ ನೆಟ್ ಫ್ಲಿಕ್ಸ್ ನಲ್ಲಿ ಬರ್ತಿದೆ. ಇಂಗ್ಲೆಂಡಿನ ರಾಜಮನೆತನದ ಕುಡಿ ಎಲಿಜಬೆತ್ ಚಿಕ್ಕ ವಯಸ್ಸಿನಲ್ಲೇ ರಾಣಿ ಕಿರೀಟ ಧರಿಸುತ್ತಾಳೆ. ಯೌವನದ ಮಜ, ಸುಖ, ತಹತಹ ಎಲ್ಲ ಸಹಜ ಖುಷಿಗಳಿಂದ ವಂಚಿತಳಾದ ಭಾವಕ್ಕೆ ಜಾರುತ್ತಾಳೆ. ಆಗಾ ಖಾನ್ ಕುದುರೆ ಲಾಯ ಕಟ್ಟುವ, ಓಡಿಸುವ ತರಬೇತುದಾರನ ಮೇಲೆ ಅವಳಿಗೆ ಒಂದು ಎಂಥದೋ ಆಪ್ತ ಭಾವ, ಸ್ನೇಹ ಮೂಡುತ್ತದೆ. ಅಷ್ಟಕ್ಕೇ ಅವಳ ಗಂಡ ಸಿಡಿಮಿಡಿ. ಇದರ ಹಿಂಸೆ ಮತ್ತು ಸಹಜ ಖುಷಿಗಳಿಂದ ವಂಚಿತ ಸ್ಥಿತಿ ಅವಳ ಅಂತರಂಗವನ್ನೇ ಕಲಕಿ ಬಿಡುತ್ತದೆ. ಅವಳ ತೊಳಲಾಟ ಪುರುಷ ಅಹಂಕಾರದ ಮೇಲಿನ ಆಕ್ರೋಶ ತಣ್ಣಗೆ ಜಿನುಗಲಾರಂಭಿಸುತ್ತದೆ.

ಇಷ್ಟು ಹಿಂಟ್ಸ್ ಕೊಡಲು ಕಾರಣವಿದೆ. ಮೊನ್ನೆಯಷ್ಟೇ ಕೆ.ವಿ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ಹೆಸರಾಂತ ನಾಟಕಕಾರ, ರಂಗ ನಿರ್ದೇಶಕ, ಕವಿ ಡಾ. ಬೇಲೂರು ರಘುನಂದನ್ ಅವರ ಹೊಸ ಪ್ರಯತ್ನ ‘ಅಧಿನಾಯಕಿ’ ರಂಗಪ್ರಯೋಗದ ರನ್ ಥ್ರೂ ನೋಡಲು ಆಹ್ವಾನಿತನಾಗಿದ್ದೆ. ಅದ್ಭುತ ಸ್ಕ್ರಿಪ್ಟ್. ರನ್ ಥ್ರೂ  ನೋಡಿದ ಮೇಲೆ ಹಲವು ವಿಷಯಗಳು ಕಾಡಿದವು.

ಅಂತಃಪುರದಲ್ಲಿ ರಾಣಿಯೊಬ್ಬಳ ಅಂತರಂಗದ ಆಲಾಪನೆಯೊಂದಿಗೆ ಶುರುವಾಗುವ ನಾಟಕ, ರಾಜನ ಯುದ್ಧ ಗೆದ್ದ ಉನ್ಮಾದ ತನ್ನಂಥ ಒಬ್ಬಳನ್ನು ಗೆದ್ದುಕೊಂಡು ಬರುವ ಆ ಜೈತ್ರಯಾತ್ರೆಯನ್ನು ಕಿಟಕಿಯ ಪರದೆಯಿಂದ ಕಂಡು ವ್ಯಕ್ತಪಡಿಸುವ ಅವಳ ಆಕ್ರೋಶ, ಎತ್ತುವ ನ್ಯಾಯ ಪ್ರಶ್ನೆಗಳು ಕಾಡುವಂಥವು. ಹೀಗೆ ಅವಳ ಬದುಕಿನ ಆಯಾ ಕಾಲದ ಪುರಾಣ, ಚರಿತ್ರೆ, ವರ್ತಮಾನದ ಕನಸು ಕನವರಿಕೆ ತುಂಬ ಪವರ್ಫುಲ್ ಸಂಭಾಷಣೆಗಳಿಂದ ಜ್ಯಾಮ್ ಪ್ಯಾಕ್ಡ್.

ಸುತ್ತ ಹಗ್ಗದಿಂದ ಎಳೆದುಕೊಂಡ ಸರ್ಕಲ್ ನಲ್ಲಿ ಪುರಾಣ, ಚರಿತ್ರೆ, ಇತಿಹಾಸ ಮತ್ತು ವರ್ತಮಾನದ ಹೆಣ್ಣಿನ ಒಳತೋಟಿ, ತುಡಿತದ ಒಂದೊಂದು ಚಿತ್ರಣ ಪುರುಷ ದಂತಗೋಪುರಕ್ಕೆ ಎಸೆವ ಕಲ್ಲುಗಳಂತೆ.

ತುಂಬ ಬರೆಯಬಹುದು. ಆದರೆ ಸದ್ಯಕ್ಕೆ ಇಷ್ಟು ಸಾಕು. ಇಂದು ‘ಅಧಿನಾಯಕಿ’ ಮೊದಲ ಪ್ರಯೋಗ. ಕೆ.ವಿ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ. ನೋಡಿ ಬನ್ನಿ.

ಹೆಣ್ಣಿನ ಅಂತರಂಗದ ಅನಾವರಣ, ಅವಳ ಅಸಮಧಾನದ ಮನಸ್ಥಿತಿ, ಪುರುಷ ಅಹಂಕಾರ ಧಿಕ್ಕರಿಸುವ ಪರಿ, ತನ್ನದೇ ಹಕ್ಕಿನ ಬದುಕು ಕಟ್ಟಿಕೊಳ್ಳುವ, ಸಂವಿಧಾನದ ಆಶಯಗಳನ್ನು ಬಾಳುವ ಹಂಬಲ, ಅಸಮಾನ ಸಮಾಜದಲ್ಲಿ ನ್ಯಾಯದ ತಕ್ಕಡಿ ಹಿಡಿದು ನಿಲ್ಲುವ, ನ್ಯಾಯದೇವತೆ ಕಣ್ಣ ಬಟ್ಟೆ ಕಳಚುವ ದಿಟ್ಟತನ ಎಲ್ಲವೂ ಚಕ ಚಕಾಂತ ಕಣ್ಕುಕ್ಕುತ್ತವೆ. ನಿಮ್ಮ ಗಂಡೆದೆಗೆ ಬಡಿವ ಕಲ್ಲುಗಳನ್ನು ಸಹಿಸಿಕೊಳ್ಳಿ. ಆಲ್ ದಿ ಬೆಸ್ಟ್.

– ದಿಲಾವರ್ ರಾಮದುರ್ಗ, ಪತ್ರಕರ್ತರು

Leave a Reply