ಮತ್ತೊಮ್ಮೆ ಶೇಷನ್ ಹುಟ್ಟಿ ಬರಬೇಕು ಅಷ್ಟೆ

3 years ago

ಭಾರತ ದೇಶದ ಚುನಾವಣಾ ಆಯುಕ್ತರಾಗಿ ಟಿ.ಎನ್‌.ಶೇಷನ್‌ರವರು ಹೊಸ ಇತಿಹಾಸವನ್ನು ನಿರ್ಮಾಣ ಮಾಡಿದರು. ಚುನಾವಣೆಯಲ್ಲಿ ಅನೇಕ ಸುಧಾರಣೆಗಳನ್ನು ತರುವುದರ ಮೂಲಕ ಚುನಾವಣಾ ವ್ಯವಸ್ಥೆಯ ಬಗ್ಗೆ ಜನರಲ್ಲಿ ವಿಶ್ವಾಸವನ್ನು ಮೂಡಿಸಿದರು. ಇವರ ನಿರ್ಧಾರಗಳಿಂದಾಗಿ ಚುನಾವಣೆಯ ಸಮಯದಲ್ಲಿ ಪರಿಸರವನ್ನು ಹಾಳು ಮಾಡುವ ಪ್ಲೆಕ್ಸ್ ಬ್ಯಾನರ್, ಬಂಟಿಂಕ್ಸ್ ಮುಂತಾದಂತಹ ಅಬ್ಬರಗಳು ಕಡಿಮೆಯಾಯಿತು. ಚುನಾವಣೆಯಲ್ಲಿ ಖರ್ಚುವೆಚ್ಚಗಳ ಬಗ್ಗೆ ನಿಗಾವಹಿಸಲಾಯಿತು.

ಸಮಯ ಕಳೆಯುತ್ತಿದ್ದಂತೆ ಚುನಾವಣಾ ಆಯೋಗದ ಪ್ರಭಾವವು ಕಡಿಮೆಯಾದಂತೆ ಕಾಣುತ್ತಿದೆ. ಚುನಾವಣೆಗಳಲ್ಲಿ ಮತ್ತೆ ಹಣದ ಹೊಳೆ ಹರಿಯುತ್ತಿದೆ. ನೇರವಾಗಿ ಹಣವನ್ನು ಹಂಚುವಂತಹ ವ್ಯವಸ್ಥೆ ಎಲ್ಲಾ ರಾಜಕೀಯ ಪಕ್ಷಗಳ ಸಂಸ್ಕೃತಿಯಾಗಿದೆ. ಹಣ ಇಲ್ಲದವರು ಚುನಾವಣೆಯಲ್ಲಿ ನಿಲ್ಲುವುದರಲೀ ನಾಮಪತ್ರವನ್ನು ಸಹ ಸಲ್ಲಿಸಲಾಗುವುದಿಲ್ಲ.

ಇನ್ನು ಜಾತಿಯ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಮತವನ್ನು ಕೇಳುವುದು, ಪ್ರಚಾರವನ್ನು ಮಾಡುವುದು, ಕರಪತ್ರಗಳನ್ನು ಹಂಚುವುದು ಯಾವುದೇ ಅಡೆತಡೆಗಳಿಲ್ಲದೆ ನಡೆಯುತ್ತಿದೆ. ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಮೊತ್ತಕ್ಕೂ ಅವರು ಖರ್ಚು ಮಾಡುವ ಮೊತ್ತಕ್ಕೂ ಸಂಬಂಧವೇ ಇಲ್ಲದಂತಾಗಿದೆ. ಹಣದ ಹೊಳೆಯಂತೂ ಎಗ್ಗಿಲ್ಲದೆ ಹರಿಯುತ್ತಿದೆ. ಯಾವುದೇ ರೀತಿಯ ಕ್ರಮಗಳು ಯಾರ ಮೇಲೂ ಆಗುತ್ತಿಲ್ಲ. ಹಣ ಹಂಚುವವರು ಪೊಲೀಸರು ಮತ್ತು ಚುನಾವಣಾಧಿಕಾರಿಗಳ ಕೈಗೆ ನೇರವಾಗಿ ಸಿಕ್ಕಿಕೊಂಡರೂ ಸಹ ಯಾವುದೇ ಕ್ರಮಗಳಿಲ್ಲ. ಕಾಟಚಾರಕ್ಕೆ ಬಂಧನ, ಬಿಡುಗಡೆ ಮುಂದುವರೆದಿದೆ.

ಎಲ್ಲಿಯವರೆವಿಗೂ ಚುನಾವಣೆಯ ಹಣ ಹಂಚಿಕೆ ಸಂಬಂಧದಲ್ಲಿ ಅಪರಾಧಿಗಳಿಗೆ ಕಠಿಣವಾದಂತಹ ಶಿಕ್ಷೆ ಮತ್ತು ಅವರ ಬೆಂಬಲಿತ ಅಭ್ಯರ್ಥಿಗಳಿಗೆ ಚುನಾವಣೆಯ ನಾಮಪತ್ರ ರದ್ದುಗೊಳಿಸುವಂತಹ ಕಠಿಣ ಕ್ರಮಗಳು ಆಗದಿದ್ದರೆ ಎಲ್ಲವೂ ಕಾಗದದ ಮೇಲಿನ ಕಾನೂನುಗಳಾಗಿ ಹಲ್ಲಿಲ್ಲದ ಹಾವಿನಂತೆ ಬುಸುಗುಟ್ಟುತ್ತಲೇ ಇರುತ್ತಾರೆ.

ಇಂತಹ ಸಂದಂರ್ಭದಲ್ಲಿ ಶೇಷನ್‌ರಂತಹ ಕಠಿಣವಾದಂತಹ ನಿಲುವಿನ ವ್ಯಕ್ತಿಗಳು ಮತ್ತೆ ಚುನಾವಣಾ ಆಯುಕ್ತರಾಗಿ ಎಂದು ಬರುತ್ತಾರೋ ಚುನಾವಣಾ ಸುಧಾರಣೆಗಳು ಎಂದು ಆಗುತ್ತವೋ ಎಲ್ಲರೂ ಕಾಯುವಂತಾಗಿದೆ. ಹಾಲಿ ನಡೆಯುತ್ತಿರುವ ಚುನಾವಣೆಗಳು ಜನಾದೇಶವಾಗಿರದೆ ಧನಾದೇಶವಾಗಿದೆ.

– ಕೆ.ಎಸ್‌.ನಾಗರಾಜ್, ಬೆಂಗಳೂರು

Leave a Reply