ದ್ವೇಷ ರಾಜಕಾರಣದ ಫಲಾನುಭವಿಗಳು ಈಗ ರಾಜಕೀಯವಾಗಿ ಸೋತಿದ್ದಾರೆ

3 years ago

ಅನಂತಮೂರ್ತಿಯವರು ನಿಧನರಾದಾಗ ಮೊದಲ ಪಟಾಕಿ ಸಿಡಿತ ಬಂದಿದ್ದು ನನ್ನ ಜಿಲ್ಲೆ ಚಿಕ್ಕಮಗಳೂರಿನಿಂದ. ಭಾರತದ ವಿಶಿಷ್ಟ ಸಾಮರಸ್ಯದ ಸೂಫಿತಾಣ ಬಾಬಾಬುಡನಗಿರಿಯನ್ನು ಬಿಜೆಪಿಯು, ತನ್ನ ಶಕ್ತಿ ರಾಜಕಾರಣದ ವಿಸ್ತರಣೆಗೆ ನಿರ್ದಯವಾಗಿ ಬಳಸಿಕೊಂಡು ಹುಟ್ಟಿಸಿದ ಧಾರ್ಮಿಕ ದ್ವೇಷ, ಕನ್ನಡಕ್ಕಾಗಿ ದುಡಿದ ಲೇಖಕರು-ಚಿಂತಕರ ಮೇಲೂ ಹೊರಳಿತ್ತು. ಈ ದ್ವೇಷದ ರಾಜಕಾರಣದ ಫಲಾನುಭವಿಗಳು ಈಗ ರಾಜಕೀಯವಾಗಿ ಸೋತಿದ್ದಾರೆ. ನನ್ನ ಜಿಲ್ಲೆಯ ಜನ ಕಸಬರಿಗೆ ತೆಗೆದುಕೊಂಡು ಗುಡಿಸಿದ್ದಾರೆ. ಈ ಗೆಲುವನ್ನು ಗಿರಿಶಿಖರಗಳ ಮೇಲೆ ನೆಲೆಸಿರುವ ಬಾಬಾಬುಡನಸ್ವಾಮಿ, ಮುಳ್ಳಯ್ಯ, ಸೀತಾಳಯ್ಯ ಎಂಬ ಮೂರು ಸಂತರಿಗೆ ಅರ್ಪಿಸುತ್ತ, ಬಾಲ್ಯದ ನೆನಪನ್ನು ಹಂಚಿಕೊಂಡಿರುವೆ.

ಬಾಬಾಬುಡನಗಿರಿ ಮತ್ತು ನೀಲಕುರಿಂಜಿ


ಕೊಟ್ಟೂರು ಸೀಮೆಯಲ್ಲಿ ಎಲ್ಲಿ ನಿಂತೂ ಕೊಟ್ರಪ್ಪಾ’ಎಂದು ಕೂಗಿದರೆ ಹಲವರು ಓಗೊಡುವಂತೆ, ನಮ್ಮ ಸೀಮೆಯಲ್ಲಿ ದಾದಾಪೀರ್ ಗಳಿದ್ದಾರೆ. ಬಾಬಾಬುಡನಗಿರಿದಾದಾಕ ಪಹಾಡ್’ (ಅಜ್ಜನ ಪರ್ವತ) ಎಂದೇ ಖ್ಯಾತವಾಗಿದೆ. ವಾಹನ ಖರೀದಿಸಿದರೆ, ಲಗ್ನವೊ ಸಂತಾನವೊ ಆದರೆ, ಮಗುವಿನ ಜವಳ ತೆಗೆಸಲು, ಕಾಯಿಲೆಯವರು ಎದ್ದರೆ ಹರಕೆ. `ಮಗ ಎಸೆಸೆಲ್ಸಿ ಪಾಸಾದರೆ, ಸಂತನ ಪಾದುಕೆಗಳ ಕೆಳಗೆ ಹಾಸಲು ಕೈಯಾರೆ ಕಸೂತಿ ಹಾಕಿದ ಚಾದರ ಅರ್ಪಿಸುವ’ ವ್ರತವನ್ನು ಅಮ್ಮ ಶ್ರದ್ಧೆಯಿಂದ ಪೂರೈಸಿದಳು.

ಜನ ಗಿರಿಗೆ ಹೆಚ್ಚಾಗಿ ಬೇಸಿಗೆಯಲ್ಲೆ ತೆರಳುತ್ತಿದ್ದರು. ಕಾರಣವೆಂದರೆ, ಮಳೆಗಾಲದಲ್ಲಿ ಗಿರಿ ಧಾರಾಕಾರ ನೀರು. ಚಳಿಗಾಲದಲ್ಲಿ ಪ್ರಾಣ ಕಳೆವ ಥಂಡಿ. ಪರ್ವತಶ್ರೇಣಿ ಮಂಜಿನಲ್ಲಿ ಮುಸುಕಿ, ನಾಲ್ಕಡಿ ದೂರದ ವಸ್ತುವೂ ಕಾಣದು. ನೀರು ಮುಟ್ಟಿದರೆ ಬೆರಳು ಸೆಟೆತುಕೊಳ್ಳುವವು. ಕೊರೆವ ಚಳಿಗೆ ಹಲ್ಲು ಒಂದೆಡೆ ನಿಲ್ಲದೆ ಕಟಕಟಿಸುವವು. ಹರಕೆ ಮುಟ್ಟಿಸಲು ನಾವೊಂದು ಚಳಿಗಾಲದಲ್ಲಿ ಹೋಗಿದ್ದೆವು. ಹಾಸುಗಲ್ಲ ಮೇಲೆ ಉರುಳುಗುಂಡಿನಲ್ಲಿ ಕಾರ ಕಡೆಯುತ್ತಿರುವಾಗ, ಎರಡು ಬಟ್ಟಲು ತೆಂಗಿನಕೊಬ್ಬರಿ ಬಂಡೆಗಲ್ಲಿಗೆ ಹತ್ತಿಕೊಂಡು ಕಣ್ಮರೆಯಾಯಿತು. ಜಿಡ್ಡನ್ನು ಗೀಸಿ ತೆಗೆಯಬೇಕಾಯಿತು.

ನಮ್ಮೂರ ಉಳ್ಳವರು ಗಿರಿಗೆ ಲಾರಿ ಹೊರಡಿಸಿದರೆ ನಾವು ಅದನ್ನೇರಿ ಹೋಗುತ್ತಿದ್ದೆವು. ಘಟ್ಟದ ತಿರುವುಗಳಲ್ಲಿ ಲಾರಿ ತಿರುಗುವಾಗ ಒಬ್ಬರ ಮೇಲೊಬ್ಬರು ಬಿದ್ದು `ಹೋ’ ಅರಚುತ್ತಿದ್ದೆವು. ಚೆಕ್‌ಪೋಸ್ಟುಗಳಲ್ಲಿ ವೈದ್ಯ ಇಲಾಖೆಯವರು ದೊಡ್ಡ ಸಿರಿಂಜಿನಲ್ಲಿ ಮದ್ದು ತುಂಬಿಕೊಂಡು, ವಾಹನದೊಳಗೇ ಹತ್ತಿ ನಿರ್ದಯವಾಗಿ ಚುಚ್ಚುತ್ತಿದ್ದರು. ಸಂಜೆ ಹೊತ್ತಿಗೆ ಮುಟ್ಟಲಾರದಂತೆ ರಟ್ಟೆ ಊದಿಕೊಳ್ಳುತ್ತಿತ್ತು. ಕೆಲವೊಮ್ಮೆ ಮಕ್ಕಳು ಮಹಿಳೆಯರು ಮುದುಕರನ್ನು ಬಸ್ಸಿಗೆ ಹತ್ತಿಸಿ, ನಾವು ಚಾರಣಿಸುತ್ತಿದ್ದೆವು. ತರೀಕೆರೆ-ಚಿಕ್ಕಮಗಳೂರು ರಸ್ತೆಯಲ್ಲಿರುವ ಎಮ್ಮೆಕಾನಲ್ಲಿ ಇಳಿದು, ಶೋಲಾಕಾಡನ್ನು ಹಾದು, ಕಾಫಿತೋಟಗಳನ್ನು ಹೊಕ್ಕು, ಹಲಸು ಚಕ್ಕೋತ ತಿನ್ನುತ್ತ ಗಿರಿಬುಡವನ್ನು ಮೂಡುಗಡೆಯಿಂದ ಮುಟ್ಟುತ್ತಿದ್ದೆವು. ಗಿರಿಯ ಶಿಖರಗಳು ಹೆಡೆಯೆತ್ತಿದ ಸರ್ಪಗಳಂತೆ ತೋರುತ್ತಿದ್ದವು. ಜನ್ನತ್‌ಸಿಡಿ ಎನ್ನಲಾಗುವ ಈ ಶಿಖರಗಳನ್ನೇರುವಾಗ ಕೈಲಿದ್ದ ಲಗೇಜುಗಳು ಕೈತಪ್ಪಿ ನಮ್ಮ ಕಣ್ಣೆದುರೇ ಪ್ರಪಾತ ಸೇರುತ್ತಿದ್ದವು. ಶಿಖರವನ್ನೇರಿ, ಮೂಡಣಕ್ಕೆ ದಿಟ್ಟಿ ಹಾಯಿಸಿದರೆ, ೧೮೦ ಡಿಗ್ರಿಯ ನೋಟದೊಳಗೆ ಸಿಗುವ ವಿಶಾಲ ಕಣಿವೆ. ಅವುಗಳಲ್ಲಿರುವ ಎಸ್ಟೇಟು, ಊರು, ಇರುವೆಯಂತೆ ಹರಿವ ಬಸ್ಸು, ಉಗುಚಿಬಿದ್ದ ಕಪ್ಪು ಹಗ್ಗದಂತಹ ರಸ್ತೆ, ಹೊಳೆವ ಕನ್ನಡಿಗಳಂತೆ ಫಳಫಳಿಸುವ ಮದಗದ ಕೆರೆ-ಅಯ್ಯನಕೆರೆ. ಚಾರಣದ ದಣಿವೆಲ್ಲ ತಟ್ಟನೆ ಕರಗಿಹೋಗುತ್ತಿತ್ತು.

ಗಿರಿ ಮುಟ್ಟಿದೊಡನೆ ಮೊದಲ ಕೆಲಸ, ಜಾಗ ಹಿಡಿದು ಟೆಂಟು ಹಾಕುವುದು. ಕಣಿವೆಯಿಂದ ಕಟ್ಟಿಗೆ ಸಂಗ್ರಹಿಸುವುದು, ದುಂಡಿ ಹೊಂಚಿ ಒಲೆಹೂಡುವುದು, ಕೋಳಿ ಕುರಿಯ ಬಲಿ, ಅದರ ಹಸಿಗೆ, ಕಾರಕಡೆತ, ಅಡುವುದು, ಉಣ್ಣುವುದು. ಉರುಸಿದ್ದರೆ ಬೆಂಡುಬತ್ತಾಸೆ ಮಣಿಸರ ಪನಸಾರೆ ಪಿಂಗಾಣಿ ಅಂಗಡಿಗಳ ತಿರುಗಾಟ; ತಿರುಗು ತೊಟ್ಟಿಲುಗಳಲ್ಲಿ ಕೂತು ರ್ರಿನೆ ತಿರುಗುತ್ತ ಗಾಬರಿಯೊ ನಗುವೊ ಹೇಳಲಾರದ ಕೇಕೆ; ಸೂಫಿಸಂತರು ದುಂಡಗೆ ಕುಳಿತಿರುವ, ಮಕ್ಕಾಮದೀನದ ಚಿತ್ರಗಳಿರುವ, ಟಿಪ್ಪು ಹುಲಿ ಜತೆ ಕಾದಾಡುವ, ಹೆಣ್ಣಮುಖವುಳ್ಳ ಬುರಾಖ್ ಕುದುರೆಯ ಪಟಗಳ ಖರೀದಿ.

ಗಿರಿಗೆ ನಾನಾ ಮೂಲೆಗಳಿಂದ ಜನ ಬರುತ್ತಿದ್ದರು. ಉತ್ತರ ಕರ್ನಾಟಕದವರಿಂದ ಜೋಳದರೊಟ್ಟಿ ಬದನೆಪಲ್ಯ ಪಡೆದು, ನಮ್ಮ ಮುದ್ದೆ-ಸಾರು ಅದಲುಬದಲಿಸುತ್ತಿದ್ದೆವು. ಕರ್ನಾಟಕದ ಒಂದೊಂದು ಪ್ರದೇಶದ ಮುಸ್ಲಿಮರ ಉರ್ದು ಬೇರೆ ಬಗೆ. ಕನ್ನಡ -ತೆಲುಗು-ಮರಾಠಿ ಮನೆಮಾತಿನ ಮುಸ್ಲಿಮರಿದ್ದಾರೆಂದು ನಮಗಲ್ಲೇ ತಿಳಿದಿದ್ದು. ಬಯಲು ಸೀಮೆಯ ಮಂದಿ ಗಿರಿಯ ಚೆಲುವಿನಿಂದ ಪುಳಕಿತರಾಗಿರುತ್ತಿದ್ದರು. `ಯಾ ದಾದಾ ನೂರಿ ಕರದೇ ಮೇರಿ ಮುರಾದ್ ಪೂರಿ’ ಘೋಷಿಸುತ್ತ, ಗಾಳಿಕೆರೆ ಮಂಚದಕರೆ ಮಾಣಿಕ್ಯಧಾರೆಗಳಿಗೆ ನಡೆಯುತ್ತಿದ್ದರು. ಒಬ್ಬ ದುಷ್ಟನು ಬಾಬಾರ ಶಿಷ್ಯೆ ಮಾಮಾ ಜಿಗನಿಯನ್ನು ಪಲ್ಲಂಗದ ಸಮೇತ ಹೊತ್ತೊಯ್ಯುವಾಗ, ಆಕೆ ಝಾಡಿಸಲು ಮಂಚವು ಬಿದ್ದು ಈ ಕೆರೆಯಾಯಿತಂತೆ. ಇಂತಹ ಮಂಚದ ಕೆರೆಯ ಅಂಗಳದಲ್ಲಿ ಒಲೆಹೂಡಿ, ಅಲ್ಲಿನ ಸೊಪ್ಪುಸದೆ ಬೇಯಿಸಿ ರೊಟ್ಟಿಯೊಡನೆ ತಿನ್ನುವರು. ಪ್ರಪಾತದೆಡೆಗೆ ಚಾಚಿರುವ ಶಿಖರದ ಬಂಡೆಯಿಂದ ಕೆಳಗೆ ಬೀಳುವ ಮಾಣಿಕ್ಯಧಾರೆಯ ಕೆಳಗೆ ನಿಂತರೆ, ನೀರ್ಗಲ್ಲುಗಳಿಂದ ಹೊಡೆತ. ಹುಹುಹು. ನೀರಿನ ಶೀತಲತೆಗೂ ಮೇಲಿಂದ ಬೀಳುವ ಪೆಟ್ಟಿಗೂ ದೇಹ ತತ್ತರಿಸುವುದು. ಬಂಡೆಯ ನೆತ್ತಿಯಲ್ಲಿ ಜಲ ಹುಟ್ಟುವುದು ಅಚ್ಚರಿ ತರುತ್ತಿತ್ತು. ಅದು ವೇದಾವತಿ/ಹಗರಿ ಹೊಳೆಗಳ ಮೂಲವೆಂದು ಬಳಿಕ ತಿಳಿಯಿತು.

ಮಾಣಿಕ್ಯಧಾರೆಯ ಬಳಿಯಿದ್ದ ಗುಹೆಯ ಬಗ್ಗೆ ಒಂದು ಕತೆಯಿದೆ. ಸಂತನ ಶಿಷ್ಯೆ ಮಾಮಾ ಜೋಗಿನಿ, ಯಾತ್ರಿಕರಿಗೆ ಗುಹೆಯ ಮಣ್ಣಿಂದ ರೊಟ್ಟಿ ಮಾಡಿ ಕಿಂಡಿಯೊಳಗಿಂದ ನೀಡುತ್ತಿದ್ದರಂತೆ. ಅವು ಭಕ್ತರ ಇಚ್ಛಾನುಸಾರ ಗೋಧಿಯವೊ ರಾಗಿಯವೊ ಆಗುತ್ತಿದ್ದವಂತೆ. ಒಮ್ಮೆ ರೊಟ್ಟಿ ಕೊಡಲು ಕೈಚಾಚಿದಾಗ, ಪುಂಡನೊಬ್ಬ ತುಡುಕಿದನಂತೆ. ಮಾಮಾ ಜೋಗಿನಿ ಕೈಕೊಡಹಿದಾಗ ರಭಸಕ್ಕೆ ದೂರ ಹೋಗಿಬಿದ್ದನಂತೆ. ಅವನನ್ನು ಒಂದು ಗುಹೆಯಲ್ಲಿ ಕೂಡಿ ಹಾಕಿದ್ದು ಸಿಟ್ಟಿನಿಂದ ಮೈಕೊಡಹಿದರೆ ಈಗಲೂ ಬೇಡಿಯ ಸರಪಳಿ ಸದ್ದು ಕೇಳುತ್ತದೆಯಂತೆ. ನಾವು ಮಾಣಿಕ್ಯಧಾರೆಯ ಬಳಿಯ ಗುಹೆ ಬಾಗಿಲಲ್ಲಿ ನಿಂತು ಸರಪಳಿಯ ಝಣತ್ಕಾರ ಕೇಳಲು ಕಿವಿಗೊಡುತ್ತಿದ್ದೆವು.

ಮಾಣಿಕ್ಯಧಾರೆಯಲ್ಲಿ ಜಳಕ ಮುಗಿಸಿದ ಬಳಿಕ ಗುಹಾ ಪ್ರವೇಶ. ಸಂಜೆಗೆ ಲೋಬಾನದ ಹೊಗೆದಾನಿ ಹಿಡಿದು ದಫ್ ವಾದ್ಯದೊಂದಿಗೆ ಮುಜಾವರನು ಗುಹೆ ಪ್ರವೇಶಿಸುವನು. ಅದೊಂದು ಸುಣ್ಣದಕಲ್ಲಿನ ಹೆಪ್ಪಿನಿಂದಾದ ನೈಸರ್ಗಿಕ ಗುಹೆ. ಛಾವಣಿಯಲ್ಲಿ ತಟತಟಿಸುವ ನೀರಹನಿ. ಒಳಗೆ ಸಂತರ ಸಮಾಧಿಗಳು, ಪಾದುಕೆ, ನಂದಾದೀಪ. ಚಿಲುಮೆ. ಜನ ಚಿಲುಮೆಯ ನೀರನ್ನು ತಬ್ರೂಕೆಂದೂ ಗುಹೆಯಲ್ಲಿದ್ದ ಮಣ್ಣನ್ನು ಗಂಧವೆಂದೂ ಸಂಗ್ರಹಿಸುವರು. ರಾತ್ರಿ ಗುಹೆಯನ್ನು ಮುಚ್ಚಲಾಗುತ್ತಿತ್ತು. ನಡುರಾತ್ರಿ ಹುಲಿ ಬಂದು ಬಾಲದಿಂದ ಗವಿಯನ್ನು ಗುಡಿಸುತ್ತದೆ ಎಂದು ಅಮ್ಮ ಹೇಳುತ್ತಿದ್ದಳು.

ದರ್ಗಾದ ಮೇಲೆ ನಗಾರಖಾನೆ ಲಂಗರ್‌ಖಾನೆ ಭಂಡಾರಖಾನೆಗಳಿದ್ದವು. ಅಲ್ಲಿ ಕೊರಡು ಧಗಧಗಿಸುವ ಒಲೆಯ ಸುತ್ತ ಚಳಿಕಾಸುವ ವೃದ್ಧರ ಪರಿಷತ್ತು ನೆರೆದಿರುತ್ತಿತ್ತು. ಒಲೆಯ ಮೇಲೆ ದೊಡ್ಡ ಕಡಾಯಿಗಳಲ್ಲಿ ಕುದಿವ ಸಿಹಿಗಂಜಿಯ ಭಂಡಾರ. ಭಂಡಾರ ಸಿದ್ಧವಾದೊಡನೆ ನಗಾರಖಾನೆಯಲ್ಲಿ ದಮಾದಢ್ ನಗಾರಿ ಸದ್ದಾಗುವುದು. ನಾವು ಪಾತ್ರೆ ಬೋಗುಣಿ ಎತ್ತಿಕೊಂಡು ಓಡುತ್ತಿದ್ದೆವು. ಪಾತ್ರೆಗಳಿಗೆ ಬಾಣಸಿಗರು ಭಂಡಾರವನ್ನು ಮೊಗೆದು ಸುರಿವರು. ಜನ ಹಬೆಯಾಡುವ ಸುಡುಗಂಜಿಯನ್ನು ಕುಡಿಯುವರು. ಬಳಿಕ ಕುರ್ಚಿಯಲ್ಲಿ ಕೂತ ದರ್ಗಾದ ಗುರುಗಳ ಮುಂಗೈ ಚುಂಬಿಸುವರು.

ಉರುಸಿನಲ್ಲಿ ಮೈಕೈಗೆ ಕಬ್ಬಿಣದ ಸರಪಳಿ ಸುತ್ತಿಕೊಂಡು ಚಿಮ್ಮಟಿಗೆಯಿಂದ ತಲೆಗೆ ಬಡಿದುಕೊಂಡು ಹೂಂಕರಿಸುವ ಫಕೀರರ ಮೆರವಣಿಗೆ ಅತ್ತಿಗುಂಡಿಯಿಂದ ಬರುತ್ತಿತ್ತು. ಫಕೀರರು ಚರ್ಮವಾದ್ಯವನ್ನು ಲಯಬದ್ಧವಾಗಿ ಬಡಿದಾಗ ಏಳುವ ನಾದ, ರೋಮಾಂಚನ ಎಬ್ಬಿಸುತ್ತಿತ್ತು. ಫಕೀರರ ನಡುವೆ ಗಂಧ ಹೊತ್ತು ವ್ಯಕ್ತಿ. ಗಂಧದ ಮೇಲೆ ಜನ ಕಾಸು ಎಸೆವರು. ಅವನ್ನು ಹೆಕ್ಕಲು ಬಗ್ಗಿದವರ ಮೇಲೆ ನಡೆವವರು ಬೀಳುವರು. ರಾತ್ರಿಯಿಡೀ ಬಣ್ಣಬಣ್ಣದ ಮಣಿಸರ ಧರಿಸಿ ದೀರ್ಘಕೇಶೀ ಫಕೀರರು ಧುನಿ ಉರಿಸುತ್ತ ಹಾಡುವರು. ಬಗೆಬಗೆಯ ಮಣಿಸರ ಕರಿನೂಲು ಗಿಡಮೂಲಿಕೆ ಇಟ್ಟುಕೊಂಡ ಫಕೀರರೂ ಇರುವರು. ಊರಿಗೆ ಮರಳಿದರೂ ಗಿರಿಯದೇ ನೆನಪು.

ಅಪ್ಪನಿಗೆ ಗಿರಿಗೆ ಹೋಗಬೇಕೆಂದರೆ ರೆಕ್ಕೆ ಮೂಡುತ್ತಿದ್ದವು. ಆತ ಹಾಸಿಗೆ ಹಿಡಿದ ದಿನಗಳಲ್ಲಿ ನಾವೆಲ್ಲ ಸುತ್ತ ಕೂತಿರುವಾಗ, ಗಿರಿಗೆ ಹೋಗಿಬರೋಣ ಎಂದನು. ಚಳಿಗಾಲ. ಅವನ ಆ ಅವಸ್ಥೆಯಲ್ಲಿ ಥಂಡಿ ತಡೆವುದು ಕಷ್ಟ. ಆದರೆ ಅದವನ ಅಂತಿಮ ಬಯಕೆಯಾಗಿತ್ತು. ಆತ ಮುಪ್ಪನ್ನು ಮರೆತು ಮುದಿಜಿಂಕೆಯಂತೆ ತಡವರಿಸುತ್ತ ಗಿರಿಯಲ್ಲಿ ಓಡಾಡಿದನು. ರಾತ್ರಿಯೆಲ್ಲ ಬೆಂಕಿಹಾಕಿ ಧುನಿಯ ಬದಿಯಲ್ಲೇ ಮಲಗಿಸಿದೆವು. ಅವನು ಮುಲುಕುತ್ತ ಗಿರಿಯಿಂದ ಇಳಿದು, ಇಳಿದ ಕೆಲವೇ ದಿನಗಳಲ್ಲಿ ಪ್ರಪಂಚದ ಯಾತ್ರೆ ಮುಗಿಸಿದನು.

ಹೀಗೆ ಜನಶ್ರದ್ಧೆಯ ಕೇಂದ್ರವಾಗಿದ್ದ ಗಿರಿ, ಮತೀಯ ರಾಜಕಾರಣ ಪ್ರವೇಶದಿಂದ ತನ್ನ ಪಾರಂಪರಿಕ ಆಕರ್ಷಣೆ ಕಳೆದುಕೊಂಡಿತು. ಸಂತರಿಗೆ ನಡೆದುಕೊಳ್ಳುವುದು ಇಸ್ಲಾಮಿಗೆ ಸಲ್ಲದೆನ್ನುವ ಮೂಲಭೂತವಾದದ ಹೊಡೆತವೂ ಅದನ್ನು ದುರ್ಬಲಗೊಳಿಸಿತು. ಜನಸಾಮಾನ್ಯರ ಬದುಕಿನ ಲೌಕಿಕತೆ- ಪಾರಮಾರ್ಥಿಕತೆಗಳು ಒಗ್ಗೂಡುವ ಯಾತ್ರಾಸ್ಥಳದ ಜೀವಂತಿಕೆ ಹೋಗಿಬಿಟ್ಟಿತು. ಈ ಸಲ ಗಿರಿಗೆ ಹೋದೆ-ನೀಲಕುರಿಂಜಿ ಕಾಣಲು. ಬಾಬಾಬುಡನ್ ಮುಳ್ಳಯ್ಯ ಸೀತಾಳಯ್ಯ ಗಿರಿಗಳ ಕಣಿವೆಗಳಲ್ಲಿ ಬಾನು ನಾನು ಕಲೀಮ ಅಡ್ಡಾಡಿದೆವು. ದರ್ಗಾ ನಿರ್ಜನವಾಗಿತ್ತು. ಗಿಡಮರ, ಗಾಳಿ, ಪರ್ವತ, ಚಳಿ, ಜಲಪಾತ ತಮ್ಮ ಧರ್ಮವನ್ನು ಪಾಲಿಸುತ್ತಿದ್ದವು.

  • ರಹಮತ್ ತರೀಕೆರೆ, ನಿವೃತ್ತ ಪ್ರಾಧ್ಯಾಪಕರು

Leave a Reply