ವಿಶ್ವವಿದ್ಯಾನಿಲಯಗಳೆಂಬ ತಿಪ್ಪೆಗುಂಡಿಗಳು ಮತ್ತು ಉಪಕುಲಪತಿಗಳೆಂಬ ಗೊಬ್ಬರದ ಹುಳುಗಳು

3 years ago

ಕಳೆದ ವಾರ ರಾಹುಲ್ ಗಾಂಧಿ ದೆಹಲಿಯ ವಿಶ್ವ ವಿದ್ಯಾನಿಲಯಕ್ಕೆ ( ಚಿತ್ರದಲ್ಲಿ ಇರುವ ಕಟ್ಟಡ) ಭೇಟಿ ನೀಡಿ ಅಲ್ಲಿನ ಉಪಹಾರ ಗೃಹದ ಬಳಿ ಚಹಾ ಕುಡಿಯುತ್ತಾ ವಿದ್ಯಾರ್ಥಿಗಳ ಜೊತೆಗೆ ಖಾಸಗಿಯಾಗಿ ಸಂವಾದ ಮಾಡಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದೀಗ ಅಲ್ಲಿನ ಉಪಕುಲಪತಿ ಎಂಬ ಮಹಾಶಯ ರಾಹುಲ್ ಗಾಂಧಿಗೆ ನೋಟಿಸ್ ನೀಡಿ ವಿಶ್ವ ವಿದ್ಯಾನಿಲಯಕ್ಕೆ ಅಧಿಕೃತವಾಗಿ ಭೇಟಿ ನೀಡಬಾರದು ಎಂದು ಎಚ್ಚರಿಸಿದ್ದಾನೆ.

ಒಂದು ಕಾಲದಲ್ಲಿ ಜ್ಞಾನ ಕೇಂದ್ರಗಳೆಂದು ಹೆಸರಾಗಿದ್ದ ವಿಶ್ವವಿದ್ಯಾನಿಲಯಗಳು ಇಂದು ಆಳುವವರ ಕಾಲೊರೆಸುವ ನೆಲದ ಹಾಸುಗಳಾಗಿವೆ ಜೊತೆಗೆ ಕಸದ ತಿಪ್ಪೆಗುಂಡಿಗಳಾಗಿವೆ. ಈ ದೇಶದ ಪ್ರತಿಯೊಬ್ಬ ನಾಗರೀಕನಿಗೂ ಭಾರತದ ಯಾವುದೇ ವಿಶ್ವ ವಿದ್ಯಾನಿಲಯಕ್ಕೆ ಭೇಟಿ ನೀಡುವ ಹಕ್ಕಿದೆ. ಜೊತೆಗೆ ಅಲ್ಲಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಚರ್ಚಿಸುವ ಹಾಗೂ ಗ್ರಂಥಾಲಯದಲ್ಲಿ ಇರುವ ಜ್ಞಾನ ಭಂಡಾರದಲ್ಲಿ ಮಾಹಿತಿಯನ್ನು ಮತ್ತು ವಿಶ್ವ ವಿದ್ಯಾನಿಲಯಗಳಲ್ಲಿ ಆಗಿರುವ ಸಂಶೋಧನೆಗಳನ್ನು ಓದುವ ಸ್ವಾತಂತ್ರ್ಯವಿದೆ ಎಂಬ ಕನಿಷ್ಟ ಸಾಮಾನ್ಯ ಜ್ಞಾನ ಉಪಕುಲಪತಿಗಳು ಎಂಬ ಕುರಿಗಳಿಗೆ ಇಲ್ಲವಾಗಿದೆ. ಅವರುಗಳು ಜ್ಞಾನಶಿಸ್ತು ಕೇಂದ್ರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುವ ಬದಲಾಗಿ ರಾಷ್ಟ್ರೀಯ ಬಿ.ಜೆ.ಪಿ. ಪಕ್ಷದ ಕಚೇರಿಯ ಕಸ ಹೊಡೆಯುವ ಸೇವಕರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಳೆದ ಹದಿನೈದು ವರ್ಷಗಳಲ್ಲಿ ನಾನು ನನ್ನ ಅಧ್ಯಯನ ಕೃತಿಗಳ ಬರೆವಣಿಗೆಗಾಗಿ ದೇಶಾದ್ಯಂತ ಹಲವಾರು ವಿಶ್ವ ವಿದ್ಯಾನಿಲಯಗಳಿಗೆ ಭೇಟಿ ನೀಡಿದ್ದೀನಿ. ಮಾಹಿತಿ ಕಲೆ ಹಾಕಿದ್ದೀನಿ. ದೆಹಲಿಯ ವಿಶ್ವ ವಿದ್ಯಾನಿಲಯ, ಜವಹರಲಾಲ್ ನೆಹರೂ, ವಿ.ವಿ. ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್, ಕೊಲ್ಕತ್ತ ನಗರದ ರಬೀಂದ್ರ ನಾಥ ಟ್ಯಾಗೂರ್ ವಿ.ವಿ. ಪ್ರೆಸಿಡೆನ್ಸಿ ವಿ.ವಿ. ಹಾಗೂ ವಿಶ್ವಭಾರತಿ ವಿ.ವಿ.( ಶಾಂತಿ ನಿಕೇತನ) ವಾರಣಾಸಿಯ ಬನಾರಸ್ ಹಿಂದೂ ಯುನಿರ್ವಿಸಿಟಿ, ಅಲಹಬಾದ್ ವಿ.ವಿ. ಲಕ್ನೋ ವಿಶ್ವ ದ್ಯಾನಿಲಯ, ಹೈದರಾಬಾದಿನ ಉಸ್ಮಾನಿಯ ವಿಶ್ವ ವಿದ್ಯಾನಿಲಯ, ಚೆನ್ನೈನ ಮದ್ರಾಸ್ ಯೂನಿವರ್ಸಿಟಿ, ತಂಜಾವೂರಿನ ತಮಿಳು ವಿ.ವಿ. ಮಧುರೈನ ಕಾಮರಾಜ್ ಯೂನಿವರ್ಸಿಟಿ ಹೀಗೆ ಲ್ಲಿನ ಪ್ರಾಧ್ಯಾಪಕರ ಜೊತೆ ಆಯಾ ಪ್ರದೇಶಗಳ ಇತಿಹಾಸ ಕುರಿತ ಚರ್ಚೆ ಮತ್ತು ಮಾಹಿತಿ ಸಂಗ್ರಹದಿಂದ ನನ್ನಂತಹ ಒಬ್ಬ ಸಾಮಾನ್ಯ ಬರಹಗಾರ ಜ್ಞಾನ ವೃದ್ಧಿಸಿಕೊಳ್ಳಲು ಸಾಧ್ಯವಾಗಿದೆ.

ಜನ ಸಾಮಾನ್ಯರಿಗೆ ವಿಶ್ವ ವಿದ್ಯಾನಿಲಯಗಳಿಗೆ ಪ್ರವೇಶವಿಲ್ಲ ಎನ್ನುವುದಾದರೆ, ಅವುಗಳು ಇರುವುದು ಏತಕ್ಕೆ? ಯಾವ ಉದ್ದೇಶಕ್ಕೆ? ಇತ್ತೀಚೆಗಿನ ಬೆಳವಣಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇವುಗಳು ಆರ್.ಎಸ್.ಎಸ್. ಸಂಸ್ಥೆಯ ಅಂಗಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಸಾರ್ವಜನಿಕ ಸಂದೇಹ ಬಲವಾಗತೊಡಗಿದೆ. ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ಜಗತ್ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ಅವರಿಗೆ ನೋಟಿಸ್ ನೀಡುವುದು ಮತ್ತು ರಾಹುಲ್ ಗಾಂಧಿಗೆ ನೋಟಿಸ್ ನೀಡುವುದು ಇಂತಹ ನಡುವಳಿಕೆಗಳು ರಾಷ್ಟ್ರದ ಉನ್ನತ ಶಿಕ್ಷಣ ಸಂಸ್ಥೆಗಳ ಘನತೆಯನ್ನು ಗಾಳಿಗೆ ತೂರಿವೆ. ಅಮಾರ್ತ್ಯ ಸೇನ್ ಅಥವಾ ರಾಹುಲ್ ಧರ್ಮದ ಹೆಸರಿನಲ್ಲಿ ಮತ್ತು ಜಾತಿಯ ಹೆಸರಿನಲ್ಲಿ ಚಟುವಟಿಕೆ ನಡೆಸುವ ಧಾರ್ಮಿಕ ಭಯೋತ್ಪದಕರಲ್ಲ.

ರಾಷ್ಟ್ರ ಮಟ್ಟದ ವಿ.ವಿ.ಗಳು ಈಗ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಬೋಧಿಸುವ ಕೇಂದ್ರಗಳಾಗಿ ಉಳಿದಿಲ್ಲ. ಏಕೆಂದರೆ, ದೇಶಾದ್ಯಂತ 6.500 ಪ್ರಧ್ಯಾಪಕರ ಹುದ್ದೆಗಳು ಖಾಲಿ ಬಿದ್ದಿವೆ. ಕಳೆದ ಡಿಸಂಬರ್ ತಿಂಗಳಿನಲ್ಲಿ ಲೋಕಸಭೆಯಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವ ಸುಭಾಷ್ ಸರ್ಕಾರ್ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ ದೆಹಲಿ ವಿಶ್ವ ವಿದ್ಯಾನಿಲಯದಲ್ಲಿ 900 ಹುದ್ದೆ, ಅಲಹಬಾದ್ ವಿ.ವಿ.ಯಲ್ಲಿ 622 ಹುದ್ದೆ, ಬನಾರಸ್ ಹಿಂದೂ.ವಿ.ವಿಯಲ್ಲಿ532, ಆಲಿಘರ್ ಮುಸ್ಲಿಂ ವಿ.ವಿ.ಯಲ್ಲಿ498 ಮತ್ತು ಜವಹರ ಲಾಲ್ ನೆಹರೂ ವಿ.ವಿ.ಯಲ್ಲಿ 326 ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇವೆ. ಕರ್ನಾಟಕದಲ್ಲಿ ಅಂಗನವಾಡಿ ಕೇಂದ್ರ ತೆರೆಯುವಂತೆ ಜಿಲ್ಲೆಗೊಂದು ವಿಶ್ವ ವಿದ್ಯಾನಿಲಯಗಳನ್ನು ತೆರೆಯಲಾಗಿದೆ. ಅವುಗಳಲ್ಲಿ ಪ್ರಾದ್ಯಾಪಕರು ಮತ್ತು ಉಪನ್ಯಾಸಕರು ದಿನಗೂಲಿ ನೌಕರರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಶ್ವ ವಿದ್ಯಾನಿಲಯಗಳು ಬೋಧಕರ ಹೆದ್ದೆ ತುಂಬುವುದಕ್ಕೆ, ಸಂಶೋದನೆಯತ್ತ ಗಮನ ನೀಡುವುದರ ಬದಲಾಗಿ ಕೇಂದ್ರದಲ್ಲಿ ಆಡಳಿತದಲ್ಲಿರುವ ನಾಯಕ ಶಿಖಾಮಣಿಗಳ ಗುಲಾಮಿ ಕೇಂದ್ರಗಳಾಗಿರುವುದು ಭವಿಷ್ಯದ ಭಾರತಕ್ಕೆ ದೊಡ್ಡಅಡ್ಡಿಯನ್ನುಂಟು ಮಾಡಿವೆ. ಈ ಕುರಿತು ದೇಶದ ಮತ್ತು ನಾಡಿನ ಪ್ರಜ್ಞಾವಂತರು ಗಂಭೀರವಾಗಿ ಆಲೋಚಿಸಬೇಕಾಗಿದೆ.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply