ಉದ್ಯಮಿಯನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿದ ಶಿಕ್ಷಕಿ

1 year ago

ಬೆಂಗಳೂರು: ರಾಜಕಾರಣಿಗಳ ಹನಿಟ್ರ್ಯಾಪ್ ಯತ್ನ ಕೋಲಾಹಲ ಸೃಷ್ಟಿಸಿರುವ ನಡುವೆಯೇ ನಗರದ  ಮಹಾಲಕ್ಷ್ಮಿ ಲೇಔಟ್ ನಲ್ಲಿ ಖಾಸಗಿ ಪ್ರೀಸ್ಕೂಲ್ ಶಿಕ್ಷಕಿಯೊಬ್ಬಳು ಪ್ರಿ ಸ್ಕೂಲ್ ಗೆ ಬರುತ್ತಿದ್ದ ಮಕ್ಕಳ ಪೋಷಕನನ್ನೇ ಹನಿಟ್ರ್ಯಾಪ್ ಬಲೆಗೆ ಕೆಡವಿಕೊಂಡಿದ್ದಾರೆ. ರೌಡಿಯೊಬ್ಬನ ಜೊತೆ ಸೇರಿ ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿದ ಪೋಷಕನಿಂದ ಲಕ್ಷಾಂತರ ಸುಲಿಗೆ ಮಾಡಿ ಪೊಲೀಸರ ಅತಿಥಿಗಳಾಗಿದ್ದಾರೆ.

ಸುಲಿಗೆ ಪ್ರಕರಣದ ಸಂಬಂಧ 34 ವರ್ಷದ ಉದ್ಯಮಿ ರಾಜೇಶ್ ನೀಡಿದ್ದ ದೂರು ಆಧರಿಸಿ ವಿಜಯಪುರ ಮೂಲದ ಖಾಸಗಿ ಶಾಲೆಯ ಶಿಕ್ಷಕಿ ಶ್ರೀದೇವಿ ರೂಡಗಿ (25), ಅವರ ಪ್ರಿಯಕರ ಸಾಗರ್ ಮೋರೆ (28) ಹಾಗೂ ರೌಡಿ ಶೀಟರ್‌ ಗಣೇಶ್ ಕಾಳೆ (38)ನನ್ನು ಬಂಧಿಸಲಾಗಿದೆ. ಬಂಧಿತ ರೌಡಿ ಗಣೇಶ್ ಕಾಳೆ ವಿರುದ್ಧ ಬೆದರಿಕೆ, ಸುಲಿಗೆ, ಕೊಲೆಯತ್ನ ಸೇರಿ ವಿವಿಧ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶ್ರೀದೇವಿ ರೂಡಗಿಯವರಿಗೆ 2023ರಲ್ಲಿ ಉದ್ಯಮಿ ರಾಕೇಶ್ ಎಂಬ ಪೋಷಕನ ಪರಿಚಯವಾಯಿತು. ಆತನಿಂದ ಶಾಲೆ ನಿರ್ವಹಣೆ, ತಂದೆಯ ಚಿಕಿತ್ಸೆಗೆಂದು 4 ಲಕ್ಷ ರೂ. ಸಾಲ ಪಡೆದು 2024ರ ಮಾರ್ಚ್ ನಲ್ಲಿ ವಾಪಸ್ ಕೊಡುವುದಾಗಿ ಹೇಳಿದ್ದಾರೆ. ಹಣ ವಾಪಸ್ ಕೇಳಿದಾಗ ಕೊಟ್ಟಿರಲಿಲ್ಲ. ತುಂಬಾ ಕಷ್ಟವಿದೆ. ಹಣ ಈಗ ಕೊಡಲು ಆಗುವುದಿಲ್ಲ. ನೀವು ಶಾಲೆಯ ಪಾಲುದಾರರಾಗಿ ಎಂದು ಹೇಳಿದ್ದಾರೆ. 

ಅಲ್ಲಿಂದ ಪಾಲುದಾರಿಕೆಯ ವಿಷಯ ಶುರುವಾಗಿ, ಪರಸ್ಪರರ ನಡುವೆ ಸಲುಗೆ ಬೆಳೆದಿದೆ. ಇಬ್ಬರೂ ಹಲವೆಡೆ ಸುತ್ತಾಡಿದ್ದಾರೆ. ಶ್ರೀದೇವಿ‌ ಜೊತೆ ಮಾತನಾಡಲೆಂದೇ ರಾಕೇಶ್ ಹೊಸ ಸಿಮ್ ಹಾಗೂ ಪೋನ್ ಖರೀದಿಸಿದ್ದರು. ಆದರೆ, ನಂತರ ಜನವರಿ ಮೊದಲ ವಾರದಲ್ಲಿ ಹಣ ವಾಪಸ್ ಕೇಳಿದ್ದರು. ನನ್ನ ಬಳಿ ಹಣವಿಲ್ಲ ಇದರ ಬದಲಾಗಿ ‘ನಿನ್ನ ಜೊತೆ ರಿಲೇಶನ್ ಶಿಪ್ನಲ್ಲಿ ಇರುತ್ತೇನೆ’ ಎಂದು ಆಮಿಶ ಒಡ್ಡಿದ್ದಾರೆ. ಅನಂತರ 15 ಲಕ್ಷ ರೂ. ಹಣವನ್ನು ಮತ್ತೆ ಕೇಳಿದ್ದಾರೆ. ಇದಕ್ಕೆ ರಾಕೇಶ್ ಒಪ್ಪಿಲ್ಲ.

ಅನಂತರ ಶ್ರೀದೇವಿ ರಾಕೇಶ್ ಜೊತೆಗಿದ್ದ ಖಾಸಗಿ ಕ್ಷಣಗಳ ವಿಡಿಯೋಗಳನ್ನು ತೋರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಆರಂಭಿಸಿದ್ದಾರೆ. ಮೊದಲಿಗೆ ಸ್ವಲ್ಪ ಹಣ ನೀಡಿದ ಆತ ಇವರ ಕಾಟ ಅತಿಯಾದಾಗ ಆಕೆ ಜತೆ ಸಂಪರ್ಕಕ್ಕೆ ಇಟ್ಟುಕೊಂಡಿದ್ದ ಸಿಮ್ ಕಾರ್ಡ್ ಅನ್ನು ಮುರಿದು ಎಸೆದಿದ್ದಾರೆ. 

ನಂತರ ಆಕೆ ತನ್ನ ಗೆಳೆಯರೊಂದಿಗೆ ಸೇರಿ ಸುಲಿಗೆಗೆ ಸಂಚು ರೂಪಿಸಿದ್ದಾರೆ. ಅದರ ಪ್ರಕಾರ, ಕಳೆದ ಮಾರ್ಚ್ 12 ರಂದು ರಾಕೇಶ್ ಪತ್ನಿಗೆ ಕರೆ ಮಾಡಿದ್ದ ಶ್ರೀದೇವಿ, ಮಕ್ಕಳ ಸ್ಕೂಲ್ ಟಿಸಿ ಕೊಡುತ್ತೇನೆ. ನಿಮ್ಮ ಪತಿಯನ್ನು ಕಳುಹಿಸಿ ಎಂದಿದ್ದಾರೆ.

ಅದರಂತೆ ಶ್ರೀದೇವಿಯ ಪ್ರೀ ಸ್ಕೂಲ್ಗೆ ರಾಕೇಶ್ ತೆರಳಿದ್ದರು. ಆಗ ಅಲ್ಲಿ ಶ್ರೀದೇವಿ ಜೊತೆ ಹಾಜರಿದ್ದ ಇತರೆ ಆರೋಪಿಗಳಾದ ಸಾಗರ್ ಹಾಗೂ ಗಣೇಶ್ ಬೆದರಿಕೆ ಹಾಕಿದ್ದರು. ಸಾಗರ್ ಜೊತೆ ಶ್ರೀದೇವಿಗೆ ನಿಶ್ಚಿತಾರ್ಥ ಆಗಿದೆ. ಆದರೆ ನೀನು ಆಕೆ ಜೊತೆ ಮಜಾ ಮಾಡುತ್ತಿದ್ದಿ ಎಂದು ಆರೋಪಿ ಗಣೇಶ್ ಬೆದರಿಕೆ ಹಾಕಿದ್ದ. ಬಳಿಕ ಕಾರಿನಲ್ಲಿ‌ ಕೂರಿಸಿಕೊಂಡು ಸುತ್ತಾಡಿಸಿ ಯಾರಿಗೂ ವಿಚಾರ ಹೇಳಬಾರದು ಎಂದರೆ 1 ಕೋಟಿ‌ ರೂ. ಕೊಡು ಎಂದು ಬ್ಲ್ಯಾಕ್ಮೇಲ್ ಮಾಡಿದ್ದಾನೆ.

ಕೊನೆಯದಾಗಿ ಆರೋಪಿಗಳು 20 ಲಕ್ಷ ರೂ.ಗೆ ವ್ಯವಹಾರ ಖುದುರಿಸಿ 1.90 ಲಕ್ಷ ರೂ. ಹಣ ಪಡೆದು ಬಿಟ್ಟು ಕಳುಹಿಸಿದ್ದರು. ಆದರೆ, ಉಳಿದ ಹಣ ನೀಡುವಂತೆ ಪ್ರಾಣ ಬೆದರಿಕೆ ಹಾಕಿದ್ದರು ಎಂದು ರಾಕೇಶ್ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಎಲ್ಲ ಘಟನೆಗಳನ್ನು ವಿವರಿಸಿರುವ ರಾಕೇಶ್ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಶ್ರೀದೇವಿ, ಅರುಣ್ ಮತ್ತು ಸಾಗರ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply