ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಮೊದಲ ವಿಧಾನಸಭೆಯ ಅಧಿವೇಶನ ಇಂದಿನಿಂದ ಆರಂಭವಾಗಿದೆ. ಕಲಾಪದ ಮೊದಲ ದಿನ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರು ಹಾಗೂ ಹಲವು ಶಾಸಕರು ವಿಧಾನಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
ಮೊದಲಿಗೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರು ವಿಧಾನಸಭೆಯ ಹಂಗಾಮಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಳಿಕ,16ನೇ ವಿಧಾನಸಭೆಯ ಮೊದಲ ಅಧಿವೇಶನವು ವಂದೇ ಮಾತರಂ ಗೀತೆಯೊಂದಿಗೆ ಆರಂಭವಾಯಿತು. ಸಭಾಧ್ಯಕ್ಷ ಆರ್.ವಿ. ದೇಶಪಾಂಡೆ ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸಲು ಅನುವು ಮಾಡಿಕೊಟ್ಟರು.
ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ವಿಧಾನಸಭೆ ಕ್ಷೇತ್ರದ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಉಪ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕನಕಪುರ ಕ್ಷೇತ್ರದ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು.
ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎಸ್.ಮುನಿಯಪ್ಪ, ಕೆ.ಜೆ.ಜಾರ್ಜ್ ಅವರು ಸತ್ಯನಿಷ್ಠೆ ಹೆಸರಿನಲ್ಲಿ ವಿಧಾನಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಸಚಿವರಾದ ಎಂ.ಬಿ.ಪಾಟೀಲ್ ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪ್ರಿಯಾಂಕ ಖರ್ಗೆ ಹಾಗೂ ಸತೀಶ್ ಜಾರಕಿಹೊಳಿ ಅವರು ಸಂವಿಧಾನದ ಹೆಸರಿನಲ್ಲಿ ಮತ್ತು ರಾಮಲಿಂಗಾರೆಡ್ಡಿ ಸತ್ಯ ನಿಷ್ಠೆ ಹೆಸರಿನಲ್ಲಿ , ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕರಿಸಲು ಕಾರ್ಯದರ್ಶಿ ಅವರು ಆಹ್ವಾನಿಸಿದಾಗ, ಸಚಿವ ಜಮೀರ್ ಅಹಮ್ಮದ್ ಖಾನ್ ಸದನದಲ್ಲಿ ಹಾಜರಿರಲಿಲ್ಲ.
ವಿಧಾನಸಭೆ ಸದಸ್ಯರಾಗಿ ಕೆ.ಎ.ಎನ್.ರಾಜಣ್ಣ, ಅಲ್ಲಮ ಪ್ರಭು ಪಾಟೀಲ್, ಕೆ.ಎಸ್.ಆನಂದ್, ಅರಗ ಜ್ಞಾನೇಂದ್ರ, ಅಶೋಕ್ ಪಟ್ಟಣ್, ಅಶ್ವಥ್‍ಕುಮಾರ್ ರೈ, ಬಾಬಾಸಾಹೇಬ್ ಪಾಟೀಲ್, ಅವಿನಾಶ್ ಜಾದವ್, ಅಜಯ್ ಧರ್ಮಸಿಂಗ್, ಎಂ.ಕೆ.ಪಾಟೀಲ್,ಬಸವನಗೌಡ ತುರುವಿಹಾಳ್, ಬಸವರಾಜ ರಾಯರೆಡ್ಡಿ, ಬಸನಗೌಡ ಗದ್ದಲ್, ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಪ್ರಮುಖರು ಪ್ರಮಾಣ ವಚನ ಸ್ವೀಕರಿಸಿದರು.
ಬೆಳಗಾವಿ ಉತ್ತರ ಕ್ಷೇತ್ರದಿಂದ ಚುನಾಯಿತರಾದ ಆಸೀಫ್ ಶೇಠ್ ಇಂಗ್ಲೀಷ್‍ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಶಿವಾನಂದ ಪಾಟೀಲ್ ಬಸವಣ್ಣನವರ ಹೆಸರಿನಲ್ಲಿ, ಅಶೋಕ್ ಮನಗೊಳಿ ಮನೆದೇವರು, ತಂದೆತಾಯಿ, ಕ್ಷೇತ್ರದ ಜನರು ಹಾಗೂ ಸತ್ಯನಿಷ್ಠೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.



