ಕಾಂಗ್ರೇಸ್ ಪಕ್ಷವು ಚುನಾವಣೆಯ ಪ್ರಣಾಳಿಕೆಯಲ್ಲಿ ಭಜರಂಗದಳ ಸಂಘಟನೆಯ ನಿಷೇಧವನ್ನು ಪ್ರಸ್ತಾಪಸಿದ ಕಾರಣಕ್ಕಾಗಿ ಸಂಘಪರಿವಾರದ ಚಡ್ಡಿಗಳು ಮತ್ತು ಜನಿವಾರಗಳು ಥಕ ಥೈ ಎಂದು ನಾಡಿನುದ್ದಕ್ಕೂ ಉಯಿಲೆಬ್ಬಿಸಿ ಕುಣಿದಾಡಿದರು. ಆದರೆ, ಸೌಹಾರ್ಧತೆಗೆ ಹೆಸರಾದ ಕನ್ನಡ ನೆಲದ ಜನತೆ ಈ ಪ್ರಸ್ತಾವನೆಯನ್ನು ಅಂಗೀಕರಿಸಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಿದರು.
ಬಿ.ಜೆ.ಪಿ. ಆಳ್ವಿಕೆಯ ಅವಧಿಯಲ್ಲಿ ಮಲೆನಾಡಿನ ಭಾಗವಾದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕರಾವಳಿ ಪ್ರದೇಶದ ಮಂಗಳೂರು, ಉಡುಪಿ, ಭಟ್ಕಳ, ಪುತ್ತೂರು, ಕಾರ್ಕಳ ಇತ್ಯಾದಿ ಹಾಗೂ ಕೊಡಗು ಜಿಲ್ಲೆಯಲ್ಲಿ ತ್ರಿಶೂಲದ ಹೆಸರಿನಲ್ಲಿ ಹೇರಳವಾಗಿ ಚಾಕು ಚೂರಿಗಳನ್ನು ಯುವಕರಿಗೆ ವಿತರಿಸಲಾಗಿದೆ. ಇವರೆಲ್ಲರೂ ದಲಿತ ಮತ್ತು ಶೂದ್ರರಾಗಿದ್ದರೂ ಸಹ ಅವರ ಎದೆಯೊಳಕ್ಕೆ ಹನುಮನ ಹೆಸರಿನಲ್ಲಿ ಮತ್ತು ಧರ್ಮದ ಹೆಸರಿನಲ್ಲಿ ವಿಷವನ್ನು ಬಿತ್ತಲಾಗಿದೆ. ಈ ಕಾರಣದಿಂದಾಗಿ ಈ ಪ್ರದೇಶಗಳಲ್ಲಿ ಕರ್ನಾಟಕದ ಇತಿಹಾಸದಲ್ಲಿ ಹಿಂದೆ ನಾವು ಕಾಣಲಾರದ ಕೊಲೆ, ಕೋಮು ಗಲಭೆಗಳನ್ನು ಕಾಣಬೇಕಾಯಿತು. ಮುಂದಿನ ದಿನಗಳಲಲ್ಲಿ ಕಾಣುವ ಆತಂಕ ಎದುರಾಗಿದೆ.
ತಮ್ಮ ಎದೆಯೊಳಗೆ ಶಾಶ್ವತವಾಗಿ ಕಾಪಿಟ್ಟುಕೊಂಡಿರುವ ಜಾತಿಯತೆ ಮತ್ತು ಸಂವಿಧಾನ ವಿರೋಧಿ ಚಟುವಟಿಕೆಗಳು ಹಾಗೂ ಧೈಯಗಳು ಈಗ ಒಂದೊಂದಾಗಿ ಹೊರಬರುತ್ತಿವೆ. ಸಂವಿಧಾನ ಬದ್ಧವಾಗಿ ರಾಷ್ಟ್ರಪತಿಯು ಈ ದೇಶದ ಪ್ರಥಮ ಪ್ರಜೆಯಾಗಿದ್ದಾರೆ. ಯಾವುದೇ ರಾಜಕೀಯ ಅಥವಾ ಸಾಮಾಜಿಕ ಸಂಘ ಸಂಸ್ಥೆಗಳ ಅಥವಾ ಕಟ್ಟಡಗಳ ಉದ್ಘಾಟನೆ ಅವರು ಮಾಡಬೇಕಿರುವುದು ಕಡ್ಡಾಯ. ಆದರೆ, ಇದೇ ಮೇ 28 ರಂದು ದೆಹಲಿಯಲ್ಲಿ ನೂತನ ಸಂಸತ್ ಭವನವನ್ನು ಸಾವರ್ಕರ್ ಹುಟ್ಟಿದ ದಿನದ ಅಂಗವಾಗಿ ಪ್ರಧಾನಿ ಉದ್ಘಾಟಿಸುವ ಕಾರ್ಯಕ್ರಮ ರೂಪಿಸಲಾಗಿದೆ.
ಏಕೆಂದರೆ, ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಒಡಿಸ್ಸಾದ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಸಂಸತ್ ಭವನದ ಉದ್ಘಾಟನೆಯ ನೆಪದಲ್ಲಿ ನಡೆಯುವ ಪೂಜೆ, ಹೋಮ ಮುಂತಾದ ಧಾರ್ಮಿಕ ವಿಧಿ ವಿಧಾನಗಳಲ್ಲಿ ದಲಿತರಿಗೆ ಮತ್ತು ಶೂದ್ರರಿಗೆ ಅವಕಾಶವಿರುವುದಿಲ್ಲ. ಈ ಕಾರಣದಿಂದಾಗಿ ರಾಷ್ಟ್ರದ ಪ್ರಥಮ ಪ್ರಜೆಗೆ ಅವಕಾಶ ನಿರಾಕರಿಸಲಾಗಿದೆ. ಇವರಿಗೆ ದೇಶದ ಸಂವಿಧಾನಕ್ಕಿಂತ ತಾವು ನಂಬಿದ ಧರ್ಮ ಮುಖ್ಯವಾಗಿದೆ.
ಇವರು ಎಂತಹ ಅಪಾಯಕಾರಿ ವ್ಯಕ್ತಿಗಳು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಎರಡು ತಿಂಗಳ ಹಿಂದೆ ಮಂಡ್ಯ ನಗರದ ಗುತ್ತಲು ಪ್ರದೇಶದ ವಾಹನ ಮುಸ್ಲಿಂ ಚಾಲಕನೊಬ್ಬ ಸಂತೆಯಲ್ಲಿ ಮಾರಾಟಕ್ಕಾಗಿ ಅಧಿಕೃತ ಪತ್ರಗಳೊಂದಿಗೆ ಹಸು ಮತ್ತು ಕರು ಸಾಗಿಸುತ್ತಿದ್ದಾಗ ಬೆಂಗಳೂರು ಮತ್ತು ಕನಕಪುರದಲ್ಲಿ ಗೂಂಡಾ ವೃತ್ತಿಯಲ್ಲಿ ತೊಡಗಿಕೊಂಡಿದ್ದ ಪುನಿತ್ ಕೆರೆಹಳ್ಳಿ ಎಂಬುವನಿಂದ ಹತ್ಯೆಗೀಡಾದ. ಈ ಕೊಲೆಪಾತಕಿ ಮತ್ತು ಸಂಗಡಿಗರನ್ನು ಸಂಘಪರಿವಾರವು ಹೈಕೋರ್ಟ್ ಗೆ ವಕೀಲರನ್ನು ನೇಮಕ ಮಾಡಿ ಅವರಿಗೆ ಜಾಮೀನು ಕೊಡಿಸಿದೆ. ಜೊತೆಗೆ ಚಕ್ರವರ್ತಿ ಸೂಲಿಬೆಲೆ ಎಂಬ ಹೆಂಗ್ ಪುಂಗ್ಲಿ ಹೆಸರಿನ ವಿಧೂಷಕ ಈ ಪಾತಕಿಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದ ವರದಿಗಳು ಎಲ್ಲೆಡೆ ಹರಡಿವೆ.
ಭಾರತದ ಸಂವಿಧಾನದ ಪ್ರಕಾರ ಈ ದೇಶದ ಸಿಖ್ ಸಮುದಾಯದ ಪುರುಷರು ಮಾತ್ರ ಸಾರ್ವಜನಿಕವಾಗಿ ತಮ್ಮೊಂದಿಗೆ ಖಡ್ಗ ಅಥವಾ ಚಾಕುವನ್ನು ಕೊಂಡೊಯ್ಯಬಹುದು. ಭಾರತದ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರು ಮಚ್ಚು, ಕೊಡಲಿ, ಹಾರೆ ಮುಂತಾದ ಆಯುಧಗಳನ್ನು ಬಳಸುತ್ತಾರೆ. ಆದರೆ, ಅವುಗಳನ್ನು ಕೃಷಿ ಉಪಕರಣಗಳೆಂದು ಪರಿಗಣಿಸಲಾಗಿದೆ. ಅವುಗಳು ಕೃಷಿಕರ ಮತ್ತು ಕೂಲಿಕಾರರ ಹೊಟ್ಟೆ ತುಂಬಿಸುವ ಆಯುಧಗಳಾಗಿವೆ ಅವರು ಎಂದಿಗೂ ಭಜರಂಗಿಗಳ ಹಾಗೆ ನಡುರಸ್ತೆಯಲ್ಲಿ ಈ ಆಯುಧಗಳನ್ನ ಝಳಪಿಸಿಲ್ಲ.
ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲೆಡೆ ಕೋಮು ಗಲಭೆ ಹಬ್ಬಿಸುವ ಹುನ್ನಾರ ನಡೆಯುತ್ತಿದೆ. ಇನ್ನು ಮುಂದೆ ನಡೆಯುವ ಯಾವುದೇ ಧಾರ್ಮಿಕ ಹಾಗೂ ರಾಜಕೀಯ ಸಮಾರಂಭದಲ್ಲಿ ಚಾಕು ಚೂರಿ ಇಟ್ಟುಕೊಂಡುವರನ್ನು ಯಾವುದೇ ಕನಿಕರ ತೋರದೆ ಗೂಂಡಾಗಿರಿ ಕಾಯ್ದೆ ಅಡಿ ಬಂಧಿಸಿ ಸಾಮೂಹಿಕವಾಗಿ ಸೆರೆಮನೆಗೆ ತಳ್ಳಬೇಕಿದೆ. ಇದು ಚಾಕು ಅಥವಾ ಚೂರಿ ಅಲ್ಲ, ಇದು ಶಿವನ ತ್ರಿಶೂಲ ಎಂದು ವಾದಿಸುವ ಪ್ರತಿಯೊಬ್ಬ ನಾಯಕ ಮತ್ತು ಕಾರ್ಯಕರ್ತನಿಗೆ ನಿಜವಾದ ತ್ರಿಶೂಲ ಹೇಗಿದೆ ಎಂದು ತೋರಿಸಬೇಕು.
ಇಂತಹ ಕೋಮುವಾದಿಗಳ ಕಾಲುಗಳ ಮೇಲೆ ಗುಂಡು ಕಲ್ಲು ಅಥವಾ ರುಬ್ಬುಗಲ್ಲು ಎತ್ತಿ ಹಾಕಿ, ಇದು ರುಬ್ಬುವ ಕಲ್ಲು ಅಲ್ಲ, ಶಿವನ ಲಿಂಗ ಎಂದು ಹೇಳಿದರೆ, ನೀವು ನಂಬುತ್ತೀರಾ? ಎಂದು ಪ್ರಶ್ನಿಸಬೇಕು
.
ನೂತನ ಸರ್ಕಾರವು ತಕ್ಷಣವೇ ಈ ವಿಚಾರದಲ್ಲಿ ಗಂಭೀರವಾಗಿ ತೆಗೆದುಕೊಂಡು ಗುಪ್ತಚರ ಇಲಾಖೆಯಿಂದ ಮಾಹಿತಿ ತರಿಸಿಕೊಂಡು ಕ್ರಮಕೈಗೊಳ್ಳಬೇಕೆಂದು ಆಶಿಸುತ್ತೇನೆ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




