ಧಾರವಾಡದಲ್ಲಿ ಪ್ರದರ್ಶನವಾಗಲಿದೆ ವಿಶಿಷ್ಟ ಏಕ ವ್ಯಕ್ತಿ ರಂಗ ಪ್ರಯೋಗ “ತಾಯಿಯಾಗುವುದೆಂದರೆ”

4 years ago

ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಇದೇ 18ರಂದು ಹಾಸನದ ಪೂಜಾ ಅವರ ‘ತಾಯಿಯಾಗುವುದೆಂದರೆ’ ನಾಟಕ ಪ್ರದರ್ಶನ ಆಗಲಿದೆ. ಹೊಸ ವಿಷಯದ, ‘ಅಪರೂಪ’ದ ಈ ಏಕ ವ್ಯಕ್ತಿ ರಂಗ ಪ್ರದರ್ಶನ ಕುತೂಹಲ ಕೆರಳಿಸಿದೆ. ಈಗಾಗಲೇ ರಾಜ್ಯದ ಹಲವು ಕಡೆ ಪ್ರದರ್ಶನ ಕಂಡು ತನ್ನ ವಿಷಯ ವೈವಿಧ್ಯ ಮತ್ತು ವಾಸ್ತವ ಬದುಕಾಧಾರಿತ ಪೂಜಾ ರಘು ಅವರ ನಟನೆಯಿಂದ ನೋಡುಗರನ್ನು ಸೆಳೆದಿದೆ‌.

ಅನನ್ಯ ಪ್ರತಿಭೆಯ ಪೂಜಾ ಅವರು ಸೂಕ್ಷ್ಮ ಸಂವೇದನೆಯ ಬರಹಗಾರ್ತಿಯೂ ಹೌದು. ಇವರು ಬರೆದಿದ್ದ ಒಂದು ಲೇಖನವೇ ಈ ‘ತಾಯಿಯಾಗುವುದೆಂದರೆ’ ರಂಗ ಪ್ರಯೋಗವೆಂದರೆ ಅಚ್ಚರಿ ಪಡುತ್ತೀರಿ. ವಿಭಿನ್ನ ಸಾಮಾಜಿಕ ಕೆಲಸಗಳಿಂದ ಗುರುತಿಸಿಕೊಂಡಿರುವ ಪೂಜಾ ತಮ್ಮ ಚಿಂತನೆಯನ್ನೇ ರಂಗಕ್ಕಿಳಿಸಿದ್ದಾರೆ. ನಾಡಿನ ಹೆಮ್ಮೆಯ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ಅವರ ಶ್ರಮದಿಂದ ಇದು ನಾಟಕವಾಗಿದೆ. ಸಮಾಜಕ್ಕೆ ಒಂದು ಸಂದೇಶವನ್ನು ಇದು ನೀಡುತ್ತದೆ.

ಇದು ಅವರದೇ ಕತೆ, ಅವರ ತಳಮಳದ ದನಿ. ಮಕ್ಕಳನ್ನು ದತ್ತು ಪಡೆವ ತುಮುಲ, ಒಳ ದನಿಯ ಸಂಕಟ, ಅನುಭವಿಸಿದ ಖಾಲಿತನ, ಸಮಾಜದ ಮಾತುಗಳು, ಮಗಳೆಡೆಗಿನ ಅಸದಳ ಒಲವು, ಒಬ್ಬ ತಾಯಿಯ ನಿಜ ರೂಪ, ಮಾತಿಲ್ಲದ ವೇದನೆ ಎಲ್ಲವೂ ಈ ನಾಟಕದಲ್ಲಿ ಅನಾವರಣಗೊಳ್ಳಲಿದೆ.

ಹಾಸನದಲ್ಲಿ ಮೊದಲ ಬಾರಿ ಪ್ರದರ್ಶನವಾಗಿ ನಂತರ ಶಿವಮೊಗ್ಗ, ಬೆಳಗಾವಿ, ಬೆಂಗಳೂರು, ಮೈಸೂರು ಸೇರಿ ಅನೇಕ ಕಡೆ ಪ್ರದರ್ಶನವಾಗಿದೆ. ಪೂಜಾ ಅವರಿಗೆ ಈ ಧಾರವಾಡದ ಶೋ ಮೆಚ್ಚಿನದಾಗಲಿದೆ. ಯಾಕೆಂದರೆ ಅವರ ಮೂಲ ಊರು ಇಲ್ಲೇ ಗದುಗಿನ ಹತ್ತಿರ. ಈ ಉತ್ತರ ಕರ್ನಾಟಕದ ಮಣ್ಣಿನ ನೆಲದ ಸಹಜ ಪಾರದರ್ಶಕ ಗುಣದವರು ಈಕೆ. ಹಾಗಾಗಿ ನಾವೆಲ್ಲ ಅವರಿಗೆ ಹೆಚ್ಚು ಪ್ರೀತಿ ತೋರಬೇಕಿದೆ.

ಪಾಪು, ಬೇಂದ್ರೆ, ಚಂಪಾ ಅವರು ಸೇರಿ ಅನೇಕರ ನಮ್ಮ ಧಾರವಾಡದ ಸಾಹಿತ್ಯ, ಸಾಂಸ್ಕೃತಿಕ ಘಮಕ್ಕೆ ಇದೊಂದು “ಕುಸುಮ” ಸೇರ್ಪಡೆ ಎಂದರೆ ತಪ್ಪಾಗಲಾರದು.
ಶುಕ್ರವಾರ ಸಂಜೆ ೫.೩೦ಕ್ಕೆ ಧಾರವಾಡದ ವಿದ್ಯಾವರ್ಧಕ ಸಂಘದ ಭವನದಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ.

– ಶಿವಕುಮಾರ್ ಉಪ್ಪಿನ, ಪತ್ರಕರ್ತರು

Leave a Reply