18 ಮಂದಿ ಬಿಜೆಪಿ ಸದಸ್ಯರ ಅಮಾನತು ಆದೇಶ ವಾಪಸ್

11 months ago

18 ಮಂದಿ ಬಿಜೆಪಿ ಸದಸ್ಯರ ಅಮಾನತು ಆದೇಶ ವಾಪಸ್

ಬೆಂಗಳೂರು: ವಿಧಾನಸಭೆಯ ಬಜೆಟ್ ಅಧಿವೇಶನದ ವೇಳೆ ಹನಿ ಟ್ರ್ಯಾಪ್ ಪ್ರಕರಣ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷ ಸದಸ್ಯರು ಧರಣಿ ನಡೆಸುತ್ತಿದ್ದ ವೇಳೆ ಸಭಾಧ್ಯಕ್ಷರ ಪೀಠದ ಸನಿಹಕ್ಕೆ ಧಾವಿಸಿ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಶಾಸನಸಭೆ ಕಲಾಪದಿಂದ ಅಮಾನತು ಗೊಂಡಿರುವ 18 ಮಂದಿ ಬಿಜೆಪಿ ಸದಸ್ಯರ ಅಮಾನತು ಆದೇಶ ವಾಪಸ್ ಪಡೆಯಲಾಗಿದೆ.


ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಕಾನೂನು ಸಚಿವ ಎಚ್ ಕೆ ಪಾಟೀಲ್, ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಅವರೊಂದಿಗೆ ಸಭೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದ ಯು.ಟಿ.ಖಾದರ್, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದೇ ಪಕ್ಷವಿರಲಿ ಸಂವಿಧಾನ ಪೀಠಕ್ಕೆ ಗೌರವ ನೀಡಲೇಬೇಕು. ಪೀಠಕ್ಕೆ ಆಗೌರವವಾದ ಹಿನ್ನೆಲೆಯಲ್ಲಿ ಶಾಸಕರನ್ನು ಅಮಾನತುಗೊಳಿಸಲಾಗಿತ್ತು ಎಂದರು.

ಅಮಾನತು ಆದೇಶದ ನಂತರ ಪ್ರತಿಪಕ್ಷ ನಾಯಕರು ಹಲವು ರಾಜಕೀಯ ನಾಯಕರು ತೀರ್ಮಾನ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ ಬಿಜೆಪಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದು ಆ ಪತ್ರ ಕೂಡ ತಮ್ಮನ್ನು ತಲುಪಿದೆ ಹೀಗಾಗಿ ಎಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾಗಿ ತಿಳಿಸಿದರು.

ಬಿಜೆಪಿಯ ಪ್ರಮುಖ ನಾಯಕರು ಅಮಾನತು ಆದೇಶವನ್ನು ಹಿಂಪಡೆಯಿರಿ. ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಕೇಳಿಕೊಂಡಿದ್ದಾರೆ. ಎಲ್ಲರ ಬೇಡಿಕೆಯಂತೆ ಆಮಾನತನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದರು.

ಅಂದು ಗದ್ದಲವಾದಾಗ ತಾವು ಕಲಾಪದಲ್ಲಿ ಅದನ್ನು ಪ್ರಸ್ತಾಪಿಸಿದ್ದು, ಅದನ್ನು ಬಹುಮತದಿಂದ ಶಾಸಕಾಂಗ ನಿರ್ಣಯ ಅಂಗೀಕರಿಸಿದೆ. ಆ ರೀತಿ ತೆಗೆದುಕೊಂಡ ನಿರ್ಣಯವನ್ನು ವಿಧಾನಸಭಾಧ್ಯಕ್ಷರು ಏಕಮುಖವಾಗಿ ಹಿಂಪಡೆಯುವುದು ಸೂಕ್ತವಲ್ಲ. ನಾನು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಆದರೆ ಹೇಗೆ ಹಿಂಪಡೆಯಬೇಕು ಎಂಬುದಕ್ಕೆ ಸರ್ಕಾರ ಮತ್ತು ಪ್ರತಿಪಕ್ಷದ ಸಹಕಾರ ಅಗತ್ಯ. ಈ ಹಿನ್ನೆಲೆಯಲ್ಲಿ ಸಂಪುಟದ ಅಭಿಪ್ರಾಯ ಸಂಗ್ರಹಿಸಿದ್ದಾಗಿ ತಿಳಿಸಿದರು.

ಇದೀಗ ಸಂಪುಟ ಸಭೆ ತನ್ನ ಅಭಿಪ್ರಾಯವನ್ನು ತಿಳಿಸಿದ್ದು ಅದರ ಬಗ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ.ಪಾಟೀಲ್, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಇತರರ ಜೊತೆ ಚರ್ಚೆ ನಡೆಸಿದ್ದಾಗಿ ಹೇಳಿದರು.

ಯಾವುದೋ ಸಂದರ್ಭದಲ್ಲಿ ಹೆಚ್ಚಿಕಡಿಮೆಯಾಗುತ್ತದೆ. ಆರು ತಿಂಗಳ ಕಾಲ 18 ಶಾಸಕರನ್ನು ಅಮಾನತುಗೊಳಿಸಲಾಗಿತ್ತು. ಅದರಲ್ಲಿ ಈಗಾಗಲೇ ಎರಡು ತಿಂಗಳು ಮುಗಿದಿದೆ. ಈ ದೇಶದಲ್ಲಿ ಎಂಥವರಿಗೂ ಕ್ಷಮೆಯಿದೆ. ಶಾಸಕರು ನಮ್ಮವರೇ. ಹಾಗಾಗಿ ಎಲ್ಲರೂ ಸೇರಿ ವಿಚಾರವನ್ನು ಇತ್ಯರ್ಥಗೊಳಿಸಿದ್ದೇವೆ ಎಂದರು.

ನಾವೆಲ್ಲಾ ಒಟ್ಟಾಗಿದ್ದೇವೆ. ಸಕಾರಾತ್ಮಕವಾಗಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಶಾಸಕರ ವಿರುದ್ಧ ಕ್ರಮ ಕೈಗೊಂಡಿರುವುದು ಬಿಜೆಪಿಯವರು ಎಂಬ ಕಾರಣಕ್ಕಾಗಿ ಅಲ್ಲ. ಸಂವಿಧಾನಪೀಠಕ್ಕೆ ಆಗೌರವ ತೋರಿಸಿದರು ಎಂಬ ಕಾರಣಕ್ಕಾಗಿ ಅಮಾನತುಗೊಳಿಸಲಾಗಿತ್ತು ಎಂದರು.

Leave a Reply