ರಾಜ್ಯ ಪೌರ ನೌಕರರ ಸಂಘದ ವತಿಯಿಂದ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ

1 year ago

ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಅದಕ್ಕೆ ತಕ್ಕಂತೆ ಸೌಲಭ್ಯ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಮೇ 27ರಿಂದ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.

ಪೌರ ಕಾರ್ಮಿಕರು, ಲೋಡರ್ಗಳು, ಕ್ಲೀನರ್ಗಳು, ನೀರು ಸರಬರಾಜುದಾರರು, ಯುಜಿಡಿ, ಉದ್ಯಾನ ನಿರ್ವಹಣೆಗಾರರು ಸೇರಿದಂತೆ ಸಂಘದಡಿ ಬರುವ ಎಲ್ಲಾ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪೌರ ಕಾರ್ಮಿಕರ ಸಂಘದ ಉಪಾಧ್ಯಕ್ಷ ನಾಗರಾಜು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಯುತವಾದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸಂಘ ಇದುವರೆಗೆ ಮುಖ್ಯಮಂತ್ರಿ, ಪೌರಾಡಳಿತ ಸಚಿವರು, ನಗರಾಭಿವೃದ್ಧಿ ಸಚಿವರು, ಇಲಾಖೆಗಳ ಕಾರ್ಯದರ್ಶಿ, ಪೌರಾಡಳಿತ ನಿರ್ದೇಶಕರು ಸೇರಿದಂತೆ ವಿವಿಧ ಹಂತಗಳ ಅಧಿಕಾರಿಗಳನ್ನು ಹಲವು ಬಾರಿ ಭೇಟಿ ಮಾಡಿ ಮನವಿ ಕೊಟ್ಟಿದೆ. ಇದುವರೆಗೆ ನಮ್ಮ ಮನವಿಗೆ ಯಾರೂ ಸ್ಪಂದಿಸದಿರುವುದರಿಂದ ಅನಿವಾರ್ಯವಾಗಿ ಅನಿರ್ದಿಷ್ಟಾವಧಿ ಮುಷ್ಕರ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

27ರಿಂದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹ, ವಿಲೇವಾರಿ, ಸ್ವಚ್ಛತಾ ಕೆಲಸ, ಕುಡಿಯುವ ನೀರು ಸರಬರಾಜು, ಯುಜಿಡಿ ನಿರ್ವಹಣೆ, ಉದ್ಯಾನ ನಿರ್ವಹಣೆ ಸೇರಿದಂತೆ ಎಲ್ಲಾ ರೀತಿಯ ಕೆಲಸಗಳನ್ನು ಬಂದ್ ಮಾಡಲಾಗುವುದು. ನಮ್ಮ ಬೇಡಿಕೆ ಈಡೇರುವವರೆಗೆ ಯಾರೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿರುವ ಸ್ಥಳೀಯ ಸಂಸ್ಥೆಗಳ ಎದುರು ಸಂಘದ ವತಿಯಿಂದ ಧರಣಿ ನಡೆಸಲಾಗುವುದು ಎಂದರು.

ಪ್ರಮುಖ ಬೇಡಿಕೆಗಳು:
ರಾಜ್ಯದ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಪೌರ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು.

ನಗದು ರಹಿತ ಆರೋಗ್ಯ ಚಿಕಿತ್ಸಾ ಸೌಲಭ್ಯದ ಜ್ಯೋತಿ ಸಂಜೀವಿನಿ ಯೋಜನೆಯನ್ನು ಪೌರ ನೌಕರರಿಗೂ ವಿಸ್ತರಿಸಬೇಕು.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆಯಡಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜುದಾರರು, ವಾಹನ ಚಾಲಕರು, ಲೋಡರ್ಗಳು, ಕ್ಲೀನರ್ಗಳು, ಸ್ವಚ್ಛತಾ ಮೇಲ್ವಿಚಾರಕರು, ಉದ್ಯಾನ ನಿರ್ವಹಣೆಗಾರರು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ನೌಕರನ್ನು ನೇರ ಪಾವತಿಗೆ ಒಳಪಡಿಸಬೇಕು.

ದಿನಗೂಲಿ ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಾಮಾನ್ಯ ವೇತನ ಟೈಮ್ ಸ್ಕೆಲ್ ನೌಕರರ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು.

ವಾಹನ ಚಾಲಕರು, ನೀರು ಪೂರೈಕೆ ನೌಕರರು, ನೇರ ಪಾವತಿ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು.

ಪೌರ ಕಾರ್ಮಿಕರಿಗೆ ಎಸ್ಎಫ್ಸಿ ಮುಕ್ತ ನಿಧಿಯಿಂದ ವೇತನ ನೀಡಬೇಕು.

Leave a Reply