ಚಿಕ್ಕಬಳ್ಳಾಪುರ: ಜನವರಿ 5ರ ಬೆಳಗಿನ ಜಾವ 3:16ಕ್ಕೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಘು ಭೂಕಂಪನ ಸಂಭವಿಸಿ ರಿಕ್ಟರ್ ಮಾಪನದಲ್ಲಿ 2.6 ರಷ್ಟು ತೀವ್ರತೆ ದಾಖಲಾಗಿದ್ದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ತಾಲ್ಲೂಕಿನ ಬಂಡಹಳ್ಳಿ, ಶೆಟ್ಟಿಗೆರೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರಲ್ಲಿ ಮನೋಸ್ಥೈರ್ಯ ತುಂಬಿದರು.
ಈ ವೇಳೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ವರ್ಷ ಸುರಿದ ಧಾರಾಕಾರ ಮಳೆಯು ಕಳೆದ 50 ವರ್ಷಗಳಲ್ಲಿಯೇ ಆಗಿರುವುದಿಲ್ಲ. ಈ ಮಹಾಮಳೆಯಿಂದ ಅಂತರ್ಜಲದಲ್ಲಿ ತೀವ್ರ ಬದಲಾವಣೆಯಾಗಿದೆ. ಭೂಮಿಯ ಆಳಕ್ಕೆ ನೀರು ನುಸುಳುತ್ತಿದೆ. ಹೀಗಾಗಿ ಈ ರೀತಿಯ ಭೂಕಂಪನಗಳು ಈ ಭಾಗದಲ್ಲಿ ಹಲವು ಭಾರಿ ಸಂಭವಿಸಿವೆ. ಚಿಕ್ಕಬಳ್ಳಾಪುರ ಜಿಲ್ಲೆಯು ಭೂಕಂಪ ವಲಯದಿಂದ ಬಹುದೂರವಿದ್ದು, ಸುರಕ್ಷಿತ ವಲಯದಲ್ಲಿದೆ. ಈ ಭಾಗದಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಗಳು ಅತಿ ವಿರಳ. ಜೊತೆಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ನಿರಂತರವಾಗಿ ಈ ಭಾಗದ ಮೇಲೆ ತೀವ್ರ ಕಣ್ಗಾವಲು ಇಟ್ಟಿದೆ ಹಾಗೂ ಜಿಲ್ಲಾಡಳಿತವೂ ಸಹ ಹೆಚ್ಚಿನ ನಿಗಾವಹಿಸಿದೆ. ಆದ್ದರಿಂದ ಜನ ಯಾವುದೇ ವದಂತಿಗಳಿಗೆ ಕಿವಿಕೊಡಬಾರದು ಹಾಗೂ ಈ ಬಗ್ಗೆ ಸಾರ್ವಜನಿಕರು ಹೆಚ್ಚಿನ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದರು.
ಇತ್ತೀಚಿಗೆ ಜಿಲ್ಲೆಯಲ್ಲಿ ಸಂಭವಿಸಿರುವ ಭೂಕಂಪನಗಳನ್ನು ಅವಲೋಕಿಸಲಾಗಿ ಭೂಕಂಪನದ ತೀವ್ರತೆಯ ನಕಾಶೆಯನ್ವಯ ಈ ಭೂಕಂಪನಗಳ ತೀವ್ರತೆಯು ಅತ್ಯಂತ ಕನಿಷ್ಠ ಪ್ರಮಾಣದ್ದಾಗಿದ್ದು, ಸುಮಾರು 20 ರಿಂದ 30 ಕಿ.ಮೀ ವ್ಯಾಪ್ತಿಯವರೆಗೆ ಭೂಕಂಪನದ ಅನುಭವವಾಗಿರಬಹುದೆಂದು ಅಂದಾಜಿಸಲಾಗಿದೆ. ಇದರ ಪರಿಣಾಮದಿಂದಾಗಿ ಭೂಮಿಯು ಕೊಂಚ ಅಲುಗಾಡಿದ ಅನುಭವವಾಗಿದ್ದರೂ ಸಹ ಈ ಪ್ರಮಾಣದ ಭೂಕಂಪನವು ಸ್ಥಳೀಯ ಸಮುದಾಯಕ್ಕೆ ಯಾವುದೇ ರೀತಿಯಲ್ಲಿಯೂ ಅಪಾಯಕಾರಿಯಲ್ಲ. ಇದರಿಂದ ಜನರು ಗಾಬರಿಗೊಳ್ಳುವ ಹಾಗೂ ಹೆಚ್ಚಿನ ಆತಂಕಗೊಳ್ಳುವ ಅವಶ್ಯಕತೆಯಿಲ್ಲವೆಂದು ಭೇಟಿ ನೀಡಿದ ಗ್ರಾಮಗಳ ಸ್ಥಳೀಯರಿಗೆ ಮನೋಸ್ಥೈರ್ಯ ತುಂಬಿದರು.
ಜನವರಿ 5ರಂದು ಸಂಭವಿಸಿರುವ ಭೂಕಂಪನದ ಕೇಂದ್ರಸ್ಥಾನವು ಚಿಕ್ಕಬಳ್ಳಾಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮ ಪಂಚಾಯತಿಯಿಂದ ಸುಮಾರು 1.5 ಕಿ.ಮೀ ದೂರದಲ್ಲಿ ದಾಖಲಾಗಿದೆ. ಇದು ಸುಮಾರು 2.6 ರ ತೀವ್ರತೆಯನ್ನು ಹೊಂದಿದ್ದು 12 ಕಿ.ಮೀ ದೂರದ ಭೂಗರ್ಭದಲ್ಲಿ ಕೇಂದ್ರೀಕೃತವಾಗಿದೆ. ಇದೇ ವೇಳೆ ಭೂಕಂಪನ ಪೀಡಿತ ಸ್ಥಳದಿಂದಲೇ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಮನೋಜ್ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ಪದೇಪದೇ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಭೂಕಂಪನಗಳ ಬಗ್ಗೆ ವಿಸ್ತೃತವಾಗಿ ಅಧ್ಯಯನ ಮಾಡಿ ಶೀಘ್ರದಲ್ಲಿಯೇ ವರದಿ ನೀಡಿ ಜಿಲ್ಲೆಯ ಜನತೆಗೆ ಸತ್ಯ ಮತ್ತು ವಸ್ತುನಿಷ್ಠ ಸಂಗತಿಯನ್ನು ತಿಳಿಸಿ ಧೈರ್ಯ ತುಂಬುವಂತೆ ಸೂಚಿಸಿದರು.




