ಬೆಂಗಳೂರು: ಒಂದು ವೇಳೆ ವೀರಶೈವ ಲಿಂಗಾಯಿತದ ಉಪಜಾತಿಯಾದ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-೨ಎ ಪಟ್ಟಿಗೆ ಸೇರಿಸಿದರೆ ಹಿಂದುಳಿದ ಸಮುದಾಯಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಎಂ.ಸಿವೇಣುಗೋಪಾಲ ಎಚ್ಚರಿಸಿದರು.
ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಿದ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಆರ್ ರಮೇಶ್, ಮಾಜಿ ಶಾಸಕ ಹಾಗೂ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರ ಬಾಬು ಸೇರಿದಂತೆ ಹಲವರು ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಲು ತಾಂತ್ರಿಕ ಅಡೆತಡೆಯಿದೆ. 2ಎ ಮೀಸಲಾತಿ ನೀಡಿದರೆ ಅತಿ ಹಿಂದುಳಿದ ಸಮುದಾಯಕ್ಕೆ ಘೋರ ಅನ್ಯಾಯವಾಗುತ್ತದೆ. ಪಂಚಮಸಾಲಿ ಸಮುದಾಯವನ್ನು ಪ್ರವರ್ಗ ೨ಎಗೆ ಸೇರಿಸಬಾರದು ಎಂದು ಒಕ್ಕೂರಲಿನಿಂದ ಸಚಿವರ ಬಳಿ ಮನವಿ ಮಾಡಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಬಳಿ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿ, ಪ್ರಮುಖ ಬೇಡಿಕೆಗಳ ಮನವಿ ಪತ್ರ ನೀಡಲಾಯಿತು. ಹೆಚ್.ಕಾಂತರಾಜ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿರುವ ಸಮಾಜೋ-ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಕೂಡಲೇ ಸ್ವೀಕರಿಸಿ ಬಹಿರಂಗ ಪಡಿಸಬೇಕು. ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ-2ಎಗೆ ಸೇರ್ಪಡೆ ಗೊಳಿಸಬಾರದು. ನ್ಯಾಯಮೂರ್ತಿ ಸುಭಾಷ್ ಆಡಿ ಸಮಿತಿಯಿಂದ ಪಂಚಮಸಾಲಿ ವಿಷಯ ಹಿಂಪಡೆಯಬೇಕು. ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸುಮಾರು 70 ಜಾತಿ-ಉಪಜಾತಿಗಳನ್ನು ಸೇರ್ಪಡೆಗೆ ಶಿಫಾರಸ್ಸು ಮಾಡಬೇಕು. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಸಮಾಜದ ಅಲಕ್ಷಿತ ಅತಿ ಹಿಂದುಳಿದ ಸಮುದಾಯಗಳ ಸಾಮಾಜಿಕ ಸುಧಾರಣೆಗೆ ಸರ್ಕಾರ ಬದ್ಧವಾಗಬೇಕು ಎನ್ನುವ ಆಗ್ರಹ ಮಂಡಿಸಿ ಮನವಿ ನೀಡಲಾಯಿತು.
ಸಭೆಗೂ ಮುನ್ನ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ೨ನೇ ಕಾರ್ಯಕಾರಿ ಮಂಡಳಿ ಸಭೆ ನಡೆಯಿತು. ಇತ್ತೀಚೆಗೆ ನಿಧನರಾದ ಹಿರಿಯ ಮುತ್ಸದ್ದಿ ರಾಜಕಾರಣಿ, ಮಾಜಿ ರಾಜ್ಯ ಮತ್ತು ಕೇಂದ್ರ ಸಚಿವ, ಹಿಂದುಳಿದ ಸಮುದಾಯಗಳ ನಾಯಕ ಆರ್.ಎಲ್ ಜಾಲಪ್ಪನವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಕೋರಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಮಾತನಾಡಿ, ಸಂಘಟನೆಯಿಂದ ವಂಚಿತರಾಗಿ ಛಿದ್ರವಾಗಿರುವ ಅತಿ ಹಿಂದುಳಿದ ವರ್ಗಗಳಿಗೆ ದೊಡ್ಡ ಭರವಸೆಯಾಗಿದೆ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ವೇದಿಕೆ. ಮುಂದಿನ ದಿನಗಳಲ್ಲಿ ಅತಿ ಹಿಂದುಳಿದ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಯ ನಿರೀಕ್ಷೆಯನ್ನು ಖಂಡಿತಾ ಇಟ್ಟುಕೊಳ್ಳಬಹುದು. ಓರ್ವ ಶಾಸನ ಸಭೆಯ ಪ್ರತಿನಿಧಿಯಾಗಿ ಸಂಘಟನೆಗೆ ಸಾಧ್ಯವಿರುವ ಎಲ್ಲಾ ಅಗತ್ಯ ಕೆಲಸಗಳಿಗೂ ಬದ್ಧನಿದ್ದೇನೆ ಎಂದರು.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಮೊಮ್ಮಗ ಸೂರಜ್, ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ ಆಚಾರಿ, ನಿವೃತ್ತ ಐಎಎಸ್ ಅಧಿಕಾರಿ ಎಸ್ ಪುಟ್ಟಸ್ವಾಮಿ, ಕೆಎಎಸ್ ಅಧಿಕಾರಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆಎನ್ ಲಿಂಗಪ್ಪ, ವಿಧಾನ ಪರಿಷತ್ ಮಾಜಿ ಶಾಸಕ ತಿಪ್ಪಣ್ಣ, ವೇದಿಕೆಯ ಖಜಾಂಚಿ ಎಲ್.ಎ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಂ ನಾಗರಾಜ್, ಕಲಗೋಡು ರತ್ನಾಕರ್, ಶೋಭಾ, ಯಲ್ಲಪ್ಪ, ಕೆಎಸ್ ದುಶ್ಯಂತ, ಚಂದ್ರಶೇಖರ್ ಪಿ, ಮಂಜುನಾಥ್ ಎಸ್, ಪಲ್ಗುಣ, ಚಿದಾನಂದ ಬಡಿಗೇರಾ, ಕೆಎನ್ ಅಶೋಕ, ಶಿವಾನಂದ ಲಕ್ಷ್ಮಣ ಪಾಚಂಗಿ, ಗೋಪಿನಾಥ ರಾಜು, ಎಲ್ ಶಿವಶಂಕರ್, ಶಿವು ಯಾದವ್, ಗೋ ತಿಪ್ಪೇಶ್, ಗಣೇಶ್ ರಾವ್, ವರದರಾಜು, ಸತ್ಯನಾರಾಯಣ ರಾಜು, ದಿನೇಶ್ ಅರಸು, ಪದ್ಮನಾಭ್, ಚಂದ್ರಾನಾಯಕ್, ದೇವರಾಜು, ಶಂಕ್ರಪ್ಪ, ಚೆನ್ನಕೇಶವ ಮುಂತಾದವರು ಹಾಜರಿದ್ದರು.




