ಗದಗ: ಪ್ರತಿಯೊಬ್ಬ ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಗುಣಮಟ್ಟ ಹಾಗೂ ಬೆಲೆಗಳ ಕುರಿತು ತಿಳುವಳಿಕೆ ಹೊಂದುವುದು ಅವಶ್ಯಕವಾಗಿದೆ. ಖರೀದಿಸಿದ ವಸ್ತು ದೋಷಪೂರಿತವಾಗಿದ್ದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಜಿ.ಪಲ್ಲೇದ ಹೇಳಿದರು.
ನಗರದ ಜೆ.ಟಿ.ಕಾಲೇಜ್ ಕ್ಯಾಂಪಸ್ನಲ್ಲಿನ ಕೆ.ಎಲ್.ಇ. ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಬುಧವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಕಾನೂನು ಮಾಪನ ಶಾಸ್ತç ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕೆ.ಎಲ್.ಇ. ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ “ಗ್ರಾಹಕರೇ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಿ” ಎಂಬ ಘೋಷವಾಕ್ಯದಡಿ ಏರ್ಪಡಿಸಲಾದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ 2021ನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷವೂ ಡಿಸೆಂಬರ್ 24ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಹಾಗೂ ಮಾರ್ಚ 15 ರಂದು ವಿಶ್ವ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರತಿಯೊಂದು ಮಗು ತಾಯಿಯ ಗರ್ಭದಲ್ಲಿರುವಾಗಲೇ ಕಾನೂನು ಪ್ರಾರಂಭವಾಗುತ್ತದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರಲ್ಲಿ ಕಾನೂನು ಅಭ್ಯಸಿಸಿದ ವಕೀಲರ ಪಾತ್ರವೂ ಮುಖ್ಯವಾಗಿದೆ ಎಂದರು.
ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯಿಂದ ಗ್ರಾಹಕರೇ ಆಗಿರುತ್ತಾರೆ. ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಅದರ ಗುಣಮಟ್ಟ, ಪ್ರಮಾಣವನ್ನು ಪರಿಶೀಲಿಸಬೇಕು. ಪ್ರತಿಯೊಬ್ಬ ಗ್ರಾಹಕರು ತಮ್ಮ ಹಕ್ಕು ಹಾಗೂ ಕರ್ತವ್ಯಗಳ ಕುರಿತು ಪ್ರಜ್ಞೆ ಹೊಂದಿರುವುದು ಮುಖ್ಯವಾಗಿದೆ. ಯಾವುದಾದರೂ ವಸ್ತುಗಳನ್ನು ಖರೀದಿಸುವಾಗ ಅಥವಾ ಸೇವೆಯನ್ನು ಪಡೆಯುವಾಗ ತಪ್ಪದೇ ರಸೀದಿ ಪಡೆಯಬೇಕು. ಒಂದು ವೇಳೆ ಖರೀದಿಸಿದ ವಸ್ತು ದೂಷಪೂರಿತವಾಗಿದ್ದರೆ ಸೂಕ್ತ ದಾಖಲೆ ಒದಗಿಸಿ ಅದಕ್ಕೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಎ.ಎ.ಕಂಬಾಳಿಮಠ ಮಾತನಾಡಿ, ಗ್ರಾಹಕರಿಗೆ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ವಿಶೇಷ ಉಪನ್ಯಾಸಕರಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ವಿಶ್ರಾಂತ ಸದಸ್ಯ ಎಫ್.ಡಿ.ಲಕ್ಷ್ಮೇಶ್ವರಮಠ ಮಾತನಾಡಿ, ಪ್ರತಿಯೊಬ್ಬರೂ ಸರಕುಗಳನ್ನು ಖರೀದಿಸುವಾಗ ಹಾಗೂ ಸೇವೆಯನ್ನು ಪಡೆದುಕೊಳ್ಳವಾಗ ಗ್ರಾಹಕರಾಗುತ್ತಾರೆ. ವಸ್ತುವನ್ನು ಖರೀದಿಸುವಾಗ ಅಥವಾ ಸೇವೆಯನ್ನು ಪಡೆಯುವಾಗ ಕೆಲವೊಂದು ಸಂದರ್ಭಗಳಲ್ಲಿ ಅನಕ್ಷರಸ್ಥರಲ್ಲದೇ ಅಕ್ಷರಸ್ಥರೂ ಸಹ ಮೋಸ ಹೋಗುತ್ತಾರೆ. ಪ್ರತಿಯೊಬ್ಬ ಗ್ರಾಹಕರಿಗೂ ತಮ್ಮ ಹಕ್ಕುಗಳ ಬಗ್ಗೆ ತಿಳುವಳಿಕೆ ಹೊಂದುವುದು ಅವಶ್ಯವಾಗಿದೆ ಎಂದರು.
ಗ್ರಾಹಕರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳದಿದ್ದರೆ ಶೋಷಣೆಗೊಳಗಾಗುತ್ತಾರೆ. ಆಹಾರದಲ್ಲಿ ಕಲಬೆರಕೆ, ಕಳಪೆ ಗುಣಮಟ್ಟದ ವಸ್ತುಗಳ ಖರೀದಿ, ಹೆಚ್ಚಿನ ದರದಲ್ಲಿ ವಸ್ತುಗಳ ಖರೀದಿ ಇವೆಲ್ಲವುಗಳ ಕುರಿತು ಹಕ್ಕು ಚಲಾಯಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಗ್ರಾಹಕರು ಜಾಗೃತಿ, ಆಯ್ಕೆ, ಗುಣಮಟ್ಟ, ಕುಂದುಕೊರತೆ ಪರಿಹಾರ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.




