ಬೆಂಗಳೂರು: ಮಲ ಹೊರುವ ಪದ್ಧತಿ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಪದ್ಧತಿ ಜೀವ ವಿರೋಧಿ ಮಾತ್ರವಲ್ಲ ಮಾನವ ಹಕ್ಕುಗಳ ಉಲ್ಲಂಘನೆ ಕೂಡ ಹೌದು. ಈ ಕೆಲಸ ಮಾಡಿಸಲು ನಮ್ಮ ರಾಜ್ಯದಲ್ಲಿ ಅವಕಾಶವನ್ನೇ ನಾವು ನೀಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ಪೌರಕಾರ್ಮಿಕರು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಮತ್ತು ಘನತೆಯಿಂದ ಬದುಕಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದೆವು ಎಂದಿದ್ದಾರೆ.
ಅಲ್ಲದೆ, ಅವರ (ಪೌರ ಕಾರ್ಮಿಕರ) ಸಂಬಳವನ್ನು ₹7,000 ದಿಂದ ₹17,000 ಕ್ಕೆ ಏರಿಸಿದ್ದೆವು, ಮನೆಕಟ್ಟಿಕೊಳ್ಳಲು ₹7.5 ಲಕ್ಷ ನೆರವು ನೀಡುವ ಕಾರ್ಯಕ್ರಮ ಜಾರಿ ಮಾಡಿದ್ದೆವು. ಪೌರ ಕಾರ್ಮಿಕರ ಹಿತಕಾಯಲು ನಾವು ಈಗಲೂ ಬದ್ಧರಿದ್ದೇವೆ ಎಂದಿದ್ದಾರೆ.




