ಬೆಂಗಳೂರು: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ಬೆಳಗಾವಿ ಜಿಲ್ಲೆಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ಘೋಷಿಸಿದೆ. ಜಿಲ್ಲೆಯ 81 ಕೆರೆಗಳಿಗೆ 712 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆ ಸಿದ್ಧಪಡಿಸಿದ್ದು ಅದಕ್ಕೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಬೆಳಗಾವಿ ತಾಲೂಕಿನ ಮತ್ತು ಸಂಗ್ತಿ ಬಸ್ತವಾಡ ಹೋಬಳಿಯ 20 ಕೆರೆಗಳಿಗೆ ಘಟಪ್ರಭಾ ನದಿಯಿಂದ ನೀರು ತುಂಬಿಸುವ 287.55 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಯಿತು ಎಂದರು.
ಹಿರೇ ಬಾಗೇವಾಡಿ ತಾಲೂಕಿನ 61 ಕೆರೆಗಳಿಗೆ ನೀರು ತುಂಬಿಸುವ 625 ಕೋಟಿ 50 ಲಕ್ಷ ಮತದ ಅಂದಾಜಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಲು ತೀರ್ಮಾನಿಸಲಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಈ ಯೋಜನೆಯಲ್ಲಿ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಚೆಕ್ ಡ್ಯಾಂ ಮತ್ತು ಬಂಡುಗಳನ್ನು ನಿರ್ಮಿಸಲಾಗುವುದು ಎಂದರು.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಸುಟ್ಟ ಗಾಯಗಳ ಆಸ್ಪತ್ರೆ ಮಾದರಿಯ ಆಸ್ಪತ್ರೆಯನ್ನು ಬೆಳಗಾವಿ ವೈದ್ಯಕೀಯ ಕಾಲೇಜು ಆವರಣದಲ್ಲಿ ನಿರ್ಮಿಸಲು ಸಂಪುಟ ಸಭೆ ತೀರ್ಮಾನಿಸಿದೆ 31.54 ಕೋಟಿ ವೆಚ್ಚದಲ್ಲಿ ಅತ್ಯಂತ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದರು.
ಬೆಳಗಾವಿ ಸೇರಿದಂತೆ ರಾಜ್ಯದ 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಿದ್ಯುತ್ ಅಥವಾ ಅನಿಲ ಆಧಾರಿತ ಚಿತಾಗಾರಗಳನ್ನು ನಿರ್ಮಿಸಲು ತೀರ್ಮಾನಿಸಿದ್ದು ನಾಲ್ಕು ಕೋಟಿ ರೂಪಾಯಿಗಳ ಅಂದಾಜು ವೆಚ್ಚ ನಿಗದಿಪಡಿಸಲಾಗಿದೆ. ನಂತರ ಐದು ವರ್ಷಗಳ ಕಾಲ ಅದರ ನಿರ್ವಹಣೆ ಮಾಡಲು ತೀರ್ಮಾನಿಸಲಾಯಿತು ಎಂದರು.




