ಕೋಲಾರ: ಮುಳಬಾಗಿಲು ತಾಲೂಕಿನ ಹಳ್ಳಿ ಗ್ರಾಮದಲ್ಲಿ ಬೈಕ್ ಓವರ್ ಟೇಕ್ ಮಾಡಿದ ಕಾರಣದಿಂದ ಮೇಲ್ಜಾತಿಯವರು ದಲಿತ ಯುವಕ ಉದಯ್ ಕಿರಣ್ 25 ರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಕಾರಣದಿಂದ ಮನನೊಂದು ಸಾವಿಗೀಡಾಗಿರುವ ಅಮಾನವೀಯ ಘಟನೆಯ ಸಂಬಂಧಿಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಪ್ರಕಾರ ಕ್ರಮ ಕೈಗೊಂಡು ಗಡೀಪಾರು ಮಾಡಬೇಕು ಎಂದುದು ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಆಗ್ರಹಿಸಿದರು.
ಜಾತಿ ದೌರ್ಜನ್ಯದಿಂದ ಮೃತಪಟ್ಟಿರುವ ದಲಿತ ಯುವಕ ಉದಯ್ ಕಿರಣ್ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಸಿಪಿಎಂ , ಎಸ್ಎಫ್ಐ, ದಲಿತ ಸಂಘಟನೆಗಳ ಮುಖಂಡರು ಉದಯ್ ಕಿರಣ್ ನನ್ನು ಕಟ್ಟಿಹಾಕಿ ಹಲ್ಲೆ ನಡೆಸಿದ ಪೆತ್ತಾಂಡ್ಲಹಳ್ಳಿಯಲ್ಲಿ ಉದಯ್ ಕಿರಣ್ ಸಾವಿಗೆ ನ್ಯಾಯ ಸಿಗಬೇಕು, ಜಾತಿ ದೌರ್ಜನ್ಯಗಳು ನಿಲ್ಲಬೇಕು ಎಂದು ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ಮುಖಂಡರು ಪೆತ್ತಾಂಡ್ಲಹಳ್ಳಿ ಗ್ರಾಮದಲ್ಲಿ ಬೈಕ್ ಓವರ್ ಟೇಕ್ ಮಾಡಿದ ಕಾರಣಕ್ಕೆ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೇ ನಡೆಸಿರುವ ಅಮಾನವೀಯ ಘಟನೆಯನ್ನು ಸಿಪಿಐ(ಎಂ), ಎಸ್ಎಫ್ಐ, ದಲಿತ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳು ಕಳೆದರು ದಲಿತರನ್ನು ಮನುಷ್ಯರಂತೆ ಸಮಾನವಾಗಿ ಕಾಣದ ಪಾಳೇಗಾರಿ ಮೌಲ್ಯಗಳೇ ಉದಯ್ ಸಾವಿಗೆ ಕಾರಣ. ಕೋಲಾರ ಜಿಲ್ಲೆ ಮತ್ತು ಮುಳಬಾಗಿಲು ತಾಲೂಕು ದಲಿತ ಮೀಸಲಾತಿಯ ಸಂಸದರು, ಶಾಸಕರು ಇದ್ದರು ಸಹ ದಲಿತರ ಮೇಲೆ ದಾಳಿ ದೌರ್ಜನ್ಯಗಳು ನಿರಂತರವಾಗಿ ಹೆಚ್ಚಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾತಿ ದೌರ್ಜನ್ಯದಿಂದ ಯುವಕ ಸಾವನ್ನಪ್ಪಿದ್ದರು ಸಹ ಈ ಕ್ಷೇತ್ರದ ಶಾಸಕರು, ಸಂಸದರು ಯಾವೊಬ್ಬ ಜನಪ್ರತಿನಿಧಿ ಬಾಯಿ ಬಿಚ್ಚದಿರುವುದಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಎಚ್ಚರಿಸಿದರು.
ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಮಾತನಾಡಿ, ಘಟನೆಯ ಸಂಬಂಧಿತ ಆರೋಪಿಗಳನ್ನು 24 ಗಂಟೆಗಳ ಒಳಗೆ ಬಂಧಿಸಬೇಕು. ಮೃತ ಉದಯ್ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು. ಆತನ ತಾಯಿಗೆ ಸರ್ಕಾರಿ ಉದ್ಯೋಗ, ಮನೆ ನೀಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹತ್ತಾರು ಸಾವಿರ ಜನರ ಪೆತ್ತಾಂಡ್ಲಹಳ್ಳಿ ಚಲೋ ಪಾದಯಾತ್ರೆ ಹಮ್ಮಿಕೊಂಡು ಹೋರಾಟ ತೀವ್ರಗೊಳಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಿಪಿಐಎಂ ತಾಲೂಕು ಕಾರ್ಯದರ್ಶಿ, ಪುಣ್ಯಹಳ್ಳಿ ಶಂಕರ್, ದಲಿತ ಮುಖಂಡರು ಸಂಗಸಂದ್ರ ವಿಜಯ್ ಕುಮಾರ್, ಮೆಕಾನಿಕ್ ಶ್ರೀನಿವಾಸ್, ಮೃತ ಸೋದರ ಮಾವ ನಾಗರಾಜ್ ಬೇವಹಳ್ಳಿ, ಡಿವೈಎಫ್ಐ ಮುಖಂಡ ಕೇರಳ ಶ್ರೀನಿವಾಸ್, ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಬಾಬು, ತಾಲ್ಲೂಕು ಅಧ್ಯಕ್ಷ ಶಶಿಕುಮಾರ್, ತಾಲೂಕು ಕಾರ್ಯದರ್ಶಿ ಸುದರ್ಶನ್ ಹಾಗೂ ನೂರಾರು ಜನ ಹೋರಾಟಗಾರರು ಹಾಜರಿದ್ದರು.




