ವಿಧಾನಸಭಾ ಚುನಾವಣೆ ನಡೆದರೆ ಬಿಜೆಪಿ 140ರಿಂದ 150 ಸ್ಥಾನ ಗೆಲ್ಲಲಿದೆ: ವಿಜಯೇಂದ್ರ

11 months ago

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನ ಔಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ನೀಡಲಾಗುತ್ತಿದೆ. ಆಸ್ಪತ್ರೆಗಳ ಆವರಣದಲ್ಲಿ ಔಷಧಿ ಮಾರಾಟ ಕೇಂದ್ರ ತೆರೆಯಲು ಅವಕಾಶವಿಲ್ಲ. ಅಲ್ಲದೆ ಹಲವು ನ್ಯೂನ್ಯತೆಗಳಿವೆ ಎಂಬ ಕಾರಣವನ್ನು ನೀಡಿ ಜನೌಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ.

ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯ ಘಟಕದ ಬಿ.ವೈ.ವಿಜಯೇಂದ್ರ, ರಾಜ್ಯದ ಮೆಡಿಕಲ್ ಮಾಫಿಯಾಗೆ ಸಹಾಯ ಮಾಡಲು ಜನೌಷಧ ಕೇಂದ್ರಗಳನ್ನು ಬಂದ್ ಮಾಡಲಾಗಿದೆ ಎಂದು ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಧಾನಿ ನರೇಂದ್ರ ಮೋದಿ ಮೇಲೆ ಕೋಪ. ಅವರ ಫೋಟೊ ಕಂಡರೆ ಆಗುವುದಿಲ್ಲ. ಆ ಫೋಟೊ ಕಾಣಬಾರದೆಂದೇ ಜನೌಷಧಿ ಕೇಂದ್ರಗಳನ್ನು ಬಂದ್ ಮಾಡಿಸಿದ್ದಾರೆ ಎಂದರು.

ಬಡವರ ಅನುಕೂಲಕ್ಕಾಗಿ ಜನೌಷಧ ಕೇಂದ್ರಗಳನ್ನು ತೆರೆಯಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಲಿ. ಅಲ್ಲಿರುವ ಔಷಧಿ ಸ್ಟಾಕ್ ಬಗ್ಗೆ ಪರಿಶೀಲನೆ ನಡೆಸಲಿ ಎಂದು ಸವಾಲೆಸೆದರು.

ಜನೌಷಧಿ ಕೇಂದ್ರಗಳನ್ನು ಬಂದ್ ಮಾಡುವ ಮೂಲಕ ಪ್ರಧಾನಿ ಮೋದಿಗೆ ಹಾಗೂ ಬಡವರಿಗೆ ಅನ್ಯಾಯ ಮಾಡಲಾಗಿದೆ. ಸರ್ಕಾರಿ ವೈದ್ಯರು ಹೊರಗಡೆ ಔಷಧಿ ತೆಗೆದುಕೊಳ್ಳಲು ಬರೆದುಕೊಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಔಷಧಿ ಕೊಡುತ್ತಿಲ್ಲ. ಇದರಿಂದ ಬಡವರಿಗೆ ಅನ್ಯಾಯ ಆಗುತ್ತಿದೆ. ರಾಜ್ಯ ಸರ್ಕಾರ ಕೇಂದ್ರದ ಯೋಜನೆಗಳಿಗೆ ಸಹಕಾರ ನೀಡುತ್ತಿಲ್ಲ ಎಂದರು.

ಈ ಮೂಲಕ ಜನರಲ್ಲಿ ಕೇಂದ್ರದ ಬಗ್ಗೆ ತಪ್ಪು ಭಾವನೆ ಮೂಡಿಸಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ. ಇವರ ಹುಳುಕನ್ನು, ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಆರೋಪ ಮಾಡಲಾಗುತ್ತಿದೆ. ಕೇಂದ್ರದ ಯೋಜನೆಗಳಿಗೆ ಕಲ್ಲು ಹಾಕುತ್ತಿದೆ ಎಂದರು.

ದುಡ್ಡು ಸಿಗುತ್ತದೆ ಅಂದರೆ ರಾಜ್ಯ ಸರ್ಕಾರ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ. ಗ್ಯಾರಂಟಿ ಕೊಡುತ್ತಿರುವುದರಿಂದ ಇಂಥದ್ದೆಲ್ಲ ಕೆಲಸಕ್ಕೆ ಕೈ ಹಾಕುತ್ತಾರೆ. ಒಂದು ಕೈಯಲ್ಲಿ ಕಿತ್ತುಕೊಂಡು ಮತ್ತೊಂದು ಕೈಗೆ ಕೊಡ್ತೀವಿ ಎಂದು ಅವರೇ ಹೇಳಿರಲಿಲ್ಲವೇ? ಕಿತ್ತುಕೊಳ್ಳಲು ಏನೇನು ಬೇಕು ಅದನ್ನೆಲ್ಲಾ ಮಾಡುತ್ತಿದ್ದಾರೆ. ಪರಿಣತರು ಅಯೋಗ್ಯ ಐಡಿಯಾಗಳನ್ನು ಕೊಡುತ್ತಿದ್ದಾರೆ. ಅದನ್ನು ಇವರು ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಶಾಸಕರು ಹಾರೆ, ಗುದ್ದಲಿಯನ್ನ ತಮ್ಮ ಮನೆಯಲ್ಲಿ ಇಟ್ಟು ಬಿಟ್ಟಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ತಿಂಗಳಿಗೆ ಒಂದು ಗುದ್ದಲಿ ಪೂಜೆ ಆಗುತ್ತಿತ್ತು. ಈಗ ಎರಡು ವರ್ಷದಿಂದ ಅದೆಲ್ಲಾ ಏನೂ ಇಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗೆದ್ದಿರುವ ವಿರೋಧ ಪಕ್ಷದ ಹೊಸ ಶಾಸಕರು ಪಾಪಿಗಳು. ಕ್ಷೇತ್ರದ ಅಭಿವೃದ್ಧಿಗೆ ಈ ಸರ್ಕಾರ ಹಣ ಕೊಡುತ್ತಿಲ್ಲ. ಆಡಳಿತ ಪಕ್ಷದ ಶಾಸಕರಿಗೂ ಹಣ ಕೊಡುತ್ತಿಲ್ಲ. ಇದೇ ಕಾರಣಕ್ಕೆ ರಾಜು ಕಾಗೆ ಆತ್ಮಹತ್ಯೆ ಮಾಡಿಕೊಳ್ಳುವ ಮಾತುಗಳನ್ನು ಆಡಿದ್ದಾರೆ. ಹಿರಿಯ ನಾಯಕ ದೇಶಪಾಂಡೆ ಅಸಮಾಧಾನಗೊಂಡಿದ್ದಾರೆ ಎಂದರು.

ಇಂತಹ ಅಯೋಗ್ಯ ಸರ್ಕಾರ ಬಂದ ಮೇಲೆ ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ. ಹಾಗಾಗಿ ಶಾಸಕರು, ಜನರು ಪರದಾಡುತ್ತಿದ್ದಾರೆ. ಖಾಸಗಿ ಸರ್ವೆಯಲ್ಲಿ ಇದು ರುಜುವಾತಾಗಿದೆ. ಈಗ ವಿಧಾನಸಭಾ ಚುನಾವಣೆ ನಡೆದರೆ ಬಿಜೆಪಿ 140ರಿಂದ 150 ಸ್ಥಾನ ಗೆಲ್ಲಲಿದೆ. ರಾಜ್ಯದ ಜನರು ಬೇಸತ್ತಿದ್ದಾರೆ. ಜನರ ಆಸೆಗಳು ಮಣ್ಣು ಪಾಲಾಗಿವೆ ಎಂದರು.

Leave a Reply