ರಜನಿ ಲಕ್ಕ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ

2 years ago

#Statelevel #award #RajaniLakka

ಬೆಂಗಳೂರು\ಬಳ್ಳಾರಿ: ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ನೀಡುವ ರಾಜ್ಯ ಮಟ್ಟದ ಪ್ರಶಸ್ತಿಗೆ ಬಳ್ಳಾರಿಯ ಗಾಂಧಿನಗರ ನಿವಾಸಿ ಈಜು ತರಬೇತುದಾರರಾದ ರಜನಿ ಲಕ್ಕ ಭಾಜನರಾಗಿದ್ದಾರೆ.

ಬೆಂಗಳೂರಿನ ಕಬ್ಬನ್ ಉದ್ಯಾನವನದ ಜವಾಹರ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪ್ರಸ್ತಕ ಸಾಲಿನ ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ರಜನಿ ಲಕ್ಕ ಅವರನ್ನು ಗುರುತಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳಕರ್ ಅವರು, ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ರಜನಿ ಲಕ್ಕ ಅವರು, ವಿಕಲಚೇತನರಿಗೆ ಮತ್ತು ಮಹಿಳೆಯರಿಗೆ ಉಚಿತ ಈಜು ತರಬೇತಿ ನೀಡುತ್ತಿದ್ದು, 2008ರಿಂದ ಇಲ್ಲಿಯವರೆಗೆ 3 ಸಾವಿರ ಮಕ್ಕಳು ಮತ್ತು ವಯಸ್ಕರಿಗೆ ತರಬೇತಿ ನೀಡಿದ್ದಾರೆ. ತರಬೇತಿ ಪಡೆದ ಅನೇಕ ಮಕ್ಕಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಪಡೆಯಲು ಕಾರಣಿಭೂತರಾಗಿದ್ದಾರೆ.

ಮಕ್ಕಳ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಇವರ ಸೇವೆಯು ಪ್ರಶಂಸನೀಯವಾಗಿದೆ. ಇವರ ಸೇವೆಯನ್ನು ಗುರುತಿಸಿ, ಸರ್ಕಾರವು ವ್ಯಕ್ತಿ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಈ ಸಂದರ್ಭದಲ್ಲಿ ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.

Leave a Reply