ರಾಜ್ಯ ಸರ್ಕಾರದಿಂದ ಶ್ರೀ ಮಂಟೇಸ್ವಾಮಿ, ಶ್ರೀ ರಾಚಪ್ಪಾಜಿ, ಶ್ರೀ ಸಿದ್ದಪ್ಪಾಜಿ ಕ್ಷೇತ್ರಗಳ ಬಗ್ಗೆ ಯೋಚನೆ ಬೇಡ

12 months ago

ಅಭಿವೃದ್ಧಿ ಪ್ರಾಧಿಕಾರ ರಚನೆಗೆ ತೀವ್ರ ವಿರೋಧ

ಮಂಡ್ಯ/ ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದಿಂದ ಶ್ರೀ ಮಂಟೇಸ್ವಾಮಿ, ಶ್ರೀ ರಾಚಪ್ಪಾಜಿ, ಶ್ರೀ ಸಿದ್ದಪ್ಪಾಜಿ ಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದನ್ನು ರಾಜ ಬೊಪ್ಪಗೌಡನಪುರದ ಶ್ರೀಧರೆಗೆ ದೊಡ್ಡವರ ಸಂಸ್ಥಾನ ಮಠದ ಪೀಠಾಧಿಪತಿ ಮತ್ತು ಆಡಳಿತಾಧಿಕಾರಿ ಬಿ. ಎಸ್. ಜ್ಞಾನಾನಂದ ಚನ್ನರಾಜೇ ಅರಸ್ ಸ್ವಾಮೀಜಿ ಮತ್ತು ಭಕ್ತ ವೃಂದದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸ್ವಾಮೀಜಿ, ಅಭಿವೃದ್ಧಿ ಪ್ರಾಧಿಕಾರ ರಚನೆಯ ಪ್ರಸ್ತಾವನೆಯನ್ನು ಈ ಕೂಡಲೇ ಹಿಂದಕ್ಕೆ ಪಡೆಯಬೇಕು. ಇಂತಹ ಪ್ರಾಚೀನ ಧಾರ್ಮಿಕ ಮಠಗಳು / ಸಂಸ್ಥೆಗಳ ಸ್ಥಾಯತ್ತತೆಯನ್ನು ಗೌರವಿಸಬೇಕು ಎಂದಿದ್ದಾರೆ.

ಶ್ರೀ ಕ್ಷೇತ್ರಗಳ (ಧರೆಗೆ ದೊಡ್ಡವರ ಸಂಸ್ಥಾನಕ್ಕೆ ಸೇರಿದ 5 ಪುಣ್ಯ ಕ್ಷೇತ್ರಗಳ) ಮೇಲೆ ಪರಿಣಾಮ ಬೀರುವಂತಹ ಯಾವುದೇ ಕ್ರಮ ಕೈಗೊಳ್ಳಬಾರದು. ಶ್ರೀ ಧರೆಗೆ ದೊಡ್ಡವರ ಸಂಸ್ಥಾನ ಮಠ, ರಾಜಬೊಪ್ಪಗೌಡನಪುರ ಮಠವು ಈ ನಿರ್ಧಾರವನ್ನು ಪ್ರಶ್ನಿಸುವ ಹಾಗೂ ಶ್ರೀಮಠದ ಪರಂಪರೆಯನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಶ್ರೀ ಮಂಟೇಸ್ವಾಮಿ ಗುರು-ಶಿಷ್ಯ ಪರಂಪರೆಯು ಅನಾದಿಕಾಲದಿಂದಲೂ ಅಂದರೆ ಅಧ್ಯಯನ ಪುಸ್ತಕಗಳಲ್ಲಿ ಉಲ್ಲೇಖಿಸಿರುವ ಹಾಗೆ 12ನೇ ಶತಮಾನದ ಪರಂಪರೆ ಎಂದು ತಿಳಿದುಬಂದಿರುತ್ತದೆ. ಶ್ರೀ ಮಂಟೇಸ್ವಾಮಿರವರಿಗೆ ಪರಶಿವನ ಸ್ವರೂಪಿ, ಆದಿಗುರು, ಆದಿಪುರುಷ ಮತ್ತು ಧರೆಗೆ ದೊಡ್ಡವರು ಎಂದು ಹೆಸರಿಸಲಾಗಿದೆ ಎಂದಿದ್ದಾರೆ.

ಶತಮಾನದಷ್ಟು ಇತಿಹಾಸವಿರುವ ಈ ಪರಂಪರೆಗೆ ಮುಖ್ಯವಾಗಿ 2 ಗುರುಪೀಠಗಳಿದ್ದು, ಮೂಲ ಗುರುಪೀಠವು ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕಿನ ರಾಜಬೊಪ್ಪೇಗೌಡನಪುರ ಗ್ರಾಮದಲ್ಲಿರುವ ಶ್ರೀ ಧರೆಗೆ ದೊಡ್ಡವರ ಸಂಸ್ಥಾನ ಮಠ ಹಾಗೂ ಸಮಪೀಠವಾದ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕಿಗೆ ಸೇರಿದ ಮಳವಳ್ಳಿ ಮಠ ಹಾಗೂ ಆದಿಹೊನ್ನಾಯಕನಹಳ್ಳಿ ಕ್ಷೇತ್ರವಿರುತ್ತದೆ. ಮುಂದುವರೆದು ಗುರುಪೀಠ ಸ್ಥಾಪನೆಯ ನಂತರ ಮಂಟೇಸ್ವಾಮಿಯವರ ಆದೇಶದಂತೆ ತಮ್ಮ ಶಿಷ್ಯವೃಂದದವರಾದ ಶ್ರೀ ರಾಚಪ್ಪಾಜಿರವರಿಗೆ ಶ್ರೀ ಕ್ಷೇತ್ರ ಕಪ್ಪಡಿ, ಶ್ರೀ ಸಿದ್ದಪ್ಪಾಜಿ ರವರಿಗೆ ಶ್ರೀ ಚಿಕ್ಕಲೂರು ಕ್ಷೇತ್ರ, ಶ್ರೀ ಲಿಂಗಯ್ಯ-ಚೆನ್ನಯ್ಯ ರವರಿಗೆ ಕುರುಬನಕಟ್ಟೆ ಕ್ಷೇತ್ರ ಮತ್ತು ಶ್ರೀ ರಾಚಪ್ಪಾಜಿ ರವರ ಧರ್ಮಪತ್ನಿಯಾದ ದೊಡ್ಡಮ್ಮತಾಯಿಯವರಿಗೆ ಮುಟ್ಟನಹಳ್ಳಿ ಹಾಗೂ ರಾಜಬೊಪ್ಪಗೌಡನಪುರದಲ್ಲಿ ಪೀಠಗಳಿವೆ ಎಂದಿದ್ದಾರೆ.

ಶ್ರೀ ಧರೆಗೆ ದೊಡ್ಡವರ ಸಂಸ್ಥಾನ ಮಠ ಮತ್ತು ಮೇಲ್ಕಂಡ ಕ್ಷೇತ್ರಗಳ ಪರಂಪರೆಯು ತಲತಲಾಂತರಗಳಿಂದ ವಂಶಪಾರಂಪರವಾಗಿ ನಡೆದುಕೊಂಡು ಬಂದಿದ್ದು, ಪ್ರಸ್ತುತ ಪೀಠಾಧಿಪತಿಯಾಗಿರುವ ನಾನು ತಿಳಿಸುವುದೇನೆಂದರೆ, ಹಲಾವರು ವರ್ಷಗಳಿಂದ ಶ್ರೀ ಧರೆಗೆ ದೊಡ್ಡವರ ಸಂಸ್ಥಾನ ಮಠದ ವತಿಯಿಂದ ಉದಯೋನ್ಮುಖ ಧಾರ್ಮಿಕ ಕಾರ್ಯಕ್ರಮಗಳಾದ ನೀಲಗಾರರ ಮೇಳವನ್ನು, ನಿತ್ಯ ಅನ್ನದಾಸೋಹವನ್ನು ಮತ್ತು ಜಾತ್ರಾ ಮಹೋತ್ಸವಗಳನ್ನು ಬಹಳ ಅಚ್ಚುಕಟ್ಟಾಗಿ ಸಕಲ ಮೂಲಭೂತ ಸೌಕರ್ಯಗಳನ್ನೊಳಗೊಂಡು ನಮ್ಮ ಕುಟುಂಬದವರ ಸಹಕಾರದಿಂದ ನಡೆಸಿಕೊಂಡು ಬಂದಿರುತ್ತೇವೆ ಎಂದಿದ್ದಾರೆ.

ಇದೇ ಮಾರ್ಗವಾಗಿ ಹಲವಾರು ವರ್ಷಗಳಿಂದ ಜಾತ್ರಾ ಮಹೋತ್ಸವವನ್ನು ನಡೆಸಿಕೊಂಡು ಬಂದಿದ್ದು, ನಾವು ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಇದ್ದರೆ ಅಷ್ಟು ಬಹುಸಂಖ್ಯೆಯಲ್ಲಿ ಭಕ್ತಾದಿಗಳು ಜಾತ್ರಾ ಮಹೋತ್ಸವವನ್ನು ಭಾಗವಹಿಸುವುದು ಸಾಧ್ಯವೇ ಎಂಬುದನ್ನು ಕರ್ನಾಟಕ ರಾಜ್ಯ ಸರ್ಕಾರಕ್ಕೆ ನಾವು ಮನವರಿಕೆ ಮಾಡಿಕೊಡಲು ಇಚ್ಚಿಸುತ್ತೇವೆ ಎಂದಿದ್ದಾರೆ.

ಬೇಡಿಕೆಗಳೇನು?

1. ಅಭಿವೃದ್ಧಿ ಪ್ರಾಧಿಕಾರ ರಚನೆಯ ಪ್ರಸ್ತಾವನೆಯನ್ನು ಈ ಕೂಡಲೇ ಹಿಂದಕ್ಕೆ ಪಡೆಯಬೇಕು. ನಮ್ಮಂತಹ ಪ್ರಾಚೀನ ಧಾರ್ಮಿಕ ಮಠಗಳು / ಸಂಸ್ಥೆಗಳ ಸ್ಥಾಯತ್ತತೆಯನ್ನು ಗೌರವಿಸಬೇಕು.

2. ಶ್ರೀ ಕ್ಷೇತ್ರಗಳ (ಧರೆಗೆ ದೊಡ್ಡವರ ಸಂಸ್ಥಾನಕ್ಕೆ ಸೇರಿದ 5 ಪುಣ್ಯ ಕ್ಷೇತ್ರಗಳ) ಮೇಲೆ ಪರಿಣಾಮ ಬೀರುವಂತಹ ಯಾವುದೇ ಕ್ರಮ ಕೈಗೊಳ್ಳಬಾರದು.

3. ಶ್ರೀ ಧರೆಗೆ ದೊಡ್ಡವರ ಸಂಸ್ಥಾನ ಮಠ, ರಾಜಬೊಪ್ಪಗೌಡನಪುರ ಮಠವು ಈ ನಿರ್ಧಾರವನ್ನು ಪ್ರಶ್ನಿಸುವ ಹಾಗೂ ಶ್ರೀಮಠದ ಪರಂಪರೆಯನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತದೆ.

ಎಲ್ಲಾ ನೀಲಗಾರರು, ಭಕ್ತಾದಿಗಳು ಹಾಗೂ ನಾಗರೀಕರನ್ನು, ಸಂಯಮ ಕಳೆದುಕೊಳ್ಳದಿರುವಂತೆ, ಸಂಘಟಿತರಾಗಿ ಹಾಗೂ ವಿಶ್ವಾಸ ಕಳೆದುಕೊಳ್ಳದಿರುವಂತೆ ಈ ಮೂಲಕ ಕೋರುತ್ತಿದ್ದೇವೆ.

ಸತ್ಯ, ಸಂಪ್ರದಾಯ ಮತ್ತು ನಮ್ಮ ಪವಿತ್ರ ಸಂಸ್ಥೆಗಳ ಹಕ್ಕುಗಳನ್ನು ಎತ್ತಿ ಹಿಡಿಯಲು ಶ್ರೀಮಠವು ಸದಾ ಬದ್ಧವಾಗಿರುತ್ತದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

Leave a Reply