‘ಈಗ ಮಧ್ಯರಾತ್ರಿಯ ಒಂದು ಗಂಟೆಯ ಸಮಯ. ನಿರ್ಮಲವಾದ ನೀಲಾಕಾಶದಲ್ಲಿ ಪೂರ್ಣಚಂದಿರ ಬೆಳಗುತ್ತಿದ್ದಾನೆ. ದಿಲ್ಲಿ ನಗರದ ಸುಂದರ ಪ್ರಾರ್ಥನಾ ಮಂದಿರವಾದ ಜುಮ್ಮಾ ಮಸೀದಿ ಗೋಪುರದ (ಮಿನಾರ್) ಹಿಂಬದಿಯಲ್ಲಿ ಚಂದಿರನನ್ನು ನೋಡುವುದೇ ಒಂದು ಸೊಗಸು. ಈ ಮನೆಯ ಬಾಲ್ಕನಿಯಿಂದ ಕಾಣುವ ಬೆಳದಿಂಗಳಲ್ಲಿ ಹರಿಯುತ್ತಿರುವ ಯುಮುನಾ ನದಿ, ಈ ನಡುರಾತ್ರಿಯಲ್ಲೂ ಪುಟ್ಟ ದೀಪ ಬೆಳಗಿಸಿಕೊಂಡು ಸಂಚರಿಸುತ್ತಿರುವ ದೋಣಿಗಳು, ಇವೆಲ್ಲವೂ ದಿಲ್ಲಿ ನಗರವನ್ನು ಪ್ರೀತಿಸುವಂತೆ ನನ್ನನ್ನು ಪ್ರೇರೇಪಿಸುತ್ತಿವೆ.’ಈ ಮಾತುಗಳನ್ನು ದಿಲ್ಲಿ ನಗರದ ಬ್ರಿಟಿಷ್ ರೆಸಿಡೆಂಟ್ ಆಗಿದ್ದ ಸರ್ ಥಾಮಸ್ ಮೆಟ್ಕಾಫ್ನ ಪುತ್ರಿ ಎಮಿಲಿ ಬೆಯ್ಲಿ ಎಂಬಾಕೆ ತನ್ನ ದಿನಚರಿಯನ್ನು ದಾಖಲಿಸಿದ್ದಾಳೆ.
ಇತಿಹಾಸ ಪೂರ್ವದಿಂದಲೂ ವೈಭವವನ್ನು ತನ್ನ ಒಡಲಲ್ಲಿಟ್ಟುಕೊಂಡು ಪೋಷಿಸುತ್ತಾ ಬಂದಿರುವ ದಿಲ್ಲಿ ನಗರ ಅನೇಕ ಸಾಮ್ರಾಜ್ಯಗಳ, ಸಾಮ್ರಾಟರ ಏಳುಬೀಳುಗಳನ್ನು ಕಂಡಿದೆ. ಈ ನೆಲದಲ್ಲಿ ಹರಿದ ನೀರಿನಷ್ಟೇ ಪ್ರಮಾಣದಲ್ಲಿ ನೆತ್ತರೂ ಸಹ ಹರಿದಿದೆ. ಇಲ್ಲಿನ ಒಂದೊಂದು ಅವಶೇಷವು, ಶತಮಾನ ಕಳೆದರೂ ನಮಗೆ ಮುಗಿಯದಷ್ಟು ಕಥೆ ಹೇಳಬಲ್ಲವು. ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ದಿಲ್ಲಿ ನಗರಕ್ಕೆ ನಿಜವಾದ ಸೊಬಗನ್ನು ತಂದಿತ್ತವನು ಅಕ್ಬರನ ಮಗ ಶಹಜಹಾನ್. ತನ್ನ ರಾಜಧಾನಿಯನ್ನು ಆಗ್ರಾದಿಂದ ದಿಲ್ಲಿಗೆ ವರ್ಗಾಯಿಸಿ, ಕೆಂಪುಕೋಟೆಯನ್ನು ನಿರ್ಮಿಸಿ ಹಾಲಿನಷ್ಟು ಬಿಳುಪಾದ ಅಮೃತಶಿಲೆಯಲ್ಲಿ ಅನೇಕ ಸುಂದರ ವಾಸ್ತುಶಿಲ್ಪದ ಕಟ್ಟಡ, ಅರಮನೆ ಇತ್ಯಾದಿ ಖಾಸಗಿ ಗೃಹಗಳನ್ನು ನಿರ್ಮಿಸಿದನು.

ಸುಂದರವಾದ ವಿಶಾಲವಾದ ರಸ್ತೆಗಳು, ಉದ್ಯಾನವನಗಳು, ಚೌಕಗಳು ಅವನ ಅವಧಿಯಲ್ಲಿ ನಿರ್ಮಾಣಗೊಂಡವು. ಹಳೆಯ ದಿಲ್ಲಿಯ ಉತ್ತರ ಭಾಗದ ಕಾಶ್ಮೀರಿಗೇಟ್, ಪಶ್ಚಿಮ ಭಾಗದ ಲಾಹೋರ್ಗೇಟ್, ಅಜ್ಮೀರ್ ಗೇಟ್, ಕಾಬೂಲ್ ಗೇಟ್, ದಕ್ಷಿಣ ಭಾಗದ ತುರ್ಕುಮನ್ ಗೇಟ್, ದಿಲ್ಲಿಗೇಟ್ ಹಾಗೂ ಚಾಂದಿನಿ ಚೌಕ್, ಫಯಾಜ್ ಬಜಾರ್ ಇವೆಲ್ಲವೂ ಕೆಂಪುಕೋಟೆಯ ನಿರ್ಮಾಣದೊಂದಿಗೆ ಅಸ್ತಿತ್ವಕ್ಕೆ ಬಂದು, ಇಂದಿಗೂ ತಮ್ಮ ಹೆಸರನ್ನು ಅಜರಾಮರವಾಗಿ ಉಳಿಸಿಕೊಂಡಿವೆ.
ಮೊಗಲ್ ದೊರೆಗಳಲ್ಲಿ ಅಕ್ಬರ್ನಿಂದ ಪ್ರಾರಂಭವಾದ ಸಾಂಸ್ಕೃತಿಕ ಅಭಿರುಚಿಗಳು ಶಹಜಹಾನ್ ಹಾಗೂ ಅವನ ಪುತ್ರ ದಾರಾಶಿಕೊನಿಂದ ಹಿಡಿದು ಗಾಲಿಬ್ನ ಬಾಲ್ಯದಲ್ಲಿ ರಾಜ್ಯವಾಳಿದ ಎರಡನೆ ಅಕ್ಬರ್ಶಾ ದೊರೆ ಮತ್ತು ಕೊನೆಯ ಮೊಗಲ್ ದೊರೆ ಬಹದ್ದೂರ್ ಶಾನವರೆಗೂ ಹರಿದು ಬಂದಿರುವುದು ವಿಶೇಷ. ಕೊನೆಯ ಬಹದ್ದೂರ್ ಶಾ ಶ್ರೇಷ್ಠ ಅಭಿರುಚಿ ಹಾಗೂ ಅವಗುಣಗಳ ಸಂಗಮದಂತಿದ್ದ. ಈತ ಮೂಲತಃ ಒಳ್ಳೆಯ ಕವಿ, ಕಲಾವಿದ ಹಾಗೂ ಸಂಗೀತಗಾರನಾಗಿದ್ದ. ಕುದುರೆ ಸವಾರಿಯಲ್ಲಿ ಗಟ್ಟಿಗನಾಗಿದ್ದ ಬಹದ್ದೂರ್ ಶಾ, ಹಿಂದೂಸ್ತಾನಿ ಸಂಗೀತದ ಪ್ರಕಾರಗಳಾದ ಖಯಾಲ್ ಮತ್ತು ಟುಮುರಿಗಳನ್ನು ರಚನೆ ಮಾಡಿದ್ದನು.
ಅರೇಬಿಕ್ ಹಾಗೂ ಪರ್ಶಿಯನ್ ಭಾಷೆಯ ಸಾಹಿತ್ಯದಲ್ಲಿ ಪಂಡಿತನಾಗಿದ್ದ ಈತ ಸೌದಿ ಎಂಬಾತನ `ಗುಲಿಸ್ಥಾನ್’ಕೃತಿಯ ಮೇಲೆ ವಿಮರ್ಶೆಯನ್ನೂ ಸಹ ಬರೆದಿದ್ದನು. ಸಂಜೆಯ ವೇಳೆ ಕೆಂಪುಕೋಟೆಗೆ ಹೊಂದಿಕೊಂಡಂತಿದ್ದ ಯಮುನಾ ನದಿ ತೀರದಲ್ಲಿ ಗಾಳಿಪಟ ಹಾರಿಸುವುದು, ಉದ್ಯಾನವನದಲ್ಲಿ ಕುಳಿತು ಬುಲ್ ಬುಲ್ ತರಂಗವಾದ್ಯ ನುಡಿಸುವುದು ಈತನ ಮೆಚ್ಚಿನ ಹವ್ಯಾಸಗಳಾಗಿದ್ದವು.
ಸಿಪಾಯಿದಂಗೆ ಘಟನೆ ಸಂಭವಿಸುವವರೆಗೆ, ಬ್ರಿಟಿಷರ ಹಸ್ತಕ್ಷೇಪದ ನಡುವೆಯೂ ದಿಲ್ಲಿ ನಗರವು ತನ್ನ ಸಾಂಸ್ಕೃತಿಕ ಅಭಿರುಚಿಗಳನ್ನು, ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದು, ಪ್ರತಿಯೊಬ್ಬ ನಾಗರಿಕನ ಮೆಚ್ಚಿನ ನಗರವಾಗಿತ್ತು. ಈ ಕಾರಣಕ್ಕಾಗಿ ಝಾಖ್ ಎಂಬ ಕವಿ `ಕೌನ್ ಜಾಯೆ ಪರ್ ಅಬ್ ದಿಲ್ಲಿ ಕಿ ಗಲಿಯಾವ್ ಛೋಡ್ಕರ್’ (ಈ ದಿಲ್ಲಿಯ ರಸ್ತೆಗಳನ್ನು ಯಾರು ತೊರೆಯುತ್ತಾರೆ?) ಎಂದು ಪ್ರಶ್ನಿಸಿದ್ದನು.
ಮೊಗಲ್ ದೊರೆಗಳು ಮೂಲತಃ ಇಸ್ಲಾಂ ಧರ್ಮಕ್ಕೆ ನಿಷ್ಠೆಯಿಂದ ನಡೆದುಕೊಂಡರೂ ಸಹ ಪರಧರ್ಮಸಹಿಷ್ಣುಗಳಾಗಿದ್ದರು. ಅಕ್ಬರ್ ದೊರೆಯು ರಜಪೂತ ರಾಜಕುಮಾರಿ ಪದ್ಮಿನಿಯನ್ನು ವಿವಾಹವಾಗಿ ಭಾವೈಕ್ಯತೆಗೆ ನಾಂದಿ ಹಾಡಿದ್ದನು. ಮೊಗಲ್ ದೊರೆಗಳ ನೇತೃತ್ವದಲ್ಲಿ ಹಿಂದೂ ಹಬ್ಬಗಳಾದ ರಕ್ಷಾಬಂಧನ್, ಹೋಳಿ, ದೀಪಾವಳಿ, ರಂಗ ಪಂಚಮಿ, ದಸರಾ ಶಿವರಾತ್ರಿ, ವಸಂತ ಹಬ್ಬಗಳು ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದ್ದವು.
ಅಕ್ಬರ್ ದೊರೆಗೆ ಜಹಾನ್ಪಾನಾ ಮತ್ತು ಮಹಾಬಲಿ ಎಂಬ ಬಿರುದುಗಳಿದ್ದವು. ಶಾಜಹಾನ್ ಪುತ್ರನಾದ ದಾರಾಶಿಕೊ ಹಿಂದೂ ಧರ್ಮದ ಪ್ರಮುಖ ಕೃತಿಗಳಾದ ಯೋಗವಾಸಿಷ್ಠ, ಭಗವದ್ಗೀತೆ ಹಾಗೂ ಉಪನಿಷತ್ಗಳನ್ನು ಪರ್ಶಿಯನ್ ಭಾಷೆಗೆ ವಿದ್ವಾಂಸರ ಮೂಲಕ ಅನುವಾದಿಸಿದ್ದನು. ಅಲ್ಲದೆ ತಾನೇ ಸ್ವತಃ `ಮಜ್ಮುನ-ಉಲ್ ಬಹಾರಿನ್’ಎಂಬ ಕೃತಿ ಬರೆದು ಹಿಂದೂ – ಇಸ್ಲಾಂ ಧರ್ಮಗಳ ತೌಲನಿಕ ಅಧ್ಯಯನ ನಡೆಸಿದ್ದನು.
ಕಟ್ಟಾ ಧರ್ಮಿಷ್ಠ ಹಾಗೂ ಮತೀಯವಾದಿ ಮನೋಭಾವ ಹೊಂದಿದ್ದ ಔರಂಗಜೇಬನ ಅವಧಿಯಲ್ಲಿ ಮಾತ್ರ ಹಿಂದೂ-ಇಸ್ಲಾಂ ಧರ್ಮಗಳ ಸಾಮರಸ್ಯಕ್ಕೆ ಕುಂದುಂಟಾಯಿತು. ಆದರೆ ಅದು ಅಲ್ಲಿಗೆ ಕೊನೆಯಾಯಿತು. ಇದಕ್ಕೆ ಒಬ್ಬ ಹಿಂದೂ ಮಹಿಳೆಯ ನಿಷ್ಠೆ ಕೂಡ ಕಾರಣವಾದದ್ದು ಕಾಕತಾಳೀಯ. ಮೊಗಲ್ ದೊರೆ ಎರಡನೇ ಅಲಂಗಿರ್ ಆಳ್ವಿಕೆಯ ಅವಧಿಯಲ್ಲಿ ಬ್ರಾಹ್ಮಣ ಮಹಿಳೆ ರಾಜಮಣಿಗೌರ್ ಎಂಬಾಕೆಯು ಯಮುನಾ ನದಿಯಲ್ಲಿ ಸ್ನಾನ ಮಾಡಿ ಹಿಂತಿರುಗಿ ಬರುತ್ತಿದ್ದಾಗ ಕೊಲೆಯಾಗಿ ಬಿದ್ದಿದ್ದ ಅಲಂಗಿರ್ ಶವವನ್ನು ಕಂಡು, ಆಸ್ಥಾನದ ಸಿಬ್ಬಂದಿಗೆ ವಿಷಯ ತಿಳಿಸಿದಳು. ಜೊತೆಗೆ ದೊರೆಯ ಶವ ಕಾಡುಪ್ರಾಣಿಗಳ ಪಾಲಾಗದಂತೆ ಕಾವಲಿದ್ದು, ದೊರೆಯ ಕುಟುಂಬ ಶವವನ್ನು ವಶಕ್ಕೆ ತೆಗೆದುಕೊಂಡು ಹೋದ ನಂತರ ಮನೆಗೆ ಹಿಂತಿರುಗಿದಳು.
ಈ ಸುದ್ದಿ ಮೃತ ದೊರೆಯ ಪುತ್ರ ಶಾ ಆಲಂಗೆ ತಿಳಿದು ಅವನು ಸಿಂಹಾಸನ ಏರಿದ ನಂತರವೂ ಈ ವಿಷಯ ಅವನನ್ನು ಕಾಡುತ್ತಿತ್ತು. ಆ ಬ್ರಾಹ್ಮಣ ಮಹಿಳೆಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ ತನ್ನ ಆಸ್ಥಾನದಲ್ಲಿ ರಕ್ಷಾಬಂಧನ್ ಕಾರ್ಯಕ್ರಮವನ್ನು ಹಮ್ಮಿಕೊಂಡನು. ಪ್ರತಿ ವರ್ಷವೂ ಈ ಮಹಿಳೆ ಮೊಗಲ್ ದೊರೆ ಶಾ ಆಲಂನನ್ನು ತನ್ನ ಸಹೋದರನೆಂದು ಪರಿಭಾವಿಸಿ ಆತನಿಗೆ ರಕ್ಷಾಬಂಧನವನ್ನು ಕಟ್ಟುತ್ತಿದ್ದಳು. ಈ ಸಂದರ್ಭದಲ್ಲಿ ದೊರೆ ಆಕೆಗೆ ಅನೇಕ ಉಡುಗೊರೆಗಳನ್ನು ನೀಡುತ್ತಿದ್ದನು. ಈ ಪದ್ಧತಿಯು ಆಕೆಯ ನಿಧನಾನಂತರವೂ ಅವಳ ಕುಟುಂಬದವರ ಜೊತೆ ಬೆಳೆದು ಬಂದು, ನಂತರದ ಸಾಮ್ರಾಟರಾದ ಎರಡನೇ ಅಕ್ಬರ್ ಶಾ ಹಾಗೂ ಬಹದ್ದೂರ್ ಶಾ ಇವರ ಆಳ್ವಿಕೆಯಲ್ಲೂ ಸಹ ಅನೂಚಾನವಾಗಿ ನಡೆದುಕೊಂಡು ಬಂದಿತು.
ಹಿಂದೂ-ಮುಸ್ಲಿಂ ಸಮುದಾಯದ ನಡುವೆ ಸಂಘರ್ಷದ ಕಿಡಿಯೊಂದು 1854 ರಲ್ಲಿ ಆರಂಭವಾಯಿತು. ದೆಹಲಿ ಸಾಮ್ರಾಜ್ಯದ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಿದ್ದ ಬ್ರಿಟಿಷರು, ಬಕ್ರೀದ್ ಆಚರಣೆಯ ವೇಳೆ ಗೋವುಗಳನ್ನು ವಧಿಸಲು ಅಧಿಕೃತ ಪರವಾನಗಿ ನೀಡಿದ್ದನ್ನು ಹಿಂದೂ ಸಮುದಾಯವು ಪ್ರತಿಭಟಿಸಿತು. ಈ ಮೊದಲು ಹಿಂದೂಗಳ ಭಾವನಾತ್ಮಕವಾದ ಈ ವಿಷಯಕ್ಕೆ ಸಂಬಂಧಿಸಿದಂತೆ ಕಟ್ಟೆಚ್ಚರ ವಹಿಸಿದ್ದ ಮೊಗಲ್ ದೊರೆಗಳು ಬಕ್ರೀದ್ ವೇಳೆ ಒಂಟೆ, ಮೇಕೆ, ಕುರಿ ಮುಂತಾದ ಪ್ರಾಣಿಗಳ ವಧೆಗೆ ಮಾತ್ರ ಅನುಮತಿ ಇತ್ತಿದ್ದರು. ಆದರೆ ತಮ್ಮ ಆಹಾರ ಸಂಸ್ಕೃತಿಯಲ್ಲಿ ಗೋಮಾಂಸ ಕೂಡ ಸಹಜವಾದ್ದರಿಂದ ದೆಹಲಿಯ ರೆಸಿಡೆಂಟ್ ಸರ್ ಥಾಮಸ್ ಮೆಟ್ಕಾಫ್ ಗೋವಧೆಗೆ ಅನುಮತಿ ನೀಡಿದ್ದನು.
ಇದಕ್ಕೂ ಮುನ್ನ 1816 ಮತ್ತು 1834 ರಲ್ಲಿ ರಥೋತ್ಸವದ ಸಂದರ್ಭದಲ್ಲಿ ಹಿಂದೂ ಹಾಗೂ ಜೈನರ ನಡುವೆ, ಇನ್ನೊಂದು ಸಂದರ್ಭದಲ್ಲಿ ಇಸ್ಲಾಂ ಧರ್ಮದ ಶಿಯಾ ಮತ್ತು ಸುನ್ನಿ ಪಂಗಡಗಳ ನಡುವೆ ಸಣ್ಣ ಪುಟ್ಟ ಘರ್ಷಣೆಗಳಾಗಿದ್ದವು. ದೆಹಲಿಯಲ್ಲಿ ನಡೆಯುತ್ತಿದ್ದ ರಾಮಲೀಲಾ ಉತ್ಸವದಲ್ಲಿ ಅನೇಕ ಹಿಂದೂ ಸಂತರು ಹಾಗೂ ಮುಸ್ಲಿಂ ಸೂಫಿ ಸಂತರು ಭಾಗವಹಿಸುತ್ತಿದ್ದರು. ಸ್ವತಃ ಬಹದ್ದೂರ್ ಶಾ ರಾಮಲೀಲಾ ಉತ್ಸವದ ಮೆರವಣಿಗೆಯ ಪಥವನ್ನು ಬದಲಿಸಿ, ತನ್ನ ಅರಮನೆಯ ಮುಂದೆ ಹಾದು ಹೋಗುವಂತೆ ಮಾಡಿ, ಉತ್ಸವಕ್ಕೆ ತಾನೂ ಕೂಡ ಗೌರವ ಅರ್ಪಿಸುತ್ತಿದ್ದನು.
ಇಂತಹ ಸುಮಧುರ ಭಾವೈಕ್ಯತೆಯ ಪರಿಸರದಲ್ಲಿ ಬೆಳೆದ ಗಾಲಿಬನು ಆ ವೇಳೆಗಾಗಲೇ ದೆಹಲಿಯಲ್ಲಿ ಪ್ರಭಾವ ಬೀರಿದ್ದ ಸೂಫಿ ಸಂತರಿಂದ ಪ್ರೇರಣೆ ಹೊಂದಿ, ಧರ್ಮಾತೀತನಾಗಿ ಬೆಳೆಯಲು ಸಾಧ್ಯವಾಯಿತು.
(ಮಿರ್ಜಾ ಗಾಲಿಬ್ ಕಥನ ಮತ್ತು ಕಾವ್ಯ ಕೃತಿಯಿಂದ)
ವಿ.ಸೂ-. ಪುಸ್ತಕ ಬುಕ್ ಮಾಡಿದ್ದವರಿಗೆ ಇಂದಿನಿಂದ ರವಾನೆ ಮಾಡಲಾಗುತ್ತಿದೆ.
ನಾಳೆಯಿಂದ ಪ್ರಮುಖ ಅಂಗಡಿಗಳಲ್ಲಿ ದೊರೆಯುತ್ತದೆ.
ಕೃತಿಗಾಗಿ ಸಂಪರ್ಕಕಿಸಿ- 9448676770
- ಡಾ.ಎನ್.ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




