ಸ್ಪಂದನ ಕಪ್-2022 ಬ್ಯಾಡ್ಮಿಂಟನ್ ಪಂದ್ಯಾವಳಿ

4 years ago

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರ, ಶಂಕರಮಠ ವಾರ್ಡ್ ನಲ್ಲಿ ಬಿ.ಬಿ.ಎಂ.ಪಿ. ಒಳಾಂಗಣ ಕ್ರೀಡಾಂಗಣದಲ್ಲಿ ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಪುರುಷ ಮತ್ತು ಮಹಿಳೆಯರಿಗೆ ಸ್ಪಂದನ ಕಪ್-2022ರ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿತ್ತು.

ಅಂತರರಾಷ್ಟ್ರೀಯ ಪ್ಯಾರ ಓಲಂಪಿಕ್ ಪದಕ ವಿಜೇತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೆಂಕಟೇಶ್ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ, ಮಾಜಿ ಆಡಳಿತ ಪಕ್ಷದ ನಾಯಕ ಎಮ್.ಶಿವರಾಜು ಮತ್ತು ಬಿ.ಬಿ.ಎಂ.ಪಿ. ಮಾಜಿ ಸದಸ್ಯ ಎಸ್.ಕೇಶವಮೂರ್ತಿ, ಸ್ಪಂದನ ಸಂಸ್ಥೆಯ ಅಧ್ಯಕ್ಷ ಸುದೀಂಧ್ರಚಾರ್, ಪ್ರಧಾನ ಕಾರ್ಯದರ್ಶಿ ವಿಶಾಲಾಕ್ಷಿ ಶಿವರಾಜು ದೀಪ ಬೆಳಗಿಸಿ, ಬ್ಯಾಡ್ಮಿಂಟನ್ ಆಡುವ ಮೂಲಕ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೆಂಕಟೇಶ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕೊರೋನ ಕಾರಣದಿಂದ ಕ್ರೀಡಾ ಚಟುವಟಿಕೆಗಳು ನಡೆದಿರಲಿಲ್ಲ. ಆದರೆ ಈಗ ಮತ್ತೆ ಕ್ರೀಡಾಕೂಟಗಳು ನಡೆಯುತ್ತಿವೆ. ಯುವ ಕ್ರೀಡಾ ಪಟುಗಳನ್ನು ಗುರುತಿಸಿ, ಪ್ರೋತ್ಸಾಹ ನೀಡಿದಾಗ ಏಷ್ಯನ್ ಗೇಮ್ಸ್ ಮತ್ತು  ಕಾಮನ್ ವೆಲ್ತ್, ಒಲಂಪಿಕ್ ಕ್ರೀಡಾ ಕೂಟಗಳಲ್ಲಿ ಹೆಚ್ಚಿನ ಪದಕ ಗೆಲ್ಲಲು ಸಾಧ್ಯ ಎಂದರು.

ವಿಕಲಚೇತನರು ಸಹ ಕ್ರೀಡೆಗಳಲ್ಲಿ ತಮ್ಮ ಸಾಧನೆ ನಿರೂಪಿಸಿದ್ದಾರೆ. ಜಪಾನ್ ದೇಶದಲ್ಲಿ ನಡೆದ ಪ್ಯಾರಾ ಓಲಂಪಿಕ್ ಕ್ರೀಡಾಕೂಟದಲ್ಲಿ ಭಾರತ ದೇಶ 19 ಪದಕಗಳು ತನ್ನ ಮುಡಿಗೇರಿಸಿ ಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ, ಸ್ವಯಂ ಸೇವಾ ಸಂಘಟನೆಗಳು ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಸಹಕಾರ ನೀಡುತ್ತಿವೆ ಎಂದರು.

ಅರ್ಜುನ್ ದೇವಯ್ಯ ಮಾತನಾಡಿ, ಮನುಷ್ಯನ ಶರೀರಕ್ಕೆ ಸಾಧನೆ ಮಾಡುವ ಮನಸ್ಸು ಬರಬೇಕು ಗುರುಗಳ ಮಾರ್ಗದರ್ಶನ ಸಿಕ್ಕರೆ ಉತ್ತಮ ಕ್ರೀಡಾಪಟುಗಳಾಗಿ ಬೆಳಯಬಹುದು. ಪ್ರತಿಯೊಬ್ಬರು ಪ್ರತಿ ದಿನ ಒಂದು ಗಂಟೆ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ಇದರಿಂದ ವೈಯಕ್ತಿಕ ಜೀವನ ಮತ್ತು ಸಾರ್ವಜನಿಕ ಜೀವನದಲ್ಲಿಉತ್ತಮ ಪ್ರಜೆಯಾಗಿ ಬದುಕಲು ಸಾಧ್ಯ ಎಂದರು.

ಎಮ್.ಶಿವರಾಜು ಮಾತನಾಡಿ ಪರಿಸರ, ಕ್ರೀಡೆ, ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಾನಸಿಕ, ದೈಹಿಕವಾಗಿ ಆರೋಗ್ಯವಂತರಾಗಿ ಇರಲು ಕ್ರೀಡಾ ಚಟುವಟಿಕೆ ಮುಖ್ಯ. ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಯುವ ಕ್ರೀಡಾಪಟುಗಳಿಗೆ ಕ್ರೀಡಾ ಸಲಕರಣೆ, ಪ್ರೋತ್ಸಾಹ ಧನ ನೀಡುತ್ತಾ ಕ್ರೀಡೆಗೆ ಉತ್ತೇಜನ ನೀಡುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೆಂಕಟೇಶ್ ಮತ್ತು ಅಂತರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.

Leave a Reply