ಡಾ. ಕಾ. ರಾಮೇಶ್ವರಪ್ಪ ಅವರಿಗೆ ರಂಗಸಗೀತ ಪ್ರಶಸ್ತಿ ಪ್ರದಾನ
ಚಾಮರಾಜನಗರ: ಕರ್ನಾಟಕ ರಂಗ ಪರಿಷತ್ತು ವತಿಯಿಂದ ಮಾ. 24ರಂದು ಸ್ವರ ಮಾಂತ್ರಿಕ ಇಸ್ಮಾಯಿಲ್ ಗೋನಾಳ್ ಸ್ಮರಣೆ, ಸ್ವರಮಾಂತ್ರಿಕ ಇಸ್ಮಾಯಿಲ್ ಗೋನಾಳ್ ರಾಜ್ಯಮಟ್ಟದ ರಂಗಸಂಗೀತ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ಸಂಜೆ 6 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಜಾನಪದ ಜೀವಧ್ವನಿ ಡಾ.ಕಾ.ರಾಮೇಶ್ವರಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಹಿಸಲಿದ್ದು, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಮುರುಗೇಶ್ ನಿರಾಣಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯ್ಕ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತ ಎಂ. ಕನಗವಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರು ವಿವಿ ಸಮೂಹ ಸಂಪರ್ಕ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಬಿ.ಕೆ.ರವಿ ಅಭಿನಂದನಾ ನುಡಿಗಳನ್ನಾಡಿಲಿದ್ದಾರೆ. ಮೈಸೂರಿನ ಇನಿದನಿ ಮಣ್ಣ ಮಕ್ಕಳ ಹೊನ್ನಪದಗಳ ಬಳಗದ ವತಿಯಿಂದ ಜಾನಪದ ಝೇಂಕಾರ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಂಗಪರಿಷತ್ತಿನ ರಾಜ್ಯ ಸಂಚಾಲಕ ಸಿ.ಎಂ. ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



