ಬೆಂಗಳೂರು: ಕುಖ್ಯಾತ ಭೂಗತ ಪಾತಕಿ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಮಧ್ಯರಾತ್ರಿ ಬಿಡದಿಯ ಅವರ ಮನೆ ಬಳಿಯೇ ಗುಂಡಿನ ದಾಳಿ ನಡೆದಿದೆ. ಗುಂಡೇಟಿನಿಂದ ಗಾಯಗೊಂಡರೂ ರಿಕ್ಕಿ ರೈ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ಯಾವಾಗಲೂ ಭದ್ರತೆಗೆ ಗನ್ ಮ್ಯಾನ್ ಜೊತೆಗಿಟ್ಟುಕೊಂಡು ಓಡಾಡುವ ರಿಕ್ಕಿ ರೈ, ರಾತ್ರಿ 11.30ರ ವೇಳೆ ಬಿಡದಿಯಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅವರನ್ನು ಗುರಿಯಾಗಿಸಿಕೊಂಡು ಎರಡು ಸುತ್ತು ಗುಂಡು ಹಾರಿಸಲಾಗಿದೆ. ಗುಂಡುಗಳು ಹಿಂಬದಿ ಸೀಟ್ನಲ್ಲಿದ್ದ ರಿಕ್ಕಿ ರೈ ಕೈಗೆ ತಾಕಿವೆ. ಇದರಿಂದ ಸಣ್ಣ ಪುಟ್ಟ ಗಾಯಗೊಂಡಿರುವ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎರಡು ದಿನಗಳ ಹಿಂದಷ್ಟೇ ರಷ್ಯಾದಿಂದ ವಾಪಸಾಗಿದ್ದ ರಿಕ್ಕಿ ರಾಮನಗರ ತಾಲೂಕಿನ ಬಿಡದಿ ಮನೆಯಿಂದ ತಡರಾತ್ರಿ ತನ್ನ ಫಾರ್ಚ್ಯೂನರ್ ಕಾರಲ್ಲಿ ಬೆಂಗಳೂರಿಗೆ ಹೊರಟಿದ್ದರು.
ಸುಮಾರು 11.30 ರ ಹೊತ್ತಿಗೆ ಮನೆಯಿಂದ ಹೊರಬರುತ್ತಿದ್ದಂತೆ ಗೇಟ್ ಬಳಿ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿ, 70 ಎಂಎಂ ಬುಲೆಟ್ನ ಶಾಟ್ಗನ್ ಬಳಸಿ ಎರಡು ಸುತ್ತು ಗುಂಡು ಹಾರಿಸಿದ್ದಾನೆ.
ರಿಕ್ಕಿ ರೈ ಯಾವಾಗಲೂ ತಾವೇ ಕಾರು ಚಲಾಯಿಸುತ್ತಿದ್ದರು. ಹೀಗಾಗಿ ಚಾಲಕನ ಆಸನವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಆದರೆ ತಡರಾತ್ರಿ ಅದ್ಯಾವ ಕಾರಣವೋ ಗೊತ್ತಿಲ್ಲ ತನ್ನ ಬದಲು ಡ್ರೈವರ್ಗೆ ಕಾರು ಚಲಾಯಿಸಲು ಹೇಳಿದ್ದಾರೆ. ರಿಕ್ಕಿ ರೈ, ಹಿಂಬದಿ ಸೀಟ್ನಲ್ಲಿ ಗನ್ ಮ್ಯಾನ್ ಜತೆ ಕುಳಿತಿದ್ದರು. ಹೀಗಾಗಿ ಗುಂಡಿನ ದಾಳಿ ನಡೆಯುತ್ತಿದ್ದಂತೆ ಕಾರು ಚಾಲಕ ಬಸವರಾಜು ಮುಂದೆ ಬಗ್ಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ನಂತರ ರಿಕ್ಕಿ ರೈ ಅವರ ಕಾರಿನ ಚಾಲಕ ಬಸವರಾಜು ಮುತ್ತಪ್ಪ ರೈ ಅವರ ಮೊದಲ ಪತ್ನಿ ಅನ್ನಪೂರ್ಣ, ರಾಕೇಶ್ ಮಲ್ಲಿ ಹಾಗೂ ನಿತೇಶ್ ಎಸ್ಟೇಟ್ ಕಂಪನಿ ಮಾಲೀಕರ ವಿರುದ್ಧ ಬಿಡದಿ ಪೊಲೀಸರಿಗೆ ದೂರು ನೀಡಿದ್ದಾರೆ.
ರಿಯಲ್ ಎಸ್ಟೇಟ್ ಮತ್ತು ಆಸ್ತಿ ವಿಚಾರವಾಗಿ ರಿಕ್ಕಿ ರೈ, ನಿತೇಶ್ ಎಸ್ಟೇಟ್ ಮತ್ತು ಮುತ್ತಪ್ಪ ರೈ ದ್ವಿತೀಯ ಪತ್ನಿ ಅನ್ನಪೂರ್ಣ ಅವರ ನಡುವೆ ವಿವಾದವಿತ್ತು. ಈ ಹಿನ್ನೆಲೆಯಲ್ಲಿ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿರುವ ಬಿಡದಿ ಪೊಲೀಸರು, ಮನೆ ಸಿಬ್ಬಂದಿ, ಆಪ್ತರಿಂದ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ರಿಕ್ಕಿ ರೈ ವಿದೇಶದಿಂದ ಬಂದಿದ್ದು ಯಾವಾಗ, ವ್ಯವಹಾರಗಳೇನು? ಇತ್ತೀಚೆಗೆ ಯಾವುದಾದರೂ ವ್ಯವಹಾರದಲ್ಲಿ ಗಲಾಟೆ ಆಗಿತ್ತಾ? ರಾಮನಗರ ತಾಲೂಕಿನ ಬಿಡದಿ ಮನೆಯಲ್ಲಿ ಯಾರ್ಯಾರು ಇದ್ದಾರೆ? ರಿಕ್ಕಿ ಮನೆಗೆ ಹೊಸದಾಗಿ ಯಾರಾದರು ಕೆಲಸಕ್ಕೆ ಸೇರಿಕೊಂಡಿದ್ದಾರಾ? ಹಳೇ ದ್ವೇಷ, ಅಸ್ತಿ ವಿವಾದ, ವ್ಯವಹಾರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾ, ರಾಕೇಶ್ ಮಲ್ಲಿ,
ನಿತೇಶ್ ಶೆಟ್ಟಿ, ವೈದ್ಯನಾಥನ್ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 173 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತನಿಖೆ ತೀವ್ರಗೊಳಿಸಿರುವ ರಾಮನಗರ ಪೊಲೀಸರು ಪ್ರಕರಣವನ್ನು ಬೇಧಿಸಲು ಐದು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಪ್ರಕರಣದಲ್ಲಿ ರಿಕ್ಕಿ ರೈ ಮಾಜಿ ಪತ್ನಿ ಹಾಗೂ ಮುತ್ತಪ್ಪ ರೈ ಬಲಗೈ ಬಂಟನಾಗಿದ್ದ ಮಿಥುನ್ ರೈ ಮೇಲೂ ಪೊಲೀಸರಿಗೆ ಅನುಮಾನವಿದ್ದು, ಈ ನಿಟ್ಟಿನಲ್ಲಿ ತನಿಖೆ ತೀವ್ರಗೊಳಿಸಲಾಗಿದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ತಿಳಿಸಿದ್ದಾರೆ.
ಮುತ್ತಪ್ಪ ರೈ ಬೆಂಗಳೂರು, ಗೋವಾ, ಮೈಸೂರು, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ವ್ಯಾಪಕ ಬ್ಯುಸಿನೆಸ್ ಹೊಂದಿದ್ದರು. ಈಗ ಈ ಬ್ಯುಸಿನೆಸ್ ಅನ್ನು ರಿಕ್ಕಿ ರೈ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಾಳಿಯ ಕಾರಣಗಳನ್ನು ಪೊಲೀಸರು ಆಳವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.




