ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸ್ಪೋಟಕ ತಿರುವು

12 months ago

ಬೆಂಗಳೂರು: ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ  ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ರಿಕ್ಕಿ ರೈ ತಮ್ಮ ಮೇಲೆ ಗುಂಡಿನ ದಾಳಿಯಾಗುವಂತೆ ತಂತ್ರ ರೂಪಿಸಿ ತಮ್ಮ ಮಲತಾಯಿ ಹಾಗೂ ಇತರರನ್ನು ಸಿಲುಕಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ತನಿಖೆ  ತೀವ್ರಗೊಳಿಸಿರುವ ಬಿಡದಿ ಪೊಲೀಸರು ರಿಕ್ಕಿ ರೈ ಗನ್ ಮ್ಯಾನ್ ಮನ್ನಪ್ಪ ವಿಠ್ಠಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರಿಕ್ಕಿ ರೈ ಸ್ವಯಂ ದಾಳಿ ಮಾಡಿಸಿಕೊಂಡಿರುವ ಬಲವಾದ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಅವರ ಗನ್ ಮ್ಯಾನ್ ಮನ್ನಪ್ಪ ವಿಠ್ಠಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕತೊಡಗಿದ್ದಾರೆ.

ರಿಕ್ಕಿ ರೈಗೆ ಮೂವರು ಗನ್ ಮ್ಯಾನ್ ಗಳಿದ್ದು, ತನಿಖೆ ವೇಳೆ ಮೂವರು ವಿಭಿನ್ನ ಹೇಳಿಕೆ ನೀಡಿರುವುದರಿಂದ ಗನ್ ಮ್ಯಾನ್ ಗಳ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ.

ಅಷ್ಟೇ ಅಲ್ಲ ಪ್ರಕರಣವನ್ನು ಬೇರೆಡೆ ತಿರುಗಿಸಲು, ಮುತ್ತಪ್ಪ ರೈ ಅವರ 2ನೇ ಪತ್ನಿ ಅನುರಾಧ, ರಾಕೇಶ್ ಮಲ್ಲಿ ಸೇರಿ ನಾಲ್ವರ ವಿರುದ್ಧ ದೂರು ಕೊಟ್ಟಿದ್ದಾರೆ ಎನ್ನುವ ಎಂಬ ಶಂಕೆ ಪೊಲೀಸರಿಗೆ ಮೂಡಿದೆ.

ರಿಕ್ಕಿ ರೈ ಮನೇಲಿಯಲ್ಲಿನ ಗನ್ ಹಾಗೂ ಬುಲೆಟ್ ಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವು ಸಿಕ್ಕಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಸಿಕ್ಕ ಬುಲೆಟ್ ಕಾಟ್ರಿಡ್ಜ್ ಇಟ್ಟುಕೊಂಡು, ಈ ಬುಲೆಟ್ ಅನ್ನು ಯಾವ ಗನ್ ಮೂಲಕ ಹಾರಿಸಿದ್ದಾರೆ ಎಂಬುದನ್ನು ಪರಿಶೀಲನೆ ಮಾಡಿದ್ದಾರೆ.  ಮೇಲ್ನೋಟಕ್ಕೆ ಸಿಂಗಲ್ ಬ್ಯಾರೆಲ್ ಬ್ರೀಚ್ ಲೋಡರ್ ಬಂದೂಕು ಅಥವಾ ಡಬಲ್ ಬ್ಯಾರೆಲ್ ಬ್ರೀಚ್ ಲೋಡರ್ ಬಂದೂಕು ಎಂಬುದು ಪತ್ತೆಯಾಗಿದೆ. ಇದೀಗ ಫೈರಿಂಗ್ ಎಲ್ಲಿಂದ ಮಾಡಿದ್ದರು ಎಂಬ ಕುರಿತು ತನಿಖೆ ಚುರುಕುಗೊಂಡಿದೆ.

ರಸ್ತೆ ಪಕ್ಕದ ಲೇಔಟ್ನ ಕಾಂಪೌಂಡ್ ಒಳಭಾಗದಿಂದ ಫೈರಿಂಗ್ ಆಗಿರಬಹುದು ಅಥವಾ  ಶಾರ್ಪ್ ಶೂಟರ್ ಗಳು, ಕತ್ತಲಲ್ಲಿ ಕಾರಿನ ಹೆಡ್ಲೈಟ್ ಬೆಳಕಿನ ಸಹಾಯದಿಂದ ಕಾರಿನ ಮುಂಭಾಗದ ಡ್ರೈವರ್ ಸೀಟ್ ನತ್ತ ಫೈರ್ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಫೈರ್ ಆಗಿರುವ ಗುಂಡು ಕಾರಿನಿಂದ ಹೊರಗೆ ಹೋಗಿಲ್ಲ. ಹೀಗಾಗಿ ಎಷ್ಟು ದೂರದಿಂದ ಫೈರ್ ಮಾಡಿದ್ದಾರೆ ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ.

ಮತ್ತೊಂದೆಡೆ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣ ಸಂಬಂಧ ಮುತ್ತಪ್ಪ ರೈ ಅವರ ಒಂದು ಕಾಲದ ಆಪ್ತ ರಾಕೇಶ್ ಮಲ್ಲಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ರಾಕೇಶ್ ಮಲ್ಲಿ ಬಿಡದಿ ಠಾಣೆಗೆ ವಕೀಲರ ಜೊತೆ ಆಗಮಿಸಿ ವಿಚಾರಣೆ ಎದುರಿಸಿದ್ದಾರೆ.

ಇತ್ತ ಗುಂಡಿನ ದಾಳಿ ಪ್ರಕರಣದ ಎ-2 ಆಗಿದ್ದ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧಾಗೆ ಇಂದು ಹೈಕೋರ್ಟ್ ರಿಲೀಫ್ ನೀಡಿದೆ. ಅನುರಾಧಾ ಅವರನ್ನು ಪ್ರಕರಣದಿಂದ ಕೈ ಬಿಡುವಂತೆ ಹೈಕೋರ್ಟ್ ಗೆ ಅವರ ಪರ ಅರ್ಜಿ ಸಲ್ಲಿಸಿದ್ದ ವಕೀಲ ವೆಂಕಟೇಶ್ ಅರಬಟ್ಟಿ ವಾದ ಮಂಡಿಸಿದರು.

ಪ್ರಕರಣದಲ್ಲಿ ವಿನಾಕಾರಣ ಅನುರಾಧಾ ಹೆಸರು ತಂದಿದ್ದಾರೆ. ಆಸ್ತಿ ವಿವಾದ 6 ತಿಂಗಳ ಹಿಂದೆಯೇ ಇತ್ಯರ್ಥವಾಗಿದೆ. ಏಪ್ರಿಲ್ 14 ರಂದೇ ಅನುರಾಧಾ ಯುರೋಪ್ ಗೆ ತೆರಳಿದ್ದಾರೆ. ಕೊಲೆ ಯತ್ನ ಕೇಸ್ ಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಅನುರಾಧ ಪರ ವಕೀಲ ವೆಂಕಟೇಶ್ ಅರಬಟ್ಟಿ ವಾದ ಮಂಡಿಸಿದರು. ವಾದ ಆಲಿಸಿದ ಜಡ್ಜ್ ಅನುರಾಧ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ಹೊರಡಿಸಿದೆ. ಇದರಿಂದ ಸದ್ಯಕ್ಕೆ ಅನುರಾಧಾಗೆ ರಿಲೀಫ್ ಸಿಕ್ಕಂತಾಗಿದೆ.

Leave a Reply