ಸ್ಲಂ ಬೋರ್ಡ್‌ ಗೆ ಕಲ್ಯಾಣ ನಿಧಿ ಬಳಕೆ: ರಾಜ್ಯಾದಂತ ಕಟ್ಟಡ ಕಾರ್ಮಿಕರ ಪ್ರತಿಭಟನೆ

4 years ago

ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣವನ್ನು ವಸತಿ ಸಚಿವ ಸೋಮಣ್ಣ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ದುರ್ಬಳಕೆ ಮಾಡಿ ಸ್ಲಂ ಬೋರ್ಡ್ ಫಲಾನುಭವಿಗಳಿಗೆ ನೀಡಿದ್ದಾರೆ. ಇದು ನೈಜ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಗೆದ ದ್ರೋಹವಾಗಿದ್ದು ಕಲ್ಯಾಣ ಮಂಡಳಿಯಿಂದ ಪಡೆಯಲಾದ 76 ಕೋಟಿ ಹಣವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಸಾವಿರಾರು ಕಟ್ಟಡ ಕಾರ್ಮಿಕರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (CITU) ನೇತೃತ್ವದಲ್ಲಿ ಪ್ರತಿಭಟನೆ‌ ನಡೆಸಿದರು

2007 ರಿಂದ ಅಸ್ವಿತ್ವದಲ್ಲಿರುವ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರ ವಸತಿ ನಿರ್ಮಾಣಕ್ಕೆ ಇದುವರೆಗೂ ಒಬ್ಬನೇ ಒಬ್ಬ ಕಟ್ಟಡ ಕಾರ್ಮಿಕನಿಗೂ ಸಹಾಯಧನ ದೊರೆತಿಲ್ಲ. ಆದರೆ ವಿ.ಸೋಮಣ್ಣ ಹಾಗೂ ಶಿವರಾಮ ಹೆಬ್ಬಾರ್ ಜತೆ ಸೇರಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ 76 ಕೋಟಿ ಹಣವನ್ನು ‘ಕೊಳಚೆ ನಿರ್ಮೂಲನಾ ಮಂಡಳಿ’ಯ ‘5129 ಫಲಾನುಭವಿಗಳಿಗೆ’ ಕಬಳಿಸಿ ರಾಜ್ಯದಲ್ಲಿ ವಸತಿಗಾಗಿ ಹಂಬಲಿಸುತ್ತಿರುವ ಲಕ್ಷಾಂತರ ಕಟ್ಟಡ ಕಾರ್ಮಿಕರಿಗೆ ದ್ರೋಹ ಬಗೆದಿದ್ದಾರೆ. ಮಾತ್ರವಲ್ಲ ಬಿಜೆಪಿ ಸರ್ಕಾರದ ವಸತಿ ಯೋಜನೆಗೆ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣ ಬಳಸಲು ಮುಂದಾಗಿದ್ದಾರೆ. ಇದಕ್ಕಾಗಿ ಕಲ್ಯಾಣ ಮಂಡಳಿಯಲ್ಲಿ ರೂಪಿಸಿದ್ದ ಐದು ವರ್ಷ ಕಡ್ಡಾಯ ನೋಂದಣಿ ನಿಯಮಾವಳಿಗಳನ್ನು ತಿದ್ದುಪಡಿ ಮಾಡಲಾಗಿದೆ. ಇದರಿಂದ ರಾಜ್ಯದ ಬಿಜೆಪಿ ಸಚಿವರು, ಶಾಸಕರು ಹಾಗೂ ಇತರೆ ಪಕ್ಷಗಳ ಶಾಸಕರು ತಮ್ಮ ಕ್ಷೇತ್ರಗಳ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳು ಬೇಕಾಬಿಟ್ಟಿ ಕಲ್ಯಾಣ ಮಂಡಳಿ ಹಣ ದೋಚಲು ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ಮುಂದಿನ ತನ್ನ ರಾಜಕೀಯ ನೆಲೆಯನ್ನು ಭದ್ರಪಡಿಸಲು ಶಿವರಾಮ ಹೆಬ್ಬಾರ್ ಮುಂದಾಗಿದ್ದಾರೆ ಎಂದು ನೈಜ‌ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ ನೂರಾರು ಕಾರ್ಮಿಕರು ಕಲ್ಯಾಣ ಮಂಡಳಿಯ ನಿರ್ಧಾರ ವಿರೋಧಿಸಿ ಪ್ರಮುಖ 13 ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸರ್ಕಾರದ‌‌ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್, ರಾಜ್ಯ ಖಜಾಂಚಿ ಲಿಂಗರಾಜ್ ನೇತೃತ್ವದ ನಿಯೋಗ ಭೇಟಿ‌ಮಾಡಿ ವಿವರಿಸಿ‌‌ ಕ್ರಮಕ್ಕೆ ಆಗ್ರಹಿಸಿತು.

ರಾಜ್ಯದ ತುಮಕೂರು, ದ.ಕನ್ನಡ, ಉಡುಪಿ, ಉತ್ತರಕನ್ನಡ,ಕೋಲಾರ, ಮಂಡ್ಯ, ಮೈಸೂರು, ದಾವಣಗೆರೆ, ವಿಜಯನಗರ, ಕಲಬುರಗಿ, ಬಳ್ಳಾರಿ, ಕೊಡಗು ರಾಯಚೂರು, ಗದಗ, ಕೊಪ್ಪಳ ಮೊದಲಾದ ಜಿಲ್ಲೆಗಳಲ್ಲಿರುವ ಉಪ ಕಾರ್ಮಿಕ ಆಯುಕ್ತರು, ಸಹಾಯಕ ಕಾರ್ಮಿಕ‌ ಆಯುಕ್ತರು, ಜಿಲ್ಲಾ ಹಾಗೂ ತಾಲೂಕ ಕಾರ್ಮಿಕ ಕಚೇರಿಗಳ ಎದುರು ನೂರಾರು ಕಾರ್ಮಿಕರು ಪ್ರತಿಭಟನೆಗಳನ್ನು ನಡೆಸಿ ಮನವಿ ಸಲ್ಲಿಸಿದರು.

ಈಗಾಗಲೇ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ ಸಾವಿರಾರು ಕೋಟಿ ಹಣದಲ್ಲಿ ಶಿವರಾಮ ಹೆಬ್ಬಾರ್ ರೇಷನ್ ಕಿಟ್, ಟೂಲ್ ಕಿಟ್, ಆಂಬ್ಯೂಲೆನ್ಸ್, ದುಬಾರಿ ಕಾರು, ತಂತ್ರಾಂಶ ಖರೀದಿ, ಸುರಕ್ಷಾ ಕಿಟ್, ಸುರಕ್ಷಾ ಕಿಟ್ ಮತ್ತು ಬೂಸ್ಟರ್ ಕಿಟ್‌ಗಳನ್ನು ಪಾರದರ್ಶಕತೆ ಕಾಪಾಡದೇ ಖರೀದಿಸಿ ನೂರಾರು ಕೋಟಿ ಭ್ರಷ್ಟಚಾರ ನಡೆಸಿದ್ದಾರೆ. ಇದಕ್ಕಾಗಿ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಕರ್ನಾಟಕ ಖರೀದಿಯಲ್ಲಿನ ಪಾರದರ್ಶಕ ಕಾಯ್ದೆಗಳನ್ನು ಉಲ್ಲಂಘಿಸಿದ್ದಾರೆ. ಇದು ಸುಪ್ರೀಂ ಕೋರ್ಟ್ ನಿರ್ದೇಶನ ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ 2021 ರ ಮಾರ್ಚ ನಲ್ಲಿ ಹೊರಡಿಸಿರುವ ನಿರ್ದೇಶನದ ಸ್ಷಷ್ಟ ಉಲ್ಲಂಘನೆಯಾಗಿದೆ ಈ ಹಿನ್ನಲೆಯಲ್ಲಿ ಹಣ ನಕಲಿ ಫಲಾನುಭವಿಗಳ ಪಾಲಾಗದಂತೆ ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.

ಈ ಬಗ್ಗೆ ಸರ್ಕಾರ ಮತ್ತು ಕಲ್ಯಾಣ ಮಂಡಳಿ ಕ್ರಮವಹಿಸದಿದ್ದಲ್ಲಿ ವಿವಿಧ ಕಾರ್ಮಿಕ ಸಂಘಗಳನ್ನು ಒಳಗೊಂಡು ತೀವ್ರ ಸ್ವರೂಪದ ಹೋರಾಟವನ್ನು ನಡೆಸಲು ನಿರ್ಧರಿಸಲಾಗಿದೆ. ಇಂದಿನ ರಾಜ್ಯವ್ಯಾಪಿ ಹೋರಾಟವನ್ನು ಯಶಸ್ವಿಗೊಳಿಸಿದ ಎಲ್ಲ ಕಟ್ಟಡ ಕಾರ್ಮಿಕರಿಗೂ ರಾಜ್ಯ ಫೆಡರೇಶನ್ ಅಭಿನಂದನೆಗಳನ್ನು ಸಲ್ಲಿಸಿದೆ.

ಹೋರಾಟದ ಪ್ರಮುಖ ಬೇಡಿಕೆಗಳು:

1. ಕೊಳಚೆ ನಿರ್ಮೂಲನೆ ಮಂಡಳಿ ನೀಡಿರುವ 76 ಕೋಟಿ ಹಣ ವಾಪಸ್ಸು ಪಡೆಯಬೇಕು.

2. ಕಲ್ಯಾಣ ಮಂಡಳಿ ಸದಸ್ಯನಾಗಿ ಐದು ವರ್ಷ ಪೂರೈಸಿದ ಸದಸ್ಯರಿಗೆ ಮಾತ್ರವೇ ‘ಮನೆ ನಿರ್ಮಾಣಕ್ಕೆ ಸಾಲ/ಸಹಾಯಧನ/ಮುಂಗಡ ಹಣ ಪಾವತಿ ಮಾಡುವ ಕ್ರಮ ಜಾರಿಗೊಳಿಸಬೇಕು.

3. ‘ಆರೋಗ್ಯ ಸಂಜೀವಿನಿ ೨೦೨೧’ ನಗದುರಹಿತ ಸೇವೆಯನ್ನು ಕೂಡಲೇ ಜಾರಿಗೊಳಿಸಬೇಕು
4. ಬಾಕಿ ಇರುವ 60 ಸಾವಿರ ಶೈಕ್ಷಣಿಕ ಅರ್ಜಿಗಳನ್ನು ಕೂಡಲೇಇತ್ಯರ್ಥಪಡಿಸಬೇಕು. ಮತ್ತು 2022-23 ನೇ ಸಾಲಿನ ಶೈಕ್ಷಣಿಕ ಅರ್ಜಿ ಸ್ವೀಕಾರ ಕೂಡಲೇ ಆರಂಭಿಸಬೇಕು

6.ಆರಂಭಿಸಲಾದ ಹೊಸ ಸಾಫ್ಟ್‌ವೇರ್ ನಲ್ಲಿ ಕಾರ್ಮಿಕ ಸಂಘಟನೆಗಳು ನೀಡುವ “ಉದ್ಯೋಗ ಪ್ರಮಾಣ ಪತ್ರ” ಗಳನ್ನು ಮಾತ್ರ ಪರಿಗಣಿಸಿ ನೋಂದಣಿ ಮಾಡಬೇಕು. ನಕಲಿ ಕಾರ್ಡುಗಳನ್ನು ವ್ಯಾಪಕವಾಗಿ ನಡೆಸುತ್ತಿರುವ ಸಿಎಸ್‌ಸಿ ಸೆಂಟರ್ ಹಾಗೂ ಗ್ರಾಮ ಓನ್ ಕೇಂದ್ರಗಳಲ್ಲಿ ನೋಂದಣಿಗೆ ಇರುವ ಅವಕಾಶವನ್ನು ರದ್ದುಪಡಿಸಬೇಕು.

8. ಕಲ್ಯಾಣ ಮಂಡಳಿಯಲ್ಲಿ ನೈಜ ಕಾರ್ಮಿಕ ಸಂಘಗಳಿಗೆ ಪ್ರಾತಿನಿಧ್ಯ ಸಿಗಬೇಕು

9. ಆರೋಗ್ಯ ತಪಾಸಣೆ ಹಾಗೂ ಕುಶಲತೆ ತರಬೇತಿ ಹೆಸರಿನಲ್ಲಿ ನಡೆದಿರುವ ಕೋಟ್ಯಾಂತರ ಅವ್ಯವಹಾರ ತನಿಖೆಯಾಗಬೇಕು

10. ಅನಿಯಮಿತ ಬಸ್ ಪಾಸ್ ವಿತರಣೆ ನಿಲ್ಲಬೇಕು ಹಾಗೂ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ‌ಬಸ್ ಪಾಸ್ ಬದಲು ನೇರ ಹಣ ಕಾರ್ಮಿಕರ ಖಾತೆಗೆ ನೀಡಬೇಕು

Leave a Reply