ಬೆಂಗಳೂರು: ನನ್ನ ಆರೋಗ್ಯ ಉತ್ತಮವಾಗಿದ್ದು, ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ತಮ್ಮ ಅನಾರೋಗ್ಯದ ಕಾರಣದಿಂದಾಗಿ ಆಡಳಿತ, ವಿಪಕ್ಷ ಮತ್ತು ಸ್ವಪಕ್ಷದ ನಾಯಕರು ತಮ್ಮನ್ನು ಭೇಟಿ ಮಾಡಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಮೂಡಿರುವ ಆತಂಕದಿಂದಾಗಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸ್ವಲ್ಪ ಪ್ರಮಾಣದಲ್ಲಿ ಅನಾರೋಗ್ಯ ಉಂಟಾದ ಕಾರಣಕ್ಕೆ ವೈದ್ಯರು ವಿಶ್ರಾಂತಿಗೆ ಸಲಹೆ ಮಾಡಿದ್ದರು. ಆದಕಾರಣ ಕೆಲ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯಬೇಕಾಯಿತು. ಇನ್ನು ಕೆಲ ದಿನ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ಮಾಡಿದ್ದಾರೆ ಎಂದಿದ್ದಾರೆ.
ಮನೆಯಿಂದಲೇ ನನ್ನೆಲ್ಲಾ ರಾಜಕೀಯ, ಸಂಸದೀಯ ಹಾಗೂ ಪಕ್ಷದ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಲಿದ್ದೇನೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕೆಲವು ದಿನಗಳ ಮಟ್ಟಿಗೆ ನನ್ನ ಭೇಟಿಗೆ ಬರುವುದು ಬೇಡ ಎಂದು ಅಭಿಮಾನಿಗಳು, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಕೆಲ ದಿನಗಳ ನಂತರ ನಾನೇ ಖುದ್ದು ಪಕ್ಷದ ಕಚೇರಿಗೆ ಭೇಟಿ ನೀಡುವುದರ ಜತೆಗೆ, ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿಯಾಗಲಿದ್ದೇನೆ. ಯಾವುದೇ ಕಾರಣಕ್ಕೂ ಮುಖಂಡರು, ಕಾರ್ಯಕರ್ತರು ಅನ್ಯತಾ ಭಾವಿಸಬಾರದು ಎಂದು ಕೋರಿದ್ದಾರೆ.
ಅಲ್ಲದೆ, ನನ್ನ ನಿವಾಸಕ್ಕೆ ಭೇಟಿ ನೀಡಿ ನನ್ನ ಆರೋಗ್ಯ ವಿಚಾರಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಅಶೋಕ್ ಸೇರಿದಂತೆ ಇತರೆ ಎಲ್ಲಾ ಸಚಿವರು, ಮುಖಂಡರಿಗೆ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ.
ಹಾಗೆಯೇ, ನನ್ನ ಆರೋಗ್ಯಕ್ಕಾಗಿ ನಾಡಿನ ದೇವಾಲಯಗಳಲ್ಲಿ ಪೂಜೆ, ಹರಕೆ ಮಾಡಿಕೊಂಡು ಅನ್ನದಾನ ಇತ್ಯಾದಿಗಳನ್ನು ಮಾಡಿದ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರ ಪ್ರೀತಿ ವಿಶ್ವಾಸಕ್ಕೆ ನನ್ನ ಹೃದಯ ತುಂಬಿ ಬಂದಿದೆ. ಅವರೆಲ್ಲರಿಗೂ ನನ್ನ ಶುಭ ಹಾರೈಕೆಗಳು ಎಂದಿದ್ದಾರೆ.




