ಸೋಲಿನ ಭಯ ಮನುಷ್ಯನನ್ನು ಹತಾಶನನ್ನಾಗಿ ಮಾಡುವುದು ಮಾತ್ರವಲ್ಲ ಕ್ರೂರಿಯನ್ನಾಗಿಯೂ ಮಾಡುತ್ತದೆ

4 years ago

ಕಳೆದ 8-9 ವರ್ಷಗಳ ಅವಧಿಯಲ್ಲಿ ಬಿಜೆಪಿಯ ಐಟಿ ಸೆಲ್ ಮತ್ತು ಮೋದಿ ಭಕ್ತರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ಹೆಚ್ಚು ನಿಂದನೆ,ದೂಷಣೆ, ಚಾರಿತ್ರ್ಯಹನನ ಮತ್ತು ಟ್ರೋಲ್ ಗೆ ಒಳಗಾದವರಲ್ಲಿ ಮೊದಲನೆಯವರು ರಾಹುಲ್ ಗಾಂಧಿ, ಎರಡನೆಯವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು.

ರಾಹುಲ್ ಗಾಂಧಿಯವರನ್ನು ಅವಹೇಳನ ಮಾಡುವ ವ್ಯಂಗ್ಯಚಿತ್ರ ಬಿಡಿಸಲು, ಕೆಟ್ಟ ಜೋಕ್ ಗಳನ್ನು ಬರೆಸಲು 50-60 ಮಂದಿಯ ತಂಡವನ್ನೇ ದೆಹಲಿಯ ಅಂಬಾನಿವಾಸ್ ಕಟ್ಟಡದಲ್ಲಿ ಕೂರಿಸಿದ್ದರಂತೆ. ಅದೇ ರೀತಿ ಸಿದ್ದರಾಮಯ್ಯನವರನ್ನು ಹಂಗಿಸಲು, ಅವರ ಪೋಟೊಗಳನ್ನು ಎಡಿಟ್-ಮಾರ್ಪಿಂಗ್ ಮಾಡಿ (ಉದಾಹರಣೆಗೆ ಅವರು ನಿದ್ದೆಯಲ್ಲಿರುವಂತಹ, ಮೂಗುಗಳಿಗೆ ಹತ್ತಿ ಇಟ್ಟು ಮಲಗಿಸಿದ, ಸ್ಕಲ್ ಟೋಪಿ ಹಾಕಿದ ಪೋಟೊಗಳು, ) ಗೇಲಿ ಮಾಡಲು ರಾಜ್ಯದಲ್ಲಿ ಕೂಡಾ ಪೂರ್ಣಪ್ರಮಾಣದ ತಂಡವೇ ಕೆಲಸ ಮಾಡುತ್ತಿತ್ತು.

ಈಗಲೂ ಬಿಜೆಪಿಯ ಟ್ವಿಟರ್ –ಫೇಸ್ ಬುಕ್ ಖಾತೆಗಳಿಗೆ ಹೋದರೆ ನಿದ್ದೆರಾಮಯ್ಯ, ಬುರುಡೆರಾಮಯ್ಯ ಇತ್ಯಾದಿ ಹ್ಯಾಷ್ ಟ್ಯಾಗಗಳನ್ನು ಕಾಣಬಹುದು. ಹೀಗಿದ್ದರೂ ಮುಖ್ಯಮಂತ್ರಿಗಳಾಗಿ ಇದ್ದಾಗಲೂ ಯಾರ ವಿರುದ್ದವೂ ಸಿದ್ದರಾಮಯ್ಯನವರು ಪೊಲೀಸರಿಗೆ ದೂರು ನೀಡಲಿಲ್ಲ. ದಸರಾ ಉತ್ಸವದ ವೇಳೆ ಶೂ ಧರಿಸಿ ಚಾಮುಂಡೇಶ್ವರಿ ಪೂಜೆ ಮಾಡಿದರೆಂದು ಪಬ್ಲಿಕ್ ಟಿವಿಯಲ್ಲಿ ಸುಳ್ಳು ಸುದ್ದಿ ಪ್ರಸಾರವಾದಾಗಲೂ ಆ ಚಾನೆಲ್ ವಿರುದ್ದ ದೂರು ಕೊಡಲಿಲ್ಲ. ಮಾಧ್ಯಮ ಸಲಹೆಗಾರನಾಗಿದ್ದ ನಾನೇ ಹಲವಾರುಬಾರಿ ಸ್ವಲ್ಪ ಎಚ್ಚರಿಕೆ ನೀಡುವುದು ಒಳ್ಳೆಯದು ಎಂದಾಗಲೂ ‘ ಬರ್ಕೊಳ್ಳಿ, ಏನಾದರೂ ಒದರ್ಕೊಳ್ಳಿ ಬಿಟ್ಟುಬಿಡಿ ಎಂದು ಹೇಳುವವರು.

ಒಬ್ಬ ವ್ಯಕ್ತಿ ಸಿದ್ದರಾಮಯ್ಯನವರ ಹೆಸರಲ್ಲಿ ಫೇಕ್ ಟ್ವಿಟರ್ ಖಾತೆ ತೆರೆದು ಏನೇನೋ ಬರೆಯತೊಡಗಿದಾಗ ಮಾತ್ರ ನಾನೇ ಸೈಬರ್ ಠಾಣೆಗೆ ದೂರು ಕೊಟ್ಟಿದ್ದೆ. ಅದರ ವಿಚಾರಣೆಗೆ ನಾನು ಈಗಲೂ ನ್ಯಾಯಾಲಯಕ್ಕೆ ಅಡ್ಡಾಡುತ್ತಿದ್ದೇನೆ. ಇದು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ, ನಾನೂ ಅವರಿಗೆ ಹೇಳಿಲ್ಲ. ನ್ಯಾಯಾಲಯದಲ್ಲಿ ನ್ಯಾಯಾಧೀಶರು ರಾಜಿ ಮಾಡಿಕೊಂಡು ಕ್ಷಮಿಸಿ ಬಿಡ್ತಿರಾ ಎಂದು ಕೇಳಿದಾಗಲೂ ಆಗೋದಿಲ್ಲ ಎಂದಿದ್ದೇನೆ. ಇದೆಲ್ಲ ಬಹಳ ಕಿರಿಕಿರಿಯ ಕೆಲಸ.

ಸಿದ್ದರಾಮಯ್ಯನವರು ಮಗ ರಾಕೇಶ್ ಸಾವಿಗೀಡಾದಾಗ ಇದೇ ಸೋಷಿಯಲ್ ಮೀಡಿಯಾದಲ್ಲಿ ಸಂಘ ಪರಿವಾರದ ಕಿಡಿಗೇಡಿಗಳು ಅವಹೇಳನಕಾರಿಯಾದ ಸಾವಿರಾರು ಬರಹ-ಚಿತ್ರಗಳನ್ನು ಪೋಸ್ಟ್ ಮಾಡಿದರು. ತಡೆಯಲಾಗದೆ ಕೊನೆಗೆ ನಾನೇ ನನ್ನ ಫೇಸ್ ಬುಕ್ ಖಾತೆಯಲ್ಲಿ ‘’ ರಾಕೇಶ್ ಬಗ್ಗೆ ಅವಹೇಳನಕಾರಿಯಾಗಿ ಬರೆದ ಪೋಸ್ಟ್ ಗಳು ಕಂಡರೆ ಸ್ಕ್ರೀನ್ ಶಾಟ್ ಗಳನ್ನು ನನಗೆ ಕಳಿಸಿ ಎಂದು ಪೋಸ್ಟ್ ಹಾಕಿದೆ. ಅದರ ನಂತರ ಸ್ವಲ್ಪ ಕಡಿಮೆಯಾಯಿತು. ಸುಮಾರು 400-500 ಸ್ಕ್ರೀನ್ ಶಾಟ್ ಗಳ ಕಾಪಿ ಈಗಲೂ ನನ್ನಲ್ಲಿವೆ. ಆಗಲೂ ಯಾರ ವಿರುದ್ದವೂ ಪೊಲೀಸರಿಗೆ ದೂರು ನೀಡಿರಲಿಲ್ಲ. ಅದರ ನಂತರ ನನಗೆ ಸ್ಕ್ರೀನ್ ಶಾಟ್ ಮಟ್ಟು ಎಂದು ಟ್ರೋಲ್ ಮಾಡಲು ಶುರು ಮಾಡಿದರು.

ಆದರೆ ಈಗ…

ಮುಖ್ಯಮಂತ್ರಿಗಳ ಬ್ಲರ್ ಆಗಿರುವ ಪೋಟೊ ಹಾಕಿ PayCM ಎಂಬ ಪೋಸ್ಟರ್ ಹಾಕಿದ ಕೂಡಲೇ ಬಸವರಾಜ ಬೊಮ್ಮಾಯಿಯವರು ಕೆಂಡಾಮಂಡಲವಾಗಿದ್ದಾರೆ. ಅವರ ಆದೇಶದ ಮೇರೆಗೆ ನಿನ್ನೆ ಬಿಬಿಎಂಪಿಯ ಅಧಿಕಾರಿಗಳು ಉಳಿದೆಲ್ಲ ಕೆಲಸ ಬಿಟ್ಟು ಪೋಸ್ಟರ್ ಕಿತ್ತುಹಾಕುವ ಕೆಲಸದಲ್ಲಿ ತೊಡಗಿದ್ದರು. ನಗರದ ಇಡೀ ಪೊಲೀಸ್ ಇಲಾಖೆ ಪೋಸ್ಟರ್ ಅಂಟಿಸಿದವರ ಶೋಧ ಕಾರ್ಯಾಚರಣೆಯಲ್ಲಿ ತೊಡಗಿತ್ತು. ರಾತ್ರಿ ಕಾಂಗ್ರೆಸ್ ಪಕ್ಷದ ಐಟಿ ಸೆಲ್ ಕೆಲವರನ್ನು ಬಂಧಿಸಿದ್ದಾರೆ.

ಸೋಲಿನ ಭಯ ಮನುಷ್ಯನನ್ನು ಹತಾಶನನ್ನಾಗಿ ಮಾಡುವುದು ಮಾತ್ರವಲ್ಲ ಕ್ರೂರಿಯನ್ನಾಗಿಯೂ ಮಾಡುತ್ತದೆ.

ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿರುವವರು ಸ್ವಲ್ಪ ಎಚ್ಚರದಿಂದ ಇರಿ, ಪೊಲೀಸರು ಮನೆ ಬಾಗಿಲು ಬಡಿಯಲೂ ಬಹುದು. ಕರ್ನಾಟಕಕ್ಕೂ ಪೂರ್ಣ ಪ್ರಮಾಣದಲ್ಲಿ ಸರ್ವಾಧಿಕಾರಿಯ ಪ್ರವೇಶವಾಗಿದೆ.
– ದಿನೇಶ್ ಅಮಿನ್ ಮಟ್ಟು, ಹಿರಿಯ ಪತ್ರಕರ್ತರು

Leave a Reply