ಎಸ್.ಕೆ ಕರೀಂಖಾನ್ ಮತ್ತು ಅಮೃತಾ ರಕ್ಷಿದಿ ಪ್ರಶಸ್ತಿ

1 year ago

ಜೈಕರ್ನಾಟಕ ಸಂಘ ಬೆಳ್ಳೇಕೆರೆ ಹಾಸನ ಜಿಲ್ಲೆಯ ಮಲೆನಾಡಿನ ಕಾಫಿನಾಡಿನ ಅತಿ ಸಣ್ಣ ಹಳ್ಳಿಯಾದ ಸಕಲೇಶಪುರದ ರಕ್ಷಿದಿಯಲ್ಲಿ ಪೂರ್ಣ ಚಂದ್ರ ತೇಜಸ್ವಿ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಿ ಕಳೆದ ನಲುವತ್ತಾರು ವರ್ಷಗಳಿಂದ ನಿರಂತರವಾಗಿ ರಂಗ ಚಟುವಟಿಕೆಗಳೂ ಸೇರಿದಂತೆ ಕಲೆ, ಸಾಹಿತ್ಯ, ಸಾಕ್ಷರತೆ, ಆರೋಗ್ಯ, ಕೃಷಿ, ಪರಿಸರ ಸಂರಕ್ಷಣೆಯಂತಹ ಕಾಯಕಗಳ ಜೊತೆಗೆ ಜನಪರ ಹೋರಾಟಗಳನ್ನೂ ರೂಪಿಸಿ ಬಹುಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಸಂಸ್ಥೆ.

ಇದೀಗ ಸಕಲೇಶಪುರದ ಹೆಮ್ಮೆಯ ಪುತ್ರ, ಮಹಾನ್ ಮಾನವತಾವಾದಿ, ರಂಗಭೂಮಿ, ಸಾಹಿತ್ಯ, ಜಾನಪದ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆ ಮಾಡಿದ ಎಸ್.ಕೆ ಕರೀಂಖಾನ್ ಅವರ ಹೆಸರಿನಲ್ಲಿ ಒಂದು ಪ್ರಶಸ್ತಿಯನ್ನು ಸ್ಥಾಪಿಸಿ ಕರ್ನಾಟಕದ ಹಿರಿಯ ರಂಗಭೂಮಿ, ಜಾನಪದ ಅಥವಾ ಸಾಹಿತ್ಯದ ಜನಪರ ಸಾಧಕರೊಬ್ಬರಿಗೆ  ಅದನ್ನು ನೀಡಿ ಗೌರವಿಸಿವ ಉದ್ದೇಶವನ್ನು ಹೊಂದಲಾಗಿದೆ.

ಇದರೊಂದಿಗೆ ಸಣ್ಣ ವಯಸ್ಸಿನಲ್ಲಿಯೇ ಅಪಾರ ಪ್ರತಿಭೆ ಹಾಗೂ ಜನಪರ ಕಾಳಜಿಯನ್ನು ತೋರಿ ಬಹುಬೇಗ ನಮ್ಮನ್ನು ಅಗಲಿದ ‘ಅಮೃತಾ ರಕ್ಷಿದಿ’ ಹೆಸರಿನಲ್ಲಿ ಕನ್ನಡದ ಇಬ್ಬರು ಯುವ ಪ್ರತಿಭೆಗಳಿಗೆ ಪುರಸ್ಕಾರ ನೀಡುವ ಕಾರ್ಯಕ್ರಮವೂ ಇದೆ. ಇವೆಲ್ಲವೂ ರಾಜ್ಯವ್ಯಾಪ್ತಿಯ ವಾರ್ಷಿಕ ಪ್ರಶಸ್ತಿಗಳಾಗಿರುತ್ತವೆ.

ಈ ಕಾರ್ಯಕ್ರಮದಲ್ಲಿ ಜೈ ಕರ್ನಾಟಕ ಸಂಘ ಬೆಳ್ಳೇಕೆರೆ, ಎಸ್.ಕೆ.ಕರೀಂಖಾನ್ ಹಾಗೂ ಸಕಲೇಶಪುರ ತಾಲ್ಲೂಕಿನವರೇ ಆದ ಕವಿ ಸುಬ್ಬು ಹೊಲೆಯಾರ್ ಕುಟುಂಬ ವರ್ಗದವರು, ಅಮೃತಾ ರಕ್ಷಿದಿ ಪೋಷಕರು, ಅಲ್ಲದೆ ಹಲವಾರು ಜನ ಸಮಾನ ಮನಸ್ಕ ಸಹೃದಯರು ಕೈ ಜೋಡಿಸಿದ್ದಾರೆ.

ಈ ವರ್ಷದ ಪ್ರಶಸ್ತಿಗಳ ಆಯ್ಕೆಗಾಗಿ ಇವರೆಲ್ಲರ ಮನವಿಯ ಮೇರೆಗೆ ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಡಾ. ಹಿ.ಚಿ.ಬೋರಲಿಂಗಯ್ಯ,  ಹಿರಿಯ ಕವಿ ಪತ್ರಕರ್ತರಾದ ಚ.ಹ. ರಘುನಾಥ್, ರಂಗ ತಜ್ಞ, ಪರಿಸರವಾದಿ ನೇಗಿಲಯೋಗಿ ಟ್ರಸ್ಟ್ ನ ಸ್ಥಾಪಕ ಡಾ.ಹೆಚ್.ಆರ್. ಸ್ವಾಮಿ ಅವರನ್ನೊಳಗೊಂಡ ಸಮಿತಿಯು ಈ ಮೂವರನ್ನು ಆಯ್ಕೆ ಮಾಡಿದೆ.

“ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿ” ಗೆ ಹರಪನಹಳ್ಳಿಯ ಬಿ.ಪರಶುರಾಮ್ ಅವರು ಪಾತ್ರರಾಗಿದ್ದಾರೆ. 1956 ರಲ್ಲಿ  ರೈತ ಕುಟುಂಬವೊಂದರಲ್ಲಿ ಜನಿಸಿದ ಬಿ.ಪರಶುರಾಮ್ ಅವರು ಹದಿಹರೆಯದಲ್ಲೇ ಜನಪರ ಹೋರಾಟಗಳನ್ನು ಮೈಗೂಡಿಸಿಕೊಂಡವರು. ಜೊತೆಯಲ್ಲಿ  ರಂಗಭೂಮಿಯಲ್ಲಿಯೂ ತೊಡಗಿಕೊಂಡ ಇವರು ಸಮುದಾಯ ಜಾಥಾಗಳಲ್ಲಿಯೂ ಭಾಗಿಯಾದವರು. ಮೂಡಲಪಾಯ ಯಕ್ಷಗಾನ, ಹಾಗೂ ಆಧುನಿಕ ರಂಗ ಭೂಮಿ ಎರಡರಲ್ಲಿಯೂ ಸಾಧನೆ ಮಾಡಿರುವ ಪರಶುರಾಮ್, ಎರಡೂ ಪ್ರಕಾರಗಳಲ್ಲಿ ನಟನಾಗಿ, ನಿರ್ದೇಶಕನಾಗಿ ಹೆಸರಾದವರು. ಹರಪನ ಹಳ್ಳಿಯಲ್ಲಿ ‘ಸಮಸ್ತರು’ ಎಂಬ  ಸಾಂಸ್ಕೃತಿಕ ಸಂಘಟನೆಯನ್ನು ಕಟ್ಟಿ ನಿರಂತರವಾಗಿ ರಂಗ ಕಾಯಕವನ್ನು ಮುಮದುವರೆಸಿರುವ ಬಿ.ಪರಶುರಾಮ್ ಅವರಿಗೆ ಈಗಾಗಲೇ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಇದೀಗ ಇವರಿಗೆ ಎಸ್.ಕೆ.ಕರೀಂಖಾನ್ ಸೌಹಾರ್ದ ಪ್ರಶಸ್ತಿಯ ಗೌರವ.

“ಅಮೃತಯಾನ” ಎಂಬ ಆತ್ಮಕಥಾ ಸರಣಿಯ ಮೂಲಕ ನಾಡಿನ ಗಮನ ಸೆಳೆದ, ಜೊತೆಗೆ ಚಿತ್ರಕಲಾವಿದೆಯಾಗಿ, ರಂಗ ಕರ್ಮಿಯಾಗಿ, ಸಾಮಾಜಿಕ ಚಿಂತಕಿಯೂ ಆಗಿ ಸಣ್ಣ ವಯಸ್ಸಿನಲ್ಲಿಯೇ ಬಹುಮುಖ ಪ್ರತಿಭೆಯನ್ನು ತೋರಿ ಬಹುಬೇಗ ನಮ್ಮನ್ನಗಲಿದೆ ಅಮೃತಾ ರಕ್ಷಿದಿ ನೆನಪಿನಲ್ಲಿ ನೀಡುವ ‘ಅಮೃತ ಕಾವ್ಯ ಪ್ರಶಸ್ತಿ’ ಗಾಗಿ ಇಬ್ಬರು ಯುವ ಪ್ರತಿಭಾವಂತರನ್ನು ಆಯ್ಕೆ ಮಾಡಲಾಗಿದೆ.

ಮೊದಲನೆಯವರು, ಸಂಘಮಿತ್ರೆ ನಾಗರಘಟ್ಟ. ತುಮಕೂರು ಜಿಲ್ಲೆಯ ತಿಪಟೂರಿನವರು. 1998 ರಲ್ಲಿ ಜನಿಸಿದ ಸಂಘಮಿತ್ರೆ ಈಗಾಗಲೇ “ಬೆನ್ನಿಗೆಲ್ಲಿಯ ಕಣ್ಣು” ಎಂಬ ತಮ್ಮ ಕವನ ಸಂಕಲನದಿಂದ ಗಮನ ಸೆಳೆದಿದ್ದಾರೆ. ರೇಖಾಚಿತ್ರ ಹಾಗೂ ಡಿಜಿಟಲ್ ಚಿತ್ರ ಕಲಾವಿದೆಯಾಗಿಯೂ ಇವರು ಪರಿಚಿತರು. ಇವರ ರೇಖಾಚಿತ್ರಗಳು ಪ್ರಜಾವಾಣಿ, ಆಂದೋಲನ ಸೇರಿದಂತೆ ನಾಡಿನ ಅನೇಕ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ಹಲವಾರು ಕವಿ, ಸಾಹಿತಿಗಳ ಪುಸ್ತಕಗಳಿಗೆ ಮೆರುಗು ನೀಡಿವೆ. “ಹಿಮಪಕ್ಷಿ” ಎಂಬ  ಅಂತರ್ಜಾಲ ಪತ್ರಿಕೆಯ ಸಂಪಾದಕಿಯೂ ಆಗಿರುವ ಇವರು ಪ್ರಸ್ತುತ ಇಂಗ್ಲಿಷ್ ಅಧ್ಯಾಪಕಿಯಾಗಿ ಮೈಸೂರಿನಲ್ಲಿ ನೆಲೆಸಿದ್ದಾರೆ.

ಇನ್ನೊಬ್ಬರು, ವಿಜಯ ನಗರ ಜಿಲ್ಲೆಯ ಹೊಸಪೇಟೆಯವರಾದ ವಿಶಾಲ್ ಮ್ಯಾಸರ್. ಇದೀಗ ತಾನೇ ವಿಜ್ಞಾನ ಪದವಿ ಪೂರ್ಣಗೊಳಿಸಿರುವ ಯುವಕ. 2003 ರಲ್ಲಿ ಜನಿಸಿದ ವಿಶಾಲ್ “ಬಟ್ಟೆಗಂಟಿದ ಬೆಂಕಿ” ಎಂಬ ಕವನ ಸಂಕಲವನ್ನು ಪ್ರಕಟಿಸಿದ್ದು, ‘ಗಾಜಾ ಪಟ್ಟಿ ಮತ್ತು ಪ್ರಭುದೇವರ ಕನಸು” ಎಂಬ ಎರಡನೆಯ ಸಂಕಲನ ಪ್ರಕಟನೆಗೆ ಸಿದ್ಧವಾಗಿದೆ. ಚೈನಾದಲ್ಲಿ ನಡೆದ ಬ್ರಿಕ್ಸ್ ರಾಷ್ಟ್ರಗಳ ಯುವ ಸಮ್ಮೇಳನದಲ್ಲಿ ಕರ್ನಾಟಕದ  ಪ್ರತಿನಿಧಿಯಾಗಿಯೂ ಇವರು ಭಾಗವಹಿಸಿದ್ದಾರೆ. ಇವರ ಮೊದಲ ರಂಗಕೃತಿ “ಹೂ ಆ್ಯಮ್ ಐ” ರಂಗ ಪ್ರದರ್ಶನಕ್ಕೆ ಸಿದ್ಧವಾಗಿದ್ದು. ಇತ್ತೀಚೆಗೆ ಧಾರವಾಡದಲ್ಲಿ ಡಾ.ಸಹನಾ ಪಿಂಜಾರ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿದೆ.

ಇದೇ ಮಾರ್ಚ್ ತಿಂಗಳ ಎಂಟನೇ ತಾರೀಖಿನಂದು ಗುರುವಾರ ಸಂಜೆ  ರಕ್ಷಿದಿಯ ಪೂರ್ಣ ಚಂದ್ರ ತೇಜಸ್ವಿ ರಂಗ ಮಂದಿರದಲ್ಲಿ  ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಜೊತೆಗೆ ಲಂಕೇಶ್ ಜನ್ಮದಿನಾಚರಣೆ, ಮಹಿಳಾ ದಿನಾಚರಣೆ  ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು.

– ಪ್ರಸಾದ್ ರಕ್ಷಿದಿ

Leave a Reply