ಸರ್ಕಾರಿ ಸಂಸ್ಥೆಗಳನ್ನು ಮಾರುತ್ತಿರುವುದೇ ಬಿಜೆಪಿ ಕೊಡುಗೆಯೇ?: ಸಿದ್ದರಾಮಯ್ಯ

5 years ago

ಬೆಂಗಳೂರು: ಗರೀಬಿ ಹಠಾವೋ ಘೋಷಣೆ ಮಾಡಿದ್ದು ಇಂದಿರಾಗಾಂಧಿ, ಕಾರ್ಖಾನೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿ ಮಾಡಿದವರು ನೆಹರು, ದೂರಸಂಪರ್ಕ ಅಭಿವೃದ್ಧಿ ಮಾಡಿದವರು ರಾಜೀವ್ ಗಾಂಧಿ, ದೇಶಕ್ಕೆ ಬಿಜೆಪಿಯ ಕೊಡುಗೆ ಏನು? ಸರ್ಕಾರಿ ಸಂಸ್ಥೆಗಳನ್ನು ಮಾರುತ್ತಿರೋದೇ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದ ವತಿಯಿಂದ ಬೆಂಗಳೂರಿನ ಪದ್ಮನಾಭ ನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ದಿನಸಿ ಕಿಟ್ ಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ಬಡವರಿಗೆ ಅಕ್ಕಿ, ಮಕ್ಕಳಿಗೆ ಹಾಲು, ರೈತರ ಸಾಲಮನ್ನಾ, ಇಂದಿರಾ ಕ್ಯಾಂಟೀನ್ ಮಾಡಿದೆವು. ಇಷ್ಟೆಲ್ಲ ಕೊಟ್ಟರೂ ನಮ್ಮನ್ನು ಯಾಕೆ ಸೋಲಿಸಿದಿರಿ? ಎಂದು ಪ್ರಶ್ನಿಸಿದರು.

ಜನರಿಗಾಗಿ ಕೆಲಸ‌‌ ಮಾಡಿದವರನ್ನು ಗೆಲ್ಲಿಸಬೇಕು, ಮಾಡದವರನ್ನು ಸೋಲಿಸಬೇಕಲ್ಲವೇ? ಆರ್.ಅಶೋಕ ಸಚಿವರಾಗಿ, ಶಾಸಕರಾಗಿ ಕ್ಷೇತ್ರಕ್ಕೆ ಏನಾದರೂ ಕೆಲಸ ಮಾಡಿದ್ದಾರಾ? ಇಲ್ಲಿನ ಕೊರೊನಾ ಸಾವಿಗೆ ಅವರೇ ಹೊಣೆಯಲ್ಲವೇ? ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ. ಅಪ್ಪ ಹಾಕಿದ ಆಲದ ಮರ ಎಂದು ನೇಣು ಹಾಕಿಕೊಳ್ಳೋಕೆ ಆಗುತ್ತಾ? ಹಾಗಾಗಿ ಮುಂದಿನ ಚುನಾವಣೆಯಲ್ಲಿ ಆರ್. ಅಶೋಕ್ ಅವರನ್ನು ಸೋಲಿಸಿ, ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಪದ್ಮನಾಭ ನಗರ ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು.

Leave a Reply