ಚಕ್ರತೀರ್ಥ ಎಂಬ ಬುದ್ದಿಗೇಡಿಯ ಅಧ್ಯಕ್ಷತೆಯ ಸಮಿತಿಯೇ ಅಕ್ರಮ: ಸಿದ್ದರಾಮಯ್ಯ

4 years ago

ಬೆಂಗಳೂರು: ಪರಿಷ್ಕೃತ ಪಠ್ಯಗಳಲ್ಲಿನ ಕೆಲವು ತಪ್ಪುಗಳನ್ನು ಸರಿಪಡಿಸಿ ಕಳೆದುಹೋದ ಮಾನ ಕಾಪಾಡುವ ವ್ಯರ್ಥ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿದೆ. ಹಾಕಿರುವ ತೇಪೆಗಳಿಗಿಂತ ಉಳಿದಿರುವ ತೂತುಗಳೇ ಹೆಚ್ಚಾಗಿವೆ. ಹೊಸ ಪಠ್ಯವನ್ನು ರದ್ದುಪಡಿಸಿ ಹಳೆಯ ಪಠ್ಯವನ್ನೇ ಮುಂದುವರಿಸುವುದೊಂದೇ ಈಗಿನ ಪರಿಹಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕುವೆಂಪು, ಅಂಬೇಡ್ಕರ್, ನಾರಾಯಣ ಗುರು, ಭಗತ್ ಸಿಂಗ್, ಪಿ.ಲಂಕೇಶ್, ಸಾರಾ ಅಬೂಬಕ್ಕರ್, ಅರವಿಂದ ಮಾಲಗತ್ತಿ, ಮೂಡ್ನಾಕೂಡು ಚಿನ್ನಸ್ವಾಮಿ, ದು.ಸರಸ್ವತಿ ಮೊದಲಾದವರ ಪಠ್ಯವನ್ನು ಕೈಬಿಟ್ಟ ಅಥವಾ ತಿರುಚಿದ ಆರೋಪದಡಿ ಜೂನ್ 18ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಪರಿಷ್ಕರಣೆ ಕುರಿತು ತಿದ್ದೋಲೆಯನ್ನು ಪ್ರಕಟಿಸಲು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ,  ಪರಿಷ್ಕೃತ ಪಠ್ಯಕ್ಕೆ ವಿರೋಧ ವ್ಯಕ್ತವಾದ ನಂತರ ರಾಜ್ಯ ಸರ್ಕಾರ ದಿನಕ್ಕೊಂದು ಹೇಳಿಕೆ ನೀಡಿ ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪಠ್ಯ ಪರಿಷ್ಕರಣೆಗೆ ರಚನೆಗೊಂಡ ಸಮಿತಿಯನ್ನೇ ರದ್ದುಗೊಳಿಸಿದ ನಂತರ ಅದರ ಶಿಫಾರಸಿನ ಪಠ್ಯ ಕೂಡಾ ರದ್ದಿಗೆ ಸೇರಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರದ ಆದೇಶ ಇಲ್ಲದೆ ರಚನೆಗೊಂಡ ರೋಹಿತ ಚಕ್ರತೀರ್ಥ ಎಂಬ ಬುದ್ದಿಗೇಡಿಯ ಅಧ್ಯಕ್ಷತೆಯ ಸಮಿತಿಯೇ ಅಕ್ರಮವಾಗಿರುವಾಗ, ಆ ಸಮಿತಿ ಪರಿಷ್ಕರಿಸಿರುವ ಪಠ್ಯ ಹೇಗೆ ಕ್ರಮಬದ್ಧವಾಗಲು ಸಾಧ್ಯ? ಎಂದಿದ್ದಾರೆ.

ಪರಿಷ್ಕೃತ ಪಠ್ಯದಲ್ಲಿರುವುದು ಬೆರಳೆಣಿಕೆಯ ತಪ್ಪುಗಳಲ್ಲ, ಅದರ ಪುಟ-ಪುಟಗಳಲ್ಲಿಯೂ ತಪ್ಪುಗಳಿರುವುದನ್ನು ನಾಡಿನ ಅನೇಕ ಶಿಕ್ಷಣ ತಜ್ಞರು ವಿವರವಾಗಿ ಪಟ್ಟಿಮಾಡಿ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಹೀಗಿದ್ದರೂ ದೋಷಪೂರ್ಣ ಪಠ್ಯವನ್ನು ಸಮರ್ಥಿಸಲು ಹೊರಟಿರುವುದು ರಾಜ್ಯ ಸರ್ಕಾರದ ಉದ್ದಟತನವನ್ನಷ್ಟೇ ತೋರಿಸುತ್ತದೆ ಎಂದಿದ್ದಾರೆ.

ಪರಿಷ್ಕೃತ ಪಠ್ಯಪುಸ್ತಕದ ಬಗೆಗಿನ ವಿವಾದವನ್ನು ರಾಜ್ಯ ಸರ್ಕಾರ ಪ್ರತಿಷ್ಠೆಯಾಗಿ ಸ್ವೀಕರಿಸದೆ ನಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು. ವಿವಾದವನ್ನು ಬೆಳೆಸದೆ ಹೊಸಪಠ್ಯವನ್ನು ವಾಪಸು ಪಡೆದು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹಳೆಯ ಪಠ್ಯವನ್ನು ಬೋಧಿಸಲು ಆದೇಶ ನೀಡುವುದೊಂದೇ ಪರಿಹಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

Leave a Reply