ನದಿ ಜೋಡಣೆ ಯೋಜನೆ ಘೋಷಣೆ ಒಕ್ಕೂಟ

4 years ago

ನದಿ ಜೋಡಣೆ ಯೋಜನೆ ಘೋಷಣೆ ಒಕ್ಕೂಟ ವ್ಯವಸ್ಥೆಗೆ ದ್ರೋಹ: ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕವೂ ಸೇರಿದಂತೆ ರಾಜ್ಯ ಸರ್ಕಾರಗಳ ಜೊತೆ ಚರ್ಚೆ ನಡೆಸದೆ, ರಾಜ್ಯದ ಜನರ ಅಭಿಪ್ರಾಯ ಪಡೆಯದೆ ನದಿ ಜೋಡಣೆ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿರುವುದು ಒಕ್ಕೂಟ ವ್ಯವಸ್ಥೆಗೆ ಮಾಡಿರುವ ದ್ರೋಹ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಕ್ಷಿಣದ ನದಿಗಳ ಜೋಡನೆಗೆ ರೂ. 46,000 ಕೋಟಿ ಅನುದಾನದ ಭರವಸೆ ನೀಡಿದ್ದಾರೆ. ಸಚಿವರ ತಮಿಳುನಾಡಿನವರಾಗಿದ್ದ ಕಾರಣಕ್ಕೆ ಈ ಯೋಜನೆ ಪ್ರಸ್ತಾಪ ಮಾಡಿರಬಹುದು. ಇದರಿಂದ ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದರು‌

ಕೃಷ್ಣ, ಗೋಧಾವರಿ, ಪೆನ್ನಾರ್ ಮತ್ತು ಕಾವೇರಿ ನದಿಗಳ ಜೋಡಣೆ ಬಗ್ಗೆ ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ ಯಲ್ಲಿ ಚರ್ಚಿಸಲಾಗಿದೆ, ಯೋಜನೆಯಿಂದ 347 ಟಿ.ಎಂ.ಸಿ ನೀರು ಸಿಗಲಿದ್ದು, ದಕ್ಷಿಣದ ರಾಜ್ಯಗಳಿಗೆ ಹಂಚಿಕೆ ಮಾಡುವ ಯೋಜನೆ ಇದಾಗಿದೆ ಎಂದರು.

ರಾಜಸ್ಥಾನ ಬಿಟ್ಟರೆ ದೇಶದಲ್ಲಿ ಹೆಚ್ಚು ಒಣ ಭೂಮಿ ಇರುವುದು ಕರ್ನಾಟಕದಲ್ಲಿ. ಶೇ. 70 ಕೃಷಿ ಭೂಮಿ ಮಳೆ ಆಶ್ರಿತ ಪ್ರದೇಶವಾಗಿದೆ. ನದಿಗಳ ಜೋಡಣೆಯಿಂದ ಹೆಚ್ಚು ನೀರು ತಮಿಳುನಾಡಿಗೆ ಹೋಗುತ್ತೆ. ಹೀಗಿದ್ದಾಗ ನಾವೇಕೆ ಈ ಯೋಜನೆಯನ್ನು ಒಪ್ಪಬೇಕು? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ತಕ್ಷಣ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸರ್ವಪಕ್ಷಗಳ ಸಭೆ ಕರೆದು ನದಿಜೋಡಣೆ ಬಗ್ಗೆ ಚರ್ಚೆ ನಡೆಸಬೇಕು. ನದಿಯಲ್ಲಿರುವ ನೀರಿನ ಲಭ್ಯತೆ ಮತ್ತು ಅದರಲ್ಲಿ ರಾಜ್ಯಗಳ ಪಾಲಿನ ಬಗ್ಗೆ ಮಾಹಿತಿ ಸಂಗ್ರಹಿಸಿ ರಾಜ್ಯಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.

1978 ರಲ್ಲಿ ಮೊರಾರ್ಜಿ ದೇಸಾಯಿ, ನಂತರ ಪ್ರಧಾನಿ ಎ.ಬಿ.ವಾಜಪೇಯಿ ಅವರು ನದಿ ಜೋಡಣೆ ಯೋಜನೆಯ ಪ್ರಸ್ತಾಪ ಮಾಡಿದ್ದರು. ಗಂಗಾ ನದಿ ಹಿಮಾಲಯದಲ್ಲಿ ಹುಟ್ಟುವ ಕಾರಣಕ್ಕೆ ವರ್ಷವಿಡೀ ತುಂಬಿ ಹರಿಯುವುದರಿಂದ ನಮ್ಮ ರಾಜ್ಯಕ್ಕೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು, ಅದು ಹುಸಿಯಾಗಿದೆ. ವಾಜಪೇಯಿ ಅವರು ಗಂಗಾ – ಕಾವೇರಿ ನದಿ ಜೋಡಣೆ ಯೋಜನೆಯನ್ನು ಪ್ರಸ್ತಾಪ ಮಾಡಿದರಾದರೂ ಆ ಬಗ್ಗೆ ಕ್ರಮ ಕೈಗೊಂಡಿಲ್ಲ. ಈಗಿನ ಬಿಜೆಪಿ ಸರ್ಕಾರ ಮತ್ತೆ ನದಿ ಜೋಡಣೆ ಪ್ರಸ್ತಾಪ ಮಾಡಿದೆ. ಇದರ ಸಾಧಕ ಬಾಧಕಗಳ ಬಗ್ಗೆ ರಾಜ್ಯದ ಜನರಿಗೆ ಮೊದಲು ಮಾಹಿತಿ ನೀಡಲಿ ಎಂದು ಸವಾಲೆಸೆದರು.

ಬಜೆಟ್ ಮಂಡಿಸಿ ಮೂರು ದಿನಗಳಾದರೂ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿರುವ ನದಿ ಜೋಡಣೆ ಪ್ರಸ್ತಾಪಕ್ಕೆ ಯಾವೊಬ್ಬ ಸಂಸದ, ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಮಾತನಾಡಿಲ್ಲ. ಇವರು ರಾಜ್ಯದ ಹಿತರಕ್ಷಣೆ ಮಾಡುತ್ತಾರ? ಎಂದು ಪ್ರಶ್ನಿಸಿದರು.

ಕರ್ನಾಟಕವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನದಿ ಜೋಡಣೆ ಯೋಜನೆ ಘೋಷಣೆ ಮಾಡಿರುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಹಾಗಾಗಿ ರಾಜ್ಯ ಸರ್ಕಾರ ತಕ್ಷಣ ಸರ್ವಪಕ್ಷ ಸಭೆ ಕರೆದು, ಚರ್ಚಿಸಿ, ಒಮ್ಮತದ ವಿರೋಧವನ್ನು ಕೇಂದ್ರಕ್ಕೆ ತಿಳಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದರೆ ಮೇಕೆದಾಟು ಯೋಜನೆಗೆ ಮೊದಲು ಪರಿಸರ ಅನುಮತಿ ಪತ್ರ ಕೊಡಿಸಲಿ. ದಕ್ಷಿಣದ ನದಿಗಳ ಜೋಡಣೆ ಆ ಮೇಲೆ ನೋಡೋಣ ಎಂದರು.

ತಮ್ಮ ಧರ್ಮಗಳಿಗೆ ಅನುಗುಣವಾಗಿ ವಸ್ತ್ರಧಾರಣೆ ಮಾಡುವ ಹಕ್ಕನ್ನು ದೇಶದ ಸಂವಿಧಾನ ನೀಡಿದೆ. ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸುವ ಯಾವ ಕಾನೂನು ಕೂಡಾ ಇಲ್ಲ. ಹೀಗಿರುವಾಗ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ನಿರಾಕರಿಸುವುದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಹೇಳಿದರು.

Leave a Reply