ಸರ್ಕಾರಿ ಶಾಲೆ ಪಕ್ಕದ ಮುಖ್ಯ ರಸ್ತೆ ಬದಿ ಬಾರ್ ಹಾಗೂ ದಾಬಾಗಳ ಕಸದ ತಾಂಡವ

4 years ago

ಸಾವಳಗಿ: ಸರ್ಕಾರ ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚುಮಾಡಿ ಭಾರತದ ಗಣ್ಯಾತಿಗಣ್ಯರ ಮುಖಾಂತರ ನಾನಾ ರೀತಿಯ ಪ್ರಚಾರಗಳನ್ನು ಮಾಡಿಸಿ ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜನ ಜಾಗೃತಿ ಕಾರ್ಯಕ್ರಮ ಮೂಡಿಸಿದೆ. ಆದರೆ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಎಚ್ಚೆತ್ತುಕೊಳ್ಳದೆ ರಸ್ತೆ ಬದಿಯಲ್ಲಿ ಕಸ ಚಲ್ಲುವ ಚಾಳು ಇನ್ನೂ ನಿಂತಿಲ್ಲ. ಇದನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೋಡಿಯೂ ನೋಡದಂತೆ ಹೋಗುತ್ತಿರುವುದು ವಿಪರ್ಯಾಸದ ಸಂಗತಿ.

ಸಾವಳಗಿ – ತುಂಗಳ ರಸ್ತೆಗಳಿಗೆ ಹೊಂದಿಕೊಂಡಿರುವ ಬಾರ್ ಗಳನ್ನು ಸ್ಥಳಾಂತರಿಸುವಂತೆ ಅನೇಕ ವರ್ಷಗಳ ಬೇಡಿಕೆ ಇದೆ. ಶಾಲಾ ಮಕ್ಕಳು ಹಾಗೂ ಮಹಿಳೆಯರು ಈ ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಇಲ್ಲ. ಸಂಜೆಯಾದರೆ ಯಾವ ಮಹಿಳೆಯರು ಓಡಾಡುವ ವಾತಾವರಣ ಇರುವದಿಲ್ಲ. ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುತ್ತಾರೆ. ಅವಾಚ್ಯ ಶಬ್ದಗಳಿಂದ ಬೈದಾಡುತ್ತಾರೆ. ಇದರಿಂದ ಮುಜುಗರಕ್ಕೆ ಒಳಗಾಗಿ ಯಾವ ಮಹಿಳೆಯರು ಈ ಕಡೆ ಸಂಚರಿಸುವದಿಲ್ಲ. ಆದರೆ ಯಾವ ಒಬ್ಬ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದರ ಬಗ್ಗೆ ಧ್ವನಿ ಎತ್ತದೇ ಇರುವದು ದುರಷ್ಟಕರವಾದ ಸಂಗತಿ.

ನಗರದ ಸಾವಳಗಿ-ತುಂಗಳ ಜಿಲ್ಲಾ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಕಂಪೌಂಡ್ ಪಕ್ಕದಲ್ಲಿ ಬಾರ್ ಗಳು ಹಾಗೂ ದಾಬಾಗಳು ಕಸ ಚೆಲ್ಲುತ್ತಿದ್ದು, ಮದ್ಯ ಸೇವನೆ ಮಾಡಿದ ಖಾಲಿ ಬಾಟಲ್ ಗಳು ಹಾಗೂ ಪ್ಯಾಕೆಟ್ ಗಳ ರಾಶಿಯೇ ಎದ್ದು ಕಾಣುತ್ತಿದೆ. ಇದು ಶಾಲಾ ಮಕ್ಕಳ ಮೇಲೆ ದುಷ್ಫರಿಣಾಮ ಬೀರುತ್ತದೆ ಎಂಬ ಪರಿಜ್ಞಾನವೂ ಇವರಿಗೆ ಇಲ್ಲವಾಗಿದೆ. ಯಾಕೆಂದರೆ ಈ ಶಾಲೆಗೆ ಬರುವ ಮಕ್ಕಳು ಬಡ ಸಮುದಾಯಗಳಿಗೆ ಸೇರಿದವರು. ಶಾಲಾ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳದವರು ಇದರ ಬಗ್ಗೆ ಹೇಗೆ ವಿಚಾರಿಸುತ್ತಾರೆ ಎನ್ನುವದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಇನ್ನು ಕಸ ತಿನ್ನಲು ಏಕಾಏಕಿ ರಸ್ತೆ ಮೇಲೆ ಓಡುವ ಪ್ರಾಣಿಗಳು ಅಪಘಾತಕ್ಕೆ ಸಿಲುಕುತ್ತಿವೆ. ಇದರಿಂದ ಸಾವು ನೋವು ಸಂಭವಿಸಬಹುದು.

ಇನ್ನೂ ಈ ರಸ್ತೆಯಲ್ಲಿ ಊರಿನ ಪ್ರಮುಖರು, ಸ್ಥಳೀಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ದಿನನಿತ್ಯ ಸಂಚರಿಸುತ್ತಾರೆ. ಆದರೆ ನೋಡಿ ನೋಡದಂತೆ ಸುಮ್ಮನೆ ಹೋಗುತ್ತಾರೆ. ಇನ್ನೂ ಕೆಲವರಂತು ನಮ್ಮ ಗಮನಕ್ಕೆ ಬಂದಿರುವದಿಲ್ಲ ಎನ್ನುವ ರೀತಿಯಲ್ಲಿ ಇದ್ದಾರೆ. ಸರ್ಕಾರ ಜಿಲ್ಲಾ ಪಂಚಾಯತಿ ವತಿಯಿಂದ ಕಸ ವಿಲೇವಾರಿಗೆ ವಾಹನ ನೀಡಿ 5-6 ತಿಂಗಳಾಯಿತು. ಇನ್ನೂ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮದ ಪ್ರತಿಯೊಂದು ಮನೆಗೆ ಹಾಗೂ ಅಂಗಡಿಗಳಿಗೆ ಹಸಿ ಕಸ ಹಾಗೂ ಒಣ ಕಸ ಸಂಗ್ರಹಿಸಲು ಪ್ರತ್ಯೇಕ ಎರಡು ಡಬ್ಬಗಳನ್ನು ನೀಡಿ 2-3 ವರ್ಷಗಳೇ ಕಳೆದು ಹೋಗಿವೆ. ಆದರೆ ಇದುವರೆಗೂ ಮನೆ ಮನೆಗೆ ಕಸ ಸಂಗ್ರಹಣೆ ಆಗದೆ ನೀಡಿದ ಡಬ್ಬಿಗಳು ಒಡೆದು ಹೋಗಿವೆ. ಕಸ ವಿಲೇವಾರಿ ವಾಹನ ಗ್ರಾಮ ಪಂಚಾಯತಿಗೆ ಪ್ರಚಾರದ ವಾಹನವಾಗಿದೆ.

ಇದು ಅಧಿಕಾರಿಗಳ ಕಥೆಯಾದರೆ, ಜನಪ್ರತಿನಿಧಿಗಳ ಕಥೆ ಬೇರೆಯೇ ಆಗಿದೆ. ವರ್ಷಕ್ಕೊಮ್ಮೆ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದಂದು ಯಾವುದಾದರು ಒಂದು ಸ್ಥಳದಲ್ಲಿ ಸ್ವಚ್ಛತೆ ಮಾಡಿ ನಾಲ್ಕು ಫೋಟೋ ತೆಗೆಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಫೋಸ್ ಕೊಟ್ಟರೆ ಮತ್ತೆ ಸ್ವಚ್ಛ ಭಾರತ ಯೋಜನೆ ಮುಂದಿನ ವರ್ಷದ ಹುಟ್ಟು ಹಬ್ಬಕ್ಕೆ ನೆನಪು ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಪಂಚಾಯತಿ ಸದಸ್ಯರಿದ್ದರೆ ಮಾತ್ರ ಕೇಳುತ್ತೇವೆ ಎನ್ನುವ ರೀತಿಯಲ್ಲಿ ಇದ್ದಾರೆ.

ಏನೇ ಆಗಲಿ ಗ್ರಾಮದ ಅಭಿವೃದ್ಧಿ ಹಾಗೂ ಸ್ವಚ್ಚತೆ ಕುರಿತು ತಲೆ ಕಡಿಸಿಕೊಳ್ಳುವ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಸಿಗುವದು ಬಹಳ ಕಷ್ಟಕರವಾಗಿದೆ. ಇನ್ನೂ ಆಡಳಿತ ಅಧಿಕಾರಿಗಳು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸ್ವಚ್ಛ ಭಾರತ ಯೋಜನೆ ಬಗ್ಗೆ ಯಾವ ರೀತಿಯಲ್ಲಿ ಕ್ರಮಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.

Leave a Reply