ಇಂಧನ ಬೆಲೆ ಏರಿಕೆಯ ಇತಿಹಾಸವನ್ನು ಸದನದಲ್ಲಿ ಬಿಚ್ಚಿಟ್ಟ ಸಿದ್ದರಾಮಯ್ಯ
ಬೆಂಗಳೂರು: ಕೊರೊನಾ, ಬೆಲೆ ನಿಯಂತ್ರಣ ಮುಂತಾದ ಗಂಭೀರ ವಿಚಾರಗಳ ಬಗ್ಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ಆಸಕ್ತಿಯಾಗಲೀ, ಪ್ರತಿಪಕ್ಷಗಳ ಮಾತು ಕೇಳುವ ಸೌಜನ್ಯವಾಗಲೀ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ವಿಧಾನಮಂಡಲ ಅಧಿವೇಶನದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಸದನದಲ್ಲಿ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತಾಡಿದ ಅವರು, ಸದನ ಕರೆಯಲು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದು ಖಂಡನೀಯ. ಆರು ತಿಂಗಳಿಗೊಮ್ಮೆ ಸದನ ಕರೆಯಲು ಅವಕಾಶ ನೀಡಿರುವ ಕಾನೂನನ್ನು ಬಳಕೆ ಮಾಡಿಕೊಂಡು ಆರು ತಿಂಗಳಿಗೆ ಒಂದೇ ಬಾರಿ ಸದನ ನಡೆಸೋದು ಸರಿಯಲ್ಲ. ಕನಿಷ್ಠ 60 ದಿನ ಸದನ ನಡೆಸಬೇಕು ಎಂದು ನಾವೇ ಕಾನೂನು ಮಾಡಿದ್ದೇವೆ, ಆ ಕಾನೂನಿಗೆ ಸರ್ಕಾರ ಕವಡೆ ಕಾಸಿನ ಬೆಲೆ ಕೊಡುತ್ತಿಲ್ಲ ಎಂದು ಕಿಡಿಕಾರಿದರು.
ಕೊರೊನಾದಿಂದಾಗಿ ಸದನ ನಡೆಸಲು ಸರಿಯಾಗಿ ಸಮಯ ಸಿಗುತ್ತಿಲ್ಲ ಎಂಬ ಕುಂಟು ನೆಪವನ್ನು ನಾನು ಒಪ್ಪಲ್ಲ. ಈ ವರ್ಷ ಸದನ ನಡೆದಿರೋದು 20 ದಿನ ಮಾತ್ರ, ಈಗ 10 ದಿನ ಸದನ ನಡೆಸಲು ನೋಟಿಸ್ ನೀಡಿದ್ದೀರಿ, ಇದನ್ನು ಕನಿಷ್ಠ ಇಪ್ಪತ್ತು ದಿನಕ್ಕೆ ಹೆಚ್ಚಿಸಬೇಕು ಎಂದು ಬ್ಯುಸಿನೆಸ್ ಅಡ್ವೈಸರಿ ಕಮಿಟಿಗೆ ಸಲಹೆ ನೀಡಿದ್ದೇನೆ ಎಂದರು.
1973ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪೆಟ್ರೋಲ್ ಬೆಲೆ ಕೇವಲ 7 ಪೈಸೆ ಹೆಚ್ಚಾಗಿದ್ದಕ್ಕೆ ಬಿಜೆಪಿ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತಿಗೆ ಎತ್ತಿನಗಾಡಿಯಲ್ಲಿ ಬಂದಿದ್ದರು. ಈ ಬೆಲೆಯೇರಿಕೆಯನ್ನು ಅವರು ಕ್ರಿಮಿನಲ್ ಲೂಟ್ ಎಂದಿದ್ದರು. ನಾನೀಗ ಅದಕ್ಕಿಂತ ಕೀಳು ಪದ ಬಳಕೆ ಮಾಡದೆ, ಅದೇ ಪದವನ್ನು ಬಳಕೆ ಮಾಡುತ್ತೇನೆ. ಈಗಿನ ಬಿಜೆಪಿ ಸರ್ಕಾರವೂ “ಕ್ರಿಮಿನಲ್ ಲೂಟಿ” ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಗ್ಯಾಸ್, ಪೆಟ್ರೋಲ್ ಬೆಲೆ ಏರಿಕೆಯಾಗಿದ್ದಕ್ಕೆ ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ಸ್ಥಿತಿಗೆ ಅನುಗುಣವಾಗಿ ಬೆಲೆ ಏರಿಕೆ ಮಾಡುತ್ತಿವೆ, ಬೆಲೆ ನಿಯಂತ್ರಣ ನಮ್ಮ ಕೈಲಿ ಇಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ಬೆಲೆಯೇರಿಕೆಗೆ ಉತ್ತರ ನೀಡಬೇಕಾದವರು ತೈಲ ಕಂಪನಿಗಳ ಎಂ.ಡಿಗಳೋ ಅಥವಾ ಕೇಂದ್ರ ಸರ್ಕಾರವೋ? ಕಾಂಗ್ರೆಸ್ ಸರ್ಕಾರ ಇದ್ದಾಗ ಬಿಜೆಪಿಯವರು ಪೆಟ್ರೋಲ್ ಬೆಲೆ ಏರಿಕೆಯಾದಾಗ ಪ್ರತಿಭಟನೆ ಮಾಡುತ್ತಿದ್ದುದ್ದು ತೈಲ ಕಂಪನಿಯ ವಿರುದ್ಧವೋ? ಎಂದು ಪ್ರಶ‍್ನಿಸಿದರು.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡೀಸೆಲ್ ಮೇಲೆ ರೂ.3.45 ತೆರಿಗೆ ಇತ್ತು, ಇಂದು ರೂ.31.84 ಆಗಿದೆ. ಅಂದರೆ ಸುಮಾರು ಒಂಭತ್ತು ಪಟ್ಟು ಹೆಚ್ಚಾಗಿದೆ. ಅದೇ ರೀತಿ ಪೆಟ್ರೋಲ್ ಮೇಲೆ ರೂ.9.21 ಅಬಕಾರಿ ಸುಂಕ ಇತ್ತು, ಇಂದು ರೂ.32.98 ಆಗಿದೆ. ಅಂದರೆ ಮೂರು ಪಟ್ಟು ಹೆಚ್ಚಾಗಿದೆ. ಇದರಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದರು.
ಮನಮೋಹನ್ ಸಿಂಗ್ ಅವರ ನೇತೃತ್ವದ ಯು.ಪಿ.ಎ ಸರ್ಕಾರದ ಕಾಲದಲ್ಲಿ ಡೀಸೆಲ್ ಬೆಲೆ ಗರಿಷ್ಠ ರೂ.47 ಇತ್ತು, ಈಗ ರೂ.95 ಆಗಿದೆ ಮತ್ತು ಪೆಟ್ರೋಲ್ ಬೆಲೆ ರೂ. 74 ಇತ್ತು, ಇಂದು ರೂ. 106 ಆಗಿದೆ. 2012-13 ರಲ್ಲಿ ಒಂದು ಬ್ಯಾರಲ್ ಕಚ್ಚಾತೈಲ ಬೆಲೆ 120 ಡಾಲರ್ ಇತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಅದು 105 ಡಾಲರ್ ಗೆ ಇಳಿಕೆ ಕಂಡಿತು, ಇದರಿಂದ ಜನತೆಗೆ ಯಾವ ಲಾಭವೂ ಆಗಿಲ್ಲ ಎಂದು ಬೆಲೆ ಏರಿಕೆಯ ಹಿಂದಿನ ವಿಚಾರವನ್ನು ವಿವರಿಸಿದರು.
ಮನಮೋಹನಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಪೆಟ್ರೋಲ್ ಮೇಲೆ ಕೇಂದ್ರ ವಿಧಿಸುತ್ತಿದ್ದ ಹೆಚ್ಚುವರಿ ಅಬಕಾರಿ ಸುಂಕ ಪೆಟ್ರೋಲ್ ಗೆ 9.21 ರೂಪಾಯಿ, ಡೀಸೆಲ್ ಗೆ 3.45 ರೂಪಾಯಿ. ಈಗ ಪೆಟ್ರೋಲ್ ಮೇಲೆ 32.98 ರೂಪಾಯಿ ಮತ್ತು ಡೀಸೆಲ್ ಮೇಲೆ 31.84 ರೂಪಾಯಿ ಆಗಿದೆ ಎಂದರು.
ಆಯಿಲ್ ಬಾಂಡ್ ಗಳ ಪರಿಕಲ್ಪನೆ ಪ್ರಾರಂಭಿಸಿದ್ದೆ ವಾಜಪೇಯಿಯವರ ಸರ್ಕಾರ. ಆನಂತರ ಮನಮೋಹನ ಸಿಂಗ್ ಸರ್ಕಾರ ಈ ಯೋಜನೆಯನ್ನು ಮುಂದುವರೆಸಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾದಾಗ ಅದರ ಹೊರೆಯನ್ನು ಸಾರ್ವಜನಿಕರಿಗೆ ವರ್ಗಾಯಿಸದಂತೆ ಮಾಡಲು ಹಾಗೂ ಸರ್ಕಾರಿ ಸ್ವಾಮ್ಯದ ಆಯಿಲ್ ಕಂಪೆನಿಗಳು ನಷ್ಟವಾಗದಂತೆ ನೋಡಿಕೊಳ್ಳಲು ಈ ಆಯಿಲ್ ಬಾಂಡ್ ಗಳನ್ನು ಖರೀದಿಸಲಾಯಿತು ಎಂದರು.
ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಕಚ್ಚಾ ತೈಲಬೆಲೆ 125-140 ಡಾಲರ್ ಗೆ ಏರಿಕೆಯಾದರೂ ಸಹ ಪೆಟ್ರೋಲ್ ಬೆಲೆ 75 ರೂಪಾಯಿ ಮೀರಿರಲಿಲ್ಲ. ಡೀಸೆಲ್ ಬೆಲೆ 47 ರೂಪಾಯಿ ದಾಟಿರಲಿಲ್ಲ. ಈಗ 45-65 ಡಾಲರ್ ಇದ್ದಾಗಲೂ ಪೆಟ್ರೋಲ್ ಬೆಲೆ 105 ರೂ. ಆಗಿದೆ. ಡೀಸೆಲ್ ಬೆಲೆ 100 ರೂ. ಆಗಿದೆ. ಇದಕ್ಕೆ ಕಾರಣ ಕೇಂದ್ರ, ರಾಜ್ಯಗಳೆರಡೂ ಸೇರಿ 65 ರೂಪಾಯಿಗಳಷ್ಟು ತೆರಿಗೆ ವಸೂಲಿ ಮಾಡುತ್ತಿವೆ ಎಂದರು.
ಯುಪಿಎ ಕಾಲದಲ್ಲಿ 9-9-2012 ರಲ್ಲಿ ರೂ.5,762 ಕೋಟಿಗಳಷ್ಟು ಬಾಂಡ್ ಗಳನ್ನು ತೀರಿಸಲಾಗಿತ್ತು. ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 7-3-2015 ಮತ್ತು 23-3-2015ರಲ್ಲಿ ಕೇವಲ ರೂ.3,500 ಕೋಟಿ ಬಾಂಡ್ ಮಾತ್ರ ಮೆಚ್ಯೂರ್ ಆಗಿತ್ತು. ಅದನ್ನು ಮಾತ್ರ ತೀರಿಸಲಾಗಿದೆ ಎಂದರು.
ಪ್ರತಿ ವರ್ಷ ತೀರಿಸಬೇಕಾದ ಬಡ್ಡಿ ರೂ.9989.96 ಕೋಟಿ ಅಂದರೆ 10 ಸಾವಿರ ಕೋಟಿಗಳು. ಈ ವರ್ಷ ತೀರಿಸಬೇಕಾದ ಅಸಲು 10 ಸಾವಿರ ಕೋಟಿ. 2022ರಲ್ಲಿ ಅಸಲು ಪಾವತಿಸುವಂತಿಲ್ಲ. 2023 ರಲ್ಲಿ 26150 ಕೋಟಿ ತೀರಿಸಬೇಕು. 2024 ರಲ್ಲಿ ಬರುವ ಹೊಸ, ಹೊಸ ಸರ್ಕಾರ ತೀರಿಸಬೇಕಾದ ಮೊತ್ತ 37306 ಕೋಟಿ. ನರೇಂದ್ರ ಮೋದಿಯವರ ಸರ್ಕಾರ 2014 – 2024ರವರೆಗೆ ತೀರಿಸುವ ಒಟ್ಟಾರೆ ಅಸಲು ಮೊತ್ತ 40050 ಕೋಟಿ ಮಾತ್ರ. ಬಡ್ಡಿ ಮೊತ್ತ ಸುಮಾರು 70 ಸಾವಿರ ಕೋಟಿ, ಎರಡೂ ಸೇರಿದರೆ 1,10,000,050 ಕೋಟಿ ಮಾತ್ರ. ಕೇಂದ್ರ ಸರ್ಕಾರ ಇದುವರೆಗೆ ಪೆಟ್ರೋಲ್, ಡೀಸೆಲ್ ಗಳಿಂದ ಜನರಿಂದ ದೋಚಿಕೊಂಡಿರುವ ತೆರಿಗೆ ಹಣ ಸುಮಾರು 20 ಲಕ್ಷ ಕೋಟಿ ಎಂದರು.
ಮನಮೋಹನ ಸಿಂಗ್ ಅವರು ಡೀಸೆಲ್ ಬೆಲೆಯನ್ನು 46 ರೂಪಾಯಿಗಳ ಒಳಗೆ ಇರಿಸಿದ್ದರು. ಪೆಟ್ರೋಲ್ ಮೇಲೆ 9.21 ರೂ.ಗಳಷ್ಟು ತೆರಿಗೆ ವಿಧಿಸಿದರೆ, ಡೀಸೆಲ್ ಮೇಲೆ ಕೇವಲ 3.45 ರೂ.ಗಳಷ್ಟು ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಿದ್ದರು ಎಂದರು.
2012ರಲ್ಲಿ ಕಚ್ಚಾ ತೈಲದ ಬೆಲೆ 125.45 ಡಾಲರ್ ಇದ್ದಾಗ ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.41.91 ರೂ., ಪ್ರತಿ ಲೀಟರ್ ಪೆಟ್ರೋಲ್ ಬೆಲೆ 78.57 ರೂ.ಇತ್ತು. 2014ರಲ್ಲಿ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ಪ್ರತಿ ಬ್ಯಾರಲ್ ಕಚ್ಚಾ ತೈಲಕ್ಕೆ 105.52 ಡಾಲರ್ ಗೆ ಇಳಿಯಿತು. ಆಗ ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.55.48, ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.80.11 ಮಾರಾಟ ಮಾಡಿದರು. 2017ರಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 47.56 ಡಾಲರ್ ಗೆ ಇಳಿಯಿತು ಎಂದು ವಿವರಿಸಿದರು.
ನರೇಂದ್ರ ಮೋದಿಯವರು ಕೇಂದ್ರ ಸರ್ಕಾರ ವಿಧಿಸುವ ಅಡಿಷನಲ್ ಎಕ್ಸೈಜ್ ಡ್ಯೂಟಿಯನ್ನು ಡೀಸೆಲ್ ಮೇಲೆ ರೂ.15.83 ಏರಿಸಿದರು, ಪೆಟ್ರೋಲ್ ಮೇಲೆ 19.98 ರೂ. ಏರಿಸಿದರು. ಅದಕ್ಕೂ ಮೊದಲು 2013ರಲ್ಲಿ ಡೀಸೆಲ್ ಮೇಲೆ ರೂ.3.45/, ಪೆಟ್ರೋಲ್ ಮೇಲೆ 9.21 ರೂ.ಗಳನ್ನು ಹೆಚ್ಚುವರಿ ಅಬಕಾರಿ ಸುಂಕ ಎಂದು ಸಂಗ್ರಹ ಮಾಡಲಾಗುತ್ತಿತ್ತು ಎಂದರು.
2017ರಲ್ಲಿ ಅಡಿಷನಲ್ ಎಕ್ಸೈಜ್ ಡ್ಯೂಟಿಯನ್ನು ಹೆಚ್ಚು ಮಾಡಿದ ಕೂಡಲೇ ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.54.78, ಪೆಟ್ರೋಲ್ ಬೆಲೆ 76.55 ರೂ.ಗೆ ಏರಿಕೆಯಾಯಿತು. ದಿನಾಂಕ: 01-06-2020ರಲ್ಲಿ ಕೇಂದ್ರವು ತನ್ನ ಹೆಚ್ಚುವರಿ ಅಬಕಾರಿ ಸುಂಕವನ್ನು ಡೀಸೆಲ್ ಮೇಲೆ ರೂ.31.83, ಪೆಟ್ರೋಲ್ ಮೇಲೆ 32.98 ರೂ.ಗಳನ್ನು ವಿಧಿಸಲಾರಂಭಿಸಿತು. ಅದರ ಪರಿಣಾಮವಾಗಿ ಇಂದು ರಾಜ್ಯದಲ್ಲಿ ಪೆಟ್ರೋಲ್ ಬೆಲೆ 105 ರೂ.ಗಳಿಗೆ ಮತ್ತು ಡೀಸೆಲ್ ಬೆಲೆ 96.61 ರೂ.ಗಳಿಗೆ ಏರಿಕೆಯಾಗಿದೆ ಎಂದು ವಾಸ್ತವ ಸಂಗತಿಯನ್ನು ವಿವರಿಸಿದರು.
ಇದೇ ಮಾರ್ಚ್ ನಲ್ಲಿ ನಾನು ಬಜೆಟ್ ಮೇಲೆ ಮಾತನಾಡಿದಾಗ ಡೀಸೆಲ್ ಬೆಲೆ 89 ರೂಪಾಯಿ ಇತ್ತು. ಈಗ 97 ರೂ ಆಗಿದೆ. ಅಂದರೆ ಪ್ರತಿ ಲೀಟರ್ ಮೇಲೆ 8 ರೂ ಜಾಸ್ತಿಯಾಗಿದೆ. ಜನವರಿಯಲ್ಲಿ 81 ರೂ.ಗಳಿದ್ದವು. ಜನವರಿಗೆ ಹೋಲಿಸಿದರೆ ಪ್ರತಿ ಲೀಟರ್ ದರ 15 ರೂಪಾಯಿ ಜಾಸ್ತಿಯಾಗಿವೆ. ಪೆಟ್ರೋಲ್ ವಿಚಾರಕ್ಕೆ ಬಂದರೆ ಜನವರಿಯಲ್ಲಿ 86 ರೂಪಾಯಿ ಇತ್ತು. ಈಗ 105 ರೂ. ದಾಟಿದೆ. ಅಂದರೆ ಒಂದು ಲೀಟರ್ ಮೇಲೆ 20 ರೂಪಾಯಿ ಜಾಸ್ತಿಯಾಗಿದೆ. ಬೆಂಗಳೂರಿನಲ್ಲಿ ಮಾರ್ಚಿನಲ್ಲಿ 96 ರೂ ಇತ್ತು. ಮಾರ್ಚ್ ನಿಂದ ಈಚೆಗೆ 11 ರೂಪಾಯಿ ಜಾಸ್ತಿಯಾಗಿದೆ ಎಂದರು.
ಕಚ್ಚಾತೈಲ ಬೆಲೆ ಆಧರಿಸಿ ಪೆಟ್ರೋಲ್ ನ ಇಂದಿನ ಮೂಲ ಬೆಲೆ ರೂ. 38, ರಾಜ್ಯ ಹಾಗೂ ಕೇಂದ್ರ ಸರ್ಕಾರದ ತೆರಿಗೆ ಒಟ್ಟು ರೂ. 67. ಹೀಗಾಗಿ ಪೆಟ್ರೋಲ್ ಬೆಲೆ ಲೀಟರ್ ಗೆ 105 ದಾಟಿದೆ. ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ, ತಾಲಿಬಾನ್ ಕಾರಣ ಅಂದರೆ ಹೇಗೆ? ಎಂದು ಬಿಜೆಪಿಗರನ್ನು ಮತ್ತವರ ಬೆಂಬಲಿಗರನ್ನು ಚುಚ್ಚಿದರು.
ಗ್ಯಾಸ್ ಬೆಲೆ ಹಿಂದೆ ರೂ. 414 ಇವತ್ತು 980 ಆಗಿದೆ. ಸಬ್ಸಿಡಿ ಹಣವನ್ನು ನಿಲ್ಲಿಸಲಾಗಿದೆ. ಇದರಿಂದ ಸಾಮಾನ್ಯ ಜನ ಗ್ಯಾಸ್ ಖರೀದಿಸಲು ಸಾಧ್ಯವಾಗುತ್ತಿಲ್ಲ. ಉಜ್ವಲ ಯೋಜನೆಯಡಿ ಗ್ಯಾಸ್ ಬಳಕೆ ಮಾಡುತ್ತಿದ್ದ 36% ಜನ ಕಟ್ಟಿಗೆ ಒಲೆ ಬಳಕೆಗೆ ಮರಳಿದ್ದಾರೆ. ದೇಶದಲ್ಲಿ ಎಂಟು ಕೋಟಿ ಉಜ್ವಲ ಯೋಜನೆ ಬಳಕೆದಾರರು ಸೇರಿ ಒಟ್ಟು 28 ಕೋಟಿ ಗ್ಯಾಸ್ ಬಳಕೆದಾರರು ಇದ್ದಾರೆ. ನಮ್ಮ ರಾಜ್ಯದಲ್ಲಿ 1 ಕೋಟಿ 78 ಲಕ್ಷ ಗ್ಯಾಸ್ ಬಳಕೆದಾರರಿದ್ದಾರೆ ಎಂ ದು ಆಯಿಲ್ ಬಾಂಡ್ ವಿಷಯದ ಕುರಿತು ಬಿಜೆಪಿ ಮತ್ತು ಬೆಂಬಲಿಗರು ಹೇಳುತ್ತಿರುವ ಕತೆಗಳಿಗೆ ಪರ್ಯಾಯವಾದ ವಿಚಾರಗಳನ್ನು ಸದನದ ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟರು.
ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಕಡಿತ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ವಿಧಾನಮಂಡಲದ ಉಭಯ ಸದನಗಳು ಸರ್ವಾನುಮತದ ಗೊತ್ತುವಳಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಬೇಕು ಎಂದು ಒತ್ತಾಯಿಸುತ್ತೇನೆ. ಎಲ್ಲ ಪಕ್ಷಗಳ ನಾಯಕರು ಒಪ್ಪಿದರೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಹೊಣೆಯನ್ನು ನಾನು ಹೊರಲು ಸಿದ್ಧನಿದ್ದೇನೆ ಎಂದರು.
ತಮಿಳುನಾಡಿನ ಸ್ಟಾಲಿನ್ ಸರ್ಕಾರ ಈಗಾಗಲೇ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಮಾರಾಟ ತೆರಿಗೆ ಕಡಿತ ಮಾಡಿದಂತೆ ರಾಜ್ಯ ಸರ್ಕಾರ ಮಾರಾಟ ತೆರಿಗೆಯನ್ನು 50% ಕಡಿತಗೊಳಿಸಬೇಕು. ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.



