ಬೆಂಗಳೂರು: ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಸಿಎಂ ಸಿದ್ದರಾಮಯ್ಯ ಸಿಹಿ ಸುದ್ದಿ ನೀಡಿದ್ದಾರೆ. ಈ ಎಲ್ಲ ಪೌರಕಾರ್ಮಿಕರ ಸೇವೆಯನ್ನು ಖಾಯಂ ಮಾಡಲು ತೀರ್ಮಾನಿಸಲಾಗಿದ್ದು, ಬರುವ ಮೇ1ರಂದು ಕೆಲವರಿಗೆ ಸೇವೆ ಖಾಯಂಗೊಳಿಸುವ ಆದೇಶ ನೀಡಲಾಗುವುದು ಎಂದಿದ್ದಾರೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರ ಸಭೆ, ಪುರಸಭೆಗಳ ಪೌರಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರ ಪೈಕಿ ಈಗಾಗಲೇ ಕೆಲವರನ್ನು ಖಾಯಂಗೊಳಿಸಲಾಗಿದೆ. ಬಾಕಿ ಉಳಿದವರನ್ನು ಖಾಯಂಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಪೌರಕಾರ್ಮಿಕರಿಗೆ ಖಾಯಮಾತಿ ಪ್ರಮಾಣಪತ್ರವನ್ನು ಕಾರ್ಮಿಕ ದಿನಾಚರಣೆಯಂದೇ ವಿತರಿಸಲಾಗುವುದು ಎಂದರು.
ಈ ಹಿಂದೆ ಪೌರಕಾರ್ಮಿಕರಿಗೆ ಕನಿಷ್ಠ ವೇತನವನ್ನು ಜಾರಿಗೊಳಿಸುವ ಮೂಲಕ 7 ಸಾವಿರ ರೂ.ಗಳಿದ್ದ ವೇತನವನ್ನು 17 ಸಾವಿರ ರೂ.ಗಳಿಗೆ ಹೆಚ್ಚಿಸಲಾಯಿತು. ಅನುಕಂಪದ ಆಧಾರದ ಮೇಲೆ ನೌಕರಿ ನೀಡುವುದನ್ನು ಪರಿಶೀಲಿಸಲಾಗುವುದು. ಖಾಯಂಗೊಂಡಿದ್ದ ಗುತ್ತಿಗೆದಾರರ ಕುಟುಂಬಕ್ಕೆ ಅನುಕಂಪದ ಆಧಾರದ ಸೌಲಭ್ಯ ದೊರೆಯಲಿದೆ ಎಂದರು.
ತ್ಯಾಜ್ಯ ಸಾಗಾಣಿಕೆಯ ವಾಹನಗಳ ಚಾಲಕರು, ಸ್ವಚ್ಛಗಾರರನ್ನು ಗುತ್ತಿಗೆ ಬದಲಿಗೆ ನೇರ ವೇತನ ಪಾವತಿಗೆ ಒಳಪಡಿಸಲಾಗುವುದು. ಪೌರಕಾರ್ಮಿಕರಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯದ ಹೆಲ್ತ್ಕಾರ್ಡ್ಗಳನ್ನು ವಿತರಿಸಲಾಗುವುದು ಎಂದರು.
ನಮ್ಮ ಸರ್ಕಾರ ಸಮ ಸಮಾಜದ ನಿರ್ಮಾಣದ ಮೇಲೆ ನಂಬಿಕೆಯಿಟ್ಟಿದೆ. ಕೆಲಸದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಬಯಸುವುದಿಲ್ಲ. ನಮಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಒಂದೇ, ಪೌರ ಕಾರ್ಮಿಕರೂ ಒಂದೇ ಎಂದರು.
ನಾವುಗಳು ಸಾಮಾನ್ಯವಾಗಿ ಗುಡಿ-ಗೋಪುರ, ಮಠ ಮಂದಿರ, ಚರ್ಚ್ಗಳಿಗೆ ಪೂಜೆ ಮಾಡಲು ಹೋಗುತ್ತೇವೆ. ಪೌರ ಕಾರ್ಮಿಕರು ಸ್ವಚ್ಛತೆಯಲ್ಲೇ ದೇವರನ್ನು ಕಾಣುತ್ತಾರೆ. ನಿಮ್ಮ ಕಾಯಕ ಅತ್ಯಂತ ಶ್ರೇಷ್ಠವಾದುದು. ನಿಮ್ಮ ಎಲ್ಲಾ ಬೇಡಿಕೆಗಳಿಗೂ ಸರ್ಕಾರ ಸಹಾನುಭೂತಿಯಿಂದ ಸ್ಪಂದಿಸಲಿದೆ ಎಂದರು.
ಇದೇ ವೇಳೆ ಸಿಂಧುತ್ವ ಪ್ರಮಾಣಪತ್ರ ನೀಡಿಕೆಯಲ್ಲಿರುವ ಸಮಸ್ಯೆಯನ್ನು ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದ ಅವರು, ಐಪಿಡಿ ಸಾಲಪ್ಪ ಅವರ ವರದಿಯನ್ನು ಅಧ್ಯಯನ ಮಾಡಿ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಒಳಚರಂಡಿ ವ್ಯವಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರನ್ನು ಖಾಯಂಗೊಳಿಸುವ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಪೌರಕಾರ್ಮಿಕರ ಕೆಲಸವನ್ನು ಮಾನವೀಯ ದೃಷ್ಟಿಯಿಂದ ನೋಡಿಕೊಳ್ಳಬೇಕು, ಅವರನ್ನು ಯಾರೂ ಅಮಾನವೀಯವಾಗಿ ನಡೆಸಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಅಪ್ಪ ಹಾಕಿದ ಆಲದ ಮರ ಎಂದು ಪೌರಕಾರ್ಮಿಕರು ಜೋತು ಬೀಳಬಾರದು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಬೇಕು. ನಮ್ಮ ಅಪ್ಪ-ಅಮ್ಮ ವಿದ್ಯಾವಂತರಾಗಿರಲಿಲ್ಲ. ರಾಜಕೀಯದಲ್ಲೂ ಇರಲಿಲ್ಲ. ನಾನು ಕಾನೂನು ಪದವಿ ಪಡೆದ ಕಾರಣಕ್ಕಾಗಿಯೇ ರಾಜ್ಯದ ಮುಖ್ಯಮಂತ್ರಿಯಾಗಲು ಅವಕಾಶವಾಯಿತು. ಹೀಗಾಗಿ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆನೀಡಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಹೆಂಡತಿಯು ಗಂಡನಿಗೆ ಊಟ ಕೊಡಲು ಹೆದರುವಂತಹ ಕಾಲವಿತ್ತು. ಅಂತಹ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಪೌರಕಾರ್ಮಿಕರು ಸ್ವಚ್ಛತೆಯಲ್ಲಿ ತೊಡಗಿಸಿಕೊಂಡರು. ಪೌರಕಾರ್ಮಿಕರು ಸಮಾಜದ ಆಧಾರಸ್ತಂಭರಲ್ಲಿ ಪ್ರಮುಖರು ಎಂದರು.
ಸಿಂಧುತ್ವ ಪ್ರಮಾಣಪತ್ರಕ್ಕಾಗಿ 12,695 ಅರ್ಜಿಗಳು ಬಾಕಿ ಇವೆ. ಇವುಗಳಲ್ಲಿ 6,110 ಮಂದಿ ಸಾಮಾನ್ಯ ವರ್ಗ, 6,500 ಮಂದಿ ಮೀಸಲಾತಿ ವರ್ಗದ ಸಿಬ್ಬಂದಿ ಇದ್ದಾರೆ. ಎಲ್ಲರಿಗೂ ಸಿಂಧುತ್ವ ನೀಡಿ ಮೇ 1 ರಂದು ಪ್ರಮಾಣಪತ್ರ ನೀಡಲಾಗುವುದು ಎಂದರು.
ಬೆಂಗಳೂರು ನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ಕಲ್ಯಾಣಕ್ಕಾಗಿ 64 ಕೋಟಿ ರೂ. ನಿಗದಿಪಡಿಸಲಾಗಿದ್ದು, ವೇತನ ಹಾಗೂ ಪಿಂಚಣಿ ಸೇರಿ 125 ಕೋಟಿ ರೂ. ಮೀಸಲಿಡಲಾಗಿದೆ ಎಂದರು.
ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಸಫಾಯಿ ಕರ್ಮಚಾರಿಗಳ ಮಹಾ ಸಂಘದ ರಾಜ್ಯಾಧ್ಯಕ್ಷ ನಾರಾಯಣ್, ಮಾಜಿ ಸಚಿವ ಎಚ್.ಆಂಜನೇಯ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.



