ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 12,600 ಪೌರಕಾರ್ಮಿಕರಿಗೆ ರಾಜ್ಯ ಸರ್ಕಾರ ಕಾಯಂ ನೇಮಕಾತಿ ಪತ್ರಗಳನ್ನು ವಿತರಿಸುವ ಮೂಲಕ ಕಾರ್ಮಿಕ ದಿನಾಚರಣೆಯ ಕೊಡುಗೆ ನೀಡಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪೌರಕಾರ್ಮಿಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಾನು ವಿಪಕ್ಷದಲ್ಲಿ ಇದ್ದಾಗ ಕಾಯಂ ನೇಮಕಾತಿಗಾಗಿ ಆಗ್ರಹಿಸಿ ಪೌರಕಾರ್ಮಿಕರು ಹೋರಾಟ ನಡೆಸಿದ್ದರು. ಹೋರಾಟದ ಸ್ಥಳಕ್ಕೆ ತೆರಳಿದ್ದ ನಾನು, ‘ಈ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇವೆ. ಬಿಜೆಪಿ ಸರ್ಕಾರ ಆ ಕೆಲಸ ಮಾಡದೇ ಇದ್ದರೆ, ನಾವು ಅಧಿಕಾರಕ್ಕೆ ಬಂದಾಗ ಕಾಯಂ ಮಾಡುತ್ತೇವೆ’ ಎಂದು ಮಾತುಕೊಟ್ಟಿದ್ದೆ. ಆ ಮಾತನ್ನು ಉಳಿಸಿಕೊಂಡಿದ್ದೇವೆ ಎಂದರು.
ರಾಜ್ಯದಲ್ಲಿ 38,000 ಪೌರಕಾರ್ಮಿಕರು ಇದ್ದಾರೆ. ಅವರನ್ನು ಹಂತಹಂತವಾಗಿ ಕಾಯಂ ಮಾಡುತ್ತೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಚಾಲಕರು, ಸಹಾಯಕರು ಮತ್ತು ಆಪರೇಟರ್‌ಗಳು ಇವತ್ತಿನ ಕಾಯಂ ನೇಮಕಾತಿಯಿಂದ ಬಿಟ್ಟುಹೋಗಿದ್ದಾರೆ. ಕೆಲ ತಾಂತ್ರಿಕ ಕಾರಣಗಳಿಂದ ಹೀಗೆ ಆಗಿದೆ. ಅದನ್ನು ನಿವಾರಿಸಿ, ಎಲ್ಲರನ್ನೂ ಕಾಯಂ ಮಾಡುತ್ತೇವೆ ಎಂದರು.
ನಮ್ಮ ಪಕ್ಷ ಮತ್ತು ಸರ್ಕಾರ ಬಡವರ, ಹಿಂದುಳಿದವರ, ತುಳಿತಕ್ಕೆ ಒಳಗಾದವರ ಪರ ಇದ್ದೇ ಇದೆ. ಪೌರಕಾರ್ಮಿಕರಿಗೆ ಮೊದಲು ಮಾಸಿಕ 7,000 ವೇತನ ಇತ್ತು. ಅದೂ ಗುತ್ತಿಗೆದಾರರ ಮೂಲಕ ಪಾವತಿ ಆಗುತ್ತಿತ್ತು. ಅದರಲ್ಲಿ ಬಹಳ ಸಮಸ್ಯೆ ಇತ್ತು. ನಮ್ಮ ಹಿಂದಿನ ಸರ್ಕಾರದಲ್ಲಿ ಅವರ ವೇತನವನ್ನು 18,000ಕ್ಕೆ ಹೆಚ್ಚಿಸಿದ್ದೆವು. ಜತೆಗೆ ನೇರವಾಗಿ ಪೌರಕಾರ್ಮಿಕರೇ ವೇತನ ಪಡೆದುಕೊಳ್ಳುವ ವ್ಯವಸ್ಥೆ ಜಾರಿಗೆ ತಂದಿದ್ದೆವು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, 12,600 ಪೌರಕಾರ್ಮಿಕರನ್ನು ಕಾಯಂ ಮಾಡಿದ್ದೇವೆ ಎಂದರು.
ಬಿಬಿಎಂಪಿ ಆಯುಕ್ತರಿಗೆ ಸಿಗುವಂತಹ ಗೌರವ ಒಬ್ಬ ಪೌರಕಾರ್ಮಿಕನಿಗೂ ಸಿಗಬೇಕು. ಅವರೂ ಗೌರವಯುತವಾದ ಜೀವನ ನಡೆಸಬೇಕು. ಕಾಯಂ ಆಗಿರುವ ಎಲ್ಲ ಪೌರಕಾರ್ಮಿಕರಿಗೆ ಇನ್ನು ಮುಂದೆ ಮಾಸಿಕ 39,000 ವೇತನ ಸಿಗಲಿದೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ರಾಜ್ಯದ ಎಲ್ಲ ಪಾಲಿಕೆ, ನಗರಸಭೆ, ಪುರಸಭೆಗಳಲ್ಲಿ ಇರುವ ಪೌರಕಾರ್ಮಿಕರನ್ನು ಕಾಯಂ ಮಾಡಿ ಎಂದು ನಾನು ಸರ್ಕಾರಕ್ಕೆ ಸೂಚಿಸುತ್ತೇನೆ ಎಂದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ಪೌರ ಕಾರ್ಮಿಕರ ಕಾಯಂ ನೇಮಕಾತಿ ನಮ್ಮ ಪ್ರಣಾಳಿಕೆಯಲ್ಲಿ ಇತ್ತು. ನಾವು ನೀಡಿದ್ಧ ಭರವಸೆಯನ್ನು ಈಡೇರಿಸಿ, ನಮ್ಮ ಮಾತನ್ನು ಉಳಿಸಿಕೊಂಡಿದ್ದೇವೆ. ಕಾಯಂ ನೇಮಕಾತಿಯಿಂದ ಕೆಲ ಪೌರಕಾರ್ಮಿಕರು ಬಿಟ್ಟುಹೋಗಿದ್ದಾರೆ. ಅವರನ್ನು ಕಾಯಂ ನೇಮಕಾತಿ ವ್ಯಾಪ್ತಿಗೆ ತರಲು ಕ್ರಮ ತೆಗೆದುಕೊಳ್ಳುತ್ತೇವೆ. ಇದಕ್ಕಾಗಿ ಪಾಲಿಕೆ ಕಚೇರಿಗೆಳಲ್ಲಿ ವಿಶೇಷ ಘಟಕ ತೆರೆದು, ದಾಖಲೆಗಳ ಪರಿಶೀಲನೆ ಮತ್ತು ನ್ಯೂನತೆ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದರು.




