ಹುತಾತ್ಮ ರೈತ ಕುಟುಂಬಗಳಿಗೆ ಕೇಂದ್ರ 25 ಲಕ್ಷ ರೂ.  ಪರಿಹಾರ ಕೊಡಲಿ: ಸಿದ್ದರಾಮಯ್ಯ

5 years ago

ಬೆಂಗಳೂರು: ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ದೇಶದ ಮಣ್ಣಿನ ಮಕ್ಕಳ‌ ಅಭೂತಪೂರ್ವ ಹೋರಾಟಕ್ಕೆ‌ ಸಿಕ್ಕ ಗೆಲುವಾಗಿದೆ. ರೈತ ಹೋರಾಟಗಾರರಿಗೆ ಅಭಿನಂದನೆಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿವಾದಾಸ್ಪದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಕೃಷಿ‌ಕಾಯ್ದೆಯನ್ನು ರದ್ದುಗೊಳಿಸಿದರಷ್ಟೇ ಸಾಲದು ಈ ಕರಾಳ ಕಾಯ್ದೆ ರದ್ದತಿಗಾಗಿ ನಡೆದ ಹೋರಾಟದಲ್ಲಿ ಹುತಾತ್ಮರಾದ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಲಾ 25 ಲಕ್ಷ ರೂಪಾಯಿ‌ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ.

ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಎದೆಯಗಲ ಎಷ್ಟೇ ಇಂಚಿನದ್ದಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇ ಬೇಕು. ಇದುವೇ ಪ್ರಜಾಪ್ರಭುತ್ವದ ಸೊಗಸು. ಇದುವೇ ರೈತರ ಸ್ವಾತಂತ್ರ್ಯೋತ್ಸವ. ಕೃಷಿ ಕಾಯ್ದೆ‌ಯಷ್ಟೇ ಅಲ್ಲ, ಕೇಂದ್ರ ಬಿಜೆಪಿ‌ ಸರ್ಕಾರದ ಪ್ರತಿಯೊಂದು ನೀತಿ ಮತ್ತು ಕಾರ್ಯಕ್ರಮಗಳು ರೈತ ವಿರೋಧಿಯಾದುದು ಎಂದಿದ್ದಾರೆ.

ಇದು ವಿರಮಿಸುವ ಕಾಲ ಅಲ್ಲ,‌ ರೈತ ವಿರೋಧಿ ಬಿಜೆಪಿ ವಿರುದ್ಧದ ಹೋರಾಟ ಮುಂದುವರಿಯಲಿದೆ. ರೈತರ ಹೋರಾಟಕ್ಕೆ ಸಿಕ್ಕ ಗೆಲುವಿನ‌‌ ಸ್ಪೂರ್ತಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧದ ಜನ ಹೋರಾಟಕ್ಕೆ ನಾಂದಿಯಾಗಲಿದೆ. ಪೆಟ್ರೋಲ್-ಡೀಸೆಲ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ವಿರುದ್ಧದ ಹೋರಾಟಕ್ಕೆ ದೇಶದ ಜನ ಅಣಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

Leave a Reply