ಬಾಂಬ್ ಬೆದರಿಕೆ ಪ್ರಕರಣ: ತನಿಖೆಗೆ ವೇಗ ನೀಡಿದ ಪೊಲೀಸ್ ಇಲಾಖೆ

2 years ago

#Bomb #threat #case #Police #department #speeded #investigation

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿ ಆತಂಕಕ್ಕೆ ಕಾರಣವಾಗಿರುವ ಬೆಂಗಳೂರಿನ ಹಲವು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿರುವ ಸಂಬಂಧ ನಗರದಲ್ಲಿ 48 ಎಫ್ಐಆರ್ ದಾಖಲಾದರೆ, ಉಳಿದ 22 ಗ್ರಾಮಾಂತರದಲ್ಲಿ ದಾಖಲಾಗಿದ್ದು ತನಿಖೆಯನ್ನು ತೀವ್ರಗೊಳಿಸಲಾಗಿದೆ.

ನಗರದ ಖಾಸಗಿ ಶಾಲೆಗಳಿಗೆ ಬೆದರಿಕೆ ಹಾಕಿರುವ 48 ಎಫ್ಐಆರ್ ಗಳನ್ನು ಕ್ರೂಡೀಕರಿಸಿ ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಲು ವಿಶೇಷ ತನಿಖಾ ತಂಡಗಳನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ರಚಿಸಿದ್ದಾರೆ. ದುಷ್ಕರ್ಮಿಗಳು ಬೆದರಿಕೆಗೆ ಬಳಸಲಾದ ಇ-ಮೇಲ್ ಐಡಿ ನಕಲು ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕೃತ್ಯ ಎಸಗುವ ಉದ್ದೇಶದಿಂದಲೇ ಆರೋಪಿಗಳು ನಕಲಿ ಐಡಿ ತೆರೆದಿದ್ದಾರೆ. ನುರಿತ ಸೈಬರ್ ಪೊಲೀಸ್ ಅಧಿಕಾರಿಗಳು ಹಾಗೂ ಸೈಬರ್ ತಜ್ಞರು, ಈ ಹಿಂದೆ ಬಂದಿದ್ದ ಹುಸಿ ಬಾಂಬ್ ಇ-ಮೇಲ್ ಗಳನ್ನೂ ಆಧರಿಸಿ ತನಿಖೆ ಆರಂಬಿಸಿದ್ದಾರೆ.

ದುಷ್ಕರ್ಮಿ ಖಾಸಗಿ ಕಂಪನಿಯ ವಿಪಿಎನ್ ಬಳಸಿ ಇ-ಮೇಲ್ ಮಾಡಿಕೊಂಡಿದ್ದು, ಪೊಲೀಸರು ಕಂಪನಿಯ ಯಾವ ಸರ್ವರ್ ಬಳಸಲಾಗಿದೆ ಬಳಸಿದ ಐಡಿ, ಐಪಿ ಯಾವುದು ಎಂಬ ಮಾಹಿತಿ ನೀಡುವಂತೆ ವಿದೇಶದ ಸೈಟ್ರಸ್ ಕಂಪನಿಗೆ ಪತ್ರ ವ್ಯವಹಾರ ನಡೆಸಿದ್ದಾರೆ.

ಹೆಚ್ಚುವರಿ ಆಯುಕ್ತ (ಪಶ್ಚಿಮ) ಎನ್. ಸತೀಶ್ ಕುಮಾರ್ ನೇತೃತ್ವದಲ್ಲಿ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಪದೇಪದೇ ನಡೆಯುತ್ತಿರುವ ಈ ಕೃತ್ಯದ ಹಿಂದಿರುವ ದುಷ್ಕರ್ಮಿಗಳ್ಯಾರು? ಕೃತ್ಯದ ಹಿಂದಿನ ಅಸಲಿ ಕಾರಣವೇನು? ಶಾಲೆಗಳನ್ನೇ ಗುರಿಯಾಗಿಸಿಕೊಂಡು ಇ-ಮೇಲ್ ಕಳುಹಿಸುತ್ತಿರುವ ಹಿಂದಿನ ಉದ್ದೇಶವೇನು? ಈ ಕೃತ್ಯಕ್ಕೆ ಇ-ಮೇಲ್ ಬಳಸುತ್ತಿರುವ ಆ ದುಷ್ಕರ್ಮಿ ಯಾರು? ಎಂಬ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.

ದುಷ್ಕರ್ಮಿ ವರ್ಚ್ಯುಯಲ್ ಪ್ರೈವೇಟ್ ನೆಟ್ ವರ್ಕ್ (ವಿಪಿಎನ್) ಬಳಸಿ ಇ-ಮೇಲ್ ಸಂದೇಶ ಕಳುಹಿಸಿದ್ದಾನೆ. ಹೀಗಾಗಿ ಪೊಲೀಸರು ದುಷ್ಕರ್ಮಿ ಬಳಸಿದ ಕಂಪ್ಯೂಟರ್, ಸೈಬರ್ ಕೆಫೆ ಅಥವಾ ಲ್ಯಾಪ್ ಟಾಪ್ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಿಡಿಗೇಡಿ ದೂರದ ದೇಶದ ನೆಟ್ ವರ್ಕ್ ಬಳಸಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಕರಣ ಬೇಧಿಸಲು ಸಿದ್ಧವಾದ ಪೊಲೀಸರಿಗೆ ವಿದೇಶಿ ಒಪ್ಪಂದದ ಆತಂಕ ಶುರುವಾಗಿದೆ. ಇಲ್ಲಿಯವರೆಗೆ ಮಾಹಿತಿ ಹಂಚಿಕೊಳ್ಳುವ ಒಪ್ಪಂದ ಕೆಲವೇ ದೇಶಗಳ ಜೊತೆ ಇದೆ. ಸದ್ಯ 39 ದೇಶಗಳ ಜೊತೆಗೆ ಇಂತಹ ಒಪ್ಪಂದವಿದೆ. ಮೂರು ದೇಶಗಳ ಜೊತೆ ಸಹಿ ಪ್ರಕ್ರಿಯೆ ಬಾಕಿ ಇದೆ. ಆದರೆ ಪಟ್ಟಿಯಲ್ಲಿರುವ 42 ದೇಶದಲ್ಲಿ ಯಾವುದಾದರೂ ದೇಶದಿಂದ ಮಾಹಿತಿ ಸಂಗ್ರಹಿಸಿ ಕೃತ್ಯ ಎಸಗಲಾಗಿದೆಯೇ ಎಂದು ಪರಿಶೀಲನೆ ನಡೆಸಲಾಗುತ್ತಿದೆ.

ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಕರೆಗಳು ಆಗಾಗ ಬರುತ್ತಿರುತ್ತವೆ. ಆದರೆ, ನಿನ್ನೆ ನಗರದ 48 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ರವಾನಿಸಲಾಗಿತ್ತು. ಈ ಬೆದರಿಕೆಯಲ್ಲಿ ಉಗ್ರ ಪದಗಳ ಉಲ್ಲೇಖವಾಗಿದ್ದರಿಂದ ಆತಂಕಕ್ಕೆ ಕಾರಣವಾಗಿತ್ತು.

2022ರಲ್ಲಿ ಬಾಂಬ್ ಬೆದರಿಕೆ ಮೇಲ್ಗಳು ಆತಂಕದ ವಾತಾವರಣ ನಿರ್ಮಿಸಿದ್ದವು. 2022ರ ಏಪ್ರಿಲ್ನಲ್ಲಿ ಏಳು ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಹೆಣ್ಣೂರು, ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ಏಳು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಶಾಲಾ ಪಾರ್ಕಿಂಗ್ ಆವರಣ, ಗಾರ್ಡನ್, ಮೇಲ್ಛಾವಣಿಗಳಲ್ಲಿ ಬಾಂಬ್ ಇಟ್ಟಿರುವ ಬೆದರಿಕೆ ಹಾಕಲಾಗಿತ್ತು. ತನಿಖೆ ವೇಳೆ ಸುಳ್ಳು ಎಂಬ ಸಂಗತಿ ಬಯಲಾಗಿತ್ತು.

2020ರ ಜುಲೈನಲ್ಲಿ ಡಿ.ಕೆ.ಶಿವಕುಮಾರ್ ಒಡೆತನದ ಶಾಲೆಗೂ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಆರ್ಆರ್ ನಗರ ಠಾಣೆ ವ್ಯಾಪ್ತಿಯಲ್ಲಿರುವ ಶಾಲೆಗೆ ಮೇಲ್ ಬಂದಿತ್ತು. ಅದೇ ಶಾಲೆಯ ವಿದ್ಯಾರ್ಥಿಯೊಬ್ಬರಿಂದ ಮೇಲ್ ಕಳಿಸಲಾಗಿತ್ತು. ಪೊಲೀಸರು ತನಿಖೆ ನಡೆಸಿ ಪ್ರಕರಣ ಪರಿಹರಿಸಿದ್ದರು.

ಡಿಸೆಂಬರ್ 1ರಂದು ಮೊದಲು ಬೆಂಗಳೂರಿನ 15 ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿದೆ. ಬಳಿಕ ಇನ್ನುಳಿದ ಆಡಳಿತ ಮಂಡಳಿಗಳು ತಮ್ಮ ತಮ್ಮ ಶಾಲೆಯ ಇಮೇಲ್ ಪರಿಶೀಲನೆ ಮಾಡಿದ ಬಳಿಕ 48 ಶಾಲೆಗಳಿಗೆ ಅಂತಹದ್ದೇ ಬೆದರಿಕೆ ಸಂದೇಶ ಬಂದಿರುವುದು ಪತ್ತೆಯಾಗಿತ್ತು. ಈ ಪ್ರಕರಣಗಳನ್ನು ಪತ್ತೆ ಹಚ್ಚಿ ದುಷ್ಕರ್ಮಿಗಳನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

Leave a Reply