ಹುಸಿ ಬಾಂಬ್ ಬೆದರಿಕೆಗೆ ಬೆಚ್ಚಿ ಬಿದ್ದ ಬೆಂಗಳೂರು

2 years ago

#Bangalore #shocked #fake #bomb #threat

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ಬೆಳಿಗ್ಗೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹಲವು ಶಾಲೆಗಳಿಗೆ ದೌಡಾಯಿಸಿದ ಪೋಷಕರು ತಮ್ಮ ಮಕ್ಕಳನ್ನು ಕರೆದೊಯ್ಯಲು ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದರಿಂದ ಶಾಲೆಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಆತಂಕ ಮನೆಮಾಡಿತ್ತು. ಅಲ್ಲದೇ, ಹಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ಜನರ ಪರದಾಟ ಸಾಮಾನ್ಯ ದೃಶ್ಯವಾಗಿತ್ತು.

ಇದಕ್ಕೆಲ್ಲ ಕಾರಣವಾಗಿದ್ದು ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ. ಆರಂಭದಲ್ಲಿ 15 ಶಾಲೆಗಳಿಗೆ ಬಂದಿದ್ದ ಬಾಂಬ್ ಸ್ಪೋಟ ಬೆದರಿಕೆ ಇ-ಮೇಲ್ ಸಂದೇಶ ನಂತರ 60ಕ್ಕೂ ಹೆಚ್ಚು ಶಾಲೆಗಳಲ್ಲಿ ಆತಂಕದ ವಾತಾವರಣ ನಿರ್ಮಿಸಿತು.

ಬೆಂಗಳೂರಿನ ಬನ್ನೇರುಟ್ಟದ ಗ್ರೀನ್ ಹುಡ್ ಹೈಸ್ಕೂಲ್, ಗ್ಲೋಬಲ್ ಇಂಟರ್ ನ್ಯಾಷನಲ್ ಶಾಲೆ, ರಾಯನ್ ಇಂಟರ್ ನ್ಯಾಷನಲ್ ಶಾಲೆ, ಆಲ್ ಬಷೀರ್ ಶಾಲೆ, ದೀಕ್ಷಾ ಹೈಟ್ ಶಾಲೆ, ಕಾಂಡರ್ ಇಂಟರ್ ನ್ಯಾಷನಲ್ ಶಾಲೆ, ಬಿವಿಎಂ ಗ್ಲೋಬಲ್ ಶಾಲೆ, ಹೆಬ್ಬಗೋಡಿಯ ಡಿವೈನ್ ಇಂಟರ್ ನ್ಯಾಷನಲ್ ಶಾಲೆ, ಟ್ರೀಮೈಸ್ ಇಂಟರ್ ನ್ಯಾಷನಲ್ ಶಾಲೆ, ಫ್ಲಾರೆನ್ಸ್ ಇಂಟರ್ ನ್ಯಾಷನಲ್ ಶಾಲೆ, ಎಬೆನ್ಸರ್ ಇಂಟರ್ ನ್ಯಾಷನಲ್ ಶಾಲೆ, ಸರ್ಜಾಪುರದ ಗ್ರೀನ್ ಹುಡ್ ಇಂಟರ್ ನ್ಯಾಷನಲ್ ಹೈಸ್ಕೂಲ್, ಗ್ಲೋಬಲ್ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆ, ಓಕರಿಡ್ಜ್ ಶಾಲೆ, ಟಿ ಐ ಎಸ್ ಬಿ ಶಾಲೆ, ಇನ್ವೆಂಚರ್ ಅಕಾಡೆಮಿ, ಜಿಗಣಿಯ ಅಚೀವರ್ಸ್ ಅಕಾಡೆಮಿ, ಎನ್ಡೆವರ್ಸ್ ಅಕಾಡೆಮಿ, ಆನೇಕಲ್ ನ 5 ಶಾಲೆಗಳು ಸೇರಿ ಒಟ್ಟು 60 ಖಾಸಗಿ ಶಾಲೆಗಳ ಇ-ಮೇಲ್ ಗೆ ಬಾಂಬ್ ಬೆದರಿಕೆ ಬಂದಿತ್ತು.

ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಪೋಷಕರನ್ನು ಸಂಪರ್ಕಿಸಿದ ಶಾಲೆಗಳ ಸಿಬ್ಬಂದಿ ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ತಕ್ಷಣ ಪೋಷಕರು ಶಾಲೆಗಳತ್ತ ದೌಡಾಯಿಸಿ ಮಕ್ಕಳನ್ನು ಕರೆತರಲು ಹೋದರೆ, ಪೊಲೀಸರು ಬಾಂಬ್ ನಿಷ್ಕ್ರಿಯ ಸಿಬ್ಬಂದಿಯೊಂದಿಗೆ ತೆರಳಿ ಎಲ್ಲಾ ಶಾಲೆಗಳ ಕೊಠಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಿದರು.

ಬಾಂಬ್ ಬೆದರಿಕೆ ಸುದ್ದಿ ಹಬ್ಬುತ್ತಿದ್ದಂತೆ ಸಕ್ರಿಯವಾದ ಡಿಸಿಎಂ ಡಿ.ಕೆ.ಶಿವಕುಮಾರ್ ಸದಾಶಿವನಗರದ ನ್ಯೂ ಅಕಾಡೆಮಿ ಶಾಲೆಗೆ ಭೇಟಿ ನೀಡಿದರು. ಘಟನೆ ಬಗ್ಗೆ ಮಾಹಿತಿ ಪಡೆದು ಧೈರ್ಯತುಂಬುವ ಕೆಲಸ ಮಾಡಿದರು. ಈ ಕುರಿತು ಮಾತನಾಡಿದ ಅವರು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಗರ ಪೊಲೀಸ್ ಆಯುಕ್ತರ ಜೊತೆಯೂ ಮಾತನಾಡಿದ್ದೇನೆ. ಯಾರೂ ಆತಂಕ ಪಡಬೇಕಿಲ್ಲ ಎಂದು ಭರವಸೆ ನೀಡಿದರು.

ವಿಪಕ್ಷ ನಾಯಕ ಅಶೋಕ್ ಕೂಡ ಬಾಂಬ್ ಬೆದರಿಕೆ ಬಂದ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಈ ಕುರಿತು ಪ್ರತಿಕ್ರಿಯಿಸಿದ ಅವರು, ಬೆದರಿಕೆ ಬಗ್ಗೆ ಪೊಲೀಸ್ ಕಮೀಷನರ್ ಜೊತೆ ಮಾತನಾಡಿದ್ದೇನೆ. ಬೆದರಿಕೆಪತ್ರ ಟೈಪ್ ಮಾಡಿದ್ದಾರೆ. ಇದನ್ನು ನೋಡಿದರೆ ಹೈ ಲೆವೆಲ್ ಟೆರರಿಸ್ಟ್ ತರ ಕಾಣುತ್ತೆ. ಅಲ್ಲಾಹುಗೆ ತೊಂದರೆ ಮಾಡ್ತಿದೀರಿ ಎಂದಿದೆ. ಮುಂಬೈನಲ್ಲಿ ಗಲಾಟೆ ಮಾಡಿದಿರಿ ಎಂಬ ಘಟನೆಯೂ ಉಲ್ಲೇಖ ಆಗಿದೆ. ಹೀಗೆಲ್ಲಾ ಮೆಸೇಜ್ ಮಾಡಿದ್ದಾರೆ. ಇವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಇಲ್ಲಿ ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ಬಂದಿದೆ. ಇಲ್ಲಿವರೆಗೇ ಏನೂ ಸಿಕ್ಕಿಲ್ಲ. ಸದ್ಯ ಹದಿನೈದು ಶಾಲೆಗೆ ಮೇಲ್ ಬಂದಿದೆ. ಜನರಲ್ಲಿ ಆತಂಕ ಶುರುವಾಗಿದೆ. ಹೀಗಾಗಿ ನಾನು ಕೂಡ ಭೇಟಿ ಮಾಡಿದ್ದೇನೆ ಎಂದರು.

ನಗರ ಪೊಲೀಸ್ ಆಯುಕ್ತ ದಯಾನಂದ್ ಬಾಂಬ್ ಬೆದರಿಕೆ ಇ-ಮೇಲ್ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಮ್ಮ ಪೊಲೀಸ್ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಇದೊಂದು ಹುಸಿಕರೆ ಎಂದು ಸಾಬೀತುಪಡಿಸಿದರು ಎಂದರು.

ಈ ಹಿಂದೆಯೂ ಹಲವು ಬಾರಿ ನಗರದ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಕರೆ, ಇ-ಮೇಲ್ ಬಂದಿತ್ತು. ಅಂತಹ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಿದಾಗ ಅದು ಹುಸಿ ಕರೆ ಎಂಬುದು ತಿಳಿದಿತ್ತು. ಇಂತಹ ಬೆದರಿಕೆ ಹಾಕಿದವರನ್ನು ಬಂಧಿಸಲಾಗಿದೆ ಎಂದರು.

ಮಕ್ಕಳು, ಪೋಷಕರು ಭಯ, ಆತಂಕ ಪಡುವ ಅಗತ್ಯವಿಲ್ಲ. ನಮ್ಮ ಸಿಬ್ಬಂದಿ ಪರಿಶೀಲನೆ ಮುಂದುವರೆಸಿದ್ದಾರೆ. ಇದು ಹುಸಿ ಬಾಂಬ್ ಕರೆ ಎಂಬುದು ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ ಎಂದು ಪೊಲೀಸ್ ಆಯುಕ್ತರು ಹೇಸಿದರು.

ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನಮಗೆ ಮಕ್ಕಳ ಸುರಕ್ಷತೆ ಮುಖ್ಯ. ಹೀಗಾಗಿ ಬೆದರಿಕೆ ಸಂದೇಶವನ್ನು ನಿರ್ಲಕ್ಷಿಸಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಈ ಹಿಂದೆ ಯಾವುದೋ ಒಂದು ಶಾಲೆಗೆ ಬೆದರಿಕೆ ಕರೆ ಇಲ್ಲವೇ ಸಂದೇಶ ಬರುತ್ತಿತ್ತು. ಈಗ ಒಂದೇ ಬಾರಿ ಹಲವು ಶಾಲೆಗಳಿಗೆ ಸಂದೇಶ ಕಳುಹಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಆಗುವುದಿಲ್ಲ. ಶೀಘ್ರ ಆರೋಪಿಗಳನ್ನು ಪೊಲೀಸರು ಬಂಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆದರಿಕೆ ಪತ್ರದಲ್ಲಿ ಇರುವುದೇನು?:
ಬೆದರಿಕೆ ಪತ್ರದ ಸಾರಾಂಶ

  1. ಶಾಲೆಯ ಮೈದಾನದಲ್ಲಿ ಸ್ಫೋಟಕ ಸಾಧನಗಳನ್ನು ಇಟ್ಟಿದ್ದೇವೆ.
  2. ನವೆಂಬರ್ 26ರಂದು ಅಲ್ಲಾಹುವಿನ ದಾರಿಯಲ್ಲಿರುವ ಹುತಾತ್ಮರು ನೂರಾರು ಮೂರ್ತಿ ಪೂಜಕರನ್ನು ಕೊಂದುಹಾಕಿದ್ದಾರೆ. ಲಕ್ಷಾಂತರ ಕಾಫಿರರನ್ನು ಕೇವಲ ಒಂದು ಚೂರಿಯನ್ನು ಹಿಡಿದು ಎದುರಿಸುವುದಕ್ಕೆ ನಿಜವಾಗಿಯೂ ತುಂಬ ಧೈರ್ಯವಿರಬೇಕು.
  3. ನಾವು ಸಾಯುತ್ತೇವೆ ಎಂಬುದು ತಿಳಿದಿದ್ದರೂ ನೂರಾರು ಮುಜಾಹಿದೀನ್ಗಳು ಯುದ್ಧ ಭೂಮಿಗೆ ಪ್ರವಾಹದಂತೆ ನುಗ್ಗಿದರು.
  4. ನೀವು ಅಲ್ಲಾಹುವಿನ ವೈರಿಗಳು. ನಾವು ನಿಮ್ಮನ್ನು ನಿಮ್ಮ ಮಕ್ಕಳನ್ನು ಕೊಂದು ಹಾಕಲಿದ್ದೇವೆ.
  5. ನಿಮಗೆ ಎರಡು ಆಯ್ಕೆಗಳಿವೆ. ಒಂದೋ ನಮ್ಮ ಗುಲಾಮರಾಗುವುದು, ಇಲ್ಲವೇ ಅಲ್ಹಾಹುವಿನ ಧರ್ಮವನ್ನು ಸ್ವೀಕರಿಸುವುದು.
  6. ನಿಮ್ಮ ದೇವಸ್ಥಾನಗಳು, ನಿಮ್ಮ ಮೂರ್ತಿಗಳು, ಬುದ್ಧನಿಂದ ಅನಂತತ್ವದವರೆಗಿನ ನಿಮ್ಮ ನಂಬಿಕೆಗಳೆಲ್ಲವೂ ನಮ್ಮ ಸ್ಫೋಟದಲ್ಲಿ ಬೂದಿಯಾಗಿ ಹಾರಿ ಹೋಗಲಿವೆ.
  7. ಬಿಸ್ಲಿಲ್ಲಾ ಅಲ್ಲಾಹುವಿನ ನಿಜವಾದ ಧರ್ಮವನ್ನು ಭಾರತ ಎಲ್ಲೆಡೆ ಪಸರಿಸಲಿದ್ದಾನೆ. ನಾವು ನಿಮ್ಮ ಬಳಿಗೆ ದಾಳಿಕೋರರನ್ನು ಕಳುಹಿಸಿದ್ದೇವೆ. ನಿಮ್ಮನ್ನು ಮುಳುಗಿಸಲು ಅವರೆಲ್ಲರೂ ಈಗ ಹಾರಿ ಹಾರಿ ಬರುತ್ತಿದ್ದಾರೆ.
  8. ನಾಳೆ ಇಡೀ ಜಗತ್ತು ಬಿಸ್ಮಿಲ್ಲಾಹನ ಕ್ಯಾಪಿಟೋಲ್ (ಧರ್ಮ ಕೇಂದ್ರ) ಆಗಲಿದೆ. ಜಗತ್ತಿನಾದ್ಯಂತ ಸಾವಿರಾರು ಯಹೂದಿಗಳು ಸಾಯಲಿದ್ದಾರೆ.
  9. ಹೀಗಾಗಿ ಒಂದೋ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಿ ಅಥವಾ ಇಸ್ಲಾಮಿನ ಕತ್ತಿಗಳ ಹೊಡೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳಿ.
  10. ಇಸ್ಲಾಂನ್ನು ನಂಬದೆ ಇರುವ ವ್ಯಕ್ತಿಗಳು ನಿಮಗೆ ಎದುರಾದರೆ ನೀವು ಅವರ ತಲೆಯನ್ನು ಕತ್ತರಿಸಿ ಹಾಕಿ. ಅವರ ಎಲ್ಲ ಬೆರಳುಗಳನ್ನು ಕತ್ತರಿಸಿ ಹಾಕಿ. ಅವರು ನಿಮ್ಮನ್ನು ಹೇಗೆ ಹೊಡೆದುರುಳಿಸಲು ಪ್ರಯತ್ನಿಸುತ್ತಿದ್ದಾರೋ ನೀವೂ ಹಾಗೆಯೇ ಬಹು ನಂಬಿಕೆಗಳನ್ನು ಹೊಂದಿರುವ ಶ್ರದ್ಧಾಳುಗಳು ಯಾರಿರುತ್ತಾರೋ ಅವರ ವಿರುದ್ಧ ಹೋರಾಡಿ.
    ಅಲ್ಲಾಹು ಅಕ್ಬರ್ ಎಂದು ಪತ್ರವನ್ನು ಪೂರ್ಣಗೊಳಿಸಲಾಗಿದೆ. Kharijites@beeble.com ಎಂಬ ಐಡಿಯಿಂದ ಈ ಪತ್ರಗಳು ಬಂದಿದ್ದು, ಎಲ್ಲ ಶಾಲೆಗಳಿಗೂ ಒಂದೇ ರೀತಿಯ ಪತ್ರ ಕಳುಹಿಸಲಾಗಿದೆ.

ಇದರಲ್ಲಿ ಭಾರತ ಮತ್ತು ಪ್ಯಾಲೆಸ್ತೀನ್ ವಿಚಾರದಲ್ಲಿ ಪ್ರಮುಖವಾಗಿ ವಿಷಯ ಪ್ರಸ್ತಾವನೆ ಮಾಡಲಾಗಿದೆ. ನವೆಂಬರ್ 26ರ ಹತ್ಯಾಕಾಂಡವನ್ನು ನೆನಪಿಸಲಾಗಿದೆ. ಆದರೆ, ಇದರ ವಿವರ ನೀಡಲಾಗಿಲ್ಲ. ನವೆಂಬರ್ 26ರಂದು ಹಿಂದೆ ಮುಂಬಯಿ ದಾಳಿ ನಡೆದಿತ್ತು. ಇದು ವ್ಯವಸ್ಥಿತವಾಗಿ ಬರೆದ ಪತ್ರವಾಗಿದ್ದು, ಎಲ್ಲ ಶಾಲೆಗಳ ಈ ಮೇಲ್ಗಳನ್ನು ಸಂಗ್ರಹಿಸಿ ಕಳುಹಿಸಲಾಗಿದೆ.

Leave a Reply