ಶ್ರಮಿಕ್ ನ್ಯಾಯ್, ಹಿಸ್ಸೇದಾರ್ ನ್ಯಾಯ್ ಘೋಷಣೆಗಳಿಂದ ಹಿಂದುಳಿದ ವರ್ಗ, ಬಡವರಿಗೆ ಅನುಕೂಲ: ಮಲ್ಲಿಕಾರ್ಜುನ ಖರ್ಗೆ

2 years ago

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಮೂಲಕ ಕರ್ನಾಟಕ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಗಳಿಸಿರುವ ಕಾಂಗ್ರೆಸ್ ಇದೀಗ ಲೋಕಸಭಾ ಚುನಾವಣೆಯಲ್ಲಿ ಮತ ಸೆಳೆಯಲು ಗ್ಯಾರಂಟಿ ಯೋಜನೆಗಳತ್ತ ಗಮನಹರಿಸಿದೆ.

ಈಗಾಗಲೇ ಹಲವು ಗ್ಯಾರೆಂಟಿಗಳನ್ನು ಘೋಷಣೆ ಮಾಡಿರುವ ಕಾಂಗ್ರೆಸ್ ಪಕ್ಷ ‘ಶ್ರಮಿಕ್ ನ್ಯಾಯ್’ ಹಾಗೂ ‘ಹಿಸ್ಸೇದಾರಿ ನ್ಯಾಯ್’ ಎಂಬ ಎರಡು ಹೊಸ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿಗಳನ್ನು ಘೋಷಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾವು 15 ಅಂಶಗಳ ಕಾರ್ಯಕ್ರಮ ರೂಪಿಸಿದ್ದೇವೆ. ಕಿಸಾನ್ ನ್ಯಾಯ್, ಯುವ ನ್ಯಾಯ್ ಗ್ಯಾರಂಟಿಗಳನ್ನು ಈಗಾಗಲೇ ಘೋಷಿಸಿದ್ದೇವೆ. ಶ್ರಮಿಕ್ ನ್ಯಾಯ್, ಹಿಸ್ಸೇದಾರ್ ನ್ಯಾಯ್ ಘೋಷಣೆಗಳು ಹಿಂದುಳಿದ ವರ್ಗಗಳು, ಬಡವರಿಗೆ ಅನುಕೂಲ ಆಗುವಂತವು. ಎಲ್ಲರಿಗೂ ಸಮಾನ ನ್ಯಾಯ ಸಿಗಬೇಕು. ಸಾಮಾಜಿಕ, ರಾಜಕೀಯ ಸಮಾನತೆ ಎಲ್ಲರಿಗೆ ಸಿಗಬೇಕು. ಸಂಘಟಿತ, ಅಸಂಘಟಿತ ಕಾರ್ಮಿಕರಿಗೆ ಕಾರ್ಯಕ್ರಮ, ಸಾಮಾಜಿಕ ನ್ಯಾಯ, ಕನಿಷ್ಠ ವೇತನ ಕಾಯ್ದೆ, ಭವಿಷ್ಯ ನಿಧಿ ಕಾಯ್ದೆ, ವಿಮೆ ಕಾಯ್ದೆ ಹೊಸ ಗ್ಯಾರಂಟಿಯಲ್ಲಿ ಇರಲಿದೆ. ನಮ್ಮ ಸರ್ಕಾರ ಬಂದರೆ ಇವುಗಳನ್ನು ಜಾರಿಗೆ ತರಲಿದೆ ಎಂದು ಭರವಸೆ ನೀಡಿದರು.

ದುರದೃಷ್ಟವೆಂದರೆ, ಕಾಂಗ್ರೆಸ್ ಜಾರಿಗೆ ತಂದ ಅನೇಕ ಕಾನೂನುಗಳನ್ನು ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ದುರ್ಬಲ ಮಾಡಿದೆ. ನರೇಗಾ ಯೋಜನೆ ಅಡಿ ಕಾರ್ಮಿಕ ಹಣ ಪಾವತಿ ಆಗುತ್ತಿಲ್ಲ. ನಮ್ಮ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುತ್ತದೆ. ಕೇಂದ್ರ ಸರಿಯಾದ ಸಮಯಕ್ಕೆ ಅನುದಾನ ನೀಡಿದರೆ ಯೋಜನೆಗಳು ಸರಿಯಾದ ಸಮಯಕ್ಕೆ ಆರಂಭವಾಗುತ್ತದೆ. ಆದರೆ, ತನ್ನ ಪಾಲು ಕೇಳಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಅನೇಕ ಪತ್ರ ಬರೆದಿದೆ. ಆದರೆ, ಕೇಂದ್ರ ಸ್ಪಂದಿಸಿಲ್ಲ ಎಂದರು.

ಗ್ರಾಮೀಣ ಉದ್ಯೋಗ ಖಾತ್ರಿಯೋಜನೆಗಳ ಬಗ್ಗೆ ಮೋದಿಗೆ ಆಸಕ್ತಿ ಇಲ್ಲ. ಇಂತಹ ಯೋಜನೆಗಳ ಬಗ್ಗೆ ಮೋದಿ ಸರ್ಕಾರ ನಿರ್ಲಕ್ಷ ವಹಿಸುತ್ತಿದೆ. ಮೋದಿಗೆ ಬಡವರ ಮೇಲೆ ಕಾಳಜಿ ಇಲ್ಲ. ಬಡವ ಮತ್ತು ಶ್ರೀಮಂತರ ನಡುವೆ ಇರುವ ಅಂತರ ಕಡಿಮೆ ಮಾಡುವುದು ಜಾತಿಗಣತಿ ಮಾಡುವ ನಮ್ಮ ಗ್ಯಾರಂಟಿಯ ಉದ್ದೇಶ. ಇದರಿಂದ ಸಮುದಾಯಗಳ ಅಭಿವೃದ್ಧಿ ವಿಚಾರಕ್ಕೆ ಅನುಕೂಲ ಆಗಲಿದೆ. ಶಿಕ್ಷಣ ಮತ್ತು ಸಾಮಾಜಿಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗಲಿದೆ ಎಂದರು.

ಜಾತಿ ಗಣತಿ ಅಸ್ತ್ರ ಬಿಟ್ಟ ಕಾಂಗ್ರೆಸ್: ಕರ್ನಾಟಕ ಈಗಾಗಲೇ ಜಾತಿ ಗಣತಿ ವರದಿ ಸ್ವೀಕರಿಸಿದೆ. ಆದರೆ ಮೋದಿ ಮಾತ್ರ ಜಾತಿಗಣತಿಗೆ ವಿರೋಧ ಮಾಡುತ್ತಿದ್ದಾರೆ. ಜಾತಿಯಿಂದ ಹೊರಬರುವುದು ಮೋದಿಗೆ ಇಷ್ಟವಿಲ್ಲ. ಮೋದಿ ಒಬ್ಬ ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದರೂ ಜಾತಿಗಣತಿಯನ್ನು ವಿರೋಧಿಸುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ಜಾತಿಗಣತಿ ಮಾಡುವುದು ಗ್ಯಾರಂಟಿ ಎಂದರು.

ಜಾತಿಗಣತಿ ವಿಚಾರದಲ್ಲಿ, ಸಿದ್ದರಾಮಯ್ಯ ಇರಲಿ, ಡಿ.ಕೆ. ಶಿವಕುಮಾರ್ ಇರಲಿ. ಪಕ್ಷದ ನಿರ್ಣಯವನ್ನು ಎಲ್ಲರೂ ಪಾಲಿಸಬೇಕು ಎಂದು ಪಕ್ಷದ ನಾಯಕರಿಗೆ ಇದೇ ವೇಳೆ ನಿರ್ದೇಶನ ನೀಡಿದರು.

ಜಾತಿ ಗಣತಿ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರುವುದು ಗಮನಕ್ಕೆ ಬಂದಿದೆ. ಆದರೆ ಈ ವಿಚಾರದಲ್ಲಿ ಎಐಸಿಸಿ ಯಾವ ನಿರ್ಧಾರ ಕೈಗೊಂಡಿದೆಯೋ ಅದಕ್ಕೆ ಎಲ್ಲರೂ ಬದ್ಧ ಇರಬೇಕಾಗುತ್ತದೆ ಎಂದರು.

Leave a Reply