ಬೆಂಗಳೂರು: ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದೆ. ಶರಣರಿಗೆ ಮತ್ತು ಕನ್ನಡ ಭಾಷೆಗೆ ಅವಿನಾಭಾವ ಸಂಬಂಧವಿದೆ ಎಂದು ಬಸವ ಧರ್ಮ ಪೀಠಾಧ್ಯಕ್ಷರಾದ ಜಗದ್ಗುರು ಮಾತೆ ಗಂಗಾದೇವಿ ಹೇಳಿದರು.
ರಾಜಾಜಿನಗರ ಬಸವ ಮಂಟಪ ಅವರಣದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 1ನೇ ಪುಣ್ಯಸ್ಮರಣೆ ಹಾಗೂ 36ನೇ ಶರಣ ಮೇಳ ಪ್ರಚಾರ ಅಭಿಯಾನ, ಕಂಪ್ಯೂಟರ್ ಮೂಲಕ ಕನ್ನಡ ಭಾಷೆ ಕಲಿತವರಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಿಗೆ ಭಾಷೆ ಮುಖ್ಯವಲ್ಲ, ಭಾವನೆಗಳು ಮುಖ್ಯ. ದೇವರಿಗೆ ಸಂಸ್ಕೃತ ಭಾಷೆ ಮಾತ್ರ ಅರ್ಥವಾಗುತ್ತದೆ. ಆದರಿಂದ ಸಂಸ್ಕೃತ ಭಾಷೆಯಲ್ಲಿ ಮಂತ್ರ ಪಠಣ ಮಾಡಬೇಕು ಎಂಬ ಅಭಿಪ್ರಾಯವಿತ್ತು. ಆದರೆ 12ನೇ ಶತಮಾನದಲ್ಲಿ ಕನ್ನಡ ಭಾಷೆಯನ್ನ ದೇವರಿಗೆ ಹೇಳಿಕೊಟ್ಟ ಮಹಾನ್ ಪ್ರವಾದಿ ಎಂದರೆ ಗುರು ಬಸವಣ್ಣನವರು ಎಂದರು.
ಕನ್ನಡ ಭಾಷೆಯಲ್ಲಿ ವಚನಗಳು, ಮಂತ್ರಗಳನ್ನು ಇಂದು ಪಠಣ ಮಾಡುತ್ತಿದ್ದಾರೆ. ನಮ್ಮ ಮಾತೃ ಭಾಷೆ ಕನ್ನಡ ಮತ್ತು ನಮ್ಮ ಧರ್ಮ ಭಾಷೆಯು ಕನ್ನಡವಾಗಿದೆ ಎಂದರು.
ಕರ್ನಾಟಕ ರತ್ನ, ಶರಣ ಪುನೀತ್ ರಾಜ್ ಕುಮಾರ್ ಅವರು ಚಲನಚಿತ್ರ ರಂಗದ ಅಮೂಲ್ಯ ರತ್ನ. ಸಾವಿರಾರು ಅನಾಥ ಮಕ್ಕಳು ಮತ್ತು ಅಂಗವಿಕಲ ಮಕ್ಕಳಿಗೆ ಶಿಕ್ಷಣ ನೀಡಿದರು ಎಂದು ಸ್ಮರಿಸಿದರು.
ಕೂಡಲಸಂಗಮದಲ್ಲಿ 36ನೇ ಶರಣ ಮೇಳ ಜನವರಿ 12, 13, 14ರಂದು ಅದ್ದೂರಿಯಾಗಿ ಜರುಗಲಿದೆ. ವಿವಿಧ ರಾಜ್ಯಗಳಿಂದ ಲಕ್ಷಾಂತರ ಶರಣ ಬಂಧುಗಳು ಆಗಮಿಸಲಿದ್ದಾರೆ ಎಂದರು.
ಇದೇ ವೇಳೆ ಕನ್ನಡ ಭಾಷೆಯನ್ನು ಕಂಪ್ಯೂಟರ್ ಮೂಲಕ ಕಲಿತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಮಹಾರಾಷ್ಟ್ರದ ಅಲ್ಲಮಪ್ರಭು ಪೀಠದ ಜಗದ್ಗುರು ಬಸವಕುಮಾರ ಸ್ವಾಮೀಜಿ, ಕಾಯಕ ಬಳಗ ಕಂಪ್ಯೂಟರ್ ಸಂಸ್ಥೆಯ ವ್ಯವಸ್ಥಾಪಕ ನೀಲಕಂಠಪ್ಪ, ಸಾಹಿತಿ ವಿದ್ಯಾ ಹಾಲಭಾವಿ, ಸಮರ್ಪಣಾ ಸಂಸ್ಥೆಯ ಶಿವಕುಮಾರ ಹೊಸಮನಿ ಹಾಜರಿದ್ದರು.



