ಹಿಂದಿಗೆ ಇಂದ್ರ ವೈಭೋಗ, ಅನ್ಯ ಭಾಷೆಗಳು ಬೀದಿಪಾಲು: ಎಚ್.ಡಿ.ಕುಮಾರಸ್ವಾಮಿ

5 years ago

ಬೆಂಗಳೂರು: ಭಾರತ ಒಕ್ಕೂಟರಾಷ್ಟ್ರ. ಬಹುಸಂಸ್ಕೃತಿ, ಬಹುಭಾಷೆ, ಬಹುಜನರ ಆಗರ. ಅನೇಕ ಭಾಷೆಗಳ ತೊಟ್ಟಿಲು. ಆದರೆ ಒಂದೇ ಭಾಷೆಯನ್ನು ವೈಭವೀಕರಿಸುವ, ಹೇರುವ ಹುಂಬ ಪ್ರಯತ್ನವೇಕೆ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ಏರಿಕೆ ವಿರೋಧಿಸಿ #StopHindiImposition ಅಡಿ ಟ್ವೀಟ್ ಮಾಡುತ್ತಿದ್ದು, ಇದು ಟ್ರೆಂಡಿಂಗ್ ಆಗಿತ್ತು. ನಾಳೆ ಕೇಂದ್ರ ಸರ್ಕಾರ ಆಚರಿಸಲಿರುವ ಹಿಂದಿ ದಿವಸ್ ಗೆ ಕನ್ನಡ ಪರ ಸಂಘಟನೆಗಳು ಮತ್ತು ಕೆಲವು ಪ್ರಾದೇಶಿಕ ಪಕ್ಷಗಳ ನಾಯಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಕೇಂದ್ರದ ವಿರುದ್ಧ ಜನಾಭಿಪ್ರಾಯ ರೂಪಿಸುವ ಯತ್ನ ನಡೆಸಿವೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಹಿಂದಿ ಹೇರಿಕೆಯನ್ನು ಕನ್ನಡಿಗರು ಒಪ್ಪುವುದಿಲ್ಲ. ಹಿಂದಿ ದಿವಸ ಆಚರಣೆಯನ್ನೂ ಸಹಿಸುವುದಿಲ್ಲ.‌ ಒಕ್ಕೂಟದ ಎಲ್ಲಾ ಭಾಷೆಗಳಂತೆ ಹಿಂದಿಯೂ ಒಂದು ಭಾಷೆಯಷ್ಟೇ. ಕೇಂದ್ರ ಸರಕಾರ ಹಿಂದಿಗೆ ʼಇಂದ್ರ ವೈಭೋಗʼ ನೀಡಿ ಅನ್ಯ ಭಾಷೆಗಳನ್ನು ಬೀದಿಪಾಲು ಮಾಡುವುದನ್ನು ಸಹಿಸಲಾಗದು ಎಂದಿದ್ದಾರೆ.

ಹಿಂದಿ ಹೇರುವವರಿಗೆ ತಿಳಿದಿರಲಿ. ನಮ್ಮ ಕನ್ನಡ ಅಭಿಜಾತ ಭಾಷೆ. ನಮ್ಮ ಕನ್ನಡ ಸಾವಿರಾರು ವರ್ಷಗಳ ಘನ ಚರಿತ್ರೆಯುಳ್ಳ ಭಾಷೆ. ನಮ್ಮ ಕನ್ನಡ 6.4 ಕೋಟಿ ಜನರ ಹೃದಯಮಿಡಿತ. ನಮ್ಮ ಪಾಲಿನ ಮಾತೃಸ್ವರೂಪಿಣಿ ಎಂದಿದ್ದಾರೆ.

ನಮ್ಮ ನೆಲದಲ್ಲಿ ನಮ್ಮ ಕನ್ನಡ ಭಾಷೆಯೇ ಮೊದಲು. ಹಿಂದಿ ದಿವಸ ಆಚರಣೆ ಅಸಮರ್ಪಕ ಮತ್ತು ಅನಗತ್ಯ. ಹಿಂದಿ  ಹೇರಿಕೆಯಿಂದ ಬಹುಭಾಷೆಯ ಭಾರತದ ನೆಮ್ಮದಿ ಕದಡುವುದು ಬೇಡ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.

Leave a Reply