ಹಸಿಬಿಸಿಯಲ್ಲಿ ಹುಟ್ಟುವ ಖಿನ್ನತೆಗಳು

3 years ago

ಒಳಗೆ ಹಸಿಬಿಸಿಯನ್ನಿಟ್ಟುಕೊಂಡು ಹೊರಗೆ ತಣ್ಣಗಿರುವ ಪರಿಯಂತೂ ಬಹು ಕಷ್ಟದ ಕೆಲಸ. ಅದರಲ್ಲೂ ಯುವಜನತೆಗೆ ಅದು ನಿಜಕ್ಕೂ ನುಂಗಲಾರದ ತುತ್ತು.

ಅವರಿಗೆ ಇದೊಂದು ಮಹಾದ್ವಂದ್ವದ ಮತ್ತು ವೈರುಧ್ಯಗಳ ಸಮಯ. ವೈಯಕ್ತಿಕವಾಗಿ ಹುಟ್ಟುವ ಭಾವನೆಗಳು ಮತ್ತು ವಿಚಾರಗಳು ಸಾಮಾಜಿಕವಾಗಿ ಮನ್ನಣೆಯನ್ನೂ ಅಥವಾ ಸ್ವೀಕೃತಿಯನ್ನೂ ಪಡೆಯದಂತಹ ಅಳುಕುಗಳು ಮತ್ತು ಅಡ್ಡಿಗಳು ಅವರಿಗೆ ಬಹಳಷ್ಟು ತ್ರಾಸನ್ನೊಡ್ಡುವಂತವು.

ತಾವು ಕೇಳಿದ್ದನ್ನು, ಒಪ್ಪಿದ್ದನ್ನು, ಅಭ್ಯಾಸ ಮಾಡಿರುವಂತಹ ವಿಚಾರಗಳನ್ನು ತಮ್ಮೊಳಗೆ ಅರಗಿಸಿಕೊಳ್ಳುವುದಿರಲಿ, ಇಟ್ಟುಕೊಳ್ಳಲೂ ಆಗುವುದಿಲ್ಲ.

ಒಬ್ಬ ಯುವಕನೊಡನೆ ಸಮಾಲೋಚನೆ ಮಾಡುವಾಗ ಅವನು ಅವನ ಸಮಸ್ಯೆಯನ್ನು ಹೇಳಿಕೊಂಡಿದ್ದು ಹೀಗೆ. “ಸರ್, ನಾನು ದೇವಸ್ಥಾನಕ್ಕೆ ಹೋದಾಗ ಅಲ್ಲಿ ಇದ್ದಕ್ಕಿದ್ದಂತೆ ಮೂತ್ರ ಮಾಡಿಬಿಟ್ಟರೆ ಹೇಗೆ ಅನ್ನಿಸುತ್ತದೆ. ದೇವರ ಪೂಜೆ ಮಾಡುವಾಗ ಅಸಭ್ಯವಾಗಿ ಮಾತಾಡುತ್ತಾ ಅತಿರೇಕವಾಗಿ ವರ್ತಿಸಿಬಿಡುತ್ತೇನೋ ಏನೋ ಎಂಬ ಭಯವಾಗುತ್ತಿರುತ್ತದೆ. ಕೆಟ್ಟಾಕೆಟ್ಟ ಮಾತುಗಳನ್ನು ಜೋರಾಗಿ ಹೇಳಿಬಿಡುತ್ತೀನೇನೋ ಎಂದು ಭಯದಲ್ಲೇ ತುಂಬಾ ಎಚ್ಚರಿಕೆಯಿಂದ ದೇವಸ್ಥಾನದಿಂದ ಬೇಗನೆ ಹೊರಗೆ ಬಂದುಬಿಡುತ್ತೇನೆ.”

ಇನ್ನೊಬ್ಬ ಹೀಗೆ ಹೇಳಿಕೊಂಡಿದ್ದ. “ನಾನು ಯಾವುದೇ ಹೆಂಗಸಾಗಲಿ, ಚಿಕ್ಕಮ್ಮ, ತಂಗಿ, ಅಕ್ಕ, ಕಸಿನ್ಸ್, ನನ್ನ ಟೀಚರ್, ಪಕ್ಕದ ಮನೆ ಆಂಟಿ, ಕೆಲವೊಮ್ಮೆ ನನ್ನಮ್ಮನೂ ಸೇರಿದಂತೆ, ಎಲ್ಲಿ ಅಸಭ್ಯವಾಗಿ ಅದರಲ್ಲೂ ಲೈಂಗಿಕವಾಗಿ ವರ್ತಿಸಿಬಿಡುತ್ತೇನೋ ಎಂಬ ಭಯವಾಗುತ್ತಿರುತ್ತದೆ. ಅವರ ಜೊತೆ ಒಬ್ಬನೇ ಎಲ್ಲಿಗೇ ಹೋಗಲೂ ಭಯವಾಗುತ್ತದೆ. ನಾನೂ ಮತ್ತು ಅವರೂ ಯಾವುದೇ ಸಂದರ್ಭದಲ್ಲಿ ಏಕಾಂತದಲ್ಲಿ ಇದ್ದರೆ, ಲೈಂಗಿಕವಾಗಿ ವರ್ತಿಸಿ ಎಲ್ಲಿ ನನ್ನ ಮಾನ ಕಳೆದುಕೊಳ್ಳುವೆನೋ ಎಂಬ ಭಯ ನನಗೆ ಕಾಡಲು ಶುರುವಾಗುತ್ತದೆ. ನಾನು ನನ್ನ ತೀರ ಹತ್ತಿರದ ಸಂಬಂಧಿಗಳ, ಇತರರ ಹಾಗೂ ಗೆಳತಿಯರ, ಗೆಳೆಯರ ಸೋದರಿಯರ ಜೊತೆಗೆ ಒಳ್ಳೆಯ ಹೆಸರು ಪಡೆದಿದ್ದೇನೆ. ಆದರೆ, ನಾನು ನನಗೇ ತಿಳಿಯದಂತೆ ಹೀಗೆ ವರ್ತಿಸಿಬಿಟ್ಟರೆ ಏನು ಗತಿ ಎಂಬ ಭಯ ಕಾಡುತ್ತದೆ.”

ಒಬ್ಬಳು ಯುವತಿ, “ನಾನು ಯಾವುದೇ ಪುರುಷರನ್ನು ನೋಡಿದರೂ ಇವರು ಏನಾದರೂ ನನ್ನ ಜೊತೆಗೆ ಸಂಬಂಧ ಬೆಳೆಸಬಹುದೇ ಎಂದು ಅನಿಸುತ್ತಿರುತ್ತದೆ. ಅವರ ಜೊತೆಗಿನ ಯಾವುದೇ ಸಂಬಂಧವಾಗಲಿ, ಲೈಂಗಿಕವಾಗಿ ಅವರು ನನ್ನ ಅಪ್ರೋಚ್ ಮಾಡಬಹುದು, ಆಗ ಮೆಲ್ಲನೆ ಒಪ್ಪಿಕೊಂಡುಬಿಟ್ಟರೆ ಏನು ಕಷ್ಟ? ಒಂದು ವೇಳೆ ಅವರು ಅದನ್ನೇ ಮುಂದಿಟ್ಟುಕೊಂಡು  ಬ್ಲ್ಯಾಕ್  ಮೇಲ್ ಮಾಡಲು ಶುರು ಮಾಡಿದರೆ ಏನು ಮಾಡುವುದು ಎಂಬ ಭಯವೂ ಆಗುತ್ತದೆ.”

“ನಾನು ಸಾರ್ವಜನಿಕವಾಗಿ ಇದ್ದಕ್ಕಿದ್ದಂತೆ ಬಟ್ಟೆ ಬಿಚ್ಚಿ ಓಡಿಬಿಡುತ್ತೇನೇನೋ ಎಂಬ ಭಯವಾಗುತ್ತದೆ. ಬಟ್ಟೆ ಬಿಚ್ಚುವ ಆಸೆ ತುಂಬಾ ಆಗುತ್ತಿರುತ್ತದೆ. ಆದರೆ ತುಂಬಾ ತಡೆದುಕೊಳ್ಳುತ್ತಿರುತ್ತೇನೆ. ಕೆಲವೊಮ್ಮೆ ಅದನ್ನು ಮೀರಿ ಬಟ್ಟೆ ಬಿಚ್ಚಿಬಿಟ್ಟರೆ ಏನು ಗತಿ?” ಎಂಬ ಭಯವನ್ನು ಹುಡುಗರೂ ಮತ್ತು ಹುಡುಗಿಯರಲ್ಲಿಬ್ಬರಲ್ಲೂ ಕೇಳಿದ್ದೇನೆ.

ಇಷ್ಟೇ ಅಲ್ಲ. ಪ್ರದರ್ಶನ ಕಾಮಾಸಕ್ತಿ, ಹುಡುಗಿಯರೂ ಮತ್ತು ಹುಡುಗರಿಬ್ಬರೂ ತಮ್ಮ ತಮ್ಮ ದೇಹದ ಉಬ್ಬು ತಗ್ಗುಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಕಾಣುವಂತೆ ಮಾಡಿಕೊಳ್ಳುವ ಇಚ್ಛೆ, ಬೇಡಬೇಡವೆಂದರೂ ಇತರರ ದೇಹದ ಉಬ್ಬುತಗ್ಗುಗಳ ಕಡೆಗೆ ಕಣ್ಣುಗಳು ತಂತಾನೇ ಜಾರಿಹೋಗುವುದು, ಮನೆಯಲ್ಲಿ ಒಬ್ಬರೇ ಇರುವಾಗ ತಮ್ಮದೇ ನಗ್ನ ದೇಹವನ್ನು ಕನ್ನಡಿಯಲ್ಲಿ ನೋಡಿಕೊಳ್ಳುವುದು. ತಮ್ಮ ದೇಹದ ಉಬ್ಬುತಗ್ಗುಗಳನ್ನು ಅಥವಾ ನಗ್ನ ಶರೀರವನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ನೋಡಿಕೊಳ್ಳುವುದು ಇತ್ಯಾದಿಗಳ ಕೇಸ್‌ಗಳನ್ನೂ ನೋಡುತ್ತಿರುತ್ತೇವೆ.

ಏಕೆ ಹೀಗೆ? ತಮ್ಮಲ್ಲಿ ಈ ಬಗೆಯ ಅನೈತಿಕ ಸಂಬಂಧಗಳ ಮತ್ತು ಅಶ್ಲೀಲ ವಿಚಾರಗಳು ಬರುತ್ತಿರುತ್ತವೆ? ತಾನು ಕೆಟ್ಟ ವ್ಯಕ್ತಿಯೇ? ಇದೇ ಮುಂದೆ ನನ್ನ ಬದುಕನ್ನು ಹಾಳು ಮಾಡುವಂತಹ ಕಾರಣವಾಗಿಬಿಡುತ್ತದೆಯೇ? ಇದರಿಂದಾಗಿ ನನ್ನ ಮನೆಯವರ ಅಥವಾ ನನ್ನ ಒಳ್ಳೆಯ ವ್ಯಕ್ತಿಯೆಂದು ನಂಬಿಕೊಂಡಿರುವ ವ್ಯಕ್ತಿಗಳ ಮುಂದೆ ಕೀಳಾಗಿ ಹೋಗುವೆನೇ? ಇತ್ಯಾದಿ ಭಯಗಳನ್ನು ಅನೇಕ ಯುವಜನರನ್ನು ಕಾಡುವುದೇ ಅಲ್ಲದೇ ಅದರಲ್ಲಿಯೇ ಖಿನ್ನತೆಗೆ ಒಳಗಾಗಿಬಿಡುತ್ತಾರೆ. ಇದನ್ನು ಹೊರಗೆ ಹೇಳಿಕೊಳ್ಳಲಂತೂ ಅವರಿಗೆ ಆಗುವುದೇ ಇಲ್ಲ. ಇನ್ನು ತಮ್ಮ ಒಳಗೇ ಇಟ್ಟುಕೊಂಡು ಕೊರಗುವ ಕಾರಣದಿಂದ ಮಂಕಾಗುತ್ತಾ ಹೋಗುತ್ತಾರೆ.

ಯುವಜನರಲ್ಲಿ ನೈತಿಕತೆಯ ಭಯವೆಂಬುದು ಉಂಟಾಗುವುದೂ ಮತ್ತು ಸ್ವಾಭಾವಿಕವಾದಂತಹ ಭಾವನೆಗಳನ್ನು ಎಲ್ಲಿಯೂ ಬಹಿರಂಗ ಪಡಿಸಲಾಗದ ಕಾರಣದಿಂದ ಒಳಗೇ ತಳಮಳಿಸುತ್ತಿರುತ್ತಾರೆ. ಆದ್ದರಿಂದಲೇ ಉಂಟಾಗುವಂತಹ ಖಿನ್ನತೆಗಳಲ್ಲಿ ಒಳಗಾಗಿ ನೋಡುಗರ ಕಣ್ಣಿಗೆ ಬೇರೆ ಏನೋ ವ್ಯತ್ಯಾಸವಿರುವಂತೆ ಕಾಣುವುದಾದರೂ ಇಂಥಹುದೇ ಎಂದು ತಿಳಿಯಲಾಗುವುದಿಲ್ಲ.

ಲೈಂಗಿಕ ಅಭಿಲಾಷೆಗಳು ಮತ್ತು ದೇಹದಲ್ಲಿ ಆಗ್ಗಿಂದಾಗ್ಗೆ ಉಂಟಾಗುವ ಹಾರ್ಮೋನು ಮತ್ತು ರಾಸಾಯನಿಕ ವ್ಯತ್ಯಾಸಗಳು ಸಹಜವಾಗಿಯೇ ಕಾಮುಕ ವಿಚಾರಗಳನ್ನೂ ಮತ್ತು ಭಾವನೆಗಳನ್ನೂ ಉಂಟುಮಾಡುತ್ತವೆ. ಆದರೆ ಸಮಾಜ ವಿಧಿಸಿರುವ ನೈತಿಕ ಚೌಕಟ್ಟು ಅವರ ಅಭಿವ್ಯಕ್ತಿಗೆ ಅಡ್ಡಗಾಲಾಗುತ್ತದೆ. ಕೆಲವರು ತಾವು ಇತರರನ್ನು ಬೈಯುವಾಗ ಅತ್ಯಂತ ಲೈಂಗಿಕವಾಗಿಯೇ ಪದಗಳನ್ನು ಬಳಸಿ, ಸಾಮಾನ್ಯವಾಗಿ ಹೇಳುವಂತೆ ಪೋಲಿ ಮಾತುಗಳಲ್ಲಿ ಎರ‍್ರಾಬರ‍್ರಿ ಬೈಯುವುದು ಕೂಡ ಅದುಮಿಟ್ಟುಕೊಂಡಿರುವ, ಹುದುಗಿರುವ ಹಳತಾದ ಲೈಂಗಿಕತೆಯನ್ನು ಹೊರಗೆ ಹಾಕುವುದೇ ಆಗಿರುತ್ತದೆ. ಕೆಲವರು ವೇಷಭೂಷಣದ ಸಹಜತೆ ಎಂಬಂತೆ ಅಂಗಾಂಗ ಪ್ರದರ್ಶನಗಳನ್ನೂ ಮಾಡುತ್ತಿರುತ್ತಾರೆ. ಅಕಸ್ಮಾತ್ ಎಂಬಂತೆ ಅಥವಾ ಆತ್ಮೀಯತೆ ಎಂಬಂತೆ ಅಗತ್ಯಕ್ಕಿಂತ ಹೆಚ್ಚಾಗಿ ಇತರರನ್ನು ಮುಟ್ಟುವುದು, ಮೈ ತಗುಲಿಸುವುದು ಇತ್ಯಾದಿಗಳನ್ನೂ ಕೂಡ ಮಾಡುತ್ತಿರುತ್ತಾರೆ.

ತಮ್ಮ ಸುಪ್ತ ಕಾಮುಕಾಭಿಲಾಷೆಯನ್ನು ಪರೋಕ್ಷವಾಗಿ ಹೊರಗೆಡವಿಕೊಳ್ಳುವುದಕ್ಕೂ, ಸರಳ ಪ್ರೀತಿ ಮತ್ತು ಆತ್ಮೀಯತೆಯಿಂದ ಮುಟ್ಟುವುದು ಮತ್ತು ಅಪ್ಪಿಕೊಳ್ಳುವುದಕ್ಕೂ ಢಾಳಾದ ವ್ಯತ್ಯಾಸಗಳಿರುತ್ತವೆ. ಈ ಮನೋಭಾವದ ಅಥವಾ ಮನಸ್ಥಿತಿಯನ್ನು ಅಧ್ಯಯನ ಮಾಡಿರುವಂತವರು ಸುಲಭವಾಗಿ ಇದನ್ನು ಗ್ರಹಿಸುತ್ತಾರೆ. ಆದರೆ, ಆ ವ್ಯಕ್ತಿಗಳಿಗೆ ತಾವು ತಮ್ಮ ಹುದುಗಿರುವ ಕಾಮುಕಾಭಿಲಾಷೆಯನ್ನು ವ್ಯಕ್ತಪಡಿಸುತ್ತಿದ್ದೇವೆಂದು ಅರಿವಿರುವುದಿಲ್ಲ.

ಯುವಜನರು ಈ ಬಗೆಯ ಖಿನ್ನತೆಗಳಿಗೆ ಒಳಗಾಗುವ ಮುಖ್ಯ ಕಾರಣವೆಂದರೆ, ತಮ್ಮ ಸಹಜ ಲೈಂಗಿಕ ವಿಚಾರಗಳನ್ನು ಅನೈತಿಕ ಅಥವಾ ಅಶ್ಲೀಲದ ವ್ಯಾಪ್ತಿಗೆ ಸರಿಸಿಬಿಡುವುದರಿಂದ. ತಮಗೆಂದೇ ಪ್ರತ್ಯೇಕವಾದ ಕೋಣೆಗಳಿಲ್ಲದ ಯುವಕರು ಅಥವಾ ಯುವತಿಯರು ಇತರರೊಂದಿಗೆ ಸಾಮಾನ್ಯ ಕೋಣೆಯಲ್ಲಿ ಅಥವಾ ಹಾಲ್‌ನಲ್ಲಿ ಕನಸುಗಳಲ್ಲಿ ಬರುವ ಲೈಂಗಿಕ ಕ್ರಿಯೆಗಳಿಂದಾಗಿ ತಾನು ಎಲ್ಲಿ ಹೊರಗೆ ಹಾಸುಗೆಯ ಮೇಲೆ ವರ್ತಿಸಿಬಿಡುತ್ತೇನೋ ಎಂಬ ಅಂಜಿಕೆಯಿಂದ ಸರಿಯಾಗಿ ನಿದ್ರೆಯನ್ನೂ ಮಾಡದೇ ನಿದ್ರಾಹೀನತೆಗೆ ಜಾರುತ್ತಾರೆ.

ಯುವಕರು ಇಂತಹ ಖಿನ್ನತೆಗಳಿಗೆ ಜಾರುವುದಕ್ಕೆ ಅವರ ಕೌಟುಂಬಿಕ ಮತ್ತು ಸಾಮಾಜಿಕ ಪರಿಸರವೇ ಕಾರಣವಾಗುತ್ತದೆ. ಇದರ ಪರಿಣಾಮವನ್ನು ಬಹುಪಾಲು ಅನುಭವಿಸುತ್ತಾ ವ್ಯಕ್ತಿಗತವಾಗಿ ನರಳುವುದು ಮತ್ತು ಕೆಲವೊಮ್ಮೆ ಅದರ ಪ್ರತಿಕ್ರಿಯಾತ್ಮಕ ಪರಿಣಾಮಗಳನ್ನು ಎದುರಿಸುವುದು ಕುಟುಂಬ ಮತ್ತು ಸಮಾಜವೂ ಕೂಡ.

  • ಯೋಗೇಶ್ ಮಾಸ್ಟರ್, ರಂಗಕರ್ಮಿ

Leave a Reply