ಲೈಂಗಿಕತೆಯ ಮೂಢನಂಬಿಕೆಗಳಲ್ಲಿ ನರಳುವ ಪಾಪದ ಹುಡುಗರು

3 years ago

ಇತ್ತೀಚೆಗೆ ಗಾಂಧಿ ಬಜಾರಿನ ಮುಚ್ಚಿದ ಅಂಗಡಿಯೊಂದರ ಮುಂದೆ, ರಾತ್ರಿ ಮುಸುಕುತ್ತಿದ್ದ ಮಂದಗತ್ತಲಿನ ಸಮಯದಲ್ಲಿ ಸ್ವಾಮಿ ವಿವೇಕಾನಂದರು ಹೇಗೆ ಮರಣಿಸಿದರು ಎಂಬ ವಿಷಯವೊಂದರ ಮೇಲೆ ಅದೊಂದು ಯುವಕರ ಗುಂಪಿನಲ್ಲಿ ಚರ್ಚೆಯಾಗುತ್ತಿತ್ತು. ಅದನ್ನು ಗಂಭೀರವಾಗಿ ಅವರು ಚರ್ಚಿಸುತ್ತಿದ್ದರೂ ಕೇಳುತ್ತಿದ್ದವರಿಗೆ ಮಾತ್ರ ನಗು ತಡೆಯಲಾಗುತ್ತಿರಲಿಲ್ಲ.
ಅವರ ಚರ್ಚೆಯ ಒಟ್ಟು ಸಾರಾಂಶವೆಂದರೆ, “ಸ್ವಾಮಿ ವಿವೇಕಾನಂದರು ಮರಣಿಸಿದ್ದು ಬ್ರಹ್ಮಚರ್ಯೆಯನ್ನು ಅವರು ಅಖಂಡವಾಗಿ ಅಭ್ಯಾಸ ಮಾಡಿದ್ದರಿಂದ. ಅವರು ಅತ್ಯಂತ ಕಟ್ಟುನಿಟ್ಟಾಗಿ ಬ್ರಹ್ಮಚರ್ಯೆಯನ್ನು ಅಭ್ಯಾಸ ಮಾಡುತ್ತಿದ್ದ ಕಾರಣದಿಂದ ಅವರಲ್ಲಿ ಉಂಟಾಗುತ್ತಿದ್ದ ವೀರ್ಯವು ಹೊರಕ್ಕೆ ಬರಲಾಗದೇ ಒಳಗೆಯೇ ನೆತ್ತಿಗೇರಿ ಮರಣಿಸಿದರು. ಕೆಲವರು ಇದನ್ನು, ವೀರ್ಯವು ನೆತ್ತಿಗೇರುವ ಕ್ರಿಯೆಯನ್ನು ತಾವೇ ಧ್ಯಾನದ ಮೂಲಕ ಮಾಡಿಕೊಂಡಿದ್ದರು ಎಂದು ಹೇಳುತ್ತಾರೆ. ಆದ್ದರಿಂದ ಸಿಕ್ಕಾಪಟ್ಟೆ ಬ್ರಹ್ಮಚರ್ಯೆಯನ್ನು ಅಭ್ಯಾಸ ಮಾಡಬಾರದು. ವೀರ್ಯ ಸ್ಖಲನವನ್ನು ತಡೆಯಬಾರದು. ಹಾಗೆಯೇ ಸಿಕ್ಕಾಪಟ್ಟೆ ವೀರ್ಯ ಸ್ಖಲನವನ್ನೂ ಮಾಡಬಾರದು. ಅದರಿಂದ ನರದೌರ್ಬಲ್ಯ ಉಂಟಾಗಿ ಮುಂದೆ ಉದ್ರೇಕ ಸಮಸ್ಯೆ, ಶೀಘ್ರ ಸ್ಖಲನದ ಸಮಸ್ಯೆಯುಂಟಾಗುವುದಲ್ಲದೇ ಮಕ್ಕಳಾಗದಿರುವ ಸಾಧ್ಯತೆಗಳೂ ಉಂಟು. ಕೆಲವೊಮ್ಮೆ ಅತಿ ವೀರ್ಯ ಪತನದಿಂದ ನಿಮಿರುವಿಕೆಯ ಸಮಸ್ಯೆಯೂ ಬರುತ್ತದೆ” ಇತ್ಯಾದಿ ಇತ್ಯಾದಿ.

ಆ ಹುಡುಗರಿಗೆ ರಾಜಯೋಗವೆಂಬ ಧ್ಯಾನದ ಅಭ್ಯಾಸವಾಗಲಿ, ಬ್ರಹ್ಮಚರ್ಯೆಯನ್ನು ಯಾವ ಪರಿಕಲ್ಪನೆಗಳಲ್ಲಿ ಬಳಸುತ್ತಾರೆಂದಾಗಲಿ, ಕುಂಡಲಿನಿ ಶಕ್ತಿ ಅಥವಾ ಶರೀರದಲ್ಲಿರುವ ಚಕ್ರಗಳ ಮತ್ತು ಕೊನೆಯ ಚಕ್ರ ಸಹಸ್ರಾರದ ಬಗ್ಗೆಯಾಗಲಿ ತಿಳಿದಿರದ ಕಾರಣ ವೀರ್ಯ ನೆತ್ತಿಗೇರಿ ವಿವೇಕಾನಂದ ಮರಣಿಸಿದರು ಎಂದು ಹೇಳುವಷ್ಟು ಪಾಪದವರಾಗಿದ್ದರು.

ಮೂಢನಂಬಿಕೆ ಎಂಬುದು ಬರಿಯ ದೇವರ ವಿಷಯಗಳಲ್ಲಿ, ಧರ್ಮ ಅಥವಾ ಆಚರಣೆಗಳಲ್ಲಿ ಮಾತ್ರವೇ ಎಂದು ಯಾರಾದರೂ ತಿಳಿದುಕೊಂಡಿದ್ದರೆ ಅವರಿಗೆ ಹರೆಯದವರ ಬಗ್ಗೆ ತಿಳಿದಿಲ್ಲ ಎಂದೇ ಅರ್ಥ!

ಲೈಂಗಿಕತೆಯ ವಿಷಯವಾಗಿ ಯುವಜನರಲ್ಲಿ ಹರಡಿರುವ ಮೂಢನಂಬಿಕೆಗಳು ಹತ್ತು ಹಲವು. ತಮ್ಮಲ್ಲಿರುವ ವೀರ್ಯವನ್ನು ಹಸ್ತಮೈಥುನದ ಮೂಲಕ ಹೊರಗೆ ಹಾಕಿ ಬಿಡಬಾರದು, ಅದನ್ನು ಹಾಗೆಯೇ ಉಳಿಸಿಕೊಂಡು ಇರಿಸಿಕೊಂಡಿರಬೇಕು. ಏಕೆಂದರೆ ತಾವು ಮುಂದೆ ಮದುವೆಯಾಗಿ ಲೈಂಗಿಕ ಸಂಗಾತಿಯೊಬ್ಬಳನ್ನು ಪಡೆದಾಗ ಮಗುವು ಹುಟ್ಟಲು ಬೇಕಾಗುವುದು ಎಂಬಷ್ಟರ ಮಟ್ಟಿಗಿನ ಅವೈಜ್ಞಾನಿಕ ನಂಬಿಕೆ ಇರುವವರನ್ನೂ ನಾನು ನೋಡಿದ್ದೇನೆ. ಹಾಗಾಗಿ ಸ್ವಪ್ನ ಸ್ಖಲನವಾದಾಗ ಅಯ್ಯೋ ಮುಂದೆ ಹುಟ್ಟಲಿರುವ ತಮ್ಮ ಮಗುವೊಂದು ಈಗಲೇ ಸತ್ತು ಹೋಯಿತೆಂಬಂತೆ ದುಃಖಿತವಾಗುವ ಯುವಜನರನ್ನೂ ಕಂಡಿದ್ದೇನೆ.

ಹಸ್ತಮೈಥುನದಿಂದಾಗಿ ನರಗಳ ದೌರ್ಬಲ್ಯ ಉಂಟಾಗಿ ನಿಮಿರುವಿಕೆಯ ಸಮಸ್ಯೆ ಉಂಟಾಗುತ್ತದೆ, ಶಿಶ್ನವು ಕ್ರಮೇಣ ಸಣ್ಣಗಾಗುತ್ತಾ ಹೋಗುತ್ತದೆ, ಶೀಘ್ರ ಸ್ಖಲನ ಉಂಟಾಗುತ್ತದೆ ಹಾಗೂ ಮಕ್ಕಳಾಗುವುದಿಲ್ಲ, ಎಂದು ನಂಬಿ ಸದಾ ಕೀಳರಿಮೆಯಲ್ಲಿ, ಭಯದಲ್ಲಿ ಒದ್ದಾಡುವ ಯುವಕರ ಸಂಖ್ಯೆ ಕಡಿಮೆಯೇನಿಲ್ಲ. ಅಂಥವರ ಭಯ ಮತ್ತು ಮನೋದೌರ್ಬಲ್ಯವನ್ನು ಬಂಡವಾಳವಾಗಿರಿಸಿಕೊಂಡು ಎಲ್ಲಾ ಖ್ಯಾತ ಪತ್ರಿಕೆಗಳಲ್ಲೂ ನಿಮ್ಮ ಲಿಂಗವನ್ನು ದಪ್ಪನಾಗಿಸುವ ಯಂತ್ರ ಅಥವಾ ಔಷಧಿಯೆಂದೂ, ಇಡೀ ರಾತ್ರಿ ಸುಖಿಸುವ ಔಷಧಿಯೆಂದೂ ಲೈಂಗಿಕ ಆರೋಗ್ಯದ ಪಂಡಿತರು ಅನೇಕ ಜಾಹಿರಾತುಗಳ ಮೂಲಕ ಸೆಳೆಯುತ್ತಾರೆ.

ಇರುವ ಸಾಮರ್ಥ್ಯವು ಮತ್ತಷ್ಟು ಹೆಚ್ಚಾಗಿ ಮಗದಷ್ಟು ಮಂಚ ಮುರಿದುಹೋಗುವಷ್ಟು ಸುಖಿಸುವ ಕನಸು ಕಾಣುತ್ತಲೂ ಅಂತಹ ಜಾಹಿರಾತುಗಳ ಮೇಲೆ ವೆಚ್ಚ ಮಾಡುವವರಿದ್ದಾರೆ.

ಇವುಗಳಿಗೆ ಒಮ್ಮೆ ಫೋನಾಯಿಸಿ ನೋಡಿ. ನಿಮ್ಮ ವಿವರ ಕೇಳುವ ನಾಟಕ ಮಾಡುತ್ತಾರೆ. ನೀವು ಹೇಳುತ್ತೀರಿ. ನಂತರ ಅವರು ನಿಮ್ಮ ಮನೆಯ ವಿಳಾಸಕ್ಕೆ ವಿಪಿಪಿ ಪಾರ್ಸಲ್ ಕಳಿಸಿಕೊಡುತ್ತಾರೆ. ಅದೊಂದು ಪುಟ್ಟ ಕಾರ್ಟನ್ ಅಥವಾ ಆಪಲ್ ವುಡ್‌ನ ಬಾಕ್ಸ್ ಆಗಿರುತ್ತದೆ. ಅದರಲ್ಲಿ ಎಂಥದ್ದೋ ಒಂದು ಬಗೆಯ ಎಣ್ಣೆ, ಎರಡು ಮೂರು ಪ್ಲಾಸ್ಟಿಕ್ ಕವರ್‌ಗಳಲ್ಲಿ ಪುಡಿ ಕಳುಹಿಸಿರುತ್ತಾರೆ. ಅದಕ್ಕೆ ನಾಲ್ಕು ಅಥವಾ ಐದು, ಮಿನಿಮಮ್ ಮೂರು ಸಾವಿರ ಕೊಟ್ಟು ಪಾರ್ಸಲ್ ಬಿಡಿಸಿಕೊಳ್ಳುತ್ತೀರಿ. ನಂತರ ನಿಮಗೆ ಮತ್ತೆ ಫೋನ್ ಬರುತ್ತದೆ. ಈಗ ಕಳುಹಿಸಿರುವ ಔಷಧಿಯನ್ನು ಉಪಯೋಗಿಸಿ ಅಥವಾ ಎಣ್ಣೆಯನ್ನು ಹಚ್ಚಿಕೊಳ್ಳಿ ಎಂದು ಹೇಳುತ್ತಾರೆ. ಕೆಲವೊಮ್ಮೆ, ಹಾಗೆ ಮಾಡುವ ಮುನ್ನ ಇನ್ನೊಂದು ಪರೀಕ್ಷೆ ಮಾಡುವ ಸಲುವಾಗಿ ನಿಮ್ಮ ವೀರ್ಯವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಸೀಲ್ ಮಾಡಿ (ಆ ಪ್ಲಾಸ್ಟಿಕ್ ಕವರನ್ನೂ ಅವರೇ ಕಳಿಸಿರುತ್ತಾರೆ) ಕಳುಹಿಸಲು ಹೇಳುತ್ತಾರೆ. ನೀವು ನಿಮ್ಮ ವೀರ್ಯವನ್ನು ಕಳುಹಿಸುತ್ತೀರಿ. ದುರ್ಬಲ ಮನಸ್ಕರಾದರೆ, ಅಲ್ಲಿಗೆ ನಿಮ್ಮ ಕಥೆ ಮುಗಿಯಿತು.

ಅವರ ಮುಂದಿನ ಫೋನ್ ಬಂದಾಗ, ನೀವು ಒಂದು ಲಿಂಗ ವೈಕಲ್ಯದಿಂದ ಬಳಲುತ್ತಿದ್ದೀರಿ ಎಂಬ ಆಘಾತಕಾರಿ ಸುದ್ಧಿ ಹೇಳುತ್ತಾರೆ. ಹಸ್ತಮೈಥುನದಿಂದ ನಿಮ್ಮ ಲಿಂಗದ ನರಗಳು ಸಂಪೂರ್ಣ ದುರ್ಬಲವಾಗಿ ಇನ್ನೇನು ಇನ್ನೆರಡು ವಾರಗಳಲ್ಲಿ ಸಂಪೂರ್ಣವಾಗಿ ಕಳಚಿಯೇ ಬಿದ್ದು ಹೋಗುತ್ತದೆ ಎಂಬಂತೆ ವರ್ಣಿಸುತ್ತಾರೆ. ಅದನ್ನು ಗಟ್ಟಿಗೊಳಿಸಲು, ಲಿಂಗವು ಬಿದ್ದು ಹೋಗದಿರಲು, ಉಳಿದ ಜನ್ಮವಿಡೀ ಮಾಡುವ ಎಲ್ಲಾ ಕೆಲಸಗಳನ್ನು ಬಿಟ್ಟು ಹಗಲು ರಾತ್ರಿ, ಒಳಗೆ ಹೊರಗೆ ಸಂಭೋಗದಲ್ಲಿಯೇ ನಿರತವಾಗಿರುವಂತಹ ಅದ್ಭುತವಾದ ಔಷಧವನ್ನು ತಮಗೆ ಕಳುಹಿಸಲು ನೀವು ಕೇವಲ ಇಪ್ಪತ್ತು ಅಥವಾ ಇಪ್ಪತ್ತೆರಡು ಸಾವಿರದ ಔಷಧಿ ಅಥವಾ ಚಿಕಿತ್ಸೆ ನೀಡುತ್ತೇವೆ ಎಂದು ತಿಳಿಸುತ್ತಾರೆ. ನೀವು ನಂಬಿದಿರೋ, ಅಲ್ಲಿಗೆ ಆ ಬ್ಲೇಡ್ ಕಂಪನಿಯ ಉದ್ದೇಶ ಯಶಸ್ವಿಯಾಯಿತೆಂದು!

ಲೈಂಗಿಕತೆಯನ್ನು ಮುಚ್ಚಿಡುವಂತಹ ನಾಚಿಕೆಯನ್ನು ಅಥವಾ ಅವಮಾನವನ್ನು ಸೃಷ್ಟಿಸಿರುವಂತಹ ಈ ಸಮಾಜದಲ್ಲಿ ನಮ್ಮ ಯುವ ಜನತೆಯು ಮಾನಸಿಕವಾಗಿಯೂ ಮತ್ತು ದೈಹಿಕವಾಗಿಯೂ ಎಷ್ಟೋ ಸಮಸ್ಯೆಯಿಂದ ಬಳಲುತ್ತಿದೆ. ನಿಜವಾದ ಲೈಂಗಿಕ ತಜ್ಞರ ಬಳಿಗೆ ಹೋಗುವುದರಿಂದ ನರ ದೌರ್ಬಲ್ಯ ಅಥವಾ ಇತರೇ ಕಾರಣದಿಂದ ಒಂದು ವೇಳೆ ಲೈಂಗಿಕ ಸಮಸ್ಯೆ ಉಂಟಾಗಿದ್ದರೆ ಖಂಡಿತ ಚಿಕಿತ್ಸೆಯು ಬಹಳ ಸರಳವಾಗಿಯೇ ಸಿಗುವುದು. ಆದರೆ ಹಾಗೆ ಹೋಗುವುದು, ಹೇಳುವುದು ಅಪಮಾನಕರ ಎಂದು ಭಾವಿಸುವುದರಿಂದ ಅನೇಕ ಬಾರಿ ಇಂತಹ ಗುಪ್ತ ಚಿಕಿತ್ಸಕರ ಬಳಿಗೆ ಹೋಗುವುದು.

ಬೆವರು, ಕಫದಂತೆಯೇ ವೀರ್ಯವೂ ಅಗತ್ಯವಾಗಿ ವಿಸರ್ಜನೆಯಾಗಲೇ ಬೇಕಾದ ತಾಜ್ಯ. ಹಸ್ತಮೈಥುನವೆಂಬುದು ಅತ್ಯಂತ ಸಹಜವಾಗಿರುವಂತಹದ್ದು. ಅದರಿಂದ ಯಾವುದೇ ದೌರ್ಬಲ್ಯಗಳು ಉಂಟಾಗುವುದಿಲ್ಲ ಎಂದೆಲ್ಲಾ ಸೆಕ್ಸ್ಪರ್ ಗಳು ಅದೆಷ್ಟೇ ಹೇಳಿದ್ದರೂ ಫೇಕ್ ಡಾಕ್ಟರ್‌ಗಳು ದಂಧೆ ನಿರಾತಂಕವಾಗಿ ನಡೆಸುತ್ತಿದ್ದಾರೆ ಎಂದರೆ ಯುವಜನತೆ ವಿಜ್ಞಾನಕ್ಕೆ ತೆರೆದುಕೊಂಡಿಲ್ಲವೆಂದೇ ಅರ್ಥ.

  • ಯೋಗೇಶ್ ಮಾಸ್ಟರ್, ರಂಗಕರ್ಮಿ

Leave a Reply