ಬೆಂಗಳೂರು: ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ವಾಲ್ಮೀಕಿ ಜಯಂತಿಯ ಅಂಗವಾಗಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯ ಪ್ರಕಟಿಸಿದರು.
ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಬೆಳಗಾವಿಯ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಮೀಸಲಿಡುವ ತೀರ್ಮಾನವನ್ನು ಕೈಗೊಳ್ಳಲಾಯಿತು. ಆದಕಾರಣ ಎಸ್ ಸಿ ಎಸ್ ಪಿ ಹಾಗೂ ಟಿಎಸ್ ಪಿ ಯೋಜನೆಯಡಿ ಹೆಚ್ಚು ಅನುದಾನ ಖರ್ಚು ಮಾಡಲು ಸಾಧ್ಯವಾಯಿತು. ಮೊದಲು ಈ ಯೋಜನೆಗಳಡಿ ಕೇವಲ 6 ಸಾವಿರ ಕೋಟಿ ಅನುದಾನ ಮೀಸಲಿಡಲಾಗುತ್ತಿತ್ತು. ಆದರೆ ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಈ ಮೊತ್ತವನ್ನು 6 ಸಾವಿರದಿಂದ 30 ಸಾವಿರ ಕೋಟಿಗೆ ಹೆಚ್ಚಳ ಮಾಡಲಾಯಿತು ಎಂದು ತಿಳಿಸಿದರು.
ಹಿಂದಿನ ಸರ್ಕಾರದವರು ಈ ಮೊತ್ತವನ್ನು ಹೆಚ್ಚಿಸಲಿಲ್ಲ. ನಮ್ಮ ಸರ್ಕಾರ ಈ ವರ್ಷದ ಆಯವ್ಯಯದಲ್ಲಿ ಈ ವರ್ಗಗಳಿಗೆ 34 ಸಾವಿರ ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ರಾಜ್ಯದ ಒಟ್ಟು ಜನಸಂಖ್ಯೆಯ ಶೇ.17.1ರಷ್ಟು ಎಸ್ ಸಿ ಹಾಗೂ ಶೇ.7 ರಷ್ಟು ಎಸ್ ಟಿ ವರ್ಗಕ್ಕೆ ಸೇರಿದವರಿದ್ದಾರೆ. 2011ರ ಜನಗಣತಿ ಪ್ರಕಾರ, ಶೇ.24.1 ರಷ್ಟು ಎಸ್ ಸಿ ಹಾಗೂ ಎಸ್ ಟಿ ವರ್ಗದ ಜನಸಂಖ್ಯೆಯಿದೆ. ಈ ಜನಸಂಖ್ಯೆಗನುಗುಣವಾಗಿ ಎಸ್ ಸಿ ಎಸ್ ಟಿ ವರ್ಗಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಡುವ ಬಗ್ಗೆ ಕಾನೂನು ತಂದ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ರಾಜ್ಯ ಪಾತ್ರವಾಗಿದೆ ಎಂದು ಹೇಳಿದರು.
ಯಾವುದೇ ಸರ್ಕಾರಗಳು ಬಂದರೂ ಈ ಕಾನೂನನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಈ ಕಾನೂನು ನಂತರ 2013 ರಿಂದ 2018ರವರೆಗೆ ನಮ್ಮ ಸರ್ಕಾರ ಒಟ್ಟು 88 ಸಾವಿರ ಕೋಟಿ ರೂ.ಗಳನ್ನು ಎಸ್ ಸಿ ಎಸ್ಟಿ ಜನರಿಗೆ ಮೀಸಲಿಡಲಾಗಿತ್ತು. ಈ ಪ್ರಮಾಣದ ಜನಸಂಖ್ಯೆಗೆ ಈ ಅನುದಾನ ರಾಜ್ಯಾಂಗ ಬದ್ಧವಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 8 ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದ್ದು, ಕನ್ನಡ ನಾಡಿನ ಜನತೆಯ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಪ್ರಶಸ್ತಿ ಪುರಸ್ಕ್ರತರ ಸಾಧನೆಗಳು ಎಲ್ಲರಿಗೂ ದಾರಿದೀಪವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ರಾಜನಹಳ್ಳಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸಂನಾನಂದಪುರಿ ಸ್ವಾಮೀಜಿ , ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ, ಬಿ.ನಾಗೇಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಸಚಿವ ಆಂಜನೇಯ, ಮಾಜಿ ಸಂಸದ ಉಗ್ರಪ್ಪ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.




