ಮಂಗಳೂರು: ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕೈಗೊಳ್ಳಲು ಆರ್ಥಿಕ ನೆರವು ನೀಡುವ ವಿಚಾರದಲ್ಲಿ ಕೇಂದ್ರಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪಾದಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಅಧ್ಯಯನಕ್ಕೆ ಕೇಂದ್ರದಿಂದ ತಂಡ ಬಂದು ವರದಿ ಸಲ್ಲಿಸಿದೆ. ರಾಜ್ಯದಿಂದಲೂ ಎರಡು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೆ ಪರಿಹಾರ ಕುರಿತು ಯಾವುದೇ ಪ್ರತಿಕ್ರಿಯೆ ಇಲ್ಲ ಎಂದರು.
ರಾಜ್ಯದ 236 ತಾಲ್ಲೂಕುಗಳಲ್ಲಿ 216 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಬರದಿಂದ ಸುಮಾರು 30 ಸಾವಿರ ಕೋಟಿಯಷ್ಟು ಬೆಳೆ ಹಾನಿಯಾಗಿದೆ. ಇದಕ್ಕಾಗಿ ಸುಮಾರು 17,900 ಕೋಟಿ ಪರಿಹಾರವನ್ನು ಕೇಂದ್ರಕ್ಕೆ ಕೋರಲಾಗಿದೆ. ಆದರೆ ಕೇಂದ್ರದಿಂದ ಇದುವರೆಗೂ ಒಂದು ರೂಪಾಯಿಯೂ ಬಿಡುಗಡೆಯಾಗಿಲ್ಲ ಹಾಗೂ ರಾಜ್ಯ ಸಚಿವರನ್ನು ಭೇಟಿಯಾಗಲು ಕೇಂದ್ರ ಸಚಿವರು ಸಮಯವನ್ನೂ ನೀಡುತ್ತಿಲ್ಲ ಎಂದು ದೂರಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ ಎಂಬುದು ತಿಳಿದಿದೆ. ಆದರೆ ಇದಕ್ಕಾಗಿ ಕಾಂಗ್ರೆಸ್ ಶಾಸಕರಿಗೆ 50 ಕೋಟಿ, ಅಧಿಕಾರದ ಆಫರ್ ನೀಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದರು.
ಪಕ್ಷ ಮತ್ತು ಸರ್ಕಾರದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ ಗೃಹಸಚಿವರ ಆಮಂತ್ರಣದ ಮೇರೆಗೆ ನಿನ್ನೆ ಅವರ ಮನೆಗೆ ಭೋಜನಕ್ಕೆ ಹೋಗಿದ್ದೆ.ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಿಗಮ ಮಂಡಳಿ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಶಾಸಕರಿಗೆ ಅವಕಾಶ ನೀಡಲಾಗುವುದು. ಎರಡನೇ ಹಂತದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮಾಜಿ ಶಾಸಕರನ್ನು ಪರಿಗಣಿಸಲಾಗುವುದು ಎಂದರು.



