ಬೆಂಗಳೂರು: ಕನ್ನಡ ನಾಡು-ನುಡಿ ಜಾಗೃತಿ ಸಮಿತಿ, ಕರ್ನಾಟಕ ಸಂಘ (ರಿ) ಮಂಡ್ಯ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ – ಜಾಗೃತಿ ಸಮಾವೇಶವನ್ನು ದಿನಾಂಕ: 03-08-2025 ಭಾನುವಾರ ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರಿನ ಸರ್ ಕೆ.ಪಿ. ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಆಯೋಜಿಸಲಾಗಿದೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ – ಜಾಗೃತಿ ಸಮಾವೇಶ ಆಯೋಜಕರು ಮಾಡಿರುವ ಮನವಿಯ ಪೂರ್ಣ ಪಾಠ ಇಲ್ಲಿದೆ:
ಕನ್ನಡ ಬಂಧುಗಳಲ್ಲಿ ಆತ್ಮೀಯ ಮನವಿ… ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ 110 ವರ್ಷಗಳ ಹಿಂದೆ 1915ರ ಮೇ ತಿಂಗಳ 15ನೇ ತಾರೀಖು ಕನ್ನಡದ ಕಲೆ, ಸಾಹಿತ್ಯ, ಸಂಸ್ಕೃತಿ, ಜನಪದಗಳ ಸಂವರ್ಧನೆಗಾಗಿ ಸ್ಥಾಪನೆಗೊಂಡ ಸಮಸ್ತ ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಇತ್ತೀಚಿನ ದಿನಗಳಲ್ಲಿ ಸರ್ವಾಧಿಕಾರ-ಭ್ರಷ್ಟಾಚಾರಗಳ ಕೂಪದಲ್ಲಿ ಮುಳುಗಿಸಿ, ದಿಕ್ಕು ದೆಸೆಗಳಿಲ್ಲದಂತೆ ಮಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಸ್ತಿತ್ವ, ಘನತೆ ಮತ್ತು ಪಾವಿತ್ರ್ಯತೆಗಳಿಗೆ ತೀವ್ರ ಧಕ್ಕೆ ಉಂಟುಮಾಡುತ್ತಿರುವುದು ತಮ್ಮೆಲ್ಲರಿಗೂ ತಿಳಿದಿದೆ ಎಂದು ಭಾವಿಸುತ್ತೇವೆ.
ಅದರಲ್ಲೂ ಪ್ರಮುಖವಾಗಿ ಪ್ರಸ್ತುತ ಅವಧಿಯಲ್ಲಿ ಕಸಾಪದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿ ಆಡಳಿತ ನಡೆಸುತ್ತಿರುವ ಮಹಾನುಭಾವರು ದುರಾಡಳಿತ, ದುರ್ವರ್ತನೆ, ದುಂದು ವೆಚ್ಚ (ಆರ್ಥಿಕ ಆಶಿಸ್ತು), ಸರ್ವಾಧಿಕಾರದ ಏಕಸ್ವಾಮ್ಯ ನಿರ್ಧಾರಗಳಿಂದ ಕನ್ನಡ ಸಾಹಿತ್ಯ ಪರಿಷತ್ತನ್ನು ಲಜ್ಜೆಗೇಡಿ ಹೆಜ್ಜೆಗಳನ್ನು ಇಟ್ಟು ನಡೆಸುತ್ತಿದ್ದಾರೆ. ಇವರ ಎಲ್ಲಾ ರೀತಿಯ ಅನ್ಯಾಯ-ಅಕ್ರಮಗಳನ್ನು ಈಗಾಗಲೇ ನಾಡಿನ ಉದ್ದಗಲದಲ್ಲಿ ಪ್ರಾಜ್ಞರು ತೀವ್ರವಾಗಿ ಪ್ರತಿಭಟಿಸಿ ಪ್ರತಿಕ್ರಿಯಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
ಮುಂದುವರೆದು ‘ಕನ್ನಡ ನಾಡು-ನುಡಿ ಜಾಗೃತಿ ಸಮಿತಿ’ಯ ಹೋರಾಟದ ಫಲವಾಗಿ ಪ್ರಸ್ತುತ ರಾಜ್ಯಾಧ್ಯಕ್ಷರು ದುರುಪಯೋಗಪಡಿಸಿಕೊಳ್ಳುತ್ತಿದ್ದ ಸಚಿವ ಸ್ಥಾನಮಾನದ ಸೌಲಭ್ಯಗಳನ್ನು ಸರ್ಕಾರ ಹಿಂಪಡೆದುಕೊಂಡಿದೆ. ದೂರದ ಊರುಗಳಲ್ಲಿ ವಾರ್ಷಿಕ ಸಭೆಗಳನ್ನು ನಡೆಸಿ ಆರ್ಥಿಕ ಅವ್ಯವಹಾರಗಳಿಗೆ ಅನುಮೋದನೆ ಪಡೆಯಲು ಮುಂದಾಗಿದ್ದನ್ನು ಕಾನೂನು ಹೋರಾಟದ ಮೂಲಕ ತಡೆಹಿಡಿಯಲಾಗಿದೆ. ಕಸಾಪದಲ್ಲಿ ರಾಜ್ಯಾಧ್ಯಕ್ಷರು ನಡೆಸಿರುವ ಅವ್ಯವಹಾರಗಳನ್ನು ವಿಚಾರಣೆ ನಡೆಸಲು ಸಹಕಾರ ಇಲಾಖೆ ಆದೇಶ ಹೊರಡಿಸಿದೆ. ಹೋರಾಟದ ತೀವ್ರತೆಯನ್ನು ಗಮನಿಸಿ ಬೆಂಬಲಿಸಿದ ಹಾಗೆ ಕಸಾಪದ ಆಂತರಿಕ ದುರಾಡಳಿತವನ್ನು ವಿರೋಧಿಸಿ ಪ್ರಮುಖ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.
ಕಸಾಪ ಅಧ್ಯಕ್ಷರು ಆಡಳಿತಾತ್ಮಕವಾಗಿ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಾ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಸಂವಿಧಾನ ಬದ್ಧವಾದ, ಸರಳವಾದ, ಸುಸೂತ್ರವಾದ ಆಡಳಿತ ಸ್ನೇಹಿಯಾಗಿದ್ದ ಕಸಾಪದ ನಿಬಂಧನೆಗಳಿಗೆ ವಾಮಮಾರ್ಗದಲ್ಲಿ ಆಮೂಲಾಗ್ರ ತಿದ್ದುಪಡಿ ತಂದು, ಅಧಿಕಾರ ಕೇಂದ್ರೀಕರಣ ಮಾಡಿಕೊಂಡು, ಆಡಳಿತ ಮಂಡಳಿಯ ಚುನಾಯಿತ ಪ್ರತಿನಿಧಿಗಳನ್ನು ಹೆದರಿಸಿ, ಬೆದರಿಸಿ ಅವರ ಹಕ್ಕುಗಳನ್ನು ಕಸಿದುಕೊಂಡು ನಾಮ ನಿರ್ದೇಶಿತ ಸದಸ್ಯರುಗಳ ಸಂಖ್ಯೆ ಹೆಚ್ಚಿಸಿಕೊಂಡು ಒಡೆದಾಳುವ ನೀತಿ ಅನುಸರಿಸುತ್ತಾ, ಹಿರಿಯ ಸಾಹಿತಿಗಳನ್ನು, ಹಿರಿಯ ಸದಸ್ಯರುಗಳನ್ನು ಅವಮಾನಿಸುತ್ತಾ, ಪ್ರಶ್ನಿಸಿದವರನ್ನು ಅನಗತ್ಯವಾದ, ಅಸಂಬದ್ಧವಾದ, ಸಡಿಲವಾದ ಹೇಳಿಕೆಗಳಿಂದ ನಿಂದಿಸುತ್ತಾ, ಹಿರಿಯರ-ಅನುಭವಿಗಳ ಸಲಹೆ-ಅಭಿಪ್ರಾಯಗಳನ್ನು ಪರಿಗಣಿಸದೆ ಕಂಡಕಂಡವರ ಮೇಲೆಲ್ಲಾ ಕಾನೂನಿನ ಹುಸಿ ಬೆದರಿಕೆಗಳನ್ನು ಪ್ರಯೋಗಿಸುತ್ತಾ, ಕನ್ನಡ ಸಾಹಿತ್ಯ ಪರಿಷತ್ತನ್ನು ಕಾನೂನು ಸಾಹಿತ್ಯ ಪರಿಷತ್ತನ್ನಾಗಿಸುತ್ತಾ, ಸರ್ಕಾರದಿಂದ ಬಿಡುಗಡೆಯಾಗುವ ಮತ್ತು ಸಿಎಸ್‌ಆರ್ ಮೂಲಗಳಿಂದ ಹರಿದು ಬರುವ ಕನ್ನಡಿಗರ ತೆರಿಗೆ ಹಣವನ್ನು ನೀತಿ, ನಿಯಮ, ಕಾನೂನು ಕಾಯ್ದೆಗಳನ್ನು ಮೀರಿ ದುರುಪಯೋಗ ಮಾಡಿಕೊಂಡು ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಾ, ದರ್ಪ ದೌರ್ಜನ್ಯಗಳನ್ನು ನಡೆಸುತ್ತಿರುವ ಕಸಾಪದ ರಾಜ್ಯಾಧ್ಯಕ್ಷರ ದುರಾಡಳಿತ, ದುರಾಚಾರಗಳನ್ನು ನಾವೆಲ್ಲರೂ ಏಕತ್ರವಾಗಿ ಗಟ್ಟಿಯಾಗಿ ಪ್ರಶ್ನಿಸಲೇಬೇಕಾಗಿದೆ.
ಆದುದರಿಂದ ದಿನಾಂಕ: 03-08-2025ರ ಭಾನುವಾರ ಬೆಂಗಳೂರಿನ ಸರ್ ಕೆ.ಪಿ. ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ ಹಾಲ್) ದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಸ್ತುತ ರಾಜ್ಯಾಧ್ಯಕ್ಷರ ವೈಯಕ್ತಿಕ ದುರಾಡಳಿತ-ದುರಾಚಾರಗಳನ್ನು ಖಂಡಿಸಿ ಕನ್ನಡ ಸಾಹಿತ್ಯ ಪರಿಷತ್ತನ್ನು ಉಳಿಸಲು ಜಾಗೃತಿ ಸಮಾವೇಶವನ್ನು ನಡೆಸಿ, ರಾಜ್ಯಾಧ್ಯಕ್ಷರ ಆರ್ಥಿಕ ಅವ್ಯವಹಾರಗಳನ್ನು ಮತ್ತು ಪರಮಾಧಿಕಾರದ ದುರಾಡಳಿತವನ್ನು ಕೊನೆಗಾಣಿಸಲು, ರಾಜ್ಯಾಧ್ಯಕ್ಷರನ್ನು ಅಮಾನತುಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಿ, ರಾಜ್ಯಾಧ್ಯಕ್ಷರಿಂದ ಆಗಿರುವ ವೈಯಕ್ತಿಕ ಬೇಜವಾಬ್ದಾರಿಯ ಕರ್ತವ್ಯಲೋಪಗಳಿಗೆ ಸೂಕ್ತ ಕ್ರಮ ಕೈಗೊಂಡು, ಕನ್ನಡ ಸಾಹಿತ್ಯ ಪರಿಷತ್ತಿಗೆ ಆಗಿರುವ ನಷ್ಟಗಳನ್ನು ಅವರಿಂದ ವೈಯಕ್ತಿಕವಾಗಿ ಭರಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಬೇಕಾಗಿದೆ. ಅದಕ್ಕಾಗಿ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಉಳಿವಿಗೆ ಜಾಗೃತರಾಗಿ ಕೈಜೋಡಿಸಬೇಕು ಎಂದು ಕೋರುತ್ತೇವೆ.
ಬನ್ನಿ ಭಾಗವಹಿಸಿ, ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ-ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಿ.
– ಪ್ರೊ. ಕೆ. ಮರುಳಸಿದ್ದಪ್ಪ, ಸುನಂದಾ ಜಯರಾಮ್, ಜಾಣಗೆರೆ ವೆಂಕಟರಾಮಯ್ಯ, ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಡಾ. ಮೀರಾ ಶಿವಲಿಂಗಯ್ಯ, ಡಾ.ವಸುಂಧರಾ ಭೂಪತಿ, ಪ್ರೊ. ಬಿ. ಜಯಪ್ರಕಾಶಗೌಡ, ಮಾವಳ್ಳಿ ಶಂಕರ್, ಆರ್.ಜಿ. ಹಳ್ಳಿ ನಾಗರಾಜ್, ಡಾ. ಬಂಜಗೆರೆ ಜಯಪ್ರಕಾಶ್, ಕೆ.ಎಸ್. ವಿಮಲಾ, ಸಿ.ಕೆ.ರಾಮೇಗೌಡ
ಕನ್ನಡ ನಾಡು-ನುಡಿ ಜಾಗೃತಿ ಸಮಿತಿ, ಕರ್ನಾಟಕ ಸಂಘ (ರಿ) ಮಂಡ್ಯ, ಗುರುಭವನ ಹಿಂಭಾಗ, ಆರ್.ಪಿ. ರಸ್ತೆ, ಮಂಡ್ಯ-571401: 08232-227700, 9448194456, karnatakasanghamandya@gmail.com




