ಪ್ರಿಯ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರಿಗೆ.
ನೀವು ಆರನೆಯ ಬಾರಿಗೆ ಶಿರಸಿಯ ಶಾಸಕರಾಗಿ ನಿಮ್ಮ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದೀರಿ ಜೊತೆಗೆ ಕರ್ನಾಟಕ ವಿಧಾನಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದೀರಿ.
ಕರ್ನಾಟಕದ ಇತಿಹಾಸದಲ್ಲಿ ಆ ಸ್ಥಾನಕ್ಕೆ ಘನತೆ ತಂದ ಶ್ರೀ ವೈಕುಂಠ ಬಾಳಿಗ, ಎಸ್.ಎಂ. ಕೃಷ್ಣ, ಕೆ.ಆರ್.ಪೇಟೆ ಕೃಷ್ಣ ಮತ್ತು ರಮೇಶ್ ಕುಮಾರ್ ಮುಂತಾದ ಮಹನೀಯರು ಪಕ್ಷಭೇದ ಮರೆತು ಅತ್ಯಂತ ಘನತೆಯಿಂದ ಸದನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಒಮ್ಮೆ ಅವರ ಅವಧಿಯ ನಡಾವಳಿಗಳನ್ನು ಪರಿಶೀಲಿಸಿ.
ನೀವು ಈಗ ಬೆಳಗಾವಿಯ ಸುವರ್ಣ ಸೌಧದಲ್ಲಿ ಸಾವರ್ಕರ್ ಎಂಬ ವ್ಯಕ್ತಿಯ ಚಿತ್ರವನ್ನು ಹಾಕುವಾಗ ಮುಖ್ಯಮಂತ್ರಿ ಇರಲಿ, ಶಾಸನ ಸಭೆಯ ಸದಸ್ಯರ ಗಮನಕ್ಕೂ ತಾರದೆ ತಮ್ಮ ಸಣ್ಣತನವನ್ನು ಇಡೀ ನಾಡಿಗೆ ತೋರಿಸಿದ್ದೀರಿ.
ಹದಿನೆಂಟು ವರ್ಷಗಳ ಕಾಲ ಉತ್ತರ ಕರ್ನಾಟಕದ ಉದಯ ಟಿ.ವಿ. ಪ್ರಾದೇಶಿಕ ಕಚೇರಿಯ ಮುಖ್ಯಸ್ಥನಾಗಿ ಕೆಲಸ ಮಾಡಿದ ನನಗೆ ನಿಮ್ಮ ಶಿರಸಿ ಕ್ಷೇತ್ರ ನನ್ನ ವ್ಯಾಪ್ತಿಗೆ ಬಂದರೂ ಕೂಡ ನಿಮ್ಮನ್ನು ಎಂದೂ ವೈಯಕ್ತಿಕವಾಗಿ ಭೇಟಿ ಮಾಡಲಿಲ್ಲ. ಆದರೆ, ನೀವು ಶಿಕ್ಷಣ ಸಚಿವರಾಗಿದ್ದಾಗ ನಿಮ್ಮ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಕುರಿತು, ನಿಮ್ಮ ಸರಳತೆ, ಸೇವಾ ಮನೋಭಾವ ಕುರಿತು ನಮ್ಮ ವರದಿಗಾರರಿಂದ ಅನೇಕ ವರದಿಗಳನ್ನು ಪ್ರಸಾರ ಮಾಡಿಸಿದ್ದೀನಿ.
ನಿಮ್ಮೊಳಗೆ ಇಂತಹ ಸಣ್ಣತನ ಮನೆ ಮಾಡಿಕೊಂಡಿದೆ ಎಂದು ನಾನು ಭಾವಿಸಿರಲಿಲ್ಲ. ಈ ದೇಶದ ಪ್ರಥಮ ಪ್ರಧಾನಿ ಮತ್ತು ಆಧುನಿಕ ಭಾರತದ ನಿರ್ಮಾತೃ ಜವಹರಲಾಲ್ ನೆಹರೂ ಅವರ ಭಾವಚಿತ್ರಕ್ಕಿಂತ ನಿಮಗೆ ಸಾವರ್ಕರ್ ಚಿತ್ರ ಮುಖ್ಯವಾಯಿತೆ? ನೆಹರೂ ಇತಿಹಾಸವನ್ನು ಮತ್ತು ಅವರಿಂದ ರಚಿತವಾಗಿರುವ ಕೃತಿಗಳನ್ನು ನೀವು ಓದಿಲ್ಲ ಎಂದು ಮನದಟ್ಟಾಯಿತು.
ನೀವು ನನಗಿಂತ ಐದು ವರ್ಷ ಚಿಕ್ಕವರು. ಪದವೀಧರರು ಎಂದು ಕೇಳಿದ್ದೀನಿ. ಸಂಘಪರಿವಾರದ ಕಾರ್ಯಕರ್ತ ಆದರೂ ಕೂಡ ನಿಮ್ಮ ಬಗ್ಗೆ ಗೌರವವಿತ್ತು. ಅದು ನಿನ್ನೆ ನಶಿಸಿ ಹೋಯಿತು. ನೀವು ಇಂದು ಸಾವರ್ಕರ್, ನಾಳೆ ಗೋಡ್ಸೆ ಚಿತ್ರ ಹಾಕಬಲ್ಲ ಒಬ್ಬ ಅನಕ್ಷರಸ್ಥ ಎಂದು ತೀರ್ಮಾನಿಸಿಬಿಟ್ಟೆ.
ನೆಹರೂ ಬಗ್ಗೆ ನಿಮ್ಮ ಎದೆಯೊಳಗೆ ಏನೇ ವಿಷವಿರಲಿ, ಅವರ ಸಾಧನೆ ಮತ್ತು ಅವರ ಘನತೆಯ ಬದುಕನ್ನು ಯಾವ ನಾಯಕನೂ ಬಾಳಲು ಸಾಧ್ಯವಿಲ್ಲ. ಬೆಂಗಳೂರಿನ ನಿಮ್ಮ ವಿಧಾನಸೌಧದ ಗ್ರಂಥಾಲಯದಲ್ಲಿ ಅವರ ಕುರಿತಾಗಿ ಅನೇಕ ಕೃತಿಗಳಿವೆ. ನೆಹರೂ ಮತ್ತು ಲೋಹಿಯಾ ಸೈದ್ಧಾಂತಿಕವಾಗಿ ವಿರೋಧಿಗಳಾಗಿದ್ದರೂ ಸಹ ಅವರ ನಡುವಿನ ಸ್ನೇಹ, ಪರಸ್ಪರ ಪತ್ರ ವ್ಯವಹಾರ ಹೇಗಿತ್ತು ಎಂಬುದನ್ನು ಒಮ್ಮೆ ಓದಿ ನೋಡಿ.
ನಿಮ್ಮ ಈ ಸಣ್ಣತನಕ್ಕೆ ಮಾಧ್ಯಮಗಳು ಧ್ವನಿ ಎತ್ತಬೇಕಾಗಿತ್ತು. ಆದರೆ, ನಿಮ್ಮ ಸಂಘ ಪರಿವಾದ ಅದೃಷ್ಟ ಮತ್ತು ನಮ್ಮ ನತದೃಷ್ಟತನ ಎಂಬಂತೆ ಅವುಗಳು ಈಗ ಆಳುವ ಸರ್ಕಾರಗಳ ಕಕ್ಕಸುಗುಂಡಿಗಳಾಗಿವೆ. ಆದರೆ, ಅಕ್ಷರದ ಹೆಸರಿನಲ್ಲಿ ಅನ್ನ ತಿಂದು ಬದುಕು ಕಟ್ಟಿಕೊಂಡ ನಮ್ಮಂತಹ ನಿವೃತ್ತ ಪತ್ರಕರ್ತರು ನಿಮ್ಮ ಮೂರ್ಖತನದ ಇಂತಹ ನಿರ್ಧಾರಗಳನ್ನು ಖಂಡಿಸಲೇಬೇಕಾಗಿದೆ. ಏಕೆಂದರೆ ನಮಗೆ ಪತ್ರಿಕೋದ್ಯಮದ ಪಾಠ ಹೇಳಿಕೊಟ್ಟ ಮಹಾತ್ಮರು ಜಾತಿ, ಧರ್ಮ ಮಾತ್ರವಲ್ಲದೆ ಪಕ್ಷಗಳ ಗೋಡೆಗಳಾಚೆ ನಿಂತು ಬದುಕಿದ್ದರು. ಅನಿಷ್ಟ ಮತ್ತು ಅಸಹ್ಯ ನಡುವಳಿಕೆಗಳನ್ನು ಖಂಡಿಸುತ್ತಾ ಅದೇ ಭಾವದ ಬೀಜಗಳನ್ನು ನಮ್ಮೆದೆಗೂ ಬಿತ್ತಿದರು.
ಈ ಕೂಡಲೇ ನೀವು ಸಾರ್ವಜನಿಕವಾಗಿ ಕ್ಷಮೆ ಕೋರಿ ಸುವರ್ಣ ಸೌಧದಲ್ಲಿ ನೆಹರೂ, ಗಾಂಧಿ ಮತ್ತು ಅಂಬೇಡ್ಕರ್ ಭಾವಚಿತ್ರಗಳು ಇರುವಂತೆ ನೋಡಿಕೊಳ್ಳಿ.
ಇಂತಿ ಎಂದಿಗೂ ನಿಮ್ಮವನಲ್ಲದ
ಜಗದೀಶ್ ಕೊಪ್ಪ




