ಬೆಳಗಾವಿ: ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಚೆನ್ನಮ್ಮನ ಕಿತ್ತೂರಿನಲ್ಲಿ ಕಿತ್ತೂರು ಉತ್ಸವವಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಸತೀಶ್ ಜಾರಕಿಹೊಳಿ, ಕಿತ್ತೂರು ಉತ್ಸವ ರಾಜ್ಯಕ್ಕೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಯೋಜನೆಯನ್ನು ರೂಪಿಸಲಿದೆ. ಕಿತ್ತೂರು ಸಮಗ್ರ ಅಭಿವೃದ್ಧಿಗೆ ಪ್ರತಿ ವರ್ಷ 5 ಕೋಟಿ ರೂ. ಅನುದಾನವನ್ನು ಕೂಡ ಲೋಕೋಪಯೋಗಿ ಇಲಾಖೆಯಿಂದ ನೀಡಲಾಗುವುದು ಎಂದರು.
ಮೂರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ನಾಡಿನ ಗಣ್ಯರು, ಕಲಾವಿದರು ಭಾಗವಹಿಸುತ್ತಿದ್ದಾರೆ. ನಾವೆಲ್ಲರೂ ಸೇರಿ ನಾಡಿನ ಹಬ್ಬ ಕಿತ್ತೂರು ಉತ್ಸವವನ್ನು ಯಶಸ್ವಿ ಮಾಡೋಣ ಎಂದು ಕರೆನೀಡಿದರು.
ನಾಡಿನ ಹಬ್ಬವನ್ನು ಸಡಗರದಿಂದ ಆಚರಿಸಲು ಸರ್ಕಾರದಿಂದ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಈ ಬಾರಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ಮೂರು ದಿನಗಳ ಕಾಲ ಅತಿ ವಿಜೃಂಭಣೆಯಿಂದ ಉತ್ಸವ ಜರುಗಲಿದೆ. ನಾಡಿನ ಹೆಸರಾಂತ ಕಲಾವಿದರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ನಾವೆಲ್ಲರೂ ಭಾಗವಹಿಸುವ ಮೂಲಕ ಉತ್ಸವವನ್ನು ಯಶಸ್ವಿಗೊಳಿಸೋಣ ಎಂದು ಕರೆನೀಡಿದರು.
ಇದಕ್ಕೂ ಮುನ್ನ ಕಿತ್ತೂರಿನ ಚನ್ಮಮ್ಮ ವೃತ್ತದಲ್ಲಿರುವ ಚನ್ಮಮ್ಮ ಪುತ್ಥಳಿಗೆ ಹಾಗೂ ಮಹಾದ್ವಾರದ ಅಕ್ಕಪಕ್ಕದಲ್ಲಿರುವ ಅಮಟೂರು ಬಾಳಪ್ಪ ಹಾಗೂ ಸಂಗೊಳ್ಳಿ ರಾಯಣ್ಣನ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದೆ ಮಂಗಲ ಅಂಗಡಿ, ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಬೆಳಗಾವಿ ಉತ್ತರ ಶಾಸಕ ಆಸೀಫ್ ರಾಜು ಸೇಠ್, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿ. ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕೋಣಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಮತ್ತಿತರರು ಉಪಸ್ಥಿತರಿದ್ದರು.




