ಉತ್ತರಕನ್ನಡ: ಸಾಮಾನ್ಯವಾಗಿ ರಾಜಕಾರಣಿಗಳು, ಅಧಿಕಾರಿಗಳು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾವಹಿಸುವುದು ಶಿಷ್ಟಾಚಾರ. ಇಂತಹ ಶಿಷ್ಟಾಚಾರಗಳನ್ನು ಚಾಚೂ ತಪ್ಪದೇ ಅನುಸರಿಸಲು ಹೋಗಿ ಕೆಲವೊಮ್ಮೆ ನಗೆಪಾಟಲಿಗೆ ಗುರಿಯಾಗುವುದೂ ಇದೆ. ಆದರೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾದರಿ ನಡೆ ಅನುಸರಿಸುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ.
ಹೌದು. ಇದು ನಡೆದದ್ದು ಹೆಗ್ಗಾರು ಎಂಬ ಉತ್ತರಕನ್ನಡ ಜಿಲ್ಲೆಯ ಹಳ್ಳಿಯಲ್ಲಿ.
ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಒಂಟಿಮನೆ, ಕಾನುಮನೆ ಮತ್ತು ಕೆಲವು ಹಳ್ಳಕೊಳ್ಳದ ಅಕ್ಕಪಕ್ಕದ ಪ್ರದೇಶಗಳಲ್ಲಿರುವ ಮನೆಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು, ನಾಗರಿಕರು ಹಳ್ಳಕೊಳ್ಳ ಮತ್ತು ನದಿ ದಾಟಿ ದಿನನಿತ್ಯದ ಚಟುವಟಿಕೆಗಳಿಗೆ ಹೋಗಬೇಕಾದ ಅನಿವಾರ್ಯವಿದೆ. ಇಂತಹ ಕಾಲು ಸಂಕಗಳ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಸುಮಾರು 350ಕ್ಕೂ ಹೆಚ್ಚು ಕಾಲು ಸಂಕಗಳ ನಿರ್ಮಾಣದ ಮೂಲಕ ಹಳ್ಳಕೊಳ್ಳದ ಪ್ರದೇಶದಲ್ಲಿ ವಾಸಿಸುವ ನಾಗರಿಕರ ಬಾಳಲ್ಲಿ ನೆಮ್ಮದಿ, ರಕ್ಷಣೆ ಸಿಗುವಂತೆ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಉದ್ಘಾಟನಾ ಸಮಾರಂಭದಲ್ಲಿ ಸತೀಶ್ ಜಾರಕಿಹೊಳಿ ಭಾಗವಹಿಸಿದ್ದರು.
ಹೆಗ್ಗಾರುವಿನಲ್ಲಿ ಅಧಿಕೃತ ಸರ್ಕಾರಿ ಕಾರ್ಯಕ್ರಮವನ್ನು ಸರ್ಕಾರಿ ಅಧಿಕಾರಿಗಳು ಆಯೋಜಿಸಿದ್ದರು. ಸರ್ಕಾರದ ಅಧಿಕೃತ ಕಾರ್ಯಕ್ರಮದ ಪ್ರಕಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಬೇಕಿತ್ತು. ಆದರೆ, ಈ ಸಮಯದಲ್ಲಿ ಅವರು ಸ್ಥಳದಲ್ಲಿ ಹಾಜರಿದ್ದ ವಿದ್ಯಾರ್ಥಿನಿಯೊಬ್ಬರನ್ನು ಕರೆದು, ಕಾಲು ಸಂಕ ಉದ್ಘಾಟನೆಯ ಅವಕಾಶವನ್ನು ನೀಡಿದರು. ಈ ಮೂಲಕ ನಾಡು, ದೇಶದ ರಾಜಕಾರಣಿಗಳಿಗೆ ಮಾದರಿಯಾದ ನಡೆಯನ್ನು ಅನುಸರಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸತೀಶ್ ಜಾರಕಿಹೊಳಿ, ಸಾರ್ವಜನಿಕರು, ಶಾಲಾ ಮಕ್ಕಳ ಸುರಕ್ಷತೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ನಮ್ಮ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಅತ್ಯಂತ ಅವಶ್ಯಕತೆ ಇರುವ ಸ್ಥಳಗಳಲ್ಲಿ 100 ಕಾಲುವಸಂಕಗಳನ್ನು ನಿರ್ಮಿಸಲು ಮುಂದಾಗಿದೆ. ಅದರ ಭಾಗವಾಗಿ ಇಂದು ಪ್ರಥಮ ಕಾಲುಸಂಕದ ಉದ್ಘಾಟನೆಯನ್ನು ಶಿರಸಿ ತಾಲೂಕಿನ ಹೆಗ್ಗಾರುವಿನಲ್ಲಿ ನೆರವೇರಿಸಿದೆ ಎಂದಿದ್ದಾರೆ.
ಯಥಾಪ್ರಕಾರ ಅಧಿಕಾರಿ, ರಾಜಕಾರಣಿಗಳೇ ಉದ್ಘಾಟನೆ ಮಾಡುವುದು ವಾಡಿಕೆ. ಆದರೆ ಆ ಸಂಪ್ರದಾಯವನ್ನು ಮುರಿದು, ಕಾರ್ಯಕ್ರಮದಲ್ಲಿ ಹಾಜರಿದ್ದ ವಿದ್ಯಾರ್ಥಿನಿಯ ಕೈಯಿಂದ ಕಾಲು ಸಂಕವನ್ನು ಉದ್ಘಾಟನೆ ಮಾಡಲು ಅವಕಾಶ ನೀಡಿದೆ ಎಂದಿದ್ದಾರೆ.
ಜೊತೆಗೆ, ರಾಜ್ಯದ ಸಂಪರ್ಕ ರಹಿತ ಜನವಸತಿ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರಿಗೆ ಮಳೆಗಾಲದ ಅವಧಿಯಲ್ಲಿ ರಭಸದಿಂದ ಹರಿಯುವ ಹಳ್ಳ ಮತ್ತು ತೊರೆಗಳನ್ನು ಸುರಕ್ಷಿತವಾಗಿ ದಾಟಲು ಕಾಲುಸಂಕಗಳ ನಿರ್ಮಾಣ ಅತ್ಯಶ್ಯವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಪರ್ಕ ರಹಿತ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರು ಮತ್ತು ಶಾಲಾ ಮಕ್ಕಳು ಮಳೆಗಾಲದಲ್ಲಿ ಹಳ್ಳ ಮತ್ತು ತೊರೆಗಳನ್ನು ದಾಟಲು ಸ್ಥಳೀಯವಾಗಿ ಲಭ್ಯವಿರುವ ಮರದ ತುಂಡುಗಳು, ಹಗ್ಗ ಮುಂತಾದ ಅಸುರಕ್ಷಿತ ಸಾಮಗ್ರಿಗಳನ್ನು ಬಳಸಿ ನಿರ್ಮಿಸಿದ ಕಾಲುಸಂಕಗಳನ್ನು ಅವಲಂಬಿಸಿರುತ್ತಾರೆ. ಇದರಿಂದ ಹಲವು ಸ್ಥಳಗಳಲ್ಲಿ ಅವಘಡ ಸಂಭವಿಸಿ ಮಕ್ಕಳ ಜೀವಕ್ಕೂ ಹಾನಿಯಾದ ವರದಿಗಳಿದ್ದವು. ಇವುಗಳನ್ನು ನಿವಾರಿಸಲು ಕಾಲುಸಂಕಗಳ ನಿರ್ಮಾಣವನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಹಳ್ಳ ಮತ್ತು ತೊರೆಗಳನ್ನು ಸುರಕ್ಷಿತವಾಗಿ ದಾಟಲು ಅನುಕೂಲವಾಗುವಂತೆ ಗರಿಷ್ಠ 3 ಮೀಟರ್ ಅಗಲದ ಕಾಲುಸಂಕಗಳನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಲು ಉದ್ದೇಶಿಸಿ, ಅವುಗಳ ವಿನ್ಯಾಸ ಹಾಗೂ ನಕ್ಷೆಯನ್ನು ಸರ್ಕಾರ ಸಿದ್ಧಪಡಿಸಿದೆ. ಈ ನಿಟ್ಟಿನಲ್ಲಿ ಮೊದಲನೆಯದಾಗಿ ಸುಮಾರು ಸಂಖ್ಯೆಯ ಕಾಲುಸಂಕಗಳ ನಿರ್ಮಾಣ ಕೈಗೊಳ್ಳಲು ಇಂದು ಚಾಲನೆ ನೀಡಲಾಯಿತು ಎಂದಿದ್ದಾರೆ.
ಇದೇ ಮಾದರಿಯ ಇನ್ನೂ 385 ಅಸುರಕ್ಷಿತ ಕಾಲುಸಂಕಗಳನ್ನು ಗುರುತಿಸಿ ಸುರಕ್ಷಿತ ಮತ್ತು ಸರ್ವಋತು ಕಾಲುಸಂಕಗಳ ನಿರ್ಮಾಣವನ್ನು ಹಂತಹಂತವಾಗಿ ಕೈಗೊಳ್ಳಲಿದೆ ಎಂದು ಯೋಜನೆಯ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.




